ಯತಿ ಸ್ವಂತೀ -120
30-04-2018 ಅಮ್ಮನನ್ನು ಕಾರಿನಲ್ಲಿ ಕರೆದೊಯ್ದು ಇಂಪ್ರೆಸ್ ಮಾಡಲು ನೋಡಿದೆ. ‘ರಾಜು, ನಿನಗಿಂತ ಉಷಾನೇ ಚೆನ್ನಾಗಿ ಕಾರೋಡಿಸ್ತಾಳೆ’ ಎಂದುಬಿಟ್ಟರು! ನನ್ನ ಪತ್ನಿ ಉಷಾ ಮಾರುತಿ ಆಮ್ನಿಯನ್ನು ಓಡಿಸುತ್ತಿದ್ದಳು. ಅವಳೊಂದಿಗೆ ಇವರೂ ಎಲ್ಲೆಡೆ ಹೋಗುತ್ತಿದ್ದರು. ಅದಕ್ಕೇ ಅವಳಿಗೆ ಕಾಂಪ್ಲಿಮೆಂಟು! ನನ್ನಮ್ಮನೇ ಹಾಗೆ. ಗುಣಕ್ಕೆ ಮತ್ಸರ ಇಲ್ಲ! ಅಂತೂ ಇಂತೂ ಎರಡು ತಿಂಗಳು ಇದ್ದರು. ಆರು ತಿಂಗಳಾದರೂ ಇರಲಿ ಎನ್ನುವುದು ನನ್ನ ಇಚ್ಛೆಯಾಗಿತ್ತು. ಆದರೆ ಅಷ್ಟರಲ್ಲಿ ನಮ್ಮ ದೊಡ್ಡಮ್ಮನ ಮೊಮ್ಮಗನ ಮುಂಜಿ ಎನ್ನುವ ಸುದ್ದಿ ಬಂದಿತು. ‘ನಾನು ಹೋಗಬೇಕು. ನಮ್ಮ ಎಲ್ಲ ನೆಂಟರನ್ನೂ ಒಂದು ಕಡೆ ನೋಡಬಹುದು’ ಎಂದು ಹೇಳತೊಡಗಿದರು. ಇನ್ನು ಅವರನ್ನು ಇರು ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಅವರನ್ನು ಕಳಿಸುವ ಏರ್ಪಾಡು ಮಾಡಿದೆ. ನಾನು ಮಸ್ಕತ್‍ಗೆ ಹೋದ ಹೊಸತರಲ್ಲಿ ಯಾವುದೋ ಒಂದು ಕನ್ನಡದ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಒಬ್ಬ ತಮಿಳು ಯುವಕನ ಪರಿಚಯವಾಗಿತ್ತು. ಆಗ ನಾನು ಬೆಳ್ಳಗೆ, ಸ್ಥೂಲವಾಗಿ, ಮೀಸೆ ಇಲ್ಲದವನಾಗಿದ್ದೆ. ಒಂದು ವರ್ಷದಲ್ಲಿ ಕಪ್ಪಾಗಿ, ಸಣ್ಣಗಾಗಿ, ಮೀಸೆ ಬಿಟ್ಟಿದ್ದೆ. ಎರಡನೇ ಅವತಾರದಲ್ಲಿದ್ದಾಗ ದಯಾನಂದ ಅವರ ಕಾಮಿಡಿ ಷೋಗೆ ಹೋಗಿದ್ದೆ. ಆತ ಒಬ್ಬರೇ ಅದೇ ಮೊದಲ ಸಲ ಬಂದಿದ್ದಂತೆ. ಅಬ್ಬಾ, ನಗಿಸಿ ಹೊಟ್ಟೆ ಹುಣ್ಣಾಗಿಸಿದರು. ಹೊರಗೆ ಬರುತ್ತಿದ್ದಾಗ ‘ಯತಿರಾಜ್’ ಎಂದ ಒಬ್ಬಾತ. ಅವನೇ! ಹಿಂದೊಮ್ಮೆ ನೋಡಿದ್ದ ತಮಿಳು ಯುವಕ. ಆದರೆ ಅನುಮಾ...