Posts

Showing posts from October, 2018

ಯತಿ ಸ್ವಂತೀ 304

01-11-2018 ವಿಜಯವಾಡಕ್ಕೆ ಹೋಗೆಂದರು ಬೆಂಗಳೂರು ಆಫೀಸ್‌ನಲ್ಲಿ. ಬೆಂಗಳೂರಿನಿಂದ ಪ್ರಶಾಂತಿ ಎಕ್ಸ್‌ಪ್ರೆಸ್ ಮಧ್ಯಾಹ್ನ ಎರಡು ಗಂಟೆಗೆ ಹತ್ತಿದೆ. ಮೊಬೈಲ್‌ನಲ್ಲಿ ಸಿನಿಮಾಗಳು, ನನ್ನ ಫೇವರಿಟ್ ಹಿಂದೀ, ಕನ್ನಡ ಹಾಡುಗಳು, ಒಳ್ಳೆಯ ಪುಸ್ತಕಗಳು ಇವೆಲ್ಲವೂ ನನ್ನ ಗೆಳೆಯರು (ಗೆಳತಿಯರು!). ವಿಜಯವಾಡವನ್ನು ಮರುದಿನ ಬೆಳಗ್ಗೆ ಐದೂವರೆಗೆ ತಲುಪಿದೆ. ಹೊಟೇಲ್ ತಲುಪಿ, ವಿಶ್ರಾಂತಿ ಪಡೆದು, ನನ್ನ ಹೊಟೇಲ್ ಇದ್ದ ಏಲೂರು ರಸ್ತೆಯಲ್ಲಿಯೇ ಇದ್ದ ತರಬೇತಿ ಕೇಂದ್ರಕ್ಕೆ ಹೋದೆ. ನಂತರ ಅಲ್ಲಿನ ಸರ್ಕಾರೀ ಅಧಿಕಾರಿಯನ್ನು ಭೇಟಿ ಮಾಡಿದೆ. ನಾನು ತೆಲುಗು ಭಾಷೆಯಲ್ಲಿ ಪಟಪಟನೆ ಮಾತನಾಡಿದ್ದು ಆ ಅಧಿಕಾರಿಯನ್ನು ಇಂಪ್ರೆಸ್ ಮಾಡಿತು. ಯಂಡಮೂರಿ ವೀರೇಂದ್ರನಾಥ್ ಅವರ ಪರಿಚಯ ಇದೆ ಎಂದೊಡನೆ ಅವರ ದೃಷ್ಟಿಯಲ್ಲಿ ನನ್ನ ಲೆವೆಲ್ ಹೆಚ್ಚಾಯಿತು ಎನಿಸಿತ್ತು! ನನ್ನ ವಿಶಾಖಪಟ್ಟಣಂ ಸಹೋದ್ಯೋಗಿ ಬಂದ. ಆತನಿಗೆ ಆ ಸರ್ಕಾರಿ ಅಧಿಕಾರಿಯ ಪರಿಚಯವಿತ್ತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕಾಯಿತು. ಆಗೊಂದು ವಿಶೇಷ ನಡೆಯಿತು. ನಾನು ಆಂಗ್ಲ ಭಾಷೆಯಲ್ಲಿ ಭಾಷಣ ಶುರು ಮಾಡುತ್ತಿದ್ದೆ. ನನಗೆ ಅಧಿಕಾರಿಗಳು  ಹೇಳಿದ್ದರಿಂದ ಇಂಗ್ಲಿಷ್ ಭಾಷೆ ಬಳಕೆ ಮಾಡುತ್ತಿದ್ದೆ. ಸುಮ್ಮನೆ ಕೂರುತ್ತಿದ್ದರು ಮಕ್ಕಳು. ನಂತರ  ತೆಲುಗು ಭಾಷೆ ಆರಂಭಿಸುತ್ತಿದ್ದೆ. ಆಗ ಅವರ ಮೊಗಗಳಲ್ಲಿ ಖುಷಿ ಕಾಣಿಸಲಾರಂಭಿಸುತ್ತಿತ್ತು. ಆಗ ಮೈ ಛಳಿ ಬಿಟ್ಟು ನನ್ನ ಬಳಿ ಮಾತನಾಡುತ್ತಿದ್ದರು.

ಯತಿ ಸ್ವಂತೀ - 303

31-10-2018 ಆದಿಲಾಬಾದ್‌ ನಮ್ಮ ರಾಜ್ಯಕ್ಕೆ ಬೀದರ ಹೇಗೋ ಹಾಗೆ, ಎಲ್ಲ ಜಿಲ್ಲೆಗಳಿಗಿಂತ ಮೇಲಿರುವ ಜಿಲ್ಲಾ ಕೇಂದ್ರ. ಮಹಾರಾಷ್ಟ್ರದ ಗಡಿ ಇದು. ಕರೀಂನಗರ ಮತ್ತು ಆದಿಲಾಬಾದ್ ನಡುವೆ ಇರುವ ಕಾಡು ಸ್ವಲ್ಪ ಅಪಾಯಕಾರಿ ಅನ್ನುತ್ತಾರೆ. ಪ್ರಾಣಿಭಯವೋ ಅಲ್ಲಿ ಅವಿತ ಮನುಷ್ಯರ ಭಯವೋ ತಿಳಿಯದು. ಬೆಳಗ್ಗೆ ಹನ್ನೊಂದು ಗಂಟೆಗೆ ಆದಿಲಾಬಾದ್ ತಲುಪಿ ಪಾರ್ಟ್‌ನರ್ ಹುಡಿಕ್ಯಂಡು ಹೋದೆ. ಚಿಕ್ಕ ಊರು. ಇಲ್ಲಿ ನನಗೆ ಅಡ್ವಾಂಟೇಜ್ ಎಂದರೆ ಜನರೊಂದಿಗೆ ಪಟಪಟನೆ ತೆಲುಗು ಭಾಷೆಯಲ್ಲಿ ಮಾತಾಡಬಲ್ಲವನಾಗಿದ್ದೆ. ರಾತ್ರಿ ರೈಲ್ವೆ ನಿಲ್ದಾಣಕ್ಕೆ ಬಂದರೆ ಏನೋ ತವಕ, ತಳಮಳ. ಇಡೀ ಸ್ಟೇಷನ್ ಕತ್ತಲಲ್ಲಿತ್ತು. ಒಂದು ರೀತಿಯ ಭಯ ಆವರಿಸಿತು ನನ್ನಲ್ಲಿ. ಜನರೂ ರೈಲು ಹೊರಡುವವರೆಗೂ ಕಾಣಿಸಿರಲಿಲ್ಲ! ಕೃಷ್ಣ ಎಕ್ಸ್‌ಪ್ರೆಸ್ ರಾತ್ರಿ ಒಂಬತ್ತು ಗಂಟೆಗೆ ಆದಿಲಾಬಾದ್‌ನಿಂದ ಹೊರಟು ಸಿಕಂದರಾಬಾದ್‌ಗೆ ಬೆಳಗ್ಗೆ ಆರು ಗಂಟೆಗೆ ತಲುಪಿತು. ಅಂದು ಹೈದರಾಬಾದ್‍ನಲ್ಲಿನ ಸರ್ಕಾರಿ ಕಛೇರಿಗಳಿಗೆ ಹೋಗಿ ಹಣಸಂದಾಯದ ಬಗ್ಗೆ ಚರ್ಚೆ ನಡೆಸಿದೆವು. ಇದು ಕೇವಲ ಎರಡನೇ ಟ್ರಿಪ್. ಪಿಕ್ಚರ್ ಅಭೀ ಬಾಕಿ ಹೈ ಮೇರೆ ದೋಸ್ತೋ...

ಯತಿ ಸ್ವಂತೀ -302

30-10-2018 ರೈಲುಗಾಡಿ ಇಲ್ಲವೇ ವಿಮಾನ ಪ್ರಯಾಣ ಓಕೆ... ಬಸ್ ಪ್ರಯಾಣ ನಾಟ್ ಓಕೆ ಅಂದಿದ್ದೆ ಆಫೀಸ್‌ನಲ್ಲಿ. ಏಕೆಂದರೆ ನನ್ನ ಸಹಿಷ್ಣುತೆ ಮತ್ತು ಬೆನ್ನು ಎರಡೂ ಬಸ್ ಪ್ರಯಾಣವನ್ನು ಒಪ್ಪುತ್ತಿರಲಿಲ್ಲ. ಆ ಸಲ ವಿಮಾನದಲ್ಲಿ ಹೈದರಾಬಾದ್‍ನ ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದು ಊರೊಳಕ್ಕೆ ಹೋಗಲು ಏರ್‌ಪೋರ್ಟ್‌ನಿಂದ ಬಸ್ ಹಿಡಿದು ಹೈದರಾಬಾದ್  ಇಮ್ಲಿಬಾನ್ ಬಸ್ ನಿಲ್ದಾಣಕ್ಕೆ ಬಂದೆ. ಕರೀಂನಗರಕ್ಕೆ ಬಸ್ ಹತ್ತಿದೆ. ಬಸ್ ಹೋಯಿತು ಹೋಯಿತು ಹೋಯಿತು. ಅಬ್ಬಾ... ಕೊನೆಗೂ ಕರೀಂನಗರ ತಲುಪಿತು. ಅಲ್ಲಿದ್ದ ಪಾರ್ಟ್‌ನರ್ ಆಫೀಸ್ ತಲುಪಿ ಆತನೊಂದಿಗೆ ಮಾತನಾಡಿ ಅಲ್ಲಿನ ಏಕೈಕ ದೊಡ್ಡ ಹೊಟೇಲ್‌ನಲ್ಲಿ ಇಳಿದುಕೊಂಡೆ. ನಿಜವಾಗಿಯೂ ಒಳ್ಳೆಯ ಹೊಟೇಲ್. ಹಾಸಿಗೆಯು ಹಂಸತೂಲಿಕಾತಲ್ಪ ಆ ಚಿಕ್ಕ ಊರಲ್ಲಿ! ಬೆಳಗ್ಗೆ ಬೇಗನೆದ್ದು ಆದಿಲಾಬಾದ್‌ಗೆ ಬಸ್ ಹತ್ತಿದೆ. ಕಾಡಿನ ನಡುವೆ ಬಸ್ ಹೋಗುತ್ತಿತ್ತು. ನಡುವೆ ಒಂದು ಬಲು ಸಣ್ಣ ಊರಿನಲ್ಲಿ ತಿಂಡಿಗೆಂದು ಬಸ್ ನಿಲ್ಲಿಸಿದ ಚಾಲಕ. ಉಡುಪಿ ಹೊಟೇಲ್! ಬಾಯಿ ತುಂಬಾ ಕನ್ನಡ ಮಾತಾಡಿದೆ ಹೊಟೇಲ್ ಮಾಲೀಕನೊಂದಿಗೆ. ರುಚಿಯಾದ ತಿನಿಸುಗಳನ್ನು ತಿಂದು ಮತ್ತೆ ಹೊರಟಾಗ ರಸ್ತೆಯಲ್ಲಿ ಮತ್ತೊಂದು ಉಡುಪಿ ಹೊಟೇಲ್ ಕಂಡೆ. ಈ ಹೊಟೇಲ್ ಮಾಲೀಕನ ಸಹೋದರನದಂತೆ ಅದು. ಈತ ತನ್ನ ಸಹೋದರನ ಹೊಟೇಲ್ ಬಗ್ಗೆ ಹೇಳಿದ್ದ. ಇತ್ತೀಚೆಗೆ ಪುಸ್ತಕವೊಂದರ ಬಿಡುಗಡೆಯ ಸಮಾರಂಭದಲ್ಲಿ ಕನ್ನಡಪ್ರಭದ ರವಿ ಹೆಗ್ಗಡೆ ಅವರು ಮಾತನಾಡಿ ಉಡುಪಿ ಹೊಟೇಲ್‍ಗಳು ಮೂಲೆ ...

ಯತಿ ಸ್ವಂತೀ-301

29-10-2018 ಜೀವನ ಒಂದೇ ರೀತಿ ಇರಲು ಸಾಧ್ಯವಿಲ್ಲ ಅಲ್ಲವೇ? ಆಂಧ್ರಪ್ರದೇಶ (ಮತ್ತು ಈಗ ತೆಲಂಗಾಣ)ದಲ್ಲಿ ನಮ್ಮ ಕಂಪೆನಿಯ ಉತ್ಪನ್ನಗಳ ಬಗ್ಗೆ, ಆ ರಾಜ್ಯಗಳ ನಮ್ಮ ಕಂಪೆನಿಯ ಪಾರ್ಟ್‌ನರ್‌ಗಳ ಸಹಾಯದೊಂದಿಗೆ, ಅಲ್ಲಿನ ಸರ್ಕಾರೀ ಇಲಾಖೆಗಳೆರಡು ಪದವೀಧರ ಮಕ್ಕಳಿಗೆ ತರಬೇತಿಯನ್ನು ನೀಡಿದವು. ನಮ್ಮ ಕಂಪೆನಿಗೆ ಆ ತರಬೇತಿಗೆ ಹಣ ಬರಬೇಕಿತ್ತು. ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿತ್ತು. ತೆಲುಗು ಭಾಷೆ ಬರುವ ನನಗೆ ಆ ಕೆಲಸವನ್ನು ಒಪ್ಪಿಸಿದರು. ಸರಿ, 2009ರ ಫೆಬ್ರುವರಿಯಲ್ಲಿ ನನ್ನ ತೆಲುಗು ನಾಡಿನ ಸಫರ್ (suffer!) ಶುರುವಾಯಿತು. ಮೊದಲು ಹೈದರಾಬಾದ್ ನಗರದ ನಮ್ಮ ಶಾಖೆಗೆ ಹೋದೆ. ಆಫೀಸ್‌ ಪಕ್ಕದಲ್ಲೇ ಇದ್ದ ಹೊಟೇಲ್ ನನ್ನ ಮನೆಯಾಗಿಬಿಟ್ಟಿತು! ಅದೆಷ್ಟು ಸಲ ಅಲ್ಲಿ ತಂಗಿದ್ದೆನೋ... ನನಗೇ ಲೆಕ್ಕ ಸಿಕ್ಕಿಲ್ಲ! ಹೊಟೇಲ್ ಮೇಲೆ ಇದ್ದ ಕಾನ್ಫರೆನ್ಸ್ ಹಾಲ್‌ನಲ್ಲಿ ಎಲ್ಲ ಊರುಗಳಿಂದ ಬಂದ ಪಾರ್ಟ್‌ನರ್‌ಗಳನ್ನು ಉದ್ದೇಶಿಸಿ ಮಾತನಾಡಿ ಅವರ ಸಹಾಯ ಕೋರಿದೆ. ಹರಿಕಥೆಯ ಉಪಕಥೆ: ನನ್ನ ಭಾಷಣ ಮುಗಿಯುವ ಸಮಯದಲ್ಲಿ ಬೆಂಗಳೂರಿನ ನಮ್ಮ ಮನೆಯಿಂದ ತುರ್ತು ಕರೆ ಬಂದಿತ್ತು. ನಮ್ಮ ಘನ ಕೆಇಬಿಯವರು ನಮ್ಮ ಮನೆಯ ಕರೆಂಟ್ ಕಿತ್ತಿದ್ದರು. ಸಾಮಾನ್ಯವಾಗಿ ಹಾಸ್ಯಕ್ಕೆ ವ್ಯಂಗ್ಯ ಬೆರೆಸಿ ಜನರನ್ನು 'ಬೆಂಡ್' ಎತ್ತಿ ನನಗೆ ಅಭ್ಯಾಸ ಇದೆ ಎಂದು ತಿಳಿದಿದ್ದ ನನ್ನ ಪತ್ನಿ ನನಗೆ ಬೆಂಗಳೂರಿನಿಂದ ಫೋನ್ ಮಾಡಿದ್ದರು. ವಿಷಯ ಇದು... ಕೆಇಬಿಯವರಿಗೇ ನನ್ನ ಕರೆಂಟ್ ಬಿಲ್ ...

ಯತಿ ಸ್ವಂತೀ -300

28-10-2018 ಮೊದಲೇ ಹೇಳಿದಂತೆ ನಮ್ಮ ಟೀಂ ಸಖತ್ತಾಗಿತ್ತೋ ಇಲ್ಲ ನಾನು ಅವರಲ್ಲಿ ಸುಲಭವಾಗಿ ಬೆರೆತುಹೋದೆನೋ ತಿಳಿಯದು. ನಾನು ಕೋರಮಂಗಲದ ಆಫೀಸ್‌ನಲ್ಲಿದ್ದಾಗ ನನಗೆ 49 ವರ್ಷ. ಆದರೆ ನನ್ನ ಏಜ್ 35ಕ್ಕೆ ಸ್ಟಕ್ ಆಗಿದೆ ಎನ್ನುವಂತೆ ನಡೆದುಕೊಳ್ಳುತ್ತಿದ್ದರು ನನ್ನ ಸಹೋದ್ಯೋಗಿಗಳು. ಅವರೊಂದಿಗೆ ಅನೇಕ ರೆಸಾರ್ಟ್‌ಗಳಿಗೆ ಹೋಗಿ ಬೆಳಗ್ಗೆಯಿಂದ ಸಂಜೆಯ ವರೆಗೂ ಕಾಲ ಕಳೆದದ್ದುಂಟು. ಕೆಲವು  ಸಹೋದ್ಯೋಗಿಗಳು ನಮ್ಮ ಕಂಪೆನಿಗಿಂತ ಇನ್ನೂ ಉತ್ತಮ ಕೆಲಸ ಸಿಕ್ಕಾಗ ಬಿಟ್ಟು ಹೋದರು. ಆದರೆ ಇಂದಿಗೂ ಅವರೊಂದಿಗೆ ನನಗೆ ಸಂಪರ್ಕ ಇದೆ. ಹೊಸಬರು ಬಂದರು. ಅವರೊಂದಿಗೆ ಕೂಡ ಸ್ನೇಹ ಚೆನ್ನಾಗಿತ್ತು. ಆಫೀಸ್‌ನ ಹಿಂಭಾಗದಲ್ಲಿ ಚೇಟಾ ಸಾಗರ್ ಅನ್ನೋ ಪುಟ್ಟ ಮಲಯಾಳಿ ಹೊಟೇಲ್‍ನಲ್ಲಿ ಸುಲೇಮಾನಿ (ಹಾಲು ಹಾಕದ ಚಾಯ್) ಕುಡಿಯುವ ಅಭ್ಯಾಸ ಆಯಿತು. ದಿನಾ ಮಧ್ಯಾಹ್ನ ಹೊರಗೆ ಊಟ. ಕೋರಮಂಗಲ ಅಂದರೆ ಕೇಳಬೇಕೇ? ಒಂದೊಂದು ದಿನ ಒಂದೊಂದು ಹೊಟೇಲ್. ಪರಾಠ, ಪಂಜಾಬಿ ಊಟ, ಆಂಧ್ರ ಮೀಲ್ಸ್, ಉಡುಪಿ ಹೊಟೇಲ್ ನೀರ್ ದೋಸೆ... ಶುಕ್ರವಾರ ಸ್ವಲ್ಪ ದೂರದಲ್ಲಿದ್ದ ಸಸ್ಯಾಹಾರಿ ಪಂಜಾಬಿ ಧಾಭಾ... ಅಥವಾ ತಮಿಳುನಾಡು ಸಸ್ಯಾಹಾರಿ ಫುಲ್ ಮೀಲ್ಸ್... ಅಂದು ಮಧ್ಯಾಹ್ನ ಹೆಬ್ಬಾವಿನ ಹಾಗೆ ಬಿದ್ದುಕೊಂಡಿರೋ ಆಸೆ ಆಗುತ್ತಿತ್ತು. ಆದರೆ ಕರ್ತವ್ಯದ ಕರೆಗೆ ಓಗೊಡುವುದು ನಮ್ಮ ಪ್ರಥಮ ಆದ್ಯತೆ ಆಗಿತ್ತು. ಮತ್ತೆ ಕಸ್ಟಮರುಗಳ ಭೇಟಿಗೆ ಹೊರಡುತ್ತಿದ್ದೆವು.

ಯತಿ ಸ್ವಂತೀ-299

  27-10-2018 ನನ್ನ ಹೆಸರು ಲೆಕ್ಚರ್ ಮಾಡುವವರ ಪಟ್ಟಿಯಲ್ಲಿ ಬಂದಿತು. ಬೆಂಗಳೂರಿನ ಸುಮಾರು ಸಂಖ್ಯೆಯ ಕಾಲೇಜುಗಳಲ್ಲಿ ಭಾಷಣ ಬಿಗಿದೆ. ಎದುರಿಗೆ ಇದ್ದವರು ಪ್ರಪಂಚವನ್ನೆಲ್ಲಾ ಸುಂದರವಾಗಿ ಕಾಣುವ ಹರೆಯದ ಮಕ್ಕಳು. ನಮ್ಮ ಬಿಗ್ಗೆಸ್ಟ್ ಬಾಸ್ ಒಂದು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಸಿದ್ಧ ಪಡಿಸಿ ಕೊಟ್ಟಿದ್ದರು. ಮಾರ್ಕೆಟಿಂಗ್ ಹೆಡ್ ಒಂದು ಪ್ರೆಸೆಂಟೇಶನ್ ಸಿದ್ಧ ಪಡಿಸಿ ಕೊಟ್ಟಿದ್ದರು. (ಇವರು ನನಗೆ ಕಂಪೆನಿ ಸೇರಿದಾಗಿನಿಂದ ಪರಿಚಿತರಾಗಿದ್ದರೂ ಇನ್ನೆರಡು ವರ್ಷಗಳಲ್ಲಿ ನನ್ನ ಬಾಸ್ ಆಗಲಿರುವರೆಂದು ಆಗ ನನಗೆ ತಿಳಿದಿರಲಿಲ್ಲ!) ದೊಡ್ಡೆಸ್ಟ್ ಬಾಸ್ ಅವರ ಪಿಪಿಟಿಯ ಗಾಂಭೀರ್ಯ ಮತ್ತು ಮಾರ್ಕೆಟಿಂಗ್ ಹೆಡ್ ಪಿಪಿಟಿಯ ಸಟಲ್ ಹ್ಯೂಮರ್ ಬೆರೆಸಿ, ಅದಕ್ಕೆ ನನ್ನ ಸ್ವಂತ ಮಸಾಲೆ ಹಾಕಿ ಮಾತಾಡುತ್ತಿದ್ದೆ. ಸಾಮಾನ್ಯವಾಗಿ ಅರವತ್ತು ಜನ ವಿದ್ಯಾರ್ಥಿಗಳು ಇರುತ್ತಿದ್ದರು. ಒಮ್ಮೆ ಒಂದು ಕಾಲೇಜಿನಲ್ಲಿ ಇನ್ನೂರು ಜನ ಇರುತ್ತಾರೆ ಎಂಬ ಸುದ್ದಿ ಬಂದಿತು. ತೀರಾ ಹೋಗಿ ನೋಡಿದರೆ 14 ಜನ ಇದ್ದರು! ಆದರೆ ನನ್ನ ಆಸಕ್ತಿ ಬದಲಾಗಬಾರದಲ್ಲ. ಅದೇ ಉತ್ಸಾಹದಿಂದ ಮಾತಾಡಿದೆ. ಇನ್ನೊಮ್ಮೆ ಇನ್ನೊಂದು ಕಾಲೇಜಿನಲ್ಲಿ 120 ವಿದ್ಯಾರ್ಥಿಗಳು ಇದ್ದರು. ಭಾಷಣ ಶುರು ಹಚ್ಚಿಕೊಂಡೆ. ಆಗ ಬಂದರು ಇನ್ನೂ 120 ವಿದ್ಯಾರ್ಥಿಗಳು! ಕೇಳಿಸಲ್ಲ ಅಂದರು ಕೊನೆಯ ಬೆಂಚಿನೋರು. ಮೈಕ್ ಹಿಡಿದು ಮತ್ತೆ ಶುರು ಮಾಡಿದೆ. ನನ್ನ ದೊಡ್ಡ ಬಾಸ್ ಒಬ್ಬರು ನನ್ನನ್ನು ಸ್ಟಾರ್ ಲೆಕ್ಚರರ್ ಎಂದರು ಎಲ್ಲರೆದ...

ಯತಿ ಸ್ವಂತೀ-298

  26-10-2018 ನನ್ನ ಕೆಲಸ ಶುರು ಆಯಿತು. ಪಾರ್ಟ್‌ನರ್‌ಗಳ ಬಳಿ ಹೋಗಿ, ಅವರ ಉದ್ಯೋಗಿಗಳ ಜೊತೆಗೆ ಅವರ ಕಸ್ಟಮರುಗಳ ಹತ್ತಿರ ಹೋಗಿ ನಮ್ಮ ಉತ್ಪಾದನೆ ಮಾರಬೇಕಿತ್ತು. ಬೆಂಗಳೂರಿನ ಹೆಚ್ಚು ಕಡಿಮೆ ಎಲ್ಲಾ ಪಾರ್ಟ್‌ನರ್‌ಗಳ ಜೊತೆ ನನ್ನ ಸಂಪರ್ಕವೇರ್ಪಟ್ಟಿತು. ಈ ಸಮಯದಲ್ಲಿ ಬೆಂಗಳೂರಿನ ನಾನಾ ಮೂಲೆಗಳಿಗೆ ಹೋದೆ. ಪೀಣ್ಯದಲ್ಲಿ ಡೋರ್ ಟು ಡೋರ್ ನಡೆದು... ಉಫ್! ಭಾರೀ ಆಯಾಸದ ಕಾಲವದು... ಉಪೂದಪ ಆಫ್ ಬೆಂಗಳೂರು. ಅಂದರೆ ಉತ್ತರ ಪೂರ್ವ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಕಸ್ಟಮರುಗಳಿಗಾಗಿ ಓಡಾಡಿದೆ. ಆ ನಂತರ ಮತ್ತೆ ಸರ್ಕಾರಿ ಇಲಾಖೆಗಳ ಸುತ್ತಾಟ ನಡೆಸಿದೆ. ಕೆಲವು ಡೆಮೋ ಏರ್ಪಡಿಸಿದೆವು. ಹಲವು ಉತ್ಪನ್ನಗಳ ಮಾರಾಟವಾಯಿತು. ಹೊಸದಾಗಿ ನಮ್ಮ ಉತ್ಪನ್ನವನ್ನು ಚಾರ್ಟರ್ಡ್ ಅಕೌಂಟೆಂಟುಗಳಿಗೆ ಸಿದ್ಧಗೊಳಿಸಿದರು ಕಂಪೆನಿಯವರು. ಸುಮಾರು ನಲವತ್ತು ಸಿ. ಎ.ಗಳನ್ನು ಭೇಟಿ ಆದೆ. ಕೆಲವರು ಸ್ನೇಹಿತರಾದರು. ಬಾಗಿಲು ಕೂಡ ತೆರೆಯದೇ ನನ್ನನ್ನು ಓಡಿಸಿದವರಿದ್ದಾರೆ! ಆ ನಂತರ ಕಂಪೆನಿಯಲ್ಲಿ 'ಅರ್ನ್ ವ್ಹೈಲ್ ಯೂ ಲರ್ನ್' ಸ್ಕೀಮ್ ತಂದರು. ವಿದ್ಯಾರ್ಥಿಗಳು ನಮ್ಮ ಉತ್ಪಾದನೆ ಮಾರಲು, ಅವರನ್ನು ಪ್ರೇರೇಪಿಸಬೇಕಿತ್ತು. ಅಂದ ಹಾಗೆ ಬೆಂಗಳೂರಿಗೆ ಬಂದೊಡನೆ ಮುಖಕೇಶ ಮುಂಡನ ಆಯಿತು. ಅರ್ಥಾತ್ ಮೀಸೆ ಬೋಳಿಸಿದೆ!

ಯತಿ ಸ್ವಂತೀ -297

25-10-2018 ಅನೇಕ ಸರ್ಕಾರಿ ಕಛೇರಿಗಳಿಗೆ ಭೇಟಿ ಕೊಟ್ಟು ನಮ್ಮ ಟೈಲರ್ - ಮೇಡ್ ಉತ್ಪಾದನೆ ಬಗ್ಗೆ ವಿವರಿಸಿದ್ದೆ. ಒಂದು ಕಛೇರಿ ಆ ಉತ್ಪಾದನೆಯ ಬಗ್ಗೆ ಆಸಕ್ತಿ ತೋರಿತ್ತು. ನಾನು ಅಂದು ಭೋಪಾಲ್‍ನಿಂದ ಬಂದಿಳಿದಾಗ ವಿಮಾನದೊಳಗೆ ಸ್ವೀಕರಿಸಿದ ಕರೆ ಅದೇ! ನಮ್ಮ ಒಂದು ಟೀಂ ಅವರ ಆಫೀಸ್‌ಗೆ ಹೋಗಿ ಡೆಮೋ ಕೊಟ್ಟೆವು. ಆ ಕಛೇರಿಯ ಹಿರಿಯ ಅಧಿಕಾರಿ ಅದರಿಂದ ಪ್ರಭಾವಿತರಾಗಿ ನಮಗೆ ಆರ್ಡರ್ ಕೊಟ್ಟು ಮುಂಗಡ ಹಣವನ್ನು ಚೆಕ್ ರೂಪದಲ್ಲಿ ನೀಡಿದರು. ನನ್ನನ್ನು ಸಿಂಗಪೂರಿಂದ ಟೆಲಿಫೋನಿಕ್ ಇಂಟರ್ವ್ಯೂ ಮಾಡಿದ್ದ ಮೇಡಂ ಖುಷಿ ಆದರು. ಎಲ್ಲರೆದುರೂ ನನಗೆ ಶಹಬ್ಬಾಷ್‌ಗಿರಿ ಕೊಟ್ಟರು. ಮತ್ತೊಮ್ಮೆ ತ್ರಿಶೂರಿಗೆ ಹೋಗಿ ಟೆಂಡರ್ ಓಪನಿಂಗ್‍ನಲ್ಲಿ ಭಾಗವಹಿಸಿದೆ. ಕೆಲವು ದಿನಗಳ ನಂತರ ನನ್ನ ಇಮ್ಮೀಡಿಯೇಟ್ ಬಾಸ್ ಬದಲಾದರು. ನನ್ನನ್ನು ರೀಜಿನಲ್ ಆಫೀಸ್‌ಗೆ ಹೋಗೆಂದರು. ಹಾಗೆ ನಾನು ಬನ್ನೇರುಘಟ್ಟ ರಸ್ತೆ ಆಫೀಸ್‌ನಿಂದ ಕೋರಮಂಗಲ ರಹೇಜ ಆರ್ಕೇಡ್ ಆಫೀಸ್‌ಗೆ ಬಂದೆ. ಎಂದಿನಂತೆ ಎಲ್ಲರೂ ಗೆಳೆಯರಾದರು. ನಾನು ಒಮ್ಮೆ 'ಹೌ ಟು ವಿನ್ ಫ್ರೆಂಡ್ಸ್ ಆ್ಯಂಡ್ ಇನ್‌ಫ್ಲೂಯೆನ್ಸ್ ಪೀಪಲ್' ಪುಸ್ತಕ ಓದುತ್ತಿದ್ದಾಗ ನನ್ನ ಗೆಳೆಯನೊಬ್ಬ 'ನಿನಗೆ ಈ ಪುಸ್ತಕದ ಆವಶ್ಯಕತೆ ಇಲ್ಲ. ನೀನು ಹಾಗೆಯೇ ಗೆಳೆತನ ಮಾಡಬಲ್ಲೆ' ಎಂದಿದ್ದ. ಅವನ ಮಾತಲ್ಲಿ ಎಷ್ಟು ಸತ್ಯ ಇದೆಯೋ ತಿಳಿಯದು. ಆದರೆ ಗೆಳೆತನ ಮಾಡುವ ಸಂಗತಿಯಲ್ಲಿ ನಾನು ಅದೃಷ್ಟವಂತ. ಬೇಗನೆ ಗೆಳೆಯರಾಗುತ್ತಾರೆ ಜನ ನನ್ನೊಂದಿಗ...

ಯತಿ ಸ್ವಂತೀ -296

24-10-2018 ಸ್ವೀಡನ್ ದೇಶದ ಒಬ್ಬಾತ ನನ್ನ ದೊಡ್ಡ ಬಾಸ್ ಆಗಿ ಬಂದರು. ಆತನ ಜೊತೆಗೆ ಮಾತಾಡಲು ಖುಷಿ ಆಗುತ್ತಿತ್ತು. ಆತನಿಗೆ ನನ್ನ ಹೆಸರು ಹೇಳಲು ಬರುತ್ತಿರಲಿಲ್ಲ. ನನ್ನನ್ನು 'ಜಟ್ರಾಯ್' ಎನ್ನುತ್ತಿದ್ದರು! ಎಲ್ಲರೂ ಕೆಲಕಾಲ ನನ್ನನ್ನು ಜಟ್ರಾಯ್ ಎಂದೇ ಸಂಬೋಧಿಸಿ ರೇಗಿಸುತ್ತಿದ್ದರು. ನನ್ನ ಪದವಿಯ ಮಟ್ಟ ಮತ್ತು ಹೆಸರು ಬದಲಾದವು. ಸ್ವಲ್ಪ ಹೆಚ್ಚಿನ ಗ್ರೇಡ್. ನನ್ನ ಕೆಲವು ಸಹೋದ್ಯೋಗಿಗಳ ಹೆಸರು ನೆನಪಿದೆ. ನದಿಗೆ ಹೊಸನೀರು ಬಂದಂತೆ ಜನ ಬರುತ್ತಿದ್ದರು ಹೋಗುತ್ತಿದ್ದರು. ಹೊಸಬರು ಮತ್ತೆ ಬರುತ್ತಿದ್ದರು. ಕೊನೆಗೆ ನನ್ನ ಪದವಿ ಡಿಜಿಎಂ ಎಂದಾಯಿತು. ಕೆಲಸ ಆಸಕ್ತಿಕರವಾಗಿತ್ತು. ಆ ಸ್ವೀಡಿಷ್ ಬಾಸ್ ರಾಜೀನಾಮೆ ಇತ್ತರು. ಬೀಳ್ಕೊಡುಗೆಯ ಭಾಷಣ ಮಾಡುತ್ತಾ "ಅಬ್ಬಾ ನಿಮ್ಮ ಹೆಸರುಗಳನ್ನು ಉಚ್ಚರಿಸೋದು ಕಷ್ಟ. ನಾನು ಜಟ್ರಾಯ್ ಹೆಸರನ್ನು ಸರಿಯಾಗಿ ಹೇಳಕ್ಕೆ ಒಂದು ವರ್ಷ ತಗೊಂಡೆ" ಎಂದು ನನ್ನ ಹೆಸರನ್ನು ಮತ್ತೆ ಜಟ್ರಾಯ್ ಎಂದು ಹೇಳಿದರು. ಎಲ್ಲರೂ ನಕ್ಕರು. ನನ್ನ ಹೊಸ ಬಾಸ್ ಮುಂಬೈನಲ್ಲಿದ್ದರು. ನನ್ನ ಲೀವ್ ಅಪ್ಲಿಕೇಷನ್ ಕೂಡ ಮುಂಬೈಗೆ ಹೋಗಿ ಅಪ್ರೂವ್ ಆಗಬೇಕಿತ್ತು.

ಯತಿ ಸ್ವಂತೀ -294

23-10-2018 ಒಬ್ಬರು ಕನ್ಸಲ್ಟೆಂಟ್ ಬಳಿ ಹೋದೆ. ಅವರ ಹತ್ತಿರ ಯಾವ ಓಪನಿಂಗ್ ಕೂಡ ಇರಲಿಲ್ಲ. ಅವರೊಂದು ಸಲಹೆ ನೀಡಿದರು. ನೀನು ಇಂಟರ್ವ್ಯೂಗೆ ಹೋದ ಕಂಪೆನಿಯ ಬಾಸ್‌ಗೆ ಗೆ ನೀನೇಕೆ ಒಂದು ಪತ್ರ ಬರೆದು ವಿಷಯವನ್ನು ನೆನಪಿಸಬಾರದು ಎಂದರು. ಮನೆಗೆ ಬಂದು ಒಂದು ಮೆಯಿಲ್ ಕಳಿಸಿದೆ. ಮರು 'ಟಪಾಲು' ತಕ್ಷಣವೇ ಬಂದಿತು. ಶೀಘ್ರದಲ್ಲೇ ಕರೆಯುವೆ ಎಂದು. ನನ್ನ ಬಳಿ ಮೊಬೈಲ್ ಇರಲಿಲ್ಲ. ಲ್ಯಾಂಡ್‌ಲೈನ್ ನಂಬರ್ ನೀಡಿದ್ದೆ. ಅಂದು ಮನೆಗೆ ಬಂಧುಗಳು ಬಂದಿದ್ದರು. ಆ ಸಂದರ್ಭದಲ್ಲಿ ನನಗೊಂದು ಕರೆ ಬಂದಿತು. ಬೆಂಗಳೂರಿನ ಆಫೀಸ್ ಸೆಕ್ರೆಟರಿ ಮಾತಾಡಿ, ನಿಮಗೆ ಸಿಂಗಪೂರಿಂದ ಟೆಲಿಫೋನಿಕ್ ಇಂಟರ್ವ್ಯೂ ಇದೆ ಎಂದಳು. ನನ್ನನ್ನು ಇಂಟರ್ವ್ಯೂ ಮಾಡಿದವರು ಅತಿ ಎತ್ತರದ ಪೋಸ್ಟ್‌ನಲ್ಲಿದ್ದಾಕೆ. ನನ್ನ ಸಿ. ವಿ. ಯನ್ನು ಒಂದೂವರೆ ಪುಟಕ್ಕೆ ಇಳಿಸಿ ಕಳಿಸಿದ್ದೆ. ಪ್ರತಿಯೊಂದು ಅಂಶವನ್ನೂ ಓದಿ ನನ್ನನ್ನು ಪ್ರಶ್ನಿಸಿದರು. ನನಗೆ ತಿಳಿದ ಮಟ್ಟಿಗೆ ಉತ್ತರ ಹೇಳಿ 'ಮೇಡಂ, ನನಗೆ ಯಾವುದೇ ವಿಶೇಷ ಕ್ವಾಲಿಫಿಕೇಶನ್ ಇಲ್ಲ. ಮಾತಾಡುವುದು ಮಾತ್ರ ಬರುತ್ತದೆ' ಎಂದೆ. ನಾನು ಮಸ್ಕತ್‌ನಲ್ಲಿ ಸರ್ಕಾರೀ ಸಿಬ್ಬಂದಿಯೊಂದಿಗೆ ಡೀಲ್ ಮಾಡುತ್ತಿದ್ದ ವಿಷಯ ಹೇಳಿದೆ. 'ಸರಿ ಪುನಃ ಸಂಪರ್ಕಿಸುತ್ತೇವೆ' ಎಂದರು. ಎರಡು ದಿನಗಳ ನಂತರ ಬನ್ನೇರುಘಟ್ಟ ರಸ್ತೆಯ ಆಫೀಸ್‌ನಲ್ಲಿ ಇಂಟರ್ವ್ಯೂಗೆ ಕರೆ ನೀಡಿದರು. ಪ್ರವೀಣ್ ಎಂಬಾತ 'ನಿನಗೆ ಈಆರ್ಪೀ ಗೊತ್ತಾ?' ಎಂದು ...

ಯತಿ ಸ್ವಂತೀ -293

22-10-2018 ಸುಮಾರು 33 ತಿಂಗಳುಗಳ ಕಾಲ ಈ ದೇಶದಲ್ಲಿ ಉದ್ಯೋಗ. ಅದರಲ್ಲಿ ಸುಮಾರು 80 ದಿನಗಳು ಬೆಂಗಳೂರಿನಲ್ಲಿ. ಮನೆಯವರಿಂದ ದೂರ. ಒಂಟಿತನದ ಬದುಕು. ಹಲವು ಸಿಹಿ ನೆನಪುಗಳು. ಕೆಲವು ಕಹಿ ಜ್ಞಾಪಕಗಳು. ಮುಕೇಶ್ ಲತಾ ಹಾಡಿರುವ 'ಕುಛ್ ಖೋ ಕರ್ ಪಾನಾ ಹೈ ಕುಛ್ ಪಾ ಕರ್ ಖೋನಾ ಹೈ' ಹಾಡು ಎಂದೆಂದಿಗೂ ಎಲ್ಲರಿಗೂ ಅನ್ವಯ. ಹೇಳಿದೆನಲ್ಲಾ... ರಾತ್ರಿ ಊಟ ಮಾಡಿ ಮನೆಗೆ ಬಂದು ಬೀಗ ತೆಗೆದು ದೀಪ ಹಾಕುವಾಗ ದುಃಖ ಉಮ್ಮಳಿಸಿ ಬರುತ್ತಿತ್ತು. ಉಳಿದಂತೆ ಎಲ್ಲವೂ ಮನೆಯಲ್ಲಿ ಇದ್ದಾಗ ಮಾಡುವ ಕೆಲಸಗಳೇ. ಏಳು ದಡಬಡ ಸಿದ್ಧನಾಗು ತಿಂಡಿ ತಿಂದು ಆಫೀಸ್‌ಗೆ ದೌಢಾಯಿಸು ಕೆಲಸ ಮಾಡು. ಒಮ್ಮೆ ಆಫೀಸ್ ಒಳಗೆ ಕೂತ ನಂತರ ಭಾರತ, ಒಮಾನ್, ಅಮೆರಿಕ ಎಲ್ಲ ಒಂದೇ. ನಂತರ ಊಟ. ಮತ್ತೆ ಓಟ. ಕೆಲಸ. ನಂತರ ಊಟ. ಮನೆ. ನಿದ್ದೆ. ಆದರೆ ಮತ್ತದೇ ಸಂಜೆ. ಫಿರ್ ವಹೀ ತನಹಾಯೀ. ವಾಪಸ್ ಬಂದ ನಂತರ ಮಕ್ಕಳು ಗಲಾಟೆ ಮಾಡಿದರೆ ಕಿವಿ ಮುಚ್ಚಿ ಕೂರುತ್ತಿದ್ದೆ. ಒಂಟಿತನದ ಆ ಸಿನಿಕತೆ ಹೋಗಲು ಕೆಲಕಾಲ ಹಿಡಿಯಿತು. ಕೆಲಸ ಸಿಕ್ಕಿದೆ ಎಂಬ ಖುಷಿಯಲ್ಲಿ ಓಡಾಡುತ್ತಿದ್ದೆ. ನಂತರ ಬೆಂಗಳೂರಿನಲ್ಲಿ ಉದ್ಯೋಗ ಮಾಡುವ ಅವಕಾಶ ದೊರಕಿತು. ಬದುಕು ಮತ್ತೊಂದು ತಿರುವು ಪಡೆಯಿತು. ಬದಲಾವಣೆ ಒಂದೇ ಶಾಶ್ವತ ಎಂಬ ಮಾತು ನನ್ನ ಜೀವನದಲ್ಲಿ ಮತ್ತೆ ಸಾಬೀತಾಯಿತು.

ಯತಿ ಸ್ವಂತೀ -292

21-10-2018 ಆ ದೇಶದ ಬಗ್ಗೆ ಏನೇನೂ ಗೊತ್ತಿಲ್ಲದೇ ಹೋದೆ. ನಿಜಕ್ಕೂ ಚೆನ್ನಾಗಿ ನೋಡಿಕೊಂಡಿತು ನನ್ನನ್ನು ಈ ದೇಶ. ದೇಶದ ಸುಲ್ತಾನ್ ಭಾರತೀಯ ಸಮುದಾಯಕ್ಕೆ ಸ್ವತಂತ್ರವಾಗಿ ಅವರ ಚೌಕಟ್ಟಿನಲ್ಲಿ ಜೀವಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ನಮ್ಮ ದೇವರ ಗುಡಿ ಕಟ್ಟಿ ಅದರಲ್ಲಿ ಪೂಜೆ ಮಾಡಲು ಅನುಮತಿ ಇರುವುದು ನಿಜವಾಗಿಯೂ ವಿಶೇಷ. ಭಾರತೀಯ ಸಂಗೀತವನ್ನು ಏರ್ಪಡಿಸಲು ಹಾಲ್. ಶನಿವಾರದ ದಿನ ಹನುಮಂತನ ಗುಡಿ ಭಾರತೀಯರಿಂದ ತುಂಬಿ ತುಳುಕುತ್ತಿತ್ತು. ಕೆಲವು ಸಲ ಹಣದ ನಷ್ಟ ಆಗಿದೆ ನನಗೆ. ಆಗೆಲ್ಲ ತಿರುಪತಿ ಹುಂಡಿ ಎಂದುಕೊಂಡು ಆ ನಷ್ಟವನ್ನು ನುಂಗಿ ನಂಜುಂಡನಾಗಿದ್ದೇನೆ. ನನ್ನ ಅತಿ ಕಷ್ಟದ ಸಮಯದಲ್ಲಿ ನನಗೆ ಕೆಲಸ, ಸಂಬಳ ಕೊಟ್ಟು ನನ್ನನ್ನು ಸಾಲದ ಶೂಲದಿಂದ ಬಿಡಿಸಿದ ಒಮಾನ್ ದೇಶಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನನ್ನ ಮನೆಯವರು ಬರಲಾಗಲಿಲ್ಲ. (ಅಮ್ಮನ ಹೊರತಾಗಿ). ನನ್ನ ಮನಸ್ಸು ಆ ವಿಷಯವನ್ನು ನೆನೆದಾಗ, ನನ್ನ ಬುದ್ಧಿ ಹೇಳುವ ಮಾತಿದು 'ಕೆಲವನ್ನು ಪಡೆಯಲು ಕೆಲವನ್ನು ಕಳೆದುಕೊಳ್ಳಬೇಕು'. ಮನೆಯವರಿಗೆಲ್ಲ ಕೆಲವು ಕಾಣಿಕೆಗಳನ್ನು ಕೊಂಡುಕೊಂಡೆ. ಕೊನೆಗೂ ಕೊನೆಯ ದಿನ ಬಂದಿತು. ನಮ್ಮ ಕಂಪೆನಿ ಪಿ ಆರ್ ಓ ನನ್ನನ್ನು ಕರೆದೊಯ್ದ. ದೇಶದೊಳಗೆ ಮತ್ತೆ  ಬರದವರಿಗೆ ಏರ್‌ಪೋರ್ಟ್‌ನಲ್ಲಿ ಒಂದು ಗೇಟ್ ಇದೆ. ಆ ಗೇಟ್‌ನಲ್ಲಿ ನನ್ನನ್ನು ಕಳಿಸಿದರು ವಿಮಾನಾಶ್ರಯದಲ್ಲಿ. ಪಾಸ್‌ಪೋರ್ಟ್‌ನಲ್ಲಿದ್ದ ನನ್ನ ಒಮಾನ್ ವೀಸಾ ಕ್ಯಾನ್ಸೆಲ್ ಆಯಿತು. ನಾನು ಒ...

ಯತಿ ಸ್ವಂತೀ -291

Image
20-10-2018 ಹೊರಡುವ ದಿನ ಹತ್ತಿರ ಬಂದಿತು. ಕಂಪೆನಿಯ ಸಹೋದ್ಯೋಗಿಗಳು ಸೇರಿ ನನಗೊಂದು ಬಂಗಾರದ ಬ್ರೇಸ್‍ಲೆಟ್ ಕಾಣಿಕೆ ನೀಡಿದರು. ಒಂದು ಚಿಕ್ಕ ಥ್ಯಾಂಕ್ಸ್ ಭಾಷಣ ಬಿಗಿದೆ. ಮರುದಿನ ಒಂದು ಟೆಂಡರ್ ಸಬ್‌ಮಿಟ್ ಮಾಡಲು ಮುನಿಸಿಪಾಲಿಟಿ ಆಫೀಸ್‌ಗೆ ಹೊರಟಿದ್ದೆ. ಮೊಬೈಲ್‌ಗೆ ಹ್ಯಾಂಡ್ಸ್ ಫ್ರೀ ಹಾಕಿಕೊಂಡು ನನ್ನ ಕೊಲೀಗ್ ಒಬ್ಬರೊಂದಿಗೆ ವಾದ ಮಾಡುತ್ತಿದ್ದೆ. ನನ್ನ ಗಮನ ಕ್ಷಣಕಾಲ ಮಾತಿನತ್ತ ಹೋಗಿತ್ತು. ಅಷ್ಟೇ... ನನ್ನ ಮುಂದೆ ಹೋಗುತ್ತಿದ್ದ ಹೊಚ್ಚ ಹೊಸ ಹೋಂಡಾ ಅಕ್ಕಾರ್ಡ್ ಕಾರಿನ ಹಿಂದಿನ ಬಂಪರ್‌ಗೆ ನನ್ನ ಕಾರು ಮುತ್ತಿಕ್ಕಿತ್ತು! ಆ ಮನುಷ್ಯ ಕಾರಿಂದಿಳಿದು ಅರಾಬಿಕ್ ಭಾಷೆಯಲ್ಲಿ ಏನೋ ಹೇಳುತ್ತಾ ಹೋದ. ಆತನ ಮಾತಿನಲ್ಲಿ ಹತ್ತು ರಿಯಾಲ್ ಎನ್ನುವ ಪದಗಳು ನನಗೆ ಅರ್ಥ ಆದವು. ಆದರೆ ಅಲ್ಲೇ ಪಕ್ಕಕ್ಕೆ ಕಾರು ನಿಲ್ಲಿಸಿ 'ಪೊಲೀಸರನ್ನು ಕರೆಯಿರಿ' ಎಂದೆ. ನನ್ನ ಸಹೋದ್ಯೋಗಿ ಶಾನ್‌ಭಾಗ್‌ಗೆ ಫೋನ್ ಮಾಡಿ ಟೆಂಡರ್ ತಗೊಂಡು ಹೋಗೆಂದೆ. ಅವನು ಬಂದ. ಈ ದೃಶ್ಯ ನೋಡಿ ನಕ್ಕು ಹೊರಟು ಹೋದ. ಒಬ್ಬ ಬಲೂಚಿ ಬಂದು 'ಹತ್ತು ರಿಯಾಲ್ ಕೊಟ್ಟರೆ ಬಿಟ್ಟುಬಿಡುತ್ತಾರಂತೆ' ಎಂದ ಹಿಂದಿಯಲ್ಲಿ, ನನಗೆ ಅರಾಬಿಕ್ ಅರ್ಥ ಆಗಿಲ್ಲ ಎಂದುಕೊಂಡು. ನಮ್ಮ ಪಿ ಆರ್ ಓ ಫಹಾದ್‌ಗೆ ಫೋನ್ ಮಾಡಿದೆ. ಅವ ಬಂದ. ಕಾರಿನ ಡ್ರೈವರ್ ಜೊತೆ ಮಾತನಾಡಿದ. ಅಷ್ಟರಲ್ಲಿ ಪೊಲೀಸ್ ಬಂದ. 'ಖಲ್ಲಾಸ್?'(ಮುಗಿಯಿತಾ?) ಎಂದು ಕೇಳಿದ. 'ಕುಲ್ಲು ತಮಾಮ್' ಎಂದ ಫಹ...

ಯತಿ ಸ್ವಂತೀ -290

19-10-2018 ಇದನ್ನು ಇಂದು ಬರೆಯುತ್ತಿರುವೆ ಎಂದರೆ ಅಂದು ಬದುಕಿ ಉಳಿದಿದ್ದೇ ಕಾರಣ ಎಂದು ನಂಬುತ್ತೇನೆ. ಪಕ್ಕದ ವಾದಿಯಿಂದ ಒಂದು ಕತ್ತೆ ಮೇಲೆ ಬಂದು ವೇಗವಾಗಿ ಹೋಗುತ್ತಿದ್ದ ನಮ್ಮ ಕಾರಿಗೆ ಢಿಕ್ಕಿ ಹೊಡೆದಿತ್ತು. ಕಾರಿನ ಗೇರ್ ಬಾಕ್ಸ್ ಢಮ್ಮೆಂದು ಒಡೆಯಿತು. ಕತ್ತೆ ಮತ್ತೆ ಓಡಿ ವಾದಿಯಲ್ಲಿ ಬಿದ್ದು ಹೋಯಿತು. ನಾನು ಪ್ಯಾಸೆಂಜರ್ ಸೀಟಿನಲ್ಲಿದ್ದೆ. ಡ್ರೈವರ್ ಕಡೆ ಬ್ರೇಕ್ ಆಯಿಲ್ ಸುರಿಯಲಾರಂಭಿಸಿತ್ತು. ಕಾರು ಅಲುಗಾಡದೇ ನಿಂತಿತು. ಇಳಿದು ಹೋಗಿ ವಾದಿಯಲ್ಲಿ ನೋಡಿದೆ. ಕತ್ತೆ ಅಲ್ಲಿ ಸತ್ತುಬಿದ್ದಿತ್ತು. ಪೊಲೀಸ್‌ಗೆ ಫೋನ್ ಮಾಡಿದೆವು. ಅವರು ನೂರೈವತ್ತು ಕಿಮೀ ದೂರದಿಂದ ಬರಬೇಕಿತ್ತು. ಮಧ್ಯಾಹ್ನದ ಮಟಮಟ ಬಿಸಿಲು. ಸ್ವಲ್ಪ ದೂರದಲ್ಲಿ ಸಮುದ್ರ. ಅದರ ಮೇಲೆ ಬಿಸಿಲಿನ ಝಳ ಕಾಣಿಸುತ್ತಿತ್ತು. ನನ್ನನ್ನು ಮಸ್ಕತ್‌ ಕಡೆ ಹೋಗುತ್ತಿದ್ದ ಒಂದು ಕಾರಿನಲ್ಲಿ ಕಳಿಸಿದರು. ಏಕೆಂದರೆ ಪೊಲೀಸ್ ಬರುವ ವರೆಗೂ ಆ ಕಾರಿನ ಡ್ರೈವರ್ ಕಾಯಲೇಬೇಕಿತ್ತು. ಇಬ್ಬರು ಯುವಕರಿದ್ದ ಕಾರದು. ಡ್ರೈವಿಂಗ್ ಲೈಸೆನ್ಸ್ ಪಡೆದೇ ಇರಲಿಲ್ಲ ಅವರು! ಅಂತೂ ಅವರು ನನ್ನನ್ನು ಡ್ರಾಪ್ ಮಾಡುವ ವರೆಗೆ ಸ್ವಲ್ಪ ಹೆದರಿಕೆ ಇದ್ದೇ ಇತ್ತು. ನಂತರ ಮುಖ್ಯ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ನನ್ನ ಕಾರು ಹತ್ತಿ ಮನೆಗೆ ಬಂದೆ. ಆದರೆ ನನ್ನ ಅಪಘಾತಗಳ ಪಟ್ಟಿ ಇನ್ನೂ ಮುಗಿದಿರಲಿಲ್ಲ!

ಯತಿ ಸ್ವಂತೀ -289

17-10-2018 ನಾನು ಈಗ ಓಡಿಸುತ್ತಿದ್ದ ಕಾರಿನ ಮೊದಲ ಡ್ರೈವರ್  ನನ್ನ ಮಾಜಿ ಸಹೋದ್ಯೋಗಿ ಮಿ. ಜೋಶಿಯೊಂದಿಗೆ ನನ್ನ ಸಂಪರ್ಕ ಇತ್ತು. ಆತ ಒಂದು ಕೇಬಲ್ ಕಂಪೆನಿಯಲ್ಲಿ ಕೆಲಸದಲ್ಲಿದ್ದ. ನಾನು ರಾಜೀನಾಮೆ ಇತ್ತೆನೆಂದು ಅರಿತೊಡನೆ ಆತನ ಕಂಪೆನಿಯ ಬಾಸ್ ಮಸ್ಕತ್‌ಗೆ ಬಂದಾಗ(ಸೌದಿಯಲ್ಲಿನ ಒಂದು ಕಂಪೆನಿ ಅದು) ಬಳಿ ನನ್ನ ಇಂಟರ್ವ್ಯೂ ಅರೇಂಜ್ ಮಾಡಿದ. ಮಾತುಕತೆ ಆಯ್ತು. ನನಗೆ ದುಬೈಯಲ್ಲಿ ಉದ್ಯೋಗ ಆಫರ್ ಮಾಡಿದರು. ಅಂದರೆ ಪಕ್ಕದ ದೇಶ... ಜೋಶಿಗೆ ಕೃತಜ್ಞತೆಗಳನ್ನು ತಿಳಿಸಿದೆ. ಅಂದರೆ ನಾನು ನಿರುದ್ಯೋಗಿಯಾಗದೇ ಈ ದೇಶ ಬಿಡಲಿದ್ದೆ. ಇನ್ನೇನು ಹದಿನೈದು ದಿನಗಳ ನಂತರ ಹೊರಡಲು ನನ್ನ ಶಾಶ್ವತ ರಿಟರ್ನ್ ಟಿಕೆಟ್ ಸಿದ್ಧವಾದಾಗ ನನ್ನ ಇಮ್ಮೀಡಿಯೇಟ್ ಬಾಸ್ ಸತೀಶ್ ಬೇರೆ ಎಲ್ಲಿಂದಲೋ ಫೋನ್ ಮಾಡಿ ಸೂರ್‌ಗೆ ಹೋಗಲು ಹೇಳಿದರು. ಸೂರ್ ಸುಮಾರು ನಾಲ್ಕು ನೂರು ಕಿಮೀ ದೂರ. ಬೇರೊಂದು ಕಂಪೆನಿಯ ಕಾರಿನಲ್ಲಿ ಹೊರಟೆ. ಸಮುದ್ರ ತೀರದಲ್ಲಿ ಒಂದು ಹೆಲಿಕಾಪ್ಟರ್ ಸಿದ್ಧವಾಗಿ ನಿಂತಿತ್ತು. ಅದನ್ನು ಹತ್ತಬೇಕೆಂದಾಗ ಥ್ರಿಲ್ಲೋ ಥ್ರಿಲ್ಲು! ಮೊದಲನೇ ಸಲ! ಸಮುದ್ರದ ಮೇಲಿನಿಂದ ಅದು ಹಾರಿದಾಗ ನನ್ನ ಬೆನ್‌ಕ್ಯು ಕ್ಯಾಮೆರಾದಿಂದ ಆ ಚಲನೆಯನ್ನು ಸೆರೆ ಹಿಡಿದೆ. ನಂತರ ಹೆಲಿಕಾಪ್ಟರ್ ಬೆಟ್ಟವೊಂದರ ಮೇಲೆ ನಿಂತಿತು. ಇಳಿಜಾರಿನಲ್ಲಿ ನಡೆದು ಮೊಬೈಲ್ ಟವರ್ ಹಾಕಲು ಸಿದ್ಧ ಪಡಿಸಿದ್ದ ಸೈಟ್ ನೋಡಿಕೊಂಡು ಮತ್ತೆ ಹೆಲಿಕಾಪ್ಟರ್ ಹತ್ತಿ ಮೊದಲು ಹತ್ತಿದ ಜಾಗದಲ್ಲಿ ಇಳಿದೆವು. ನಂತರ...

ಯತಿ ಸ್ವಂತೀ -288

17-10-2018 ವಾಪಸ್ ಹೋಗಲು ಖುಷಿ. ಮಸ್ಕತ್‌ನ ನನ್ನ 'ಮನೆ'ಗೆ ಮರಳುವ ಸಂಭ್ರಮ. ಆದರೆ ಅಲ್ಲಿ ಒಂದು ತಾಪತ್ರಯ ಜರುಗಲಿತ್ತು. ಮತ್ತೆ ನನ್ನ ಮಾಮೂಲಿ ಟೆಂಡರ್ ಕೆಲಸದಲ್ಲಿ ಮಗ್ನನಾದೆ. ನನ್ನ ಶ್ರೀಮತಿಯವರು ಮಸ್ಕತ್‌ಗೆ ಬರಬೇಕಿತ್ತು. ವೀಸಾಗಾಗಿ ವಿನಂತಿ ಮಾಡಿದೆ. ಏಕೋ ಏನೋ ಕೊಡುವುದಿಲ್ಲ ಎಂದುಬಿಟ್ಟರು. ಮನಸ್ಸಿಗೆ ಕಹಿ ಎನಿಸಿತ್ತು. 'ನನ್ನ ಭಾವನವರಿಗೆ ಫೋನ್ ಮಾಡಿದೆ. ಬೆಂಗಳೂರಿನಲ್ಲಿ ಕೆಲಸ ಸಿಗಲ್ವಾ? ಬಿಟ್ಟುಬಿಡಲು ಸಾಧ್ಯ ಆದರೆ ಕೆಲಸ ಬಿಡು: ಎಂದರು. ಅಂದು ನಮ್ಮ ಎರಡನೇ ಬಾಸ್ ಜೊತೆಗೆ ಲಿಫ್ಟ್‌ನಲ್ಲಿ ಆಫೀಸಿಗೆ ಹೋಗುವಾಗ' ನಾನು ರಾಜೀನಾಮೆ ಕೊಡ್ತೀನಿ' ಎನ್ನುವ ಮಾತು ಥಟ್ಟನೆ ನನ್ನಿಂದ ಹೊರಬಿದ್ದುಬಿಟ್ಟಿತು. ಸರಸರನೆ ಆ ಮಾತು ಆಫೀಸ್‌ನಲ್ಲಿ ಹರಡಿತು. ಏಪ್ರಿಲ್ 11, 2005 ನನ್ನ ಕೊನೆಯ ದಿನ ಎಂದಾಯಿತು. ಆಗ ಮುಂದ? ಎನ್ನುವ ಪ್ರಶ್ನೆ ಎದುರಾಯಿತು. ಅದಕ್ಕೆ ಮೊದಲು...

ಯತಿ ಸ್ವಂತೀ -287

16-10-2018 ಅಂದು ಸುಮೈಲ್‌ಗೆ ಹೋಗಿ ಮರಳುತ್ತಿದ್ದೆ. ಸುಮಾರು 180 ಕಿಮೀ ದೂರ ಕಾರು ಓಡಿಸಿ ಆಗಿತ್ತು. ಇಜ್ಕಿಯಲ್ಲಿ  ಡೆಲಿವರಿ ಕೊಡಬೇಕಿತ್ತು. ಗಾಡಿಯನ್ನು ಬಲಗಡೆಗೆ ತಿರುಗಿಸಿದೆ. ಒಂದು ಚಿಕ್ಕ ಡೀವಿಯೇಶನ್. ಕಸ್ಟಮರ್ ನೋಡಿ ವಾಪಸ್ ಹೊರಟೆ. ಅಲ್ಲಿ ಎಡಗಡೆಗೆ ಒಂದು ರಸ್ತೆ ಇದೆ. ಆದರೆ ಅದು ಸಿಂಗಲ್ ಟ್ರ್ಯಾಕ್. ಬಹಳ ಅಪಘಾತಗಳಾಗುವುದರಿಂದ ಆ ಕಡೆ ಹೋಗಬೇಡ ಎಂದು ನನಗೆ ಹೇಳಿದ್ದರು ಪೈ ಮಾಮ್. ಸಿಂಗಲ್ ಟ್ರ್ಯಾಕ್‍ನಲ್ಲಿ ವಾಹನಗಳು ನಮ್ಮ ರಸ್ತೆಗೆ  ಬಂದು ವೇಗವಾಗಿ ಹೋಗಿ ಅವರ ಕಡೆಯ ವಾಹನಗಳನ್ನು ದಾಟಿ ಅವರ ರಸ್ತೆಗೆ ಮರಳಿ ಮುಂದೆ ವೇಗವಾಗಿ ಹೋಗುತ್ತವೆ. ವಿರುದ್ಧ ದಿಕ್ಕಿನಲ್ಲಿ ಗಾಡಿ ನಡೆಸುವ ನಮ್ಮ ಹೃದಯ ನಮ್ಮ ಬಾಯಿಗೆ ಬರುತ್ತದೆ. ಅದಕ್ಕೇ ಬಂದ ದಾರಿಯಲ್ಲಿ ವಾಪಸ್ ಹೋಗಿ ಮತ್ತೆ ಬಲಕ್ಕೆ ತಿರುಗಿದರೆ ನಿಜ್ವಾ ಕಡೆಗೆ ಡಬಲ್ ರೋಡ್ ಇದೆ. ಸರಿ, ಬಲಕ್ಕೆ ತಿರುಗಲು ಸನ್ನದ್ಧನಾಗುತ್ತಿದ್ದಂತೆ ಟ್ಯಾಕ್ಸಿಯೊಂದು ಇದ್ದಕ್ಕಿದ್ದಂತೆ ನನ್ನ ಕಡೆಗೆ ತಿರುಗಿತು. ನನ್ನ ಬುದ್ಧಿಗೆ ಕ್ಷಣಕಾಲ ಮಂಕು ಕವಿಯಿತು. ಅಬ್ಬಾ ಈ ಊರಲ್ಲಿ ಕೂಡ ಟ್ಯಾಕ್ಸಿಗಳು ನಮ್ಮೂರ ಆಟೋಗಳಂತೆ ಟಕ್ಕನೆ ತಿರುಗುತ್ತವಲ್ಲಾ ಎಂದುಕೊಳ್ಳುತ್ತಾ ಬಲಕ್ಕೆ ತಿರುಗಿಸಿದೆ. ರೇರ್ ವ್ಯೂ ಮಿರರ್‍ನಲ್ಲಿ ಒಂದು ದೊಡ್ಡ ಬಸ್  ವೇಗವಾಗಿ ಬರುವುದು ಕಂಡಿತು. ಬಸ್‍ನ ಹೆಡ್ ಲೈಟ್ ಆನ್ ಆಯಿತು. ನಮ್ಮ ಊರಲ್ಲಿ ಲೈಟ್ ಡಿಪ್ ಡಿಮ್ ಮಾಡಿದರೆ ನಾನು ಹೋಗುವೆ ಎಂದರ್ಥ. ಆ ಊರಲ್ಲಿ ನೀನು ಹೋಗೆ...

ಯತಿ ಸ್ವಂತೀ -286

15-10-2018 ಒಮ್ಮೆ ಸುಮೈಲ್‌ಗೆ ಮಧ್ಯಾಹ್ನ ಹೊರಟೆ. ಸುಮಾರು 200 ಕಿಮೀ ಡ್ರೈವಿಂಗ್. ಕಸ್ಟಮರುಗಳ ಭೇಟಿಯ ನಂತರ ವಾಪಸ್ ಹೊರಟೆ. ಇದ್ದಕ್ಕಿದ್ದಂತೆ ಮಳೆ ಶುರುವಾಯಿತು. ಅಬ್ಬಾ! ಕುಂಭದ್ರೋಣ ಮಳೆ. ಗಾಬರಿಯಿಂದ ಕಾರೋಡಿಸಿದೆ. ನನಗೆ ವೈಪರ್  ಕೂಡ ಆಪರೇಟ್ ಮಾಡಲು ಬರುತ್ತಿರಲಿಲ್ಲ. ಏಕೆಂದರೆ ಎಂದಿಗೂ ಮಳೆಯಲ್ಲಿ ಕಾರೋಡಿಸಿರಲಿಲ್ಲ. ಈಗ ಮುಂದಿನ ಹಾದಿ ಕಾಣಿಸುತ್ತಿಲ್ಲ. ಹೆಡ್ ಲೈಟ್, ಬ್ಯಾಕ್ ಲೈಟ್, ಹಝಾರ್ಡ್ ಲೈಟ್ಸ್ ಹಾಕಿಕೊಂಡು ಮೆಲ್ಲನೆ ಚಾಲಿಸಿದೆ. ಬೆಟ್ಟದ ಮೇಲಿನ ರಸ್ತೆ. ಮಳೆನೀರು ರಸ್ತೆಯ ಮೇಲೆ ನಿಲ್ಲದಿದ್ದುದು ಪುಣ್ಯ. ಜೀವನ್‌ಗೆ ಫೋನ್ ಮಾಡಿದೆ. ಏನೂ ಕೇಳಿಸಲಿಲ್ಲ. ಬಲಗಡೆಗೇ ಹೋಗುತ್ತಿದ್ದೆ. ಆದರೆ ನನಗಿಂತ ನಿಧಾನವಾಗಿ ಹೋಗುವವರನ್ನು ಓವರ್‌ಟೇಕ್ ಮಾಡಲೇಬೇಕಿತ್ತು. ಇನ್ನೊಂದು ಕಡೆ ಉಲ್ಟಾ ಬಿದ್ದಿದ್ದ ಕಾರು ನೋಡಿ ಏಸಿ ಕಾರೊಳಗೇ ಬೆವರಿದೆ. ಕ್ಯಾಸೆಟ್‌ನಿಂದ ಹಾಡು 'ನಜರ್ ಆ ರಹಾ ಹೈ ಸಾಫ್ ಯೇ' ಕೇಳಿ ಮೈ ಉರಿಯಿತು. ಎಂತಹ ವಿಪರ್ಯಾಸ! ಮಳೆ ಕಡಿಮೆ ಆಗುವ ವರೆಗೂ ವೈಪರ್ ಆ್ಯಕ್ಷನ್ ಒಂದು ಕ್ಷಣ ಆಗುವಂತಹದ್ದು ಮಾಡುತ್ತಿದ್ದೆ. ಆ ಆ್ಯಕ್ಷನ್‌ನಿಂದ ಮುಂದಿನ ಗಾಜು 'ಸಾಫ್' ಆಗುವುದೆಂದು ತಿಳಿದಿತ್ತು. ಮಳೆ ನಿಂತು ಹೋದ ಮೇಲೆ ನನ್ನ ಹಣೆಯ ಮೇಲೆ ಬೆವರಿನ ಹನಿಯೊಂದು ಮೂಡಿತ್ತು. ಜೀವನ್‌ಗೆ ಫೋನ್ ಮಾಡಿ ಮನೆ ತಲುಪುವ ವರೆಗೂ ಮಾತಾಡುತ್ತಲೇ ಇದ್ದೆ. ಅಬ್ಬಾ... ಇದೊಂದು ಭಯಾನಕ ಅನುಭವ. ಮತ್ತೊಂದು ಅಪಘಾತ ಶೀಘ್ರವೇ ಸಂಭವಿಸುವುದರ...

ಯತಿ ಸ್ವಂತೀ -285

14-10-2018 ಒಂದು ಶುಕ್ರವಾರ ಬೆಳಗ್ಗೆ ಸೊಹಾರ್ ಎನ್ನುವ ಊರಿನಲ್ಲಿದ್ದ ಮನೀಷ್ ಎನ್ನುವ ಸಹೋದ್ಯೋಗಿಯ ಮನೆಗೆ ಹೋಗಲು ನಿರ್ಧಾರ ಮಾಡಿದೆವು ನಾನು, ಜೀವನ್. ಆತನಿಗೆ ಮನೀಷ್ ಪರಿಚಯವಿತ್ತು. ನನ್ನ ಬಳಿ ಕಾರು ಮತ್ತು ಕಾರೋಡಿಸುವ ಜೋಷ್ ಇತ್ತು. ರೂವಿಯಲ್ಲಿದ್ದ ಸುರೇಶ್ ಕೂಡ ಮನೀಷ್‌ನ ಗೆಳೆಯ. ಸುರೇಶ್‌ನ ಪತ್ನಿ ಮತ್ತು ಪುಟ್ಟ ಮಗು ಚೆನ್ನೈಯಿಂದ ಬಂದಿದ್ದರು. ಸೋ, ನಾನು ಜೀವನ್ ಬೆಳ್ಳಂಬೆಳಗ್ಗೆಯೇ ಮನೆಯಿಂದ ಹೊರಟೆವು. ನಾನು ಒಂದು ಸ್ಟ್ರೆಚ್‍ನಲ್ಲಿ ಅಷ್ಟು ದೂರ ಎಂದೂ ಕಾರೋಡಿಸಿದ್ದವನಲ್ಲ. ಸುಮಾರು 140 ಕಿಮೀ ದೂರದ ರುಸೈಲ್ ಎನ್ನುವ ಸ್ಥಳ ತಲುಪಿದೆವು. ಅಲ್ಲಿಗೆ ಸುರೇಶ್ ಮತ್ತು ಕುಟುಂಬ 160 ಕಿಮೀ ದೂರಕ್ಕೆ ಟ್ಯಾಕ್ಸಿ ಹಿಡಿದು ಬಂದಿದ್ದರು. ನಂತರ ಇನ್ನೂ 200 ಕಿಮೀ ದುಬೈ ಕಡೆಯ ರಸ್ತೆಯಲ್ಲಿ ಕಾರೋಡಿಸಿದೆ. ಮಹಾ ಅಪಾಯಕಾರಿ ರಸ್ತೆ. ಮೇಲು ಸೇತುವೆ ಈಗಿದೆಯಂತೆ. ಆಗ ಇರಲಿಲ್ಲ. ಇದ್ದಕ್ಕಿದ್ದಂತೆ ಅಡ್ಡ ಬರುತ್ತಿದ್ದ ಕಾರುಗಳು! ಜೊತೆಗೆ ಸುರೇಶ್ ಮಗುವಿನ ಆರೋಗ್ಯ ಕೆಟ್ಟಿತು. ಅಲ್ಲಲ್ಲಿ ವಾಂತಿ ಮಾಡುತ್ತಿತ್ತು. ಬೆಳಗ್ಗೆ ಆರಕ್ಕೆ ಹೊರಟು ಸುಮಾರು 350 ಕಿಮೀ ದೂರದ ಮನೀಷ್ ಮನೆ ಇದ್ದ ಸೊಹಾರ್ ಸುಮಾರು ಒಂಬತ್ತೂವರೆಗೆ ತಲುಪಿದೆವು. ಮನೀಷ್ ಮನೆಯಲ್ಲಿ ತಿಂಡಿ. ಹೊಸದಾಗಿ ಮದುವೆಯಾಗಿದ್ದು ಪತ್ನಿಯನ್ನು ಕರೆಸಿದ್ದ. ನಂತರ ನಮ್ಮ ಕಂಪೆನಿಯ ಸೊಹಾರ್ ಶೋರೂಂ ಇನ್ ಛಾರ್ಜ್ ಅಶೋಕ್ ಮನೆಯಲ್ಲಿ ಊಟ. ಮತ್ತೆ ಸಂಜೆ ನಾಲ್ಕೂವರೆಗೆ ಸೊಹಾರ್ ಬಿಟ್ಟೆವು. ಸುರೇಶ್ ಮತ...

ಯತಿ ಸ್ವಂತೀ -284

13-10-2018 ಜೀವನ ಒಂದು ಪ್ಯಾಟ್ರನ್ ಪಡೆಯಿತು. ಬೆಳಗ್ಗೆ ಎದ್ದು ಸ್ನಾನ ಮುಗಿಸಿ ಜೀವನ್ ಮಾಡುತ್ತಿದ್ದ ರುಚಿಯಾದ ತಿಂಡಿ ತಿಂದು ಕಾರಿಗೆ ಇಬ್ರಿ ಊರಿನ ಕಸ್ಟಮರುಗಳು ಆರ್ಡರ್ ಮಾಡಿದ ವಸ್ತುಗಳನ್ನು ಹಾಕಿಕೊಂಡು ಹೊರಡುತ್ತಿದ್ದೆ. ಟ್ರಾಫಿಕ್ ಜಾಮ್ ತಪ್ಪಿಸಲು ಏಳೂವರೆಗೆ ನಿಜ್ವಾ ಬಿಡುತ್ತಿದ್ದೆ. ರಸ್ತೆಯಲ್ಲಿ ಹಿಂದೀ ಕನ್ನಡ ಹಾಡುಗಳನ್ನು ಕೇಳುತ್ತಿದ್ದೆ. ಇಬ್ರಿ ತಲುಪಿ ನನ್ನ ಪ್ರಕೃತಿ ಕರೆ ಮುಗಿಸಲೇಬೇಕಿತ್ತು. ನವೆಂಬರ್ ತಿಂಗಳಲ್ಲಿ ನಿಜ್ವಾ ಗಡಗಡಗಡ ನಡುಗಿಸುವಷ್ಟು ಛಳಿ ಹೊಂದಿರುತ್ತಿತ್ತು. ಜೊತೆಗೆ ಮಂಜು ಇಡೀ ಜಾಗ ಮಬ್ಬಾಗುವಂತೆ ಮಾಡುತ್ತಿತ್ತು. ಸುಮಾರು ಒಂದೂವರೆ ಹೊತ್ತಿಗೆ ಮರಳಿ ನಿಜ್ವಾ ತಲುಪುತ್ತಿದ್ದೆ. ಜೀವನ್ ಬಿಸಿ ಬಿಸಿ ಅಡುಗೆ ಮಾಡಿರುತ್ತಿದ್ದ. ನಂತರ ನಿದ್ದೆ. ಬೆಳಗ್ಗೆ ಅವನು ಶೋರೂಂ ತೆರೆದಿರುತ್ತಿದ್ದ. ಸಂಜೆ ನಾಲ್ಕಕ್ಕೆ ಶೋರೂಂ ತೆರೆಯುತ್ತಿದ್ದ. ನಮ್ಮ ಮನೆ ಅದರ ಪಕ್ಕದಲ್ಲಿನ ಬಿಳ್ಡಿಂಗ್ ಮಹಡಿಯ ಮೇಲಿತ್ತು. ಅನತಿ ದೂರದಲ್ಲಿ ನಿಜ್ವಾದ ಪುರಾತನ ಕೋಟೆ. ಅದಕ್ಕೆ ಬಹಳ ಜನ ಪ್ರವಾಸಿಗರು ಬರುತ್ತಿದ್ದರು. ಜನ ನಮ್ಮ ಶೋ ರೂಂಗೆ ಬಂದು ಲೈಟು, ಸ್ವಿಚ್ ಮತ್ತು ಇತರ ವಿದ್ಯುತ್ ಉಪಕರಣ ಕೊಳ್ಳುತ್ತಿದ್ದರು. ಎಂಟಕ್ಕೆ ಅಂಗಡಿ ಮುಚ್ಚಿ ಹತ್ತಿರದ ಸೂಪರ್ ಮಾರ್ಕೆಟ್ ತಲುಪುತ್ತಿದ್ದೆವು. ಎಂಟೂವರೆ ರಾತ್ರಿಯಲ್ಲಿ ಆ ಛಳಿಯಲ್ಲಿ ಐಸ್ ಕ್ರೀಂ ತಿನ್ನುತ್ತಿದ್ದೆವು! ನಮ್ಮ ಈ ವರ್ತನೆ ಜನಕ್ಕೆ ಅಚ್ಚರಿ ತರುತ್ತಿತ್ತು. ಉಳಿದವರು ಕುಬೂಸ್ ರೋಟಿ ನ...

ಯತಿ ಸ್ವಂತೀ -283

12-10-2018 90 ಕಿಮೀ ದೂರದ ಸುಮೈಲ್‌ ಎನ್ನುವ ಊರಿಗೆ ಮಸ್ಕತ್‌ ದಿಕ್ಕಿನಲ್ಲಿ ಹೋಗಿ ಸ್ವಲ್ಪ ರೂಟ್ ಬದಲಿಸಬೇಕಿತ್ತು. 40 ಕಿಮೀ ದೂರದ ಇಜ್ಕಿ ಎನ್ನುವ ಮತ್ತೊಂದು ಜಾಗಕ್ಕೆ ಪೈ ಮಾಮ್ ಕರೆದೊಯ್ದಿದ್ದರು. ಅವರು ಮತ್ತು ಕುಟುಂಬ ಮೂಡಬಿದರೆಗೆ ರಜೆಗೆ ಹೋದರು. ನಾನು ಜೀವನ್ ಜೊತೆಗೆ ಅವನ ಮನೆಯಲ್ಲಿ ಇರತೊಡಗಿದೆ. ಬಲು ಚೆನ್ನಾಗಿ ಅಡುಗೆ ಮಾಡುತ್ತಿದ್ದ ಜೀವನ್. ಬಹಳ ದಿನಗಳ ನಂತರ ಮನೆ ಊಟ! ಬೆಳಗ್ಗೆ ಹೊತ್ತು ಮಾತ್ರ ಕಸ್ಟಮರುಗಳ ಭೇಟಿಗೆ ಹೋಗುತ್ತಿದ್ದೆ. ಮಧ್ಯಾಹ್ನ ಜೀವನ್ ನಳಪಾಕ. ಸಂಜೆಯಿಂದ ಶೋರೂಂ. ಒಂದು ವಿಶಿಷ್ಟ ಕಾಲ ಅದು. ಅಪರೂಪಕ್ಕೆ ದೊಡ್ಡ ಬಾಸ್‍ರಿಂದ ಬರುತ್ತಿದ್ದ ಫೋನ್ ಕರೆ ಬಿಟ್ಟರೆ ದಿನಂಪ್ರತಿ ವ್ಯಾಪಾರ. ಅಷ್ಟೇ. ಕಸ್ಟಮರುಗಳ ಭೇಟಿಗೆ ಬೆಳಗ್ಗೆ ಏಳೂವರೆಗೇ ನಿಜ್ವಾದಿಂದ ಹೊರಟು ಬಿಡುತ್ತಿದ್ದೆ. ತಡವಾಗಿ ಹೊರಟಷ್ಟೂ ಟ್ರಾಫಿಕ್ ಹೆಚ್ಚು. ಸಿಂಗಲ್ ಟ್ರ್ಯಾಕ್. ರಸ್ತೆ ಬಿಟ್ಟರೆ ಆ ಕಡೆ ಈ ಕಡೆ ಸಮತಟ್ಟು ಪ್ರದೇಶ. ಅನತಿ ದೂರದಲ್ಲಿ ಎರಡೂ ಕಡೆ ಬೆಟ್ಟಗಳು. ಅಲ್ಲಲ್ಲಿ ಕುರಿ ಮೇಕೆ. ಕೆಲವೊಮ್ಮೆ ಒಂಟೆ. ಒಂಟೆ ಕಾರಿಗೆ ಅಡ್ಡ ಬಂದರೆ ಕಾರು ಮತ್ತು ನಾನು ಎರಡೂ ಪಡ್ಚಾ ಅಂತ ಎಚ್ಚರಿಕೆ ನೀಡಿದ್ದರು ಪೈ ಮಾಮ್. ಸೋ ಕೇರ್‌ಫುಲ್ ಡ್ರೈವಿಂಗ್. ನನ್ನ ಫೇವರಿಟ್ಸ್ ಲತಾ ಕಿಶೋರ್ ರಫಿ ಮುಕೇಶ್ ಪಿಬಿಎಸ್ ರಾಜ್ ಜಾನಕಿ ಸುಶೀಲ ಎಸ್ಪಿಬಿ... ಕ್ಯಾಸೆಟ್ ಕಾಲವದು. ಒಂದು ಕ್ಷಣ ಕೂಡ ಡ್ರೈವಿಂಗ್ ಬೋರ್ ಆಗಲಿಲ್ಲ. ಇಬ್ರಿಯೇ ದೂರ. 140 + 140 ಕಿಮೀ ಪ್ರತಿಸಲ. ಇ...

ಯತಿ ಸ್ವಂತೀ -282

11-10-2018 ರಸ್ತೆ ಮರ್ಯಾದೆ ಅನ್ನೋದನ್ನ ಒಮಾನ್ ದೇಶದಲ್ಲಿ ಕಲಿತ 'ತಪ್ಪಿಗೆ', ನನಗೆ ಇಂದಿಗೂ ಬೆಂಗಳೂರು ನಗರದಲ್ಲಿ ಕಾರು ಚಾಲಿಸಲು ಬರುವುದಿಲ್ಲ!  ನನ್ನ ಬಳಿ ಇರುವ ಇಂಡಿಗೋ ಸಿ ಎಸ್ ಕಪ್ಪು ಕಾರನ್ನು ನನ್ನ ಶ್ರೀಮತಿ ಆರಾಮವಾಗಿ ಓಡಿಸುತ್ತಾರೆ. ಮೊದಲು ಮಾರುತಿ ಆಮ್ನಿ ಓಡಿಸುತ್ತಿದ್ದರು. ಮಸ್ಕತ್‌ನಲ್ಲಿ ಲೈಸೆನ್ಸ್ ತಗೊಂಡ ನಂತರ ರೆಗ್ಯುಲರ್ ಆಗಿ ಕಾರು ಬಳಸಿದೆ. ಮೂರು ಲೇನ್ ರಸ್ತೆ ಇರುವೆಡೆ ಮುಂದೆ ನಾವು ಬಲಕ್ಕೆ ತಿರುಗಬೇಕಾದರೆ ಬಲತುದಿ, ಎಡಕ್ಕೆ ತಿರುಗಬೇಕಾದರೆ ಎಡತುದಿ ನೇರ ಹೋಗಬೇಕು ಎಂದರೆ ಮಧ್ಯ ಹೋಗಬೇಕು. ಅಫ್ ಕೋರ್ಸ್, ರಸ್ತೆ ಖಾಲಿ ಇದ್ದರೆ ಟ್ರ್ಯಾಕ್ ಬದಲಿಸಬಹುದಿತ್ತು. ಆದರೆ ಈ ಕಡ್ಡಾಯ ರೀತಿಯ ಚಾಲನೆ ಅಭ್ಯಾಸ ಆಗಿತ್ತು. ಅಲ್ಲಿನ ಯುವಕರು ಕಾರಲ್ಲಿ ಬರುತ್ತಿದ್ದ ವೇಗ ನನ್ನ ಹೃದಯವನ್ನು ನನ್ನ ಬಾಯಿಗೆ ತಂದದ್ದುಂಟು. ತೀರಾ ದೊಡ್ಡ ರಸ್ತೆಯಲ್ಲಿ ನಾನೂ 120 ಕಿಮೀ ವೇಗದಲ್ಲಿ ಓಡಿಸಿದ್ದಿದೆ. ನನ್ನ ಕಾರಿನ ಸ್ಪೀಡೋಮೀಟರ್ ಕುಂಯ್ ಕುಂಯ್  ಎಂದು ಆಗೆಲ್ಲಾ ನನ್ನನ್ನು ಎಚ್ಚರಿಸಿದ್ದಿದೆ. ಐದನೇ ಗೇರ್‌ನಲ್ಲಿ ಕಾರು ಓಡಿಸುವುದು, ರೌಂಡೆಬೌಟ್ ಬಂದಾಗ ನಾಲ್ಕನೇ ಗೇರ್. ಒಮ್ಮೆ ಒಂದು ಘಟನೆ ನಡೆಯಿತು. ಮಥ್ರಾ ಎನ್ನುವ ಜಾಗದಲ್ಲಿ ಮುನಿಸಿಪಾಲಿಟಿ ಇದೆ. ಅಲ್ಲಿ ಟೆಂಡರ್ ಸಬ್ಮಿಟ್ ಮಾಡಿ (ಎಂದಿನಂತೆ ಕೊನೆಯ ಕ್ಷಣದಲ್ಲಿ) ಸ್ಪರ್ಧಿಯೊಬ್ಬರೊಂದಿಗೆ ಮಾತಾಡುತ್ತಿದ್ದೆ. ನಮಗೆ ನಮ್ಮ ಕಂಪೆನಿಯ ದೊಡ್ಡವರು ಹೇಳಿದ್ದರು. ಟ್ರೇಡಿಂಗ್‍ನ ಮುಖ...

ಯತಿ ಸ್ವಂತೀ -281

10-10-2018 ಕಾರು ಓಡಿಸುತ್ತಿದ್ದ ಹೊಸತರಲ್ಲಿ ಕೆಲವು ಟೆನ್ಶನ್ ಆಗಿರುವುದುಂಟು. ಒಮ್ಮೆ ಓನೆಕ್ ಅನ್ನೋ ಕಂಪೆನಿಗೆ ಹೋಗಿ ಅದರ ಎದುರಿಗೆ ಫುಟ್‌ಪಾತ್‍ನಲ್ಲಿ ಕಾರು ಪಾರ್ಕಿಂಗ್ ಮಾಡಿ ಒಳಗೆ ಹೋಗಿ ಮರಳಿ ಕಾರಿನ ಬಳಿ ಬಂದಾಗ ಎದೆ ಧಸಕ್ಕೆಂದಿತು. ಯಾರೋ ಪುಣ್ಯಾತ್ಮ ನನ್ನ ಕಾರಿಗೆ ಅದೆಷ್ಟು ಹತ್ತಿರವಾಗಿ ಅವನ ಕಾರು ನಿಲ್ಲಿಸಿ ಹೋಗಿದ್ದನೆಂದರೆ ನನಗೆ ನನ್ನ ಕಾರನ್ನು ಪಕ್ಕದ ಕಾರಿಗೆ ಡ್ಯಾಮೇಜ್ ಮಾಡದೇ ತೆಗೆಯಲಾಗುತ್ತಿರಲಿಲ್ಲ. ಏನು ಮಾಡುವುದು ಎಂದು ಆಲೋಚಿಸುತ್ತಾ ಇದ್ದಾಗ ಅಲ್ಲಿ ಮೂವರು ಭಾರತೀಯ ವೃದ್ಧರು ವಾಕಿಂಗ್ ಹೋಗುತ್ತಿದ್ದರು. ಅವರಲ್ಲಿ ವಿನಂತಿ ಮಾಡಿದೆ. ಒಬ್ಬಾತ ಕಾರನ್ನು ನಾಜೂಕಾಗಿ ತೆಗೆದು ಕೊಟ್ಟರು. ಇನ್ನೂ ಒಂದು ಸಲ ನನ್ನ ಕಾರಿನ ಬಾಗಿಲು ತೆರೆದು ಒಳ ಹೋಗಲು ಎಷ್ಟು ಕಷ್ಟ ಆಯಿತೆಂದರೆ ಸ್ವಲ್ಪ ನಡೆದರೂ ಓಕೆ ಎಂದು ಅನತಿ ದೂರದ ಪಾರ್ಕಿಂಗ್ ಬಳಸುತ್ತಿದ್ದೆ. ಸಹೋದ್ಯೋಗಿಗಳ ಲ್ಯಾನ್ಸರ್, ಎಕ್ಕೊ ಕಾರುಗಳನ್ನು ಒಮ್ಮೊಮ್ಮೆ ಓಡಿಸಿದ್ದೆ. ಆದರೂ ನನ್ನ ಕಾರು ನನ್ನ ಕಾರೇ. ಹಿಂದೆ ಮಾಜ್ದಾ 6 ಇದ್ದಾಗ ಅದರ ಟೈರ್ ಪಂಕ್ಚರ್ ಆದಾಗ ನಮ್ಮ ಆಫೀಸ್ ಬಾಯ್‍ನ ಕರೆದರೆ ಅವ ಬೇರೇನೋ ಕೆಲಸವಿತ್ತೆಂದು ಬರಲಿಲ್ಲ. ಬೆಂಗಳೂರಲ್ಲಿ ಎಂದೂ ಮಾಡದ ಕೆಲಸ - ಟೈರ್ ಬದಲಾವಣೆ... ಅಲ್ಲಿ ಒಬ್ಬನೇ ಬದಲಾಯಿಸಿದ್ದೆ! ಕೆಲವು ಸಹೋದ್ಯೋಗಿಗಳ ಜೊತೆ ಸ್ನೇಹ ಏರ್ಪಟ್ಟಿತು. ನಮ್ಮ ಹಣಕಾಸು ಅಧಿಕಾರಿ ಇಲ್ಲಿ ನಮ್ಮ ಮನೆಗೆ ಬಂದಿದ್ದರು. ನಾನು ಬೆಂಗಳೂರಿನಲ್ಲಿ ನನ್ನ ಮುಂದಿನ ಉದ...

ಯತಿ ಸ್ವಂತೀ -280

09-10-2018 ಹಾಗೂ ಹೀಗೂ ಎರಡು ವರ್ಷಗಳ ಕಾಲ ಮಸ್ಕತ್‌ನಲ್ಲಿ ಕಳೆದಿದ್ದೆ. ರಮದಾನ್ ಪ್ರತಿ ಹನ್ನೊಂದು ತಿಂಗಳಿಗೊಮ್ಮೆ ಬಂದಿದ್ದರಿಂದ ಎರಡು ಸಲ ಲಾಂಗ್ ರಜೆ ಸಿಕ್ಕಿತ್ತು. ಅಬೂಧಾಬಿಗೆ ನನ್ನ ಭಾವನವರ ಮನೆಗೆ ಹೋಗಿದ್ದೆ. ಬಸ್‌ನಲ್ಲಿ ದೀರ್ಘ ಪ್ರಯಾಣ. ಆದರೆ ಆರಾಮ ಪ್ರವಾಸ. ಒಮ್ಮೆ ನನ್ನನ್ನು ಯಿಬಾಲ್ ಎನ್ನುವ ಊರಿಗೆ ಆಫೀಸ್‌ನಿಂದ ಕಳಿಸಿದರು. ಬಸ್ ಪ್ರಯಾಣ ಬೆಳಗ್ಗೆ ಆರಕ್ಕೆ. ಪುಸ್ತಕ ಇಟ್ಟುಕೊಂಡು ಹೊರಟೆ. ನೋಕಿಯಾ ಮೊಬೈಲ್ ಕಾಲ. ಆಗ ಮೊಬೈಲ್ ಎನ್ನುವ ಭೂತ ಕೇವಲ ಮಾತಾಡಲು ಮಾತ್ರ ಹೆಚ್ಚು ಬಳಕೆ ಆಗುತ್ತಿತ್ತು. ಹಂಸ ತೂಲಿಕಾ ತಲ್ಪದಂತಹ ಪ್ರಯಾಣ. ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ತಲುಪಿದೆ. ಅದು ಪಿಡಿಓ. ಪೆಟ್ರೋಲಿಯಂ ಡೆವಲಪ್‌ಮೆಂಟ್ ಒಮಾನ್. ಸಾಮಾನ್ಯವಾಗಿ ಮಸ್ಕತ್‌ನಲ್ಲಿ ಬಂಡೆಗಳು ಜಾಸ್ತಿ. ಆದರೆ ಯಿಬಾಲ್‌ನಲ್ಲಿ ಮರಳು ಕಂಡೆ. ರಸ್ತೆಯು ಎಷ್ಟು ನೇರವಾಗಿ ಇತ್ತೆಂದರೆ ತುರ್ತು ಪರಿಸ್ಥಿತಿ ವಿಮಾನದ ಲ್ಯಾಂಡಿಂಗ್‌ಗೆ ಏರ್‌ಸ್ಟ್ರಿಪ್ ಆಗಿತ್ತು ಆ ರಸ್ತೆ. ಪಿಡಿಒ ಒಂದು ದೊಡ್ಡ ಕಾಂಪೌಂಡ್. ಕೆಲಸ ಅಲ್ಲಿ 24 ಇಂಟೂ 7, ಆರು ತಿಂಗಳು ಕಂಟಿನ್ಯೂಯಸ್ಸಾಗಿ ಕೆಲಸ. ನಂತರ ಆರು ತಿಂಗಳ ರಜೆ. ಓಡಿ ಹೋಗೋಣ ಎಂದರೆ ಮೈಲುಗಟ್ಟಲೆ ಖಾಲಿ ಮರಳುಗಾಡು. ದುಬೈನಂತೆ ಮರಳಿನ ಗುಡ್ಡಗಳೂ ಇಲ್ಲ. ಸಮತಟ್ಟಾದ ಪ್ರದೇಶ. ಆ ಆಫೀಸ್ ಬಾಗಿಲಲ್ಲೇ ಒಂದು ಮಲ್ಲು ಅಂಗಡಿ. ಗುಂಡುಪಿನ್ನಿನಿಂದ ದುಪ್ಪಟಿವರೆಗೂ ಆತನೊಬ್ಬನೇ ಮಾರುತ್ತಾನೆ. ವಾರಕ್ಕೊಮ್ಮೆ ಟ್ರಕ್ ಬಳಸಿ ರೂವಿಗೆ ...

ಯತಿ ಸ್ವಂತೀ -279

08-10-2018 ಶುಕ್ರವಾರ ಬೆಳಗ್ಗೆ ತಿಂಡಿಯಿಂದ ಫಜೀತಿ ಶುರು. ಆ ಮಲ್ಲು ಮುಸ್ಲಿಂ ಹೊಟೇಲ್‌ನಲ್ಲಿ ಶುಕ್ರವಾರ ಬೆಳಗ್ಗೆ ಇಡ್ಲಿ ಮಾಡುತ್ತಿದ್ದರು. ಅದನ್ನು ಬಾಯಿಗೆ ಇಡಲು ಆಗುತ್ತಿರಲಿಲ್ಲ. ಆ ಸಮಯದಲ್ಲಿ ಚೆನ್ನೈನ 'ಅನ್ನಪೂರ್ಣ ಹೊಟೇಲ್' ಮಸ್ಕತ್‌ನಲ್ಲಿ ಶುರುವಾಯಿತು. ಅದ್ಭುತ ಇಡ್ಲಿ, ದೋಸೆ ಇತ್ಯಾದಿ. ದಿನವೂ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಶುಕ್ರವಾರ ಮಾತ್ರ ತಪ್ಪದೇ ಹೋಗುತ್ತಿದ್ದೆ. ಇಡ್ಲಿ ಅಥವಾ ದೋಸೆ ತಿಂದು ಆಫೀಸ್. ನಂತರ ಮಧ್ಯಾಹ್ನ ಮತ್ತೆ ಅಲ್ಲೇ ಟಿಪಿಕಲ್ ತಮಿಳುನಾಡು ಊಟ. ಸಂಜೆ ತಿನ್ನುವ ಅಭ್ಯಾಸ ಕಮ್ಮಿ. ರಾತ್ರಿ ಸಾಮಾನ್ಯವಾಗಿ ಕೊಲೀಗ್ ಜೊತೆಗೆ ಅಥವಾ ಒಬ್ಬನೇ ಮತ್ತೆ ಅನ್ನಪೂರ್ಣ. ಇಲ್ಲದಿದ್ದರೆ ಪಾಕಿಸ್ತಾನಿ ಪರೋಠ ಅಥವಾ ನಾರ್ತಿಂಡಿಯನ್ ಊಟ. ಕೆಲವು ಸಲ ಕೊಲೀಗ್ಸ್ ಮನೆಯಲ್ಲಿ ಫಂಕ್ಷನ್, ಸತ್ಯ ನಾರಾಯಣ ಪೂಜೆ ಇತ್ಯಾದಿ. ಶನಿವಾರ ಸಂಜೆ ಶಿವ ಹನುಮಾನ್ ಗುಡಿಯಲ್ಲಿ ಹಾಜರ್. ಅಲ್ಲಿ ಭಕ್ತರು ವಿಧವಿಧವಾದ ಪ್ರಸಾದ ಮಾಡಿಸುತ್ತಿದ್ದರು. ಹನುಮನಿಗೆ ಈರುಳ್ಳಿ ಹಾಕಿದ ವಡೆ ಮಾಲೆಯಿಂದ ಹಿಡಿದು ಎಳ್ಳಿನ ಅನ್ನದ ವರೆಗೆ ಪ್ರಸಾದ. ಗುಡಿಯ ಅಂಗಳದಲ್ಲಿ ಒಂದು ಆಲದ ಮರ. ಅದರ ಬುಡದಲ್ಲಿ ಒಂದು ಕಟ್ಟೆ. ಅದರ ಮೇಲೆ ಒಂದು ತಟ್ಟೆಯಲ್ಲಿ ಬಾಳೆಹಣ್ಣು ತುಂಡುಗಳು ಮತ್ತು ತೆಂಗಿನ ಕಾಯಿ ಚೂರುಗಳು. ಮತ್ತೊಂದು ಹಾರಿವಾಣದಲ್ಲಿ ನೈವೇದ್ಯಕ್ಕಾಗಿ ಮಾಡಿಸಿದ್ದ ಪ್ರಸಾದ. 'ಮೈಟ್ ಈಸ್ ರೈಟ್' ಎನ್ನುವಂತೆ ಕಿತ್ತಾಟ ನಡೆಸಿ ಮ್ಯಾಕ್ಸಿಮಮ್ ...

ಯತಿ ಸ್ವಂತೀ -278

07-10-2018 ಭಾವನವರೂ ಅಬೂಧಾಬಿಗೆ ಹೊರಟು ಹೋದರು. ಒಂಟಿಯಾದೆ. ಭಾವ ಹೇಳಿದ್ದರು. ನಿಮಗೆ ಫ್ರೆಂಡ್‌ಶಿಪ್ ಬೇಕಿಲ್ಲ. ನೀವು ಬಂದಿರೋದು ಮನೆಗೋಸ್ಕರ ಹಣ ಸಂಪಾದಿಸಕ್ಕೆ. ಸಿನಿಮಾಗೆ ಹೋಗಬೇಕು ಅಂದರೆ ಒಬ್ಬರೇ ಹೋಗಿ ಅಂದಿದ್ದರು. ಬೇವಫಾ, ಐತ್‌ರಾಜ್, ಕ್ಯಾಚ್ ಮೀ ಇಫ್ ಯೂ ಕ್ಯಾನ್ (ಇದು ನನ್ನ ಆಲ್ ಟೈಮ್ ಫೇವರಿಟ್ ಸಿನಿಮಾಗಳಲ್ಲಿ ಒಂದು)... ನನ್ನ ಅಪರಿಚಿತ ಫ್ಲ್ಯಾಟ್ ಮೇಟ್‌ಗಳು ಅಷ್ಫಾಕ್, ರಾಜ್ ಶೆಟ್ಟಿ, ಶಂಸುದ್ದೀನ್ ಒಮ್ಮೆ ನನ್ನನ್ನು ಅವರ ಜೊತೆ ಸಿನಿಮಾಗೆ ಕರೆದರು. 'ಹೆಲ್ ಬಾಯ್' ಇರಬೇಕು. ಒಟ್ಟಿಗೆ ಹೊಟೇಲ್‌ನಲ್ಲಿ ಊಟ ಮಾಡಿದೆವು. ಇನ್ನೊಂದು ಸಲ ಸಿನಿಮಾಗೆ ಹೋದೆವು. ನಾವು ನಾಲ್ವರೇ ಆ ಸಿನಿಮಾಗೆ ಬಂದಿದ್ದವರು. ಇನ್ನಿಬ್ಬರು ಬಂದರೆ ಮಾತ್ರ ಸಿನಿಮಾ ಶುರು ಮಾಡ್ತೀವಿ ಅಂದರು. ಕರೆಂಟ್ ಬಿಲ್ ಕಟ್ಟಕ್ಕೆ ಆರು ಟಿಕೆಟ್ ಖರ್ಚಾಗಬೇಕಂತೆ! ಇದೆಂತಾ ವಿಚಿತ್ರ ಅಂದುಕೊಂಡಿದ್ದೆ ಜುಲೈನಲ್ಲಿ  ನಾನು ಇಲ್ಲಿ ಒಂದು ದಿನ ಅದೇ ರೀತಿಯ ಸನ್ನಿವೇಶ ಎದುರಿಸುವ ವರೆಗೂ! ಒಂದು ಸಿನಿಮಾ ನೋಡಲು ಹೋದೆ. ಮಧ್ಯಾಹ್ನ ಒಂದೇ ಶೋ. ನನ್ನ ಹೊರತುಪಡಿಸಿ ಇನ್ನಿಬ್ಬರಿದ್ದರು. ಕನಿಷ್ಠ ಹತ್ತು ಜನ ಇರಬೇಕು ಎಂದರು. ಜನರು ಬರಲು ಕಾದೆವು. ಇನ್ಯಾರೂ ಬರಲಿಲ್ಲ. ಶೋ ರದ್ದಾಯಿತು... ಸುಮಾರು ಸಿನಿಮಾಗಳನ್ನು ನೋಡಿದೆ ಒಬ್ಬನೇ. 'ದೇವದಾಸ್' ಸಿನಿಮಾವನ್ನು ಥಿಯೇಟರ್‌ನ ಮೊದಲ ಸಾಲಿನಲ್ಲಿ ಕುಳಿತು ನೋಡಿದ್ದೆ. ಹಂ ದಿಲ್ ದೇ ಚುಕೇ ಸನಂ, ಕೊಯೀ ಮಿಲ್ ಗಯಾ ಇತ್ಯಾದ...

ಯತಿ ಸ್ವಂತೀ -277

06-10-2018 ರಮದಾನ್ ಸಮಯದಲ್ಲಿ ಬೆಳಿಗ್ಗೆಯಿಂದ ಒಮಾನ್ ದೇಶದಲ್ಲಿ ಮುಸ್ಲಿಮರು (ಎಲ್ಲ ದೇಶಗಳವರು) ಉಪವಾಸ ಇರುತ್ತಿದ್ದರು. ಮೊದಲ ದಿನ ಪೇಪರ್‌ಗಳಲ್ಲಿ ಸುಲ್ತಾನರ ಸಂದೇಶ ಇರುತ್ತಿತ್ತು. ಉಪವಾಸ ಮಾಡದೇ ಇರುವವರು ಉಪವಾಸ ಇರುವವರ ಮುಂದೆ ಆಹಾರ ದ್ರವ ಯಾವುದನ್ನೂ ಸೇವಿಸದೇ ಇರಲು ಪ್ರಯತ್ನ ಮಾಡಿ ಎಂದು. ನಮ್ಮ ಆಫೀಸ್‌ನಲ್ಲಿ ಒಮಾನಿಗಳು, ಕನ್ನಡ ಮುಸ್ಲಿಂ ಕೂಡ ಇದ್ದರು. ಉಳಿದ ದಿನಗಳಲ್ಲಿ ನಮ್ಮ ಸೀಟಿಗೇ ಟೀ ಕಾಫಿ ಬರುತ್ತಿದ್ದವು. ಗೋವಿಂದ... ನಮ್ಮ ಆಫೀಸ್ ಬಾಯ್ ಸರಬರಾಜು ಮಾಡುತ್ತಿದ್ದ. ರಮದಾನ್ ತಿಂಗಳಲ್ಲಿ ಪ್ಯಾಂಟ್ರಿಯಲ್ಲಿ ಕಪ್‌ಗಳಲ್ಲಿ ಸಿದ್ಧ ಮಾಡಿಡುತ್ತಿದ್ದ. ನಾವು ಬಾಗಿಲು ಹಾಕಿಕೊಂಡು ಕುಡಿಯುತ್ತಿದ್ದೆವು. ದೊಡ್ಡ ಬಾಸ್‌ಗಳ ಛೇಂಬರ್ ಗಾಜುಗಳನ್ನು ವೆನಿಶಿಯನ್ ಬ್ಲೈಂಡ್‍ನಿಂದ ಮುಚ್ಚಿ ಪೇಯ ನೀಡುತ್ತಿದ್ದ ಗೋವಿಂದ. ಹೊರಗೆ ಹೊಟೇಲ್‌ಗಳು ಸಂಜೆ ವರೆಗೂ ಮುಚ್ಚಿರುತ್ತಿದ್ದವು. ಅಮ್ಮ ಬರುವರೆಂದು ರೂಮು ಬದಲಿಸಿದಾಗ 'ಎಮ್ಟೀಯಾರ್ ರೆಡಿ ಟು ಈಟ್' ತಂದು ಬಿಸಿ ನೀರಲ್ಲಿ ಕುದಿಸಿ ಸಾರನ್ನ, ಪೊಂಗಲ್, ಸಾಂಬಾರನ್ನ ತಿಂದಿದ್ದೇನೆ. ಒಮ್ಮೆ ರಮದಾನ್ ಸಮಯದಲ್ಲಿ ಬಂದ ಸಂಕಷ್ಟ ಚತುರ್ಥಿ ಆಚರಿಸಲು ಉಪವಾಸ ಇದ್ದೆ. ಒಬ್ಬನೇ ನಿಜ್ವಾ ಎನ್ನುವ ಊರಿಗೆ ಹೋದೆ. (ಮುಂದೊಂದು ದಿನ ಅಲ್ಲಿಗೆ ಮೂರು ತಿಂಗಳುಗಳ ಕಾಲ ಇರಲು ಹೋಗಲಿರುವೆನೆಂದು ಆ ಕ್ಷಣದಲ್ಲಿ ನನಗೆ ತಿಳಿದಿರಲಿಲ್ಲ) ಹಸಿವು. ಆದರೆ ಹಟ. ಮ್ಯಾಟಡಾರ್ ಟ್ಯಾಕ್ಸಿಯಲ್ಲಿ ಮಸ್ಕತ್‌ಗೆ ಹಿಂದಿರುಗು...

ಯತಿ ಸ್ವಂತೀ -276

05-10-2018 ನಡೆದು ಹೋಗುತ್ತಿದ್ದ ಸಮಯಗಳಲ್ಲಿ ಅನೇಕ ಸಲ ನಾನು ಬಲಗಡೆ ಇಳಿದು ಎಡಗಡೆಗೆ ರಸ್ತೆ ದಾಟಬೇಕಿತ್ತು. ಆ ರಸ್ತೆಗಳಲ್ಲಿ ವೇಗದ ಮಿತಿ ಗಂಟೆಗೆ 120ಕಿಮೀ ಎಂದರೆ ಜನ ನೂರಿಪ್ಪತ್ತರಲ್ಲೇ ಕಾರೋಡಿಸುತ್ತಿದ್ದರು. ನನಗೆ ಉಡುಪಿ - ಮಂಗಳೂರು ನಡುವಿನ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಬಸ್‌ಗಳು ನೆನಪಾಗುತ್ತಿದ್ದವು. ದೂರದಲ್ಲಿ ಚುಕ್ಕಿಯಂತೆ ಕಾಣುವ ಬಸ್ ಇದ್ದಕ್ಕಿದ್ದಂತೆ ಮೈ ಮೇಲೆ ಬರುವಷ್ಟು ಹತ್ತಿರವಾಗುತ್ತಿತ್ತು. ಮಸ್ಕತ್‌ನಲ್ಲಿ ಒಮ್ಮೆ ನನ್ನನ್ನು ಅವರ ಕಾರಿನಲ್ಲಿ ಒಯ್ದಿದ್ದರು ನನ್ನ ಬಾಸ್. ಅವರು ಮುಂಬೈ ಮೂಲದ ಅಯ್ಯರ್. ನನಗೆ ತಮಿಳು ಭಾಷೆ ಬರುವುದೆಂದರಿತು ನನ್ನೊಂದಿಗೆ ತಮಿಳಿನಲ್ಲಿ ಮಾತಾಡುತ್ತಿದ್ದರು. ಅವರಿಗೆ ಹೀಗೆ ಇಂತಹ ಜಾಗದಲ್ಲಿ ರಸ್ತೆ ದಾಟುವೆನೆಂದು ಹೇಳಿ ನಕ್ಕಾಗ ಅವರು ನಗಲಿಲ್ಲ. ಸೀರಿಯಸ್ಸಾಗಿ, 'ದಯವಿಟ್ಟು ಫುಟ್ ಓವರ್‌ಬ್ರಿಡ್ಜ್ ಉಪಯೋಗಿಸು. ಈ ರೀತಿ ರಸ್ತೆ ದಾಟಬೇಕು. ಅಪಾಯ!' ಎಂದಿದ್ದರು. ಕಾರು ಡ್ರೈವಿಂಗ್ ಬಂದು, ಆಫೀಸ್ ನನಗೆ ಕಾರು ಕೊಟ್ಟಮೇಲೆ ಒಂದೊಂದೇ ಏರಿಯಾ ಅರಿತೆ. ಹಮ್ರಿಯಾ, ಅಲ್ಖ್ವೈರ್, ಘಾಲಾ, ರುಸೈಲ್, ವಾದಿ ಕಬೀರ್... ಓಹ್! ನಿಧಾನವಾಗಿ ಹೆಸರುಗಳು ಮರೆತು ಹೋಗುತ್ತಿದೆ. ಮೊನ್ನೆ ಮೊನ್ನೆ ಗುರುದಾಸ್ ಶಾನ್‌ಭಾಗ್ ಬೆಂಗಳೂರಿಗೆ ಬಂದಾಗ ಆತನ ಬಳಿ ಹೆಸರುಗಳನ್ನು ಮತ್ತೆ ಕೇಳಿ ತಿಳಿದುಕೊಂಡೆ. ರಾಜೇಶ್ ನಾಯಕ್ ಒಮ್ಮೆ ರಾಜರಾಜೇಶ್ವರಿ ನಗರದ ನನ್ನ ಮನೆಗೆ ಬಂದಿದ್ದ. ಮಸ್ಕತ್‌ನಲ್ಲಿ ನನ್ನನ್ನು ಒ...

ಯತಿ ಸ್ವಂತೀ -275

04-10-2018 ನನ್ನನ್ನು ಪ್ರಾಜೆಕ್ಟ್ಸ್ ಡಿವಿಶನ್‌ಗೆ ವರ್ಗ ಮಾಡಿದರು. ಕನ್ನಡ ಬರುವ ಸತೀಶ್ ಕಾಮತರು ನನ್ನ ಬಾಸ್. ಜೊತೆಗೆ ಆಂಧ್ರಪ್ರದೇಶದವರೊಬ್ಬರು. ಕೊಟೇಶನ್ ತಯಾರಿ ಕೆಲಸದಲ್ಲಿ ಸಹಾಯ ನನ್ನದು. ಒಂದು ವಿಶೇಷ ನೋಡಿ. ನಮಗೆ ಶುಕ್ರವಾರ ರಜೆ. ಭಾನುವಾರ ಟೆಂಡರ್ ಸಬ್‌ಮಿಶನ್. ಶನಿವಾರ, ಭಾನುವಾರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಸೂಟಿ. ನಮಗೆ ನಮ್ಮ ಕೆಲವು ಟ್ರಾನ್ಸ್‌ಮಿಶನ್ ವಸ್ತುಗಳ ಬೆಲೆ ಪಡೆಯಲು ಶುಕ್ರವಾರವೇ ಸಾಧ್ಯ. ಆದ್ದರಿಂದ ಶುಕ್ರವಾರ ಬೆಳಗ್ಗೆ ನಾವು ಆಫೀಸ್‌ಗೆ ಬಂದು ಸಮಯವನ್ನು ಯೂರೋಪ್ ಮತ್ತು ಅಮೆರಿಕದ ಸಮಯಕ್ಕೆ ಹೊಂದಿಸಿಕೊಂಡು ಫೋನ್ ಮಾಡಿ ಬೆಲೆ ಅರಿಯಬೇಕು. ಮೊದಲೇ ಹೇಳಿದಂತೆ ಶುಕ್ರವಾರ ಬೆಳಗ್ಗೆ ಇಡೀ ಮಸ್ಕತ್ ಫುಲ್ ನಿದ್ದೆ. ಮಧ್ಯಾಹ್ನದ ವರೆಗೆ ಜನ ಹೊರಗೆ ಬರುವುದಿಲ್ಲ. ಕಾರೋಡಿಸಲೂ ಖುಷಿ. ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳಿರವು. ಬೆಲೆ ಪಡೆದು ಸರ್ಕಾರಿ ಫಾರ್ಮ್ಯಾಟ್‍ನಲ್ಲಿ ಕೊಟೇಶನ್ ತಯಾರಿ. ದರಗಳನ್ನು ಬರೆಯುವ ಜಾಗ ಖಾಲಿ ಬಿಡುತ್ತಿದ್ದೆವು. ಅದನ್ನು ಭಾನುವಾರ ಬೆಳಗ್ಗೆ ನಮ್ಮ ದೊಡ್ಡ ಬಾಸ್ ತುಂಬುತ್ತಿದ್ದರು. ಆ ದೇಶದಲ್ಲಿ ಸರ್ಕಾರಿ ಎಲೆಕ್ಟ್ರಿಕ್ ಕೆಲಸಗಳು ಬಹಳ ಸ್ಪರ್ಧಾತ್ಮಕ. ಲೀಸ್ಟ್ ಕೋಟೆಡ್ ಕಂಪೆನಿ ಆರ್ಡರ್ ಪಡೆಯುತ್ತಿದ್ದು, ನಮ್ಮದೇ ಲೀಸ್ಟ್ ಆಗಬೇಕು. ನಮಗೆ ನಷ್ಟ ಆಗಕೂಡದು. ನಮ್ಮ ಬಾಸ್ ಸಖತ್ ಶಾರ್ಪ್. ಟರ್ಕಿಯಿಂದ ಮರದ ಕಂಬಗಳು ಇತ್ಯಾದಿ ತರಿಸಬೇಕಿತ್ತು. ನನ್ನ ಕಾರು ಡ್ರೈವಿಂಗ್ ಪಕ್ಕಾ ಎಂದು ತಿಳಿದ ಮೇಲೆ ...

ಯತಿ ಸ್ವಂತೀ -274

03-10-2018 ಅಪಘಾತಗಳು ಕೆಲವು ನನ್ನಿಂದ ಜರುಗಿದವು. ಒಮ್ಮೆ ಪಾರ್ಕಿಂಗ್ ಪ್ಲೇಸ್‍ನಲ್ಲಿ ಕಾರಲ್ಲಿ ಕೂತು ರಿವರ್ಸ್ ಗೇರ್‌ನಲ್ಲಿ ಹೋಗುತ್ತಾ ಸೀಟು ಪೊಸಿಶನ್ ಅಡ್ಜಸ್ಟ್ ಮಾಡಲು ಹೋದೆ. ಹಠಾತ್ತಾಗಿ ಹ್ಯಾಂಡ್‌ ಬ್ರೇಕ್ ಹಾಕಿದೆ. ಹಾಗೆ ಹಾಕಿರದಿದ್ದರೆ ಓ ಮೈ ಗಾಡ್! ಇದನ್ನು ಬರೆಯಲು ನಾನು ಇರುತ್ತಿದ್ದೆನೋ ಇಲ್ಲವೋ! ಕಾರು ನಿಂತ ಕೆಲವೇ ಇಂಚುಗಳ ದೂರದಲ್ಲಿ ಸುಮಾರು ಆರು ಮೀಟರ್ ಹಳ್ಳ ತೆಗೆಯಲ್ಪಟ್ಟಿತ್ತು ಹೊಸ ಕಟ್ಟಡದ ಪಾಯಕ್ಕೆ. ಮತ್ತೊಮ್ಮೆ ಕಾರು ರಿವರ್ಸ್ ಮಾಡುತ್ತಾ ಕಸ್ಟಮರ್ ಆಫೀಸ್ ಗೇಟಿಗೆ ಕನ್ನಡಿ ಬಡಿದಿತ್ತು. ಮತ್ತೊಮ್ಮೆ ದೇವಸ್ಥಾನದಿಂದ ಬರುತ್ತಿದ್ದಾಗ ಸೀಟಿನಿಂದ ಪ್ರಸಾದ ಜಾರಿತ್ತು. ಅದರ ಕಡೆಗೆ ಒಂದು ಕ್ಷಣ ಗಮನ ಕೊಟ್ಟಿದ್ದಕ್ಕೆ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಯುವುದರಲ್ಲಿದ್ದೆ. ಆ ಪುಣ್ಯಾತ್ಮ ನನ್ನ ಕಡೆ ದುರುಗುಟ್ಟಿ ನೋಡಿ ಮತ್ತೊಮ್ಮೆ ರೌಂಡೆಬೌಟ್ ರೌಂಡು ಹೊಡೆದು ನನ್ನನ್ನೂ ಕಾಪಾಡಿದ್ದ. ಅವನನ್ನೂ ಕಾಪಾಡಿಕೊಂಡಿದ್ದ! ಎಲ್ಲಕ್ಕಿಂತ ದೊಡ್ಡ ಆಕಸ್ಮಿಕ ಇನ್ನೂ ಬಹಳ ದಿನಗಳ ನಂತರ ಘಟಿಸಿತು. ಅದರ ವಿಷಯ ಆಮೇಲೆ. ಅಂದ ಹಾಗೆ ನನ್ನ ವಿಲ್ಲಾ ಕಾಂಪೌಂಡ್ ಡಿಕ್ಕಿ ಹೊಡೆದ ದಿನ ನನ್ನ ಬಾಸ್ ಯಾರೋ ಕಸ್ಟಮರ್‌ನನ್ನು ನಮ್ಮ ಸ್ಟೋರ್ ಇದ್ದ ಘಾಲಾದಿಂದ ಕರೆದು ತಾ ಎಂದಿದ್ದರು. ಕಾರು ಹತ್ತುವ ಮೊದಲು ನನ್ನ ಕಾರಿನ ಮುರಿದ ಮುಂಭಾಗ ನೋಡಿ ಆತ ನನ್ನತ್ತ ಬೀರಿದ ನೋಟ ಅವಿಸ್ಮರಣೀಯ! ಅಪಘಾತ ಫ್ರೆಶ್ ಆಗಿ ಆಗಿರುವ ಕಾರಿನಲ್ಲಿ ಕೂರಲು ಆತ ಬೆದರಿದ್ದು ನನ...

ಯತಿ ಸ್ವಂತೀ-273

Image
02-10-2018 ಅನೇಕ ಕಸ್ಟಮರುಗಳ ಪರಿಚಯ ಆಯಿತು. ಇಲ್ಲಿನ ವ್ಯವಸ್ಥೆ ಹೇಗೆಂದರೆ ಒಬ್ಬ ಒಮಾನೀ ಸ್ಪಾನ್ಸರ್ ಇರುತ್ತಾನೆ. ಆತನ ಕಂಪೆನಿಯಲ್ಲಿ ಎಲ್ಲ ದೇಶಗಳ ಜನರು ಕೆಲಸ ಮಾಡುತ್ತಾರೆ. ಒಂದು ಕಾಲದಲ್ಲಿ ಬ್ರಿಟಿಷ್ ಮತ್ತು ಅಮೆರಿಕನ್ ಬಾಸ್‌ಗಳು ಇರುತ್ತಿದ್ದರು. ಈಗ ಭಾರತೀಯರೇ ಜಾಸ್ತಿ. ನಿಧಾನವಾಗಿ ಒಮಾನಿಗಳು ಉನ್ನತ ಸ್ಥಾನಗಳಲ್ಲಿ ಕೂರುತ್ತಿದ್ದಾರೆ. ಅನೇಕ ಶ್ರೀಮಂತ ಕುಟುಂಬದ ಒಮಾನಿಗಳು ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಾರೆ. ಒಮಾನ್ ದೇಶದ ಸುಲ್ತಾನ್ ಕಬೂಸ್ ಪುಣೆಯಲ್ಲಿ ಓದಿದರಂತೆ. ನಮ್ಮ ರಾಷ್ಟ್ರಪತಿಗಳಾಗಿದ್ದ ಶ್ರೀ ಶಂಕರ ದಯಾಳ ಶರ್ಮ ಅವರಿಗೆ ಉಪಾಧ್ಯಾಯರಾಗಿದ್ದರಂತೆ. ಶರ್ಮಾ ಅವರು ಮಸ್ಕತ್‌ಗೆ ಬಂದಾಗ ಸುಲ್ತಾನ್‌ರಿಂದ ದೊಡ್ಡ ರೀತಿಯಲ್ಲಿ ಸ್ವಾಗತ ದೊರೆತಿತಂತೆ. ಖಿಮ್ಜೀ ರಾಮದಾಸ್  ಎನ್ನುವ ಗುಜರಾತಿನ ವ್ಯಾಪಾರಿ ಸುಲ್ತಾನ್‌ರಿಗೆ ಬೇಕಾದವರು. ಖಿಮ್ಜೀ ಅವರ ಅನೇಕ ವ್ಯಾಪಾರ ಮಳಿಗೆಗಳು ಇಲ್ಲಿವೆ. ಆ ಒಂದು ಕುಟುಂಬಕ್ಕೆ ಒಮಾನಿ ಉಡುಪು ದಿಶ್‌ದಾಶಹ್ ಧರಿಸುವ ಅನುಮತಿ ಇದೆ(ಅಂತೆ). ಪ್ರತಿ ಕೊಲ್ಲಿ ದೇಶದ ಗೌನ್‌ನಂತಹ ದಿರಸಿನಲ್ಲಿ ಪುಟ್ಟ ವ್ಯತ್ಯಾಸ ಇರುತ್ತದೆ. ಒಮಾನಿ ಉಡುಪು ಕಂಧೂರದಲ್ಲಿ ಕುತ್ತಿಗೆಯಿಂದ ಒಂದು ಲೇಸ್‍ನಂತಹ ದಾರ ಬಂದಿರುತ್ತದೆ. ಬಿಳಿ, ಕಪ್ಪು, ಕಂದು, ನೀಲಿ ಬಣ್ಣಗಳ ಕಂಧೂರ ಹೆಚ್ಚು ಬಳಕೆಯಲ್ಲಿದೆ. ಶುದ್ಧ ಒಮಾನಿ ಜನ ಇಂಗ್ಲಿಷ್ ಮತ್ತು ಅರಾಬಿಕ್ ಮಾತಾಡುತ್ತಾರೆ. ಬಲೂಚಿ ಎನ್ನುವ ಗುಂಪಿನ ಒಮಾನ...

ಯತಿ ಸ್ವಂತೀ - 272

  01-10-2018 ಆತನ ಹೆಸರು ಮರೆತಿದ್ದೇನೆ. ತಮಿಳು ಯುವಕ. ನಾನು ಒಮಾನ್‌ಗೆ ಹೋದ ಹೊಸತರಲ್ಲಿ ಅವನನ್ನು ಒಂದು ಫಂಕ್ಷನ್‍ನಲ್ಲಿ ನೋಡಿದ್ದೆ. ಅದು ಯಾವ ಫಂಕ್ಷನ್ ಎಂದು ಕೂಡ ಮರೆತುಹೋಗಿದೆ. ಬಹಳ ಚೆನ್ನಾಗಿ ಮಾತಾಡಿಸಿದ್ದ. ಅದಾಗಿ ಒಂದು ವರ್ಷದ ನಂತರ ಮಿಮಿಕ್ರಿ ದಯಾನಂದ್ ಮೊಟ್ಟಮೊದಲ ಬಾರಿಗೆ ಒಬ್ಬರೇ ಒಮಾನ್ ಜನರಿಗೆ ಮನರಂಜನೆ ನೀಡಲು ಬಂದಿದ್ದರು. ನಕ್ಕು ನಕ್ಕೂ ಸುಸ್ತಾಯಿತು. ಪ್ರೋಗ್ರಾಮ್ ಮುಗಿದ ನಂತರ ನನ್ನನ್ನು ಹಿಂದಿನಿಂದ 'ಯತಿರಾಜ್' ಎಂದು ಯಾರೋ ಕರೆದರು. ತಿರುಗಿ ನೋಡಿದೆ. ನನಗೆ ಆತನ ಗುರುತು ಸಿಕ್ಕಿತು. ಆತನಿಗೆ ನನ್ನ ಗುರುತು ಹತ್ತಲಿಲ್ಲ! ಬೆಳ್ಳಗಿನ ಬೆಣ್ಣೆ ಮುದ್ದೆಯಂತೆ ಇದ್ದೆ ಆತ ಹಿಂದಿನ ಸಲ ನೋಡಿದಾಗ. ಈಗ ನನ್ನ ಮುಖ, ದೇಹ ಎಲ್ಲ ಬದಲಾವಣೆ ಆಗಿದ್ದವು! 'ಹೌದೂ, ನಾನು ಯತಿರಾಜ್ ಅಂತ ಹೇಗೆ ಕಂಡು ಹಿಡಿದಿರೋ?' ಎಂದೆ. 'ನಿಮ್ಮ ವಿಚಿತ್ರ ಕಲರುಗಳ ಟೀ ಶರ್ಟ್ ಮೂಲಕ' ಅಂದನಾತ! ಈಗ ಆತನ ವಿಷಯ ಏಕಪ್ಪಾ ಬಂತೂಂತಂದ್ರೆ ನಾನು ಅಮ್ಮನನ್ನು ಬೆಂಗಳೂರಿಗೆ ಕಳುಹಿಸಿ ಕೊಡಲು ಮಸ್ಕತ್‌ನ ಸೀಬ್ ವಿಮಾನ ನಿಲ್ದಾಣಕ್ಕೆ ಬಂದರೆ ಆತ ಸಂಸಾರ ಸಹಿತ ಬೆಂಗಳೂರಿಗೆ ಹೊರಟಿದ್ದ. ಅವನಿಗೆ ರಿಕ್ವೆಸ್ಟ್ ಮಾಡಿದೆ ಅಮ್ಮನನ್ನು ನೋಡಿಕೊಳ್ಳಲು. ನಾನು ವಾಪಸ್ ಮನೆಗೆ ಬಂದು ಬಿಟ್ಟೆ. ಅಂದು ವಿಮಾನ ಬೆಂಗಳೂರು ತಲುಪದೇ ಮುಂಬೈಗೆ ಹೋಗಿ ಅಲ್ಲಿಂದ ಬೇರೆ ವಿಮಾನ ಬೆಂಗಳೂರಿಗೆ ಬಂದಿತಂತೆ. ಅವನು ಇದ್ದಿದ್ದರಿಂದ ಅಮ್ಮ ಹೆಚ್ಚು ಚಿಂತಿಸದೇ ಬ...