ಯತಿ ಸ್ವಂತೀ -94


04-04-2018
ನನ್ನ ಹೊಸ ಲೇಖನಮಾಲೆ నవ్య ವಾರಪತ್ರಿಕೆಯಲ್ಲಿ ಧಾರಾವಾಹಿ ಆಗುತ್ತಿದೆ. ಅದನ್ನು ಕನ್ನಡಕ್ಕೆ ಅನುವಾದ ಮಾಡೆಂದರು. ಖುಷಿಯಿಂದ ವಿಜಯವಾಡದ ಅವರ ಪ್ರಕಾಶಕರಿಗೆ ಫೋನ್ ಮಾಡಿದೆ. ನನ್ನ ಬಳಿ ಅವರ ಇನ್ನೊಂದು ಪುಸ್ತಕ ಸಿದ್ಧವಾಗಿದೆ ಎಂದರು. ಮತ್ತೆ ಯಂಡಮೂರಿ ಸರ್ ಅವರಿಗೆ ಫೋನ್ ಮಾಡಿದೆ. ಸರಿ ಅದನ್ನೇ ಅನುವಾದಿಸು ಎಂದರು! ಅದೇ ಕನ್ನಡಪ್ರಭ ಪತ್ರಿಕೆಯ ಬೈ ಟು ಕಾಫಿ ಪುರವಣಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಕಣಿವೆಯಿಂದ ಶಿಖರಕ್ಕೆ ಪುಸ್ತಕ. ಆ ಸಮಯದಲ್ಲಿ ಅವರು ಬೆಂಗಳೂರಿಗೆ ಬಂದರು. ಅವರನ್ನು ಯಶವಂತಪುರ ಸ್ಟೇಶನ್‌ನಲ್ಲಿ ಭೇಟಿ ಆದೆ. ಅವರೊಂದಿಗೆ ವಾಗ್ದೇವಿ ವಿಲಾಸ್ ಶಾಲೆಗೆ ಹೋದೆ. ಅಂದು ಶಿಕ್ಷಕರ ದಿನ, 2015. ಅವರು ಹೊಸೂರಿಗೆ ಹೊರಟಿದ್ದರು. ಅಂದು ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ನಾನೇ ಅವರ ಫೋಟೋ ತೆಗೆದೆ. ಇದಾಗಿ ಕೆಲವು ದಿನಗಳ ನಂತರ ಬೆಂಗಳೂರಿಗೆ ಬಂದರು. ಚಿತ್ರಕಥೆಯೊಂದರ ಅನುವಾದ ಮಾಡೆಂದರು. ನಂತರ ಸ್ವಲ್ಪ ದಿನ ಗ್ಯಾಪ್. ಮತ್ತೆ ನನಗೆ ಕರೆ ಮಾಡಿದರು. ವಾಗ್ದೇವಿ ವಿಲಾಸ್ ಶಾಲೆಯ ಮುಖ್ಯಸ್ಥರ ಮಗನೊಂದಿಗೆ ಮದನಪಲ್ಲಿ ಬಳಿ ಇರುವ ಹಾರ್ಸ್ ಲೀ ಹಿಲ್ಸ್‌ಗೆ ಬಾ ಎಂದು. ಅಲ್ಲಿ ನಾನು ಅವರ ಪುಸ್ತಕ ನಾನೇ ನನ್ನ ಆಯುಧದ ನಾಯಕ ಡಾ. ಚಿರಂಜೀವಿ ಅವರನ್ನು ಭೇಟಿ ಆದೆ. ಅಂದು ಅವರು ಅವರ ನಿರ್ದೇಶನದ ಮಾಡಲಿರುವ ಚಿತ್ರದ ಕಥೆ ಹೇಳಲಾರಂಭಿಸಿದರು. ಅಬ್ಬಾ... ಎಂತಹ ಥ್ರಿಲ್ ಎನಿಸಿತು. ಮಧ್ಯೆ ತಿಂಡಿ ಕಾಫಿಗೆಂದು ಅವರು ಕಥೆ ನಿಲ್ಲಿಸಿದಾಗ ಬೇಗ ಹೇಳಲಿ ಎನ್ನಿಸುತ್ತಿತ್ತು. ಕಾದಂಬರಿಕಾರ ಅವರ ಅಪ್ರಕಟಿತ ಕಥೆಯೊಂದನ್ನು ನಮಗೆ ಹೇಳತೊಡಗಿದಾಗ ನಮಗಾದ ಅನುಭವ ಅದು! ಆ ರಾತ್ರಿ ಕ್ಯಾಂಪ್ ಫೈರ್ ಇತ್ತು. ರಾತ್ರಿ ಎಲ್ಲರೂ ಮಲಗಿದ ನಂತರ ನಾನು, ಈಗ ಸಿನಿಮಾದಲ್ಲಿ ಆ್ಯಂಟಿ ಹೀರೋ ಆಗಿರುವ ವಿಶ್ವಜೀತ್, ಖಳನಾಯಕ  ಸೂರ್ಯನಾರಾಯಣ ಮತ್ತು ಎಕ್ಸೆಕ್ಯೂಟಿವ್ ಪ್ರೊಡ್ಯೂಸರ್ ಗಣೇಶ್ ಮಾತಾಡುತ್ತಿದ್ದೆವು. ಯಂಡಮೂರಿ ಸರ್ ಅವರ ರೂಮಿನಿಂದ ಕೆಳಗಿಳಿದು ಬಂದರು. ಮರುದಿನ ಬೆಳಗ್ಗೆ ಮಾತನಾಡುತ್ತಾ ಕುಳಿತಿದ್ದಾಗ ನನ್ನ ಕಡೆ ಬೆರಳು ತೋರಿಸಿ 'ನಿನ್ನೆ ರಾತ್ರಿ ಇವನ ಧ್ವನಿ ಕೇಳಿ ಜಗಳ ಆಡ್ತಿದ್ದಾನೆ ಅಂತ ಅಂದ್ಕೊಂಡು ಬಂದೆ ಕೆಳಗೆ' ಎಂದರು! ಆ ನೀರವ ನಿಶೀಧಿಯಲ್ಲಿ ನನ್ನ ಧ್ವನಿ ಮಾಮೂಲಿಗಿಂತ ಜೋರಾಗಿ ಕೇಳಿಸಿತ್ತು ಅವರಿಗೆ! ನಾನು ಯಾರೊಂದಿಗೋ ಜಗಳ ಮಾಡುತ್ತಿದ್ದೆ ಎಂದು ಅವರೆಂದುಕೊಂಡಿದ್ದರೆ ಅಚ್ಚರಿ ಏನಿಲ್ಲ! ಮದನಪಲ್ಲಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಬೆಳಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಮಿಡ್ಲ್ ಕ್ಲಾಸ್ ಮಕ್ಕಳಿಗೆ ಅವರವರ ಲೆವೆಲ್‌ನಲ್ಲಿ ವ್ಯಕ್ತಿತ್ವ ವಿಕಸನ ಪಾಠಗಳನ್ನು ಮಾಡಿದ್ದನ್ನು ಕೇಳಿದ್ದು ನಿಜಕ್ಕೂ ಅವಿಸ್ಮರಣೀಯ ಅನುಭವ! ಮತ್ತೆ ಮರಳಿ ಹೈದರಾಬಾದ್‌ಗೆ ಹೊರಡುತ್ತಾ ಚಿತ್ರಕಥೆ ಸಿದ್ಧ ಮಾಡಿ ಕಳಿಸ್ತೀನಿ. ಅನುವಾದ ಮಾಡಿ ನಿರ್ಮಾಪಕರಿಗೆ ತಲುಪಿಸು ಎಂದರು. ಅಬ್ಬಾ... ನನ್ನ ಅದೃಷ್ಟವೇ ಅದೃಷ್ಟ ಎಂದುಕೊಳ್ಳದಿರದಾದೆ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102