ಯತಿ ಸ್ವಂತೀ -280
09-10-2018
ಹಾಗೂ ಹೀಗೂ ಎರಡು ವರ್ಷಗಳ ಕಾಲ ಮಸ್ಕತ್‌ನಲ್ಲಿ ಕಳೆದಿದ್ದೆ. ರಮದಾನ್ ಪ್ರತಿ ಹನ್ನೊಂದು ತಿಂಗಳಿಗೊಮ್ಮೆ ಬಂದಿದ್ದರಿಂದ ಎರಡು ಸಲ ಲಾಂಗ್ ರಜೆ ಸಿಕ್ಕಿತ್ತು. ಅಬೂಧಾಬಿಗೆ ನನ್ನ ಭಾವನವರ ಮನೆಗೆ ಹೋಗಿದ್ದೆ. ಬಸ್‌ನಲ್ಲಿ ದೀರ್ಘ ಪ್ರಯಾಣ. ಆದರೆ ಆರಾಮ ಪ್ರವಾಸ. ಒಮ್ಮೆ ನನ್ನನ್ನು ಯಿಬಾಲ್ ಎನ್ನುವ ಊರಿಗೆ ಆಫೀಸ್‌ನಿಂದ ಕಳಿಸಿದರು. ಬಸ್ ಪ್ರಯಾಣ ಬೆಳಗ್ಗೆ ಆರಕ್ಕೆ. ಪುಸ್ತಕ ಇಟ್ಟುಕೊಂಡು ಹೊರಟೆ. ನೋಕಿಯಾ ಮೊಬೈಲ್ ಕಾಲ. ಆಗ ಮೊಬೈಲ್ ಎನ್ನುವ ಭೂತ ಕೇವಲ ಮಾತಾಡಲು ಮಾತ್ರ ಹೆಚ್ಚು ಬಳಕೆ ಆಗುತ್ತಿತ್ತು. ಹಂಸ ತೂಲಿಕಾ ತಲ್ಪದಂತಹ ಪ್ರಯಾಣ. ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ತಲುಪಿದೆ. ಅದು ಪಿಡಿಓ. ಪೆಟ್ರೋಲಿಯಂ ಡೆವಲಪ್‌ಮೆಂಟ್ ಒಮಾನ್. ಸಾಮಾನ್ಯವಾಗಿ ಮಸ್ಕತ್‌ನಲ್ಲಿ ಬಂಡೆಗಳು ಜಾಸ್ತಿ. ಆದರೆ ಯಿಬಾಲ್‌ನಲ್ಲಿ ಮರಳು ಕಂಡೆ. ರಸ್ತೆಯು ಎಷ್ಟು ನೇರವಾಗಿ ಇತ್ತೆಂದರೆ ತುರ್ತು ಪರಿಸ್ಥಿತಿ ವಿಮಾನದ ಲ್ಯಾಂಡಿಂಗ್‌ಗೆ ಏರ್‌ಸ್ಟ್ರಿಪ್ ಆಗಿತ್ತು ಆ ರಸ್ತೆ. ಪಿಡಿಒ ಒಂದು ದೊಡ್ಡ ಕಾಂಪೌಂಡ್. ಕೆಲಸ ಅಲ್ಲಿ 24 ಇಂಟೂ 7, ಆರು ತಿಂಗಳು ಕಂಟಿನ್ಯೂಯಸ್ಸಾಗಿ ಕೆಲಸ. ನಂತರ ಆರು ತಿಂಗಳ ರಜೆ. ಓಡಿ ಹೋಗೋಣ ಎಂದರೆ ಮೈಲುಗಟ್ಟಲೆ ಖಾಲಿ ಮರಳುಗಾಡು. ದುಬೈನಂತೆ ಮರಳಿನ ಗುಡ್ಡಗಳೂ ಇಲ್ಲ. ಸಮತಟ್ಟಾದ ಪ್ರದೇಶ. ಆ ಆಫೀಸ್ ಬಾಗಿಲಲ್ಲೇ ಒಂದು ಮಲ್ಲು ಅಂಗಡಿ. ಗುಂಡುಪಿನ್ನಿನಿಂದ ದುಪ್ಪಟಿವರೆಗೂ ಆತನೊಬ್ಬನೇ ಮಾರುತ್ತಾನೆ. ವಾರಕ್ಕೊಮ್ಮೆ ಟ್ರಕ್ ಬಳಸಿ ರೂವಿಗೆ ಹೋಗಿ ಉದ್ಯೋಗಿಗಳ ಅಗತ್ಯ ವಸ್ತುಗಳನ್ನು ಕೊಂಡು ತರುತ್ತಾನೆ. ನಾನು ಅಲ್ಲಿನ ಆಡಿಟೋರಿಯಂ ಲೈಟುಗಳ ವ್ಯಾಟೇಜ್ ಲೆಕ್ಕ ಹಾಕಬೇಕಿತ್ತು. ವಾಪಸ್ ಹೋಗಲು ಅದೇ ಬಸ್. ಮತ್ತೆ ಮರುದಿನ ಮಧ್ಯಾಹ್ನದ ವರೆಗೆ ಬಸ್ಸಿಲ್ಲ. ಬೇರೆ ವಾಹನ ಇಲ್ಲ. ಊಟ ಮಾಡೆಂದರು ಅಧಿಕಾರಿಗಳು. ದೊಡ್ಡ ಕ್ಯಾಂಟೀನ್. ಎಲ್ಲ ಸ್ತರದ ಉದ್ಯೋಗ ಮಾಡುವವರಿಗೂ ಅಲ್ಲೇ ಊಟ. ಹಳೆಯ ಹಿಂದೀ ಚಲನಚಿತ್ರಗಳಲ್ಲಿ ತೀರಾ ಸಾಹುಕಾರರ ಮನೆಯಲ್ಲಿ ತೋರಿಸುತ್ತಿದ್ದ ತಿರುಗುವ ಊಟದ ಮೇಜು ಇಲ್ಲಿತ್ತು. ನಮಗೆ ಬೇಕಾದ ತಿನಿಸುಗಳನ್ನು ಮೂರು ಬೇರೆ ಬೇರೆ ವೃತ್ತಗಳಿದ್ದ ಮೇಜನ್ನು ತಿರುಗಿಸಿಕೊಂಡು ಪಡೆಯಬಹುದಿತ್ತು. ಗಲಿಬಿಲಿಯಾದ ನಾನು ಕೊನೆಯಲ್ಲಿ ತಿಂದಿದ್ದು ಸಾರನ್ನ, ಮೊಸರನ್ನ ಉಪ್ಪಿನಕಾಯಿ ಮಾತ್ರ! ಬಸ್ ಡ್ರೈವರ್ ಕೂಡ ಅಲ್ಲೇ ಉಣ್ಣುತ್ತಿದ್ದ. ಸರಿ... ನಾನು ಅವನು ಇಬ್ಬರೇ ಪಯಣಿಸಿದೆವು ಬಸ್ಸಿನಲ್ಲಿ ಬಹಳ ದೂರದ ವರೆಗೆ. ಸಂಜೆ ಏಳು ಗಂಟೆ ಸುಮಾರಿಗೆ ಮನೆಗೆ ವಾಪಸ್ ಬಂದೆ. ಅವಿಸ್ಮರಣೀಯ ಲಾಂಗ್ ಟ್ರಿಪ್ ನಂಬರ್ ಒನ್ ಇದು. ಎರಡನೆಯದು ಸ್ವಲ್ಪ ಅಪಾಯ ಕೂಡ ಇದ್ದ ಪ್ರಯಾಣ. ಅದರ ಬಗ್ಗೆ ಆಮೇಲೆ...
Comments
Post a Comment