Posts

Showing posts from February, 2018

ಯತಿ ಸ್ವಂತೀ -60

01-03-2018 ಅನೇಕ ಬಿರುದುಗಳಿರುವ ನನಗೆ ಇತ್ತೀಚೆಗೆ ಹೊಸ ಬಿರುದೊಂದು ಸಿಕ್ಕಿತು. ಮಾತಿನ ಮಲ್ಲ! ಅಯ್ಯಯ್ಯೋ ಎಂದುಕೊಂಡರೂ, ನಿಜವೇ ಅಲ್ಲವಾ ಎಂದು ಕೂಡ ಅನ್ನಿಸಿತು. ಹೇಗಂತೀರಾ? ನಾನು ಸ್ವಲ್ಪ ಮಾತು ಕಡಿಮೆಯವನಾಗಿದ್ದೆ ಹೊರಗಿನ ಜನರೊಂದಿಗೆ. ನನ್ನ ಮನೆಯವರು, ಕಸಿನ್ಸ್ ಬಳಿ ಬಾಯಿ ಮುಚ್ಚದೇ ಮಾತಾಡಿದ್ದು ಉಂಟು. ಆದರೆ ಹೊರಗಿನ ಜನರೊಂದಿಗೆ ಏನೋ ಸಂಕೋಚ. ಮೊದಲ ಕೆಲಸವೇ ಸೇಲ್ಸ್ ಇಂಜಿನಿಯರ್ ಕೆಲಸ. ನನಗೇ ಗೊತ್ತಿರದಿದ್ದ ಉತ್ಪನ್ನಗಳ ಮಾರಾಟ. ಮಾರಲು ಎಷ್ಟು ಮಾತಿನ ಸರಕು ಬೇಕೋ ಅಷ್ಟು ಬಳಸುತ್ತಿದ್ದೆ! ನಂತರ ತರಬೇತಿಯಲ್ಲಿ ಸಹಪಾಠಿಗಳೊಂದಿಗೆ ಒಂದಿಷ್ಟು ಮಾತು. ನಂತರ ಬಂದಿತ್ತು ಅಗ್ನಿಪರೀಕ್ಷೆ. ನನ್ನ ಮೊದಲ ಕೆಲಸ ಸೇಲ್ಸ್ ಡಿಪಾರ್ಟ್‍ಮೆಂಟಿನಲ್ಲಿ! ಉಳಿದವರನ್ನು ಗಮನಿಸುತ್ತಿದ್ದೆ. ನಂತರ ಮೆಲ್ಲನೆ ನನ್ನ ಸಂಕೋಚ ಓಡಿಹೋಯಿತು. ನನ್ನ ಪಾತ್ರ ಹೇಗಿತ್ತೆಂದರೆ ನಾನು ಕಾರ್ಖಾನೆಯ ಒಳಗೆ ಹೆಚ್ಚು ಕಡಿಮೆ ಎಲ್ಲ ಡಿಪಾರ್ಟ್‍ಮೆಂಟ್ ಜನರೊಂದಿಗೆ ಮಾತಾಡಬೇಕಿತ್ತು. ನನ್ನ ಡಿಪಾರ್ಟ್‍ಮೆಂಟ್ ಸಪ್ಲೈ ಮಾಡುತ್ತಿದ್ದ ಜನರೇಟರುಗಳ ಕಚ್ಚಾ ವಸ್ತುಗಳಿಂದ ಹಿಡಿದು ಅದು ಲಾರಿ ಹತ್ತುವವರೆಗೂ ಅದರ ಬಗ್ಗೆ ಫಾಲೋ ಅಪ್ ಮಾಡುವ ಪರಿಸ್ಥಿತಿ ಅನೇಕ ಸಲ ಬರುತ್ತಿತ್ತು. ದೊಡ್ಡವರು ಯಾವುದೋ ಅನ್‍ಪ್ರಾಕ್ಟಿಕಲ್ ಡೆಲಿವರಿ ಒಪ್ಪಿಕೊಂಡು ನಮ್ಮ ತಲೆಯ ಮೇಲೆ ಅದನ್ನು ಸಾಕಾರಗೊಳಿಸುವ ಕೆಲಸವನ್ನು ಹಾಕಿಬಿಡುತ್ತಿದ್ದರು. ನನ್ನ ಅದೃಷ್ಟವೋ ಏನೋ, ಹೇಗೋ ಏನೋ ಎಲ್ಲಿ ಹೋದರೂ ಮಾ...

ಯತಿ ಸ್ವಂತೀ -59

28-2-2018 ಹುಟ್ಟು ಹಬ್ಬದ ಆಚರಣೆ ನಮ್ಮ ಮನೆಯಲ್ಲಿ ಹಬ್ಬಗಳಿಗಿಂತ ಒಂದು ಕೈ ಜಾಸ್ತಿ. ವಿಶೇಷವಾಗಿ ಮಕ್ಕಳಿಗೆ ರಾತ್ರಿ 12 ಗಂಟೆಗೆ ಕೇಕ್ ಮತ್ತು ಅಚ್ಚರಿಯ ಉಡುಗೊರೆ ಬಲು ಖುಷಿ. 1982 - 83ರ ಸಮಯದಲ್ಲಿ ನನ್ನ ಸಹೋದ್ಯೋಗಿ ಉದಯ್ ನನ್ನನ್ನು ರೋಟರಾಕ್ಟ್ ಕ್ಲಬ್ ಸದಸ್ಯನನ್ನಾಗಿ ಮಾಡಿದ. ರೋಟರಿಯ ಮರಿ ಇದು. ಹೆಣ್ಮಕ್ಕಳು... ಗಂಡ್ಮಕ್ಕಳು ಎಲ್ಲರೂ ಒಂದೇ ಎನ್ನುವ ರೀತಿಯಲ್ಲಿ ಹರಟೆ. ನಂದಿ ಬೆಟ್ಟಕ್ಕೆ ಪಿಕ್ನಿಕ್ ಹೋಗಿದ್ದೆವು. ಬಹಳವೇ ಜಾಲಿ ಗ್ರೂಪ್ ಆಗಿತ್ತದು. ಮದನ್ ಎನ್ನುವ ಹುಡುಗನ ಮನೆಯಲ್ಲಿ ಪುಟ್ಟ ವರಾಂಡಾದಲ್ಲಿ ಹಾಸಿದ್ದ ದಪ್ಪನೆಯ ಹಾಸಿಗೆಯ ಮೇಲೆ ಕುಳಿತು ಚರ್ಚೆ. ನಮ್ಮಲ್ಲಿ ಒಬ್ಬ ಹುಡುಗ ಇದ್ದ. ಬಹಳವೇ ಸಾಧು ಹುಡುಗ. ಅವನ ತಂಗಿ ಬಹಳ ಸೋಷಿಯಲ್. ಆಗಿನ ಕಾಲದ ಸೋಷಿಯಲ್ ಎಂದರೆ ಬಂದೊಡನೆ ಅವಳು ನಮ್ಮೆಲ್ಲರ ಕೈ ಕುಲುಕುತ್ತಿದ್ದಳು. ಅದು ಆಗಿನ್ನೂ ಹೊಸತು. ಬೇರೆ ಯಾವ ಹುಡುಗಿಯೂ ನಮಗೆ ಹಾಗೆ ’ಕೈ’ ಕೊಟ್ಟಿದ್ದಿಲ್ಲ! ಅವಳಿಗೆ ಎಚ್ ಕ್ಯೂ ಅಂತ ಹೆಸರಿಟ್ಟ ನೆನಪು. ಅಂದ್ರೆ ಹ್ಯಾಂಡಲ್ ಕ್ವೀನ್! ಎಂತಹ ದುಷ್ಟ ಹುಡುಗರು ಅಲ್ವಾ ನಾವು! ಡೆಡಿಕೇಶನ್ ಎನ್ನುವ ಎರಡು ಪುಟಗಳ ನಮ್ಮ ಜಯನಗರ ರೋಟರಾಕ್ಟ್ ಕ್ಲಬ್ನ ಆಂಗ್ಲ ಮಾಸಪತ್ರಿಕೆಗೆ ಎರಡು ವರ್ಷಗಳ ಕಾಲ ಸಂಪಾದಕನಾಗಿದ್ದೆ. ಅದಕ್ಕೆ ಲೇಖನಗಳನ್ನು ಬರೆದೆ. ಉಳಿದವರು ಬರೆದಿದ್ದನ್ನು ತಿದ್ದುಪಡಿ ಮಾಡಿ ಪ್ರಕಟಿಸುತ್ತಿದ್ದೆ. ಅದಲ್ಲದೇ ಅನೇಕ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿದೆವು. ಜೊತೆಗೆ ಸ್...

ಯತಿ ಸ್ವಂತೀ -58

27-2-2018 ನಮ್ಮ ಬಡಾವಣೆಯಲ್ಲಿ ವಿದ್ಯುತ್ ದೀಪಗಳ ಅಂಗಡಿಯನ್ನು ನೋಡಿದೊಡನೆ ಜೇಡ ಕಟ್ಟಿದ ಮೂಲೆಯನ್ನು ನಿಮಗೆ ತೋರಿಸೋಣವೆನಿಸಿತು. ವರ್ಷ 2002. ಸರಿಸುಮಾರು ಒಂದು ವರ್ಷದ ಕಾಲ ನಿರುದ್ಯೋಗಿಯಾಗಿದ್ದವನಿಗೆ ಮಸ್ಕತ್ನಲ್ಲಿ ಕೆಲಸ ಸಿಕ್ಕಿತ್ತು. ಕೆಲಸದ ಬಗ್ಗೆ ಏನೂ ತಿಳಿದಿರಲಿಲ್ಲ. ಎಲೆಕ್ಟ್ರಿಕಲ್ ಇಂಜಿನಿಯರ್ ಬೇಕು ಎಂದಿದ್ದರು. ಅದೊಂದು ಟ್ರೇಡಿಂಗ್ ಕಂಪೆನಿ. ರಾತ್ರಿ ಎಂಟೂವರೆ. ಜೂನ್ 20ರಂದು 45ಲಿಸೆಲ್ಸಿಯಸ್ 'ತಾಪ'ಮಾನದಲ್ಲಿ ಒಮಾನ್ ದೇಶದ ಸೀಬ್ ವಿಮಾನ ನಿಲ್ದಾಣದಲ್ಲಿ ಇಳಿದೆ. ಮನದಲ್ಲಿ ಒಂದೇ ಪ್ರಶ್ನೆ... ಇದೆಲ್ಲಿ ಬಂದು ಸಿಕ್ಕಿಕೊಂಡೆ ಎಂದು. ನನ್ನ ಸಹೋದ್ಯೋಗಿಗಳಿಬ್ಬರು ನನ್ನ ಫೋಟೋ ಗುರುತು ಹಿಡಿದು ಕಾರಿನಲ್ಲಿ ಕರೆದೊಯ್ದರು. ಏನೋ ತಿಳಿಯದ ಕಳವಳ. ಗೂಗಲಾಚಾರ್ಯನ ಪರಿಚಯ ಇಲ್ಲದ ಸಮಯ. ನನಗಾಗಿ ಒಂದು ರೂಂ ಸಿದ್ಧವಿತ್ತು. ನಿದ್ರಾದೇವಿ ಆಲಿಂಗಿಸಿ ಆಲಿಂಗಿಸದಂತೆ ಇದ್ದಳು. ಬೆಳಗ್ಗೆ ರೂಮಿನ ಕೆಳಗಿನ ಮಹಡಿಯ ಆಫೀಸ್ ತಲುಪಿದೆ. ಇತರರ ಪರಿಚಯ ಆಯಿತು. ದೊಡ್ಡ ಬಾಸ್ ಇರಲಿಲ್ಲ. ಸೋ ಡ್ರೈವಿಂಗ್ ಕಲಿಕೆ ಮುಂದೂಡಲ್ಪಟ್ಟಿತು. ಕನ್ನಡ ಬಲ್ಲ ಕೊಂಕಣಿ ಮತ್ತು ತುಳು ಮಾತೃಭಾಷೆಯ ಸಹೋದ್ಯೋಗಿಗಳು ನನಗೆ ಒಳ್ಳೆಯ ಸ್ವಾಗತ ನೀಡಿದರು. ಗುರು ಶಾನ್ಭಾಗ್ ಜೊತೆಗೆ ಊರು ನೋಡಿದೆ. ರಣ ಬಿಸಿಲು. ಕಾರು ಆಫೀಸ್ ಮನೆ ಎ. ಸಿ. ಆಫೀಸ್ನಿಂದ ಕಾರು ತಲುಪುವಷ್ಟರಲ್ಲಿ ಬೆವರು ಕಿತ್ತುಕೊಂಡು ಬರುತ್ತಿತ್ತು. ಕಾರು ಓಡಿಸುವ ಲೈಸೆನ್ಸ್ ಬೆಂಗಳೂರಿ...

ಯತಿ ಸ್ವಂತೀ -57

26-02-2018 ನನ್ನ ಜೀವನದಲ್ಲಿ ಮರೆಯಬಾರದ ವ್ಯಕ್ತಿಗಳು ಕೆಲವರಿದ್ದಾರೆ. ಮರೆಯಬೇಕೆಂಬ ವ್ಯಕ್ತಿಗಳೂ ಇದ್ದಾರೆ! ಮರೆಯಬಾರದವರು ಕಣ್ಣಿಗೆ ಕಾಣದೇ ದೂರವಿದ್ದರೆ, ಮರೆಯಬೇಕೆಂಬ ವ್ಯಕ್ತಿಗಳು ಕಣ್ಮುಂದೆಯೇ ಇರುತ್ತಾರೆ. ಆದ್ದರಿಂದ ಯಾರನ್ನೂ ನೆನೆಯಲೂ ಬಾರದು, ಮರೆಯಲೂ ಬಾರದು ಎನ್ನುವ ಸಿದ್ಧಾಂತವನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದೇನೆ. ಹೌದೂ, ಯಾಕೆ ಕೆಲವರನ್ನು ನಾವು ಮರೆಯಬಾರದು? ಪ್ರಾತಃಸ್ಮರಣೀಯರು ಎನ್ನುವ ಮಾತನ್ನು ಕೆಲವರ ಬಗ್ಗೆ ಬಳಸುತ್ತೇವೆ. ಏಕೆಂದರೆ ಬೆಳಗ್ಗೆ ಎದ್ದು ನಾರಾಯಣಾ (ಅಥವಾ ನಮ್ಮ ಇಷ್ಟದ ಯಾವುದೋ ಒಂದು ದೇವರ ನಾಮ) ಎನ್ನುವಾಗಲೇ ಆ ಪ್ರಾತಃಸ್ಮರಣೀಯರ (ಅಂದರೆ ಬೆಳಗ್ಗೆಯೇ ನೆನಪಿಗೆ ಬರಬೇಕಾದವರು?) ಹೆಸರು ಕೂಡಾ ನಮ್ಮ ನಾಲಗೆಯ ಮೇಲೆಯೋ ಅಥವಾ ಮನದ ಭಿತ್ತಿಯ ಮೇಲೋ ಬರಬೇಕು. ಏಕೆಂದರೆ ನಮ್ಮ ಇಂದಿನ ಅಸ್ತಿತ್ವಕ್ಕೆ ಅವರು ಕೂಡ ಕಾರಣ ಆಗಿರಬಹುದು. ನಮಗೆ ಪಾಠ ಹೇಳಿಕೊಟ್ಟ ಗುರುಗಳು ಮತ್ತು ನಮಗೆ ಪಾಠ ಕಲಿಸಿದ ನಮ್ಮ ‘ಮಿತ್ರ ಮತ್ತು ಶತ್ರು’ಗಳನ್ನು ನಾವು ನೆನೆಯಬೇಕು. ಏಕೆಂದರೆ ನಮಗೆ ಪಾಠವೆನ್ನುವುದು ಅನೇಕ ರೀತಿಗಳಲ್ಲಿ ಲಭ್ಯವಾಗುತ್ತದೆ. ಚೆನ್ನಾಗಿ ಬುದ್ಧಿ ಕಲಿಸಿದ ಅವನು ಅಥವಾ ಅವಳು ಎಂದು ನಾವು ಎಷ್ಟೋ ಸಲ ಬೇರೆಯವರಿಗೆ ಮೂರನೆಯವರು ಏನಾದರೂ ತೊಂದರೆ ಮಾಡಿದರೆ ಅಂದುಕೊಳ್ಳುತ್ತೇವೆ. ಆದರೆ ನಮಗೇ ಆ ಪಾಠವು ಕಲಿಸಲ್ಪಟ್ಟಾಗ ಅದನ್ನು ಜೋರಾಗಿ ಹೇಳಿಕೊಳ್ಳಲು  ನಮ್ಮ ಅಹಂ ಅಡ್ಡ ಬಂದರೂ ಮನದೊಳಗಣ ಮನದಲ್ಲಿ ‘ಸರಿ...

ಯತಿ ಸ್ವಂತೀ -56

25-02-2018 ಫೇಸ್‍ಬುಕ್ ಬಗ್ಗೆ ನಮಗೆ ಎರಡೂ ರೀತಿಯ ಕಥೆಗಳು ಸಿಗುತ್ತವೆ. ಫೇಸ್‍ಬುಕ್ ಮಾತ್ರವೇಕೆ? ಯಾವುದೇ ವಿಷಯದಲ್ಲಿಯೂ ಒಳ್ಳೆಯದು ಕೆಟ್ಟದು ಎರಡೂ ಇರುತ್ತವೆ. ದುರ್ಯೋಧನನ ಬಗ್ಗೆ ನಮಗೆ ಎಂತಹ ದುರಭಿಪ್ರಾಯವಿದ್ದರೂ ಕರ್ಣನ ದೃಷ್ಟಿಯಲ್ಲಿ ಅವನೊಬ್ಬ ಹೀರೋ. ಹೌದಲ್ಲವೇ? ಇತ್ತೀಚೆಗೆ ತಮಿಳು ಸಿನಿಮಾ ಒಂದನ್ನು ನೋಡಿದೆ. ಗಂಡ ಪೊಲೀಸ್ ಇಲಾಖೆಯಲ್ಲಿ ಎಲ್ಲರ ಟೆಲಿಫೋನ್ ಕರೆಗಳನ್ನು (ಕದ್ದು) ಕೇಳಿ, ಆ ಕರೆ ಮಾಡುವವರಲ್ಲಿ ದುಷ್ಟರಿದ್ದರೆ ಅವರ ಬಗ್ಗೆ ಅವನ ಬಾಸ್‍ಗೆ ವರದಿ ನೀಡುವ ಕೆಲಸ. ಅವನ ಬಾಸ್‍ಗೆ ಕೆಲವು ಅಸಿಸ್ಟೆಂಟುಗಳನ್ನು ಕಿತ್ತು ಹಾಕಬೇಕೆನ್ನುವ ದುಷ್ಟಬುದ್ಧಿ. ನಮ್ಮ ಹೀರೋ ಬಾಸ್‍ಗೆ ಅವರ ಬಗೆಗಿನ ರಹಸ್ಯ ಕರೆಗಳ ವರದಿಯನ್ನು ಮುಟ್ಟಿಸುತ್ತಾನೆ. ಹೀರೋನ ಹೆಂಡತಿ ಸುಂದರಿ. ಬಹಳವೇ ಸೋಷಿಯಲ್ಲು. ಒಮ್ಮೆ ಹೀರೋ ಹೀಗೇ ಕದ್ದು ಸಂಭಾಷಣೆಗಳನ್ನು ಆಲಿಸುತ್ತಿರುವಾಗ ಅವನ ಹೆಂಡತಿಯ ಸ್ವರ ಕೇಳಿಸುತ್ತದೆ. ಅವಳು ಯಾರೋ ಅಪರಿಚಿತ ಪುರುಷನೊಂದಿಗೆ ಮಾತಾಡುತ್ತಿರುತ್ತಾಳೆ. ಅವಳ ಮೇಲೆ ಫುಲ್ ಅನುಮಾನ ಬಂದು ಮನೆಯಲ್ಲೆಲ್ಲೋ ಕ್ಯಾಮೆರಾ, ಯಾಂತ್ರಿಕ ಕಿವಿಗಳನ್ನು ಅಳವಡಿಸುತ್ತಾನೆ. ಅವಳಿಗೆ ಒಬ್ಬ ಫೇಸ್‍ಬುಕ್ ಫ್ರೆಂಡ್ ಪ್ರಸನ್ನ ಅಂತ. ಅವನು ಇವಳನ್ನು ಹೊಗಳಿ ಅಟ್ಟಕ್ಕೇರಿಸುತ್ತಾನೆ. ಅವಳಿಗೆ ಹೊಸ ಹೊಸ ಅಡುಗೆಗಳನ್ನು ಚ್ಯಾಟ್‍ನಲ್ಲಿ ಹೇಳಿಕೊಡುತ್ತಾನೆ. ಅವನಿಂದ ಅವಳ ಅಭಿರುಚಿ ಬದಲಾಗುತ್ತದೆ. ಇದ್ದ ಸಣ್ಣ ಕ್ವಾರ್ಟರ್ಸ್ ಮನೆಯನ್ನೇ ಅಲಂಕರಿಸುತ್ತಾಳೆ....

ಯತಿ ಸ್ವಂತೀ -55

24-02-2018 1950ರ ದಶಕದ ಸಿನಿಮಾ ಹಾಡುಗಳನ್ನು ಕೇಳುತ್ತಿದ್ದೇನೆ. ಮಾಧುರ್ಯ ಇದೆ. ಆದರೆ ಭಯಾನಕ ಮಿಕ್ಸ್ ಭಾರತೀಯ ಮತ್ತು ಪಾಶ್ಚಾತ್ಯ ಎರಡರದ್ದು. ಆಗಿನ ಕಾಲದಲ್ಲಿ ರಾಕ್ ಆಂಡ್ ರೋಲ್ ಮ್ಯೂಸಿಕ್ ಬಹಳ ಜನಪ್ರಿಯವಾಗಿತ್ತು. ಆಶಾ ಚಿತ್ರದಲ್ಲಿ ಕಿಶೋರ್ ಮತ್ತು ಆಶಾ ಬೇರೆ ಬೇರೆಯಾಗಿ ಹಾಡಿರುವ ಈನ ಮೀನ ಡೀಕ ಡಾಯ್ ಡಮನಿಕ ಕೇಳಿದ್ದೀರಾ? ಅದೊಂದು ಅದ್ಭುತ ಉದಾಹರಣೆ ಈ ನೃತ್ಯ ಶೈಲಿಗೆ.  ಫುಟ್ ಟ್ಯಾಪಿಂಗ್ ಎನ್ನುತ್ತಾರೆ. ಈ ನಿರ್ದಿಷ್ಟ ಹಾಡಿಗೆ ನಾವು ತಾಳ ಹಾಕದೇ ಇರಲು ಸಾಧ್ಯವೇ ಇಲ್ಲ. ಹಾಗೆಂದು ಅನೇಕ ಸಂಗೀತಗಾರರು, ಗಾಯಕರು ರೇಡಿಯೋದಲ್ಲಿ ಹೇಳಿರುವುದುಂಟು. ಅದೇ ಸಮಯದಲ್ಲಿ ಮೊಹೆ ಭೂಲ್ ಗಯೇ ಸಾವರಿಯಾ, ಮನ ತಡಪತ್ ಹರಿ ದರ್‍ಶನ್ ಕೋ ಆಜ್ ನಂತಹ ಅದ್ಭುತ ಶಾಸ್ತ್ರೀಯ ಹಾಡುಗಳೂ ಇವೆ. ಒಬ್ಬ ವಿಶಿಷ್ಟ ಗಾಯಕ ಕೆ ಎಲ್ ಸೈಗಲ್. ನಮ್ಮ ಅಮ್ಮ ಇವನ ಹಾಡುಗಳನ್ನು ಸದಾ ಗುನುಗುತ್ತಿದ್ದರು. ಇಕ್ ಬಂಗಲ ಬನೇ ನ್ಯಾರಾ, ಬಾಬುಲ್ ಮೋರ... ಹೀಗೆ. ರೇಡಿಯೋ ಸಿಲೋನ್‍ನಲ್ಲಿ ಪ್ರತಿ ದಿನ ಬೆಳಗ್ಗೆ ಏಳೂ ಐವತ್ತೈದಕ್ಕೆ ಭೂಲೇ ಬಿಸರೇ ಗೀತ್‍ನ ಕೊನೆಯ ಹಾಡು ಸ್ವರ್ಗೀಯ ಕುಂದನ್ ಲಾಲ್ ಸೈಗಲ್ ಅವರದು. ತಮಾಷೆ ಎಂದರೆ ಆ ನಂತರ ಬಂದ ಪ್ರತಿಯೊಬ್ಬ ಗಾಯಕನೂ ಸೈಗಲ್‍ನಂತೆಯೇ ಹಾಡುತ್ತಿದ್ದರು. ಕಿಶೋರ್ ಕುಮಾರ್ ಸ್ವತಃ ಹೇಳಿದ್ದಾನೆ ತಾನು ಸೈಗಲ್ ಬೀಸಣಿಗೆ ಎಂದು. ಮುಖೇಶ್‍ನ ದಿಲ್ ಜಲ್‍ತಾ ಹೈ ತೋ ಜಲ್‍ನೇ ದೊ ಕೇಳಿದರೆ ಸೈಗಲ್‍ನಂತೆಯೇ ಅನ್ನಿಸುತ್ತದೆ. ವಿಶಿಷ್ಟ ಗಾ...

ಯತಿ ಸ್ವಂತೀ -54

23-02-2018 ನನ್ನ ಬಗ್ಗೆ ನಾನು ಹೇಳಿಕೊಳ್ಳುವುದಿಲ್ಲ ಎಂದೇ ಹೇಳಬೇಕೇನೋ... ಏಕೆಂದರೆ ಸುಮಾರು 45 ಪುಸ್ತಕಗಳನ್ನು ಬರೆದಿದ್ದರೂ ಸುಮಾರು ಜನಕ್ಕೆ ನನ್ನ ಹೆಸರು ತಿಳಿಯದು! ಇದಕ್ಕೆ ಕಾರಣಗಳು ಎರಡು. ಒಂದು ಕನ್ನಡ ಪುಸ್ತಕಗಳ ಮಾರುಕಟ್ಟೆಯ ಸ್ಥಿತಿ. ಎರಡನೆಯ ಕಾರಣ ಸ್ವಯಂಕೃತ. ನನ್ನ ಪುಸ್ತಕಗಳನ್ನು ನಾನೇ ಮೊದಲು ಪ್ರಕಾಶಿಸಿದೆ. ಆಗೆಲ್ಲಾ ಸರ್ಕಾರಿ ಲೈಬ್ರರಿಗೆ ಪುಸ್ತಕಗಳನ್ನು ಕೊಡುವುದೆಂದರೆ ಸಂಭ್ರಮ. ಅವರು ಎಂತಹ ಲೇಖಕರೋ ತಿಳಿಯದು ಆದರೆ ಅವರದು ಕವಿಹೃದಯ. ಬಡ ಪ್ರಕಾಶಕರು ಕೇವಲ ಲೈಬ್ರರಿಗೆ ಪುಸ್ತಕಗಳನ್ನು ಕೊಟ್ಟರೆ ಮಾತ್ರ ಬದುಕಿಕೊಳ್ಳುವರೆಂದು ಅವರಿಗೆ ತಿಳಿದಿತ್ತು. ಅವರು ಮುಖ್ಯಮಂತ್ರಿ ಆಗಿದ್ದಾಗ ಪುಸ್ತಕಗಳು ಸಲೀಸಾಗಿ ಲೈಬ್ರರಿಯಲ್ಲಿ ಕೊಳ್ಳಲ್ಪಡುತ್ತಿದ್ದವು. ನಾನೇನೂ ಕಳಪೆ ಪುಸ್ತಕಗಳನ್ನು ಮಾಡುತ್ತಿರಲಿಲ್ಲ. ಯಂಡಮೂರಿ, ಮಲ್ಲಾದಿ, ಚಲ್ಲಾ ಸುಬ್ರಹ್ಮಣ್ಯಂ ಮುಂತಾದ ತೆಲುಗು ಲೇಖಕರ ಅನುವಾದಗಳು, ಆರ್ಯಾಂಬ ಪಟ್ಟಾಭಿ, ಬೇಲೂರು ರಾಮಮೂರ್ತಿಯವರಂತಹ ಒಳ್ಳೆಯ ಲೇಖಕರ ಪುಸ್ತಕಗಳನ್ನು ಪ್ರಕಾಶನ ಮಾಡುತ್ತಿದ್ದೆ. ಪುಸ್ತಕದ ಅಂಗಡಿಗಳಲ್ಲಿ ಕೆಲವು ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿರಲಿಲ್ಲ. ಕೆಲವು ಚೆನ್ನಾಗಿ ಹೋಗುತ್ತಿದ್ದವು. ಉದಾಹರಣೆಗೆ ಯಂಡಮೂರಿ ಅವರ ಧ್ಯೇಯ. ಅದು ಎಲ್ಲಿಯೂ ಧಾರಾವಾಹಿ ಆಗದಿದ್ದ ಕಾದಂಬರಿ. ಬಹಳ ಜನ ಅದನ್ನು ಓದಿದರು. ಅನೇಕ ಮುದ್ರಣಗಳನ್ನು ಕಂಡ ಕಾದಂಬರಿ ಅದು. ಮೊದಲ ಸಲ ಅದನ್ನು ಪ್ರಕಾಶನ ಮಾಡಿದ್ದು ನಾನೇ ಎಂಬ...

ಯತಿ ಸ್ವಂತೀ -53

22-02-2018 ಹೇಳುವುದಕ್ಕೆ ಬಹಳ ವಿಷಯಗಳಿವೆ. ಆತ್ಮವೃತ್ತಾಂತವಾಗಲೀ, ಆತ್ಮಕಥೆಯಾಗಲೀ ಅಲ್ಲ ಇದು. ನನ್ನ ಜೀವನದಲ್ಲಿ ನನಗೆ ನೆನಪಿರುವ, ಹೇಳಬಹುದಾದ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ ಅಷ್ಟೇ. ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯಲ್ಲಿ ಪದವೀಧರ ಅಭಯಂತರ ತರಬೇತಿ ಪಡೆದೆ. ಗ್ರೇ ಬಣ್ಣದ ಶರ್ಟು. ನನ್ನ ಜೀವನದಲ್ಲಿಯೇ ಶರ್ಟನ್ನು ಇನ್ಸರ್ಟ್ ಮಾಡಿರಲಿಲ್ಲ. ಈಗ ವಿಧಿಯಿಲ್ಲದೇ ಮಾಡಬೇಕಿತ್ತು. ಇದು 1982ರ ಸಂಗತಿ. ಹೊಸ ಹೊಸ ಗೆಳೆಯರು. ಒಂದು ರೀತಿಯ ಥ್ರಿಲ್ಲು. ಈಗಾಗಲೇ ನನಗೆ ಒಂದು ಕಂಪೆನಿಯಲ್ಲಿ ಕೆಲಸ ಸುಮಾರು ಏಳೆಂಟು ತಿಂಗಳು ಕೆಲಸ ಮಾಡಿದ ಅನುಭವವಿತ್ತು. ಆಗ  ತಿರುವನಂತಪುರ, ಸುಳ್ಳೂರ್ ಪೇಟ, ಕೆಜಿಎಫ್‍ಗಳಿಗೆ ಹೋಗಿದ್ದೆ. ಹೊಸ ಜನರೊಂದಿಗೆ ಹೇಗೆ ವರ್ತಿಸಬೇಕೆಂಬ ಅಭ್ಯಾಸ ಒಂದಿಷ್ಟು ಆಗಿತ್ತು. ನಂತರ ಮತ್ತೆ ಈಗ ಟ್ರೈನಿಂಗ್ ಮ್ಯಾನೇಜರ್. ನೀಟಾಗಿ ಹೇರ್‍ಕಟ್, ಶೇವ್ ಮಾಡಿರಬೇಕು. ಉಡುಪುಗಳು ನೀಟಾಗಿ ಇರಬೇಕು. ಪ್ರತಿದಿನ ಒಂದಿಷ್ಟು ಲೆಕ್ಚರ್ ಕೊಡುತ್ತಿದ್ದರು ನಮ್ಮ ಟ್ರೈನಿಂಗ್ ಮ್ಯಾನೇಜರ್. ಅವರು ಬಂದಿದ್ದು ಮಿಲಿಟ್ರಿಯಿಂದ! ಟ್ರೈನಿಂಗ್ ಸೆಂಟರ್‍ನಲ್ಲೇ ಸ್ಮಿತಿ, ಕಾಪೆಂಟರಿ ಮುಗಿಸಿದ ನಂತರ ಬೇರೆ ಬೇರೆ ಡಿಪಾರ್ಟ್‍ಮೆಂಟುಗಳಿಗೆ ತರಬೇತಿಗೆ ಕಳಿಸುತ್ತಿದ್ದರು. ಕೆಲವು ಕಡೆ ಒಂದಿಷ್ಟು ಕೆಲಸ ಹೇಳಿಕೊಟ್ಟರು. ಇನ್ನು ಕೆಲವು ಕಡೆ ಡ್ರಾಯಿಂಗ್‍ಗಳ ಒರಿಜಿನಲ್ ಕೊಟ್ಟು ಬ್ಲೇಡ್‍ನಲ್ಲಿ ಕೆರೆದು ಇಂಡಿಯನ್ ಇಂಕ್ ಪೆನ್ನಿ...

ಯತಿ ಸ್ವಂತೀ -52

21-02-2018 ನಾವು ಹದಿಮೂರು ಜನ ಗೆಳೆಯರ ವಿಷಯ ಹಿಂದೊಮ್ಮೆ ಹೇಳಿದ್ದೇನೆ. ಗೆಳೆಯ ನರಸಿಂಹನ ಮನೆ ಒಂಟಿಕೊಪ್ಪಲ್ ಹದಿನಾರನೇ ಕ್ರಾಸಿನಲ್ಲಿತ್ತು. ಅದರ ಹಿಂದೆ ಒಂದೆರಡು ಸಾಲು ಮನೆ. ಅದರಾಚೆ ಬರೀ ಗುಡ್ಡ. ಅದಕ್ಕೆ ನಾವು ಎಡಕಲ್ಲು ಗುಡ್ಡ ಎಂದು ಹೆಸರಿಟ್ಟಿದ್ದೆವು. ಜಯಂತಿಯ ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಬಂದಾಗ (ಪುಟ್ಟಣ್ಣ ಕಣಗಾಲ್ ಅವರ ಎಗುಮೇ ಎನ್ನಬೇಕಿತ್ತೇನೋ! ಆದರೆ ಹದಿಹರೆಯದ ಕಿಶೋರರಾದ ನಮಗೆ ಜಯಂತಿಯದೇ ನೆನಪು!) ಆ ಗುಡ್ಡಕ್ಕೆ ಆ ಹೆಸರು ಇಟ್ಟೆವು. ಅನೇಕ ದಿನಗಳು ಅಲ್ಲಿಗೆ ನಡೆದುಹೋಗಿ ಅಲ್ಲಿ ಕುಳಿತು ಹರಟುತ್ತಿದ್ದೆವು. ಹರಟೆಗೆ ಕಾಲಿಲ್ಲ, ತಲೆಯಿಲ್ಲ. ಬೀರಬಲ್ಲನ ಕಥೆಗಳನ್ನು ಹೇಳುತ್ತಿದ್ದೆವು. (ಅಥವಾ ಅವು ತೆನಾಲಿ ರಾಮನದಾ?) ಅವುಗಳಲ್ಲಿ ಯಾವುದಾದರೊಂದು ಪಣದ ಕಥೆ ಬರುತ್ತಿತ್ತು. ಆ ಪಣವನ್ನು ಮನೆಯಲ್ಲಿ ಪ್ರಯೋಗ ಮಾಡುತ್ತಿದ್ದೆವು ಎಂದರೆ ನಂಬಿ! ವಿವರ ಹೇಳಿದರೆ ನಗು ಬರದು, ಅದಕ್ಕೇ ಹೇಳಲಾರೆ! ಕೆಲವೊಮ್ಮೆ ನಮ್ಮನ್ನು ನರಸಿಂಹನ ಮನೆಯ ಬಳಿಯ ಮೇಡಂ ಮನೆಗೆ ಕಾವಲಿಗೆ ಬಿಟ್ಟು ಹೋಗುತ್ತಿದ್ದರು. ಆಗೆಲ್ಲ ನಮ್ಮ ಕೆಲಸ ಏನು ಗೊತ್ತಾ? ಇರ್ವಿಂಗ್ ವ್ಯಾಲೇಸನ ಕಾದಂಬರಿಯೊಂದನ್ನು (ಹೆಸರೇಕೆ?) ನಾಲ್ಕೈದು ತುಂಡು ಮಾಡಿ ಎಲ್ಲರೂ ಒಂದಿಷ್ಟಿಷ್ಟು ಓದಿ ರೋಮಾಂಚನಗೊಳ್ಳುತ್ತಿದ್ದೆವು. ವೀಡಿಯೋ ಇರಲಿಲ್ಲ ನೋಡಿ ಆಗಿನ ಕಾಲದಲ್ಲಿ (1976!) ಕೆಲವೊಮ್ಮೆ ನರಸಿಂಹನ ಮನೆಯ ರೂಮಿನಲ್ಲಿ ಕುಳಿತು ಇಸ್ಪೀಟ್ ಆಡುವುದು. ಪರೇಲಾ ಎನ್ನುವ ಮೂರೆಲೆ ಆಟವ...

ಯತಿ ಸ್ವಂತೀ -51

20-02-2018 ಒಮ್ಮೆ ನಿಮಗೆ ಹೇಳಿದ್ದೆ ನನ್ನ ಬಾಸ್ ನನ್ನ ಪುಣೆ ಟ್ರಿಪ್ ಬಗ್ಗೆ ಸಿಟ್ಟು ಮಾಡಿಕೊಂಡು ಬಿಲ್ ಎಸೆದಿದ್ದರು, ನಾನೂ ಸಿಟ್ಟು ಮಾಡಿಕೊಂಡು ಅದನ್ನು ನನ್ನ ಪೇಪರು ರಾಶಿಗಳ ಅಡಿಗೆ ಸೇರಿಸಿದ್ದೆ ಅಂತ. ಅದರ ಮುಂದಿನ ಕಥೆ! ಆಗೆಲ್ಲಾ ಇಂಟರ್‍ನೆಟ್ ನಮ್ಮಲ್ಲಿ ಇರಲಿಲ್ಲ. ನಾನು ಹೇಳ್ತಿರೋದು 1989ರ ಕಥೆ. ಟೈಪಿಂಗ್‍ಗೆ ನಿಧಾನವಾಗಿ ಹಾಲ್ಡಾ ಟೈಪ್‍ರೈಟರ್‍ನಿಂದ ಎಲೆಕ್ಟ್ರಿಕ್ ಟೈಪ್‍ರೈಟರ್... ಅದರಿಂದ ಕಂಪ್ಯೂಟರ್ ... ನಮ್ಮ ಡಿಪಾರ್ಟ್‍ಮೆಂಟ್ ಆಫೀಸ್‍ಬಾಯ್ ನಾಗರಾಜ ಇಡೀ ಕಾರ್ಖಾನೆ ಸುತ್ತುತ್ತಿದ್ದ. ನಾವು ಪರ್ಛೇಜ್ ಎಂದು ಮಾರ್ಕ್ ಮಾಡಿದ್ದ ಕಾಗದಗಳನ್ನು ಅಲ್ಲಿಗೆ, ಫೈನಾನ್ಸ್ ಎಂದು ಮಾರ್ಕ್ ಮಾಡಿದ್ದರೆ ದೂರದ (ಅದೇ ಕಾಂಪೌಂಡ್ ಒಳಗಿದ್ದ) ಫೈನಾನ್ಸ್ ಡಿಪಾರ್ಟ್‍ಮೆಂಟಿಗೆ ಕೊಟ್ಟು ಬರುತ್ತಿದ್ದ. ಹಾಗೆಯೇ ಅಲ್ಲಿಂದ ನಮಗೆ ಸೇರಬೇಕಾದ ಪೇಪರುಗಳನ್ನು ತರುತ್ತಿದ್ದ. ಈಗಿನ ಹುಡುಗರಿಗೆ ಇದು ತಿಳಿದಿರುವುದೇ ಇಲ್ಲ. ಏಕೆಂದರೆ ಎಲ್ಲವೂ ವಿದ್ಯುನ್ಯಾನ ಅಂಚೆ ತಾನೇ! ಸರಿ, ಒಂದು ದಿನ ಫೈನಾನ್ಸ್ ಡಿಪಾರ್ಟ್‍ಮೆಂಟ್‍ನಿಂದ ಬಂದ ನಾಗರಾಜ, ‘ಯತೀ, ನಿನ್ನ ಬಿಲ್ ನೀನು ಸಬ್‍ಮಿಟ್ ಮಾಡಿಲ್ವಂತೆ. ರಾವ್ ಕೇಳ್ತಿದ್ದಾರೆ’ ಎಂದ. ನಾನು ನಿರ್ಲಕ್ಷಿಸಿದೆ. ಏಕೆಂದರೆ ಅದಕ್ಕೆ ಸೈನ್ ಮಾಡಬೇಕಾಗಿದ್ದುದು ನನ್ನ ಬಾಸ್. ಅವರು ಮಾಡಲ್ಲ ಎಂದರೆ ಬೇರಾರೂ ಮಾಡುವ ಹಾಗಿಲ್ಲ. ಮೂರು ಸಲ ಹೇಳಿದ. ನಾನು ಹೋಗಿದ್ದು ಯುಗಾದಿಯ ದಿನ ಏಪ್ರಿಲ್‍ನಲ್ಲಿ. ಈಗ ಜೂನ್ ಹತ್ತಿರ ...

ಯತಿ ಸ್ವಂತೀ -50

19-2-2018 ಜ್ಯಾಕ್ ಮತ್ತು ಅವನ ಹೆಂಡತಿ ಟೆರಿ ಕುಸಿಯುತ್ತಿದ್ದ ಅವರ ಮದುವೆಯನ್ನು ಉಳಿಸಿಕೊಳ್ಳಲು ಒಂದು ಕೊನೆಯ ಪ್ರಯತ್ನ ಆರಂಭಿಸುತ್ತಾರೆ. ಅವರ ಏಕೈಕ ಸಂತಾನವಾದ ಕಿಮ್‍ಗೆ ಅವಳ ತಂದೆ, ತಾಯಿ ಎಂದರೆ ಅಷ್ಟಕ್ಕಷ್ಟೇ. ಜ್ಯಾಕ್‍ಗೆ ಅವನ ಆಫೀಸ್ ಕೌಂಟರ್ ಟೆರರಿಸ್ಟ್ ಯೂನಿಟ್‍ನಿಂದ ತುರ್ತು ಕರೆ ಬರುತ್ತದೆ. ಆಗ ರಾತ್ರಿ ಹನ್ನೆರಡು ಗಂಟೆ. ಕಿಮ್ ತಾಯ್ತಂದೆಯರಿಗೆ ಹೇಳದೇ ಮನೆಯಿಂದ ಹೊರಗೆ ಓಡಿಬಿಡುತ್ತಾಳೆ. ತಾಯಿ ಅವಳನ್ನು ಹುಡುಕಿಕೊಂಡು ಹೊರಡುತ್ತಾಳೆ. ಅವಳನ್ನೂ, ಅವಳ ಮಗಳು ಕಿಮ್‍ಳನ್ನೂ ಒಂದೇ ದುಷ್ಟಕೂಟದ ಜನರು ಅಪಹರಿಸುತ್ತಾರೆ. ಜ್ಯಾಕ್ ಅವರನ್ನು ಬಿಡಿಸಿಕೊಳ್ಳಬೇಕೆಂದರೆ ಅಂದು ಲಾಸ್ ಏಂಜೆಲಿಸ್‍ಗೆ ಬಂದ ಅಮೆರಿಕಾದ ಮೊಟ್ಟ ಮೊದಲ ಕಪ್ಪು ಅಭ್ಯರ್ಥಿಯನ್ನು ಕೊಲ್ಲಬೇಕು. ಆ ಅಭ್ಯರ್ಥಿ ಅಮೆರಿಕದ ಅಧ್ಯಕ್ಷ ಪಟ್ಟಕ್ಕೆ ಸ್ಪರ್ಧಿಸಿರುತ್ತಾನೆ. ಇಷ್ಟು ಸಾಕು ನಮ್ಮ ರಕ್ತದ ಅಡ್ರಿನಾಲಿನ್ ವೇಗವಾಗಿ ಓಡಲಾರಂಭಿಸಲು. ಈ ಸೀರೀಸ್ ಹೆಸರು 24. ವಿಶೇಷವೆಂದರೆ ಪ್ರತಿಯೊಂದು ಸೀಸನ್ 24 ಎಪಿಸೋಡುಗಳನ್ನು ಹೊಂದಿರುತ್ತದೆ. ಪ್ರತಿ ಎಪಿಸೋಡು ಕೂಡ ಒಂದು ಗಂಟೆ ಕಾಲದ್ದು. ಪ್ರತಿ ಎಪಿಸೋಡ್ ಕೂಡ ಒಂದು ಗಂಟೆ ಕಾಲದಲ್ಲಿ ನಡೆಯುತ್ತದೆ. ಘಟನೆಗಳು ನಿಜವಾದ ಸಮಯದಲ್ಲಿ ನಡೆಯುತ್ತವೆ. ಅಂದರೆ ರಾತ್ರಿ ಒಂದು ಗಂಟೆಯ ಘಟನೆಗಳನ್ನು ನಿಜಕ್ಕೂ ರಾತ್ರಿ ಒಂದು ಗಂಟೆಗೆ ಚಿತ್ರಿಸಿದ್ದಾರೆ. ದೇಶಪ್ರೇಮ ವರ್ಸಸ್ ದೇಶದ್ರೋಹ, ಗುಮ್ಮನಗುಸಗಿಗಳು, ಚಿಕ್ಕಪುಟ್ಟ ಪ್ರೇಮ ಪ್ರಕರ...

ಯತಿ ಸ್ವಂತೀ -49

18-02-2018 ಸಿನಿಮಾಗಳ ವಿಷಯ ಬಂದಾಗ ನನ್ನ ಪತ್ನಿಗೆ ನನ್ನ ಮೇಲೆ ಕೆಲವೊಮ್ಮೆ ಮುನಿಸು ಉಂಟಾಗುತ್ತದೆ. ಮದುವೆಗೆ ಮೊದಲು ವಾರಕ್ಕೆ ಎರಡು ಸಿನಿಮಾಗಳು, ಕೆಲವೊಮ್ಮೆ ಒಂದು ನೂನ್ ಶೋ, ಒಂದು ಮ್ಯಾಟಿನೀ ನೋಡಿ ಮನೆಗೆ ಹೋಗಿದ್ದ ದಿನಗಳೂ ಇದ್ದವು. ಮದುವೆ ಆದ ಒಡನೆ ವಿಷ್ಣುವರ್ಧನ್, ಜ್ಯೂಲಿ ಲಕ್ಷ್ಮೀ ‘ಸೌಭಾಗ್ಯ ಲಕ್ಷ್ಮಿ’ ಚಿತ್ರವನ್ನು ಮೈಸೂರಿನ ಸರಸ್ವತಿ ಚಿತ್ರಮಂದಿರದಲ್ಲಿ ನೋಡಿದ್ದೆವು. ನಂತರ ಬಹುಶಃ ಪ್ರೇಮಲೋಕ, ಹೂವುಹಣ್ಣು, ಹಂ ಆಪ್ ಕೇ ಹೈ ಕೌನ್... ಅಷ್ಟೇ ಅನ್ನಿಸುತ್ತೆ ನಾನು, ನನ್ನ ಪತ್ನಿ ಒಟ್ಟಿಗೆ ನೋಡಿದ್ದು. ಅದರಲ್ಲೂ ಹೂವು ಹಣ್ಣು ಮಾತ್ರವೇ ನಾವಿಬ್ಬರೇ ಹೋಗಿದ್ದುದು. ಒಂದೆರಡು ಸಿನಿಮಾಗಳನ್ನು ಗೋಪಾಲನ್ ಆರ್ಚ್ ಮಾಲ್‍ನಲ್ಲಿ ನನ್ನ ಮಗ, ಮಗಳು, ಪತ್ನಿ ಮೂವರೊಂದಿಗೆ ಹೋಗಿ ನೋಡಿದ್ದೇನೆ. ಮಗ, ಮಗಳೊಂದಿಗೆ ಕೂಡ ಒಂದೆರಡು ಸಿನಿಮಾ. ಆದರೆ ಮದುವೆಗೆ ಮುಂಚಿನ ಸಿನಿಮಾ ಹುಚ್ಚು ಎಲ್ಲಿಯೋ ಮಾಯವಾಗಿಬಿಟ್ಟಿದೆ! ಸಿನಿಮಾ ನೋಡಲ್ಲವೆಂದಲ್ಲ, ನೋಡುತ್ತೇನೆ. ಯೂ ಟ್ಯೂಬ್‍ನಲ್ಲಿ ಹಳೆಯ ಸಿನಿಮಾಗಳು. ಸುಮಾರು ಐದಾರು ವರ್ಷಗಳ ಹಿಂದೆ ಅಮೆರಿಕದ ಕೆಲವು ಥ್ರಿಲ್ಲರ್ ಧಾರಾವಾಹಿಗಳನ್ನು ನೋಡುವ ಅಭ್ಯಾಸ ಮಾಡಿಕೊಂಡೆ. ಕೆಲವು ಧಾರಾವಾಹಿಗಳನ್ನು ಅದೆಷ್ಟು ಬಾರಿ ನೋಡಿದೆನೋ! ನನಗೆ ನೆನಪಿದೆ. ಕಶ್ಮೀರ್ ಕಿ ಕಲಿ, ಆನ್ ಇವನಿಂಗ್ ಇನ್ ಪ್ಯಾರಿಸ್ ಎಂಬ ಎರಡು ಶಕ್ತಿ ಸಾಮಂತ ನಿರ್ದೇಶನದ ಸಿನಿಮಾಗಳನ್ನು ಒಂದು ವಾರದಲ್ಲಿ ಮೂರು ಸಲ ನೋಡಿರುವುದುಂಟು. ನನ್ನ...

ಯತಿ ಸ್ವಂತೀ -48

17-02-2018 ಸಿನಿಮಾ ನೋಡುವ ಹುಚ್ಚು ಶುರುವಾಗಿದ್ದು ಬಹಳ ಹಿಂದೆ. ಕಾಲೇಜಿನಲ್ಲಿ ಚಕ್ಕರ್ ಹೊಡೆದು, ತರಗತಿ ಮುಗಿದ ಮೇಲೆ ಹೋಗುತ್ತಿದ್ದುದೂ ಉಂಟು. ಬೆಂಗಳೂರು ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪಿಯೂಸಿ ಓದುವಾಗ ನಂದಾ, ಶಾಂತಿ ನಮ್ಮ ಫೇವರಿಟ್ ಥಿಯೇಟರುಗಳು. ಸೀತಾ ಔರ್ ಗೀತಾ, ರಾಮ್‍ಪೂರ್ ಕಾ ಲಕ್ಷ್ಮಣ್, ವಿಷ್ಣು ಅವರ ನಾಗರಹಾವು ಎಲ್ಲವೂ ನಂದಾ ಟಾಕೀಸಿನಲ್ಲಿ ನೋಡಿದ ಸಿನಿಮಾಗಳು. ಆಗೆಲ್ಲಾ ನನ್ನ ಸಹಪಾಠಿ ಅರುಣ್ ನನಗೆ ಸಿನಿಮಾಗೆ ಸಾಥ್ ನೀಡುತ್ತಿದ್ದ. ನಂತರ ಮೈಸೂರಿಗೆ ಇಂಜಿನಿಯರಿಂಗ್ ಓದಲು ಹೋದೆ. ಅಲ್ಲಿ ಗಣೇಶ, ಶಾಂತಲಾ, ಲಕ್ಷ್ಮಿ, ಗಾಯತ್ರಿ ಚಿತ್ರಮಂದಿರಗಳಿಗೆ ರೆಗ್ಯುಲರ್ ವಿಜ್ಹಿಟ್ ಆದರೂ ಇಂಗ್ಲೀಷ್ ಸಿನಿಮಾಗಳಿಗೆ ಶಾಲಿಮಾರ್, ಶ್ಯಾಂಸುಂದರ್, ಗಣೇಶ, ಸ್ಟರ್ಲಿಂಗ್ ಟಾಕೀಸುಗಳು. ಶಾಲಿಮಾರ್ ಥಿಯೇಟರ್ ಬನ್ನಿ ಮಂಟಪದ ಬಳಿ ಇತ್ತು. ಅನತಿ ದೂರದಲ್ಲಿ ರೇಷ್ಮೆಗೂಡುಗಳನ್ನು ಬೇಯಿಸುತ್ತಿದ್ದರು. ಅಬ್ಬಾ... ಆ ರೇಷ್ಮೆಹುಳುಗಳ ಬೇಯುವಿಕೆಯ ದುರ್ವಾಸನೆಯಂತೂ ಸಹಿಸಲಸಾಧ್ಯ. ಆದರೂ ಇಂಗ್ಲೀಷ್ ಸಿನಿಮಾಗೆ ಹೋಗಬೇಕು. ಅದಕ್ಕೆ ಕ್ಯೂನಲ್ಲಿ ನಿಲ್ಲಬೇಕು. ಅಲ್ಲಿ ಈ ದುರ್ವಾಸನೆ ಕುಡಿಯಬೇಕು. ಜೇಮ್ಸ್‍ಬಾಂಡ್ ಸಿನಿಮಾಗಳು ನನಗೆ ಬಹಳ ಪ್ರಿಯ. ಬಾಂಡ್‍ನನ್ನು ಕಟ್ಟಿ ಹಾಕಿದ್ದರೂ ಅವನ ವಾಚ್‍ನಲ್ಲಿನ ಒಂದು ಚಿಕ್ಕ ಗರಗಸದಿಂದ ಹಗ್ಗವನ್ನು ಕತ್ತರಿಸಿಕೊಳ್ಳುತ್ತಿದ್ದ. ಬಾಂಡ್‍ಗಾಗಿ ಅನೇಕ ಆವಿಷ್ಕಾರಗಳಿರುತ್ತಿದ್ದವು. ಇಂದು ನೋಡಿದರೆ ಅವೆಲ್ಲವೂ ಸತ್ಯವಾ...

ಯತಿ ಸ್ವಂತೀ -47

16-02-2018 ಇಂದು ನನ್ನ ಗೆಳೆಯನೊಬ್ಬನ ಮದುವೆಯ ವಾರ್ಷಿಕೋತ್ಸವ. ಅವನ ‘ಎಂಗೇಜ್‍ಮೆಂಟ್’ಗೆ ಹೋಗಿದ್ದ ನೆನಪು ಮೂಡುತ್ತಿದೆ. ಈ ಗೆಳೆಯ ನನ್ನ ಜೊತೆ ಕೆಲಸ ಮಾಡುತ್ತಿದ್ದ. ನಾನು 1957ರ ಮಾಡೆಲ್ ಆದರೆ ಅವನು 1972ರ ಮಾಡೆಲ್! ಅಂದರೆ ಹದಿನೈದು ವರ್ಷ ಚಿಕ್ಕವನು. ಆದರೂ ನನಗೂ ಅವನಿಗೂ ಬಹಳವೇ ಒಳ್ಳೆಯ ಗೆಳೆತನವಿತ್ತು. ನನ್ನ ಜಾಯಮಾನವೇ ಅದು. ನನ್ನ ವಯಸ್ಸು ಅಭಿನಯ ಶಾರದೆಯದು ಹದಿನಾರಕ್ಕೆ ಸ್ಟಕ್ ಆದಂತೆ ನನ್ನದೂ ಮೂವತ್ತೈದಕ್ಕೆ ಸ್ಟಕ್ ಆಗಿದ್ದಿರಬಹುದು!! ನನಗೆ ನನ್ನ ವಯಸ್ಸಿನ ಗೆಳೆಯರು ಒಂದು ಎರಡು... ಕಾಲೇಜಲ್ಲಿ. ಒಂದು... ಎರಡು... ಏನೂ ಸಂಬಂಧ ಇಲ್ಲದೇ ಗೆಳೆಯರಾದವರು. ಇತ್ತೀಚೆಗೆ ಬಾಲ್ಯದ ಗೆಳೆಯರು ಇಬ್ಬರು. ಈ ಆರು ಜನರನ್ನು ಬಿಟ್ಟರೆ ಉಳಿದೆಲ್ಲ ಜನ ಬಹಳವೇ ಚಿಕ್ಕವರು. ನನ್ನಲ್ಲಿ ಅದೇನು ಕಾಣುವರೋ ತಿಳಿಯದು, ಅಂಕಲ್ ಎನ್ನುತ್ತಾರೆ, ಯಂಗ್ ಬಾಯ್ ಅಲ್ಲ ಇವರು, ಎಂಗೆಂಗೋ ಬಾಯ್ ಎನ್ನುವುದೂ ಉಂಟು! ಈ ಗೆಳೆಯನ ಬಗ್ಗೆ ಹೇಳುತ್ತಿದ್ದ. ಅವನಿಗೆ ಎರಡು ಪ್ರಪೋಜಲ್‍ಗಳು ಬಂದವು. ಅ ಮತ್ತು ಶಿ ಎನ್ನುವುದು ಅವರಿಬ್ಬರ ಹೆಸರು ಎಂದಿಟ್ಟುಕೊಳ್ಳೋಣ. ನಾನಾಗ ಬಹಳವೇ ಹುಷಾರಿಲ್ಲದೇ ಮಲಗಿದ್ದೆ. ಮನೆಗೆ ಬಂದಿದ್ದ ಇವ. ನನಗೆ ಈ ಇಬ್ಬರು ಹುಡುಗಿಯರಲ್ಲಿ ಯಾರನ್ನು ಮದುವೆ ಆಗಬೇಕೋ ತಿಳಿಯದಾಗಿದೆ ಎಂದ. ನನ್ನ ಜ್ವರ ಹೆಚ್ಚಿತ್ತೋ ಇಲ್ಲವೇ ನನ್ನ ಫನ್ ಬುದ್ಧಿಯಿಂದಲೋ ಒಂದು ನಾಣ್ಯ ತೆಗೆದು ಚಿಮ್ಮಿಸಿ ಬೆಸ್ಟ್ ಆಫ್ ದ ಥ್ರೀ ಎಂದೆ. ಮೂರು ಸಲವು ಶಿ ಎನ್ನುವ...

ಯತಿ ಸ್ವಂತೀ -45

14-02-2018 ನಿನ್ನೆ ಶಿವರಾತ್ರಿ. ನನ್ನ ಇಪ್ಪತ್ತರ ವಯಸ್ಸಿನ ಸಂಗತಿಗಳು ನೆನಪಿಗೆ ಬರ್ತಿವೆ. ನಾವು ಹದಿಮೂರು ಜನ ಗೆಳೆಯರು. ಯಾವಾಗ ಸಮಯ ಸಿಕ್ಕರೂ ಒಟ್ಟಿಗೇ ಓಡಾಟ. ಆಗ ನಾವೆಲ್ಲರೂ ಕಾಲೇಜಿನಲ್ಲಿ ಓದುತ್ತಿದ್ದ ಕಾಲ. ಸಿನಿಮಾ ನೋಡುವುದು ನಮ್ಮ ಗೆಳೆತನದ ಒಂದು ಭಾಗ. ಶಿವರಾತ್ರಿಯಂದು ಖಚಿತವಾಗಿ ಒಂದು ಸಿನಿಮಾ ಇರುತ್ತಿತ್ತು. ನನಗೆ ನೆನಪಿರುವ ಮಟ್ಟಿಗೆ ಮೈಸೂರಿನ ಶಾಂತಲಾ ಟಾಕೀಸಿನಲ್ಲಿ ಶಿವರಾತ್ರಿಗೆ ಅಣ್ಣಾವ್ರ ’ತ್ರಿಮೂರ್ತಿ’ ನೋಡಿದ್ದೆವು. ಹುಚ್ಚು ರಷ್ಷು. ಆದರೂ ನುಗ್ಗಿ ನಿಂತು ಟಿಕೆಟ್ ಪಡೆದೆವು. ಲೇ ಲೇ ಅಪ್ಪನ ಮಗಳೇ... ಏಕೋ ನಾ ಮನ ಸೋತೆನೋ... ಏನು ಮಾಡಲೀ ನಾನು ಏನು ಹೇಳಲಿ... ಹೀಗೆ ಹಾಡುಗಳನ್ನು ಕೇಳಿ ಕಿರಿಚಾಡುತ್ತಾ ಸಿನಿಮಾ ನೋಡಿದ ನೆನಪು. ಶಿವರಾತ್ರಿಯ ದಿನ ಲವ್ ಮತ್ತು ರಿವೆಂಜ್ ಸ್ಟೋರಿ. ಈಗೆಲ್ಲ ಗಣೇಶ ಪೆಂಡಾಲ್‌ನಲ್ಲಿ ಹಾಕುವರಲ್ಲ... ನನ್ನ ಕನಸು ಬ್ಲ್ಯಾಕ್ ಆಂಡ್ ವ್ಹೈಟು... ನಾನು ಪಡವಾರಳ್ಳಿ ಪಾಂಚಾಲಿ... ಅರ್ಧ ಲೀಟರ್ ಪೆಟ್ರೋಲ್ ಬೈಕಿನಲಿ... ಹಾಗೆ. ಸಿನಿಮಾ ಮುಗಿದ ನಂತರ ಅರಮನೆ ಕಡೆಯಿಂದ ಒಂಟಿಕೊಪ್ಪಲ್‌ವರೆಗೆ ವಾಕಿಂಗ್. ರಾತ್ರಿ ಮೂರು ಗಂಟೇಲಿ ರಸ್ತೆ ಮಧ್ಯೆ ಮಲಗೋದು ಶ್ರೀಮನ್ನಾರಾಯಣನ ಪೋಜ್‌ನಲ್ಲಿ! ಮನೆಗೆ ಬಂದು ಮಲಗ್ತಿರಲಿಲ್ಲ. ಇಸ್ಪೀಟ್ ಪ್ಯಾಕ್ ಹಿಡಿದು ’ಡಾಂಕಿ’ ಆಡೋದು. ಅಂತಾಕ್ಷರಿ ಹಾಡೋದು... ಹೀಗೆ ಬೆಳಗಾಗಿಸಿ ನಂತರ ಕಾಲೇಜು ಇತ್ಯಾದಿ. ಆ ದಿನ ಸಂಜೆಯ ವೇಳೆಗೆ ಫುಲ್ ತೂಕಡಿಕೆ. ಹದಿಮೂರು ಫೆಬ...

ಯತಿ ಸ್ವಂತೀ -44

13-02-2018 ನನ್ನ ಅದೃಷ್ಟವೋ ಏನೋ... ಬಹಳ ಜನ ನನ್ನ ಗೆಳೆತನ ಬಯಸುತ್ತಾರೆ! ನಾನು ಫೇಸ್‍ಬುಕ್‍ಗೆ ಹಾಕುವ ಪಟಗಳಲ್ಲಿ ಸಾಮಾನ್ಯ ನಗುತ್ತಿರುತ್ತೇನೆ. ನಿಮ್ಮ ನಗು ತುಂಬಿದ ಪಟಗಳು ನಮಗಿಷ್ಟ ಎನ್ನುವವರು ಅನೇಕರು. ಅಯ್ಯೋ, ಕ್ಯಾಮೆರಾ ನನ್ನ ಮೇಲೆ ಫೋಕಸ್ ಆದೊಡನೆ ಸ್ಮೈಲ್ ನನ್ನ ಮುಖದ ಮೇಲೆ ಆಟೋಮ್ಯಾಟಿಕ್ಕಾಗಿ ಪ್ರತ್ಯಕ್ಷ ಆಗುತ್ತದೆ ಎಂದರೆ ಬಹಳ ಜನ ನಂಬರು! ಏಕೆಂದರೆ ನನ್ನನ್ನು ಎದುರಿಗೆ ನೋಡಿರುವವರು ಅನೇಕರು. ಅವರೆಲ್ಲರನ್ನೂ ನಾನು ನಗೆಮೊಗದೊಂದಿಗೇ ಮಾತಾಡಿಸುತ್ತೇನೆ. ಹೌದೂ.. ನಗುತ್ತಾ ಇತರರೊಂದಿಗೆ ವರ್ತಿಸಿದರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಮನವು ಅಳುತಿರೆ... ನಗುತ ಹಾಡಲೇ? ಎನ್ನುವ ವಾಕ್ಯ ಕೇಳಿರುವಿರಾ? ಉಯ್ಯಾಲೆ ಚಿತ್ರದ ಹಾಡಿನ ತುಣುಕದು. ನಗುವುದ ಕಲಿಯೋಣ, ನಾವು ನಗುತಾ ಬಾಳೋಣ ಎನ್ನುವ ವಿಷ್ಣುವರ್ಧನ್ ಗೀತೆ ಒಂದಿದೆ. ನಗು ಎನ್ನುವ ತುಟಿಗಳ ಮೇಲೆ ಅರಳುವ ವಕ್ರರೇಖೆ ಅನೇಕ ಜನರ ಮುಖದ ಮೇಲೆಯೂ ನಗೆಯನ್ನು ಉಂಟು ಮಾಡುತ್ತದೆ. ಇತ್ತೀಚೆಗೆ ನಾನು ನನ್ನ ನಗು ಮುಖದ ಮೂರು ಚಿತ್ರಗಳನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದೆ. ಅದಕ್ಕೆ ಅದೆಷ್ಟು ಒಳ್ಳೆಯ ಪ್ರತಿಕ್ರಿಯೆಗಳು. ಅಂದು ಉತ್ತರ ಕರ್ನಾಟಕದ ಉಪಾಧ್ಯಾಯರೊಬ್ಬರು (ಇವರು ಲೇಖಕ ಕೂಡ) ಬೆಳಗ್ಗೆಯೇ ದೂರವಾಣಿ ಕರೆ ನೀಡಿ, ನಿಮ್ಮ ನಗುವು ನಮಗೆ ಸ್ಫೂರ್ತಿದಾಯಕ ಎಂದರು. ಅಂದರೆ ನನ್ನ ನಗುವು ಇನ್ನೊಬ್ಬರಿಗೆ ಒಂದಿಷ್ಟಾದರೂ ಖುಷಿ ಕೊಡುವುದಾದರೆ ಆ ನಗುವು ಸಾರ್ಥಕ್...

ಯತಿ ಸ್ವಂತೀ -43

12-02-2018 ಮೈಸೂರು ರೈಲ್ವೇ ಕ್ವಾರ್ಟರ್ಸಿನ ಒಂದೇ ಮನೆಯಲ್ಲಿ ನಾವು ಹೆಚ್ಚು ಕಡಿಮೆ 17 ವರ್ಷಗಳ ಕಾಲ ಇದ್ದೆವು. ಅದಕ್ಕೇ ಆ ಮನೆ ಎಂದರೆ ಒಂದು ರೀತಿ ಅಂಟು. ನಮ್ಮ ಬಾಲ್ಯ, ಕಿಶೋರಾವಸ್ಥೆ, ಯೌವನದ ಮೊದಲ ವರ್ಷಗಳು ಅಲ್ಲಿಯೇ ಕಳೆದವು. ಮನೆಯಲ್ಲಿ ಅಮ್ಮ ಅಪ್ಪ ನಮಗೆ ಯಾವುದೇ ರೀತಿಯ ರಿಸ್ಟ್ರಿಕ್ಷನ್ ಮಾಡಿರಲಿಲ್ಲ. ಚೆನ್ನಾಗಿ ಓದಿ. ಯಾರಿಗೂ ಕೆಟ್ಟದ್ದು ಮಾಡಬೇಡಿ. ಬಹುಶಃ ಇವೆರಡೇ ಅನ್ನಿಸುತ್ತದೆ ನಮಗೆ ಅವರು ನೀಡಿದ ಸಲಹೆಗಳು. ನನಗೆ ಚೆನ್ನಾಗಿ ನೆನಪಿದೆ. ಹತ್ತನೇ ತರಗತಿ ಓದುವಾಗ ನಮ್ಮ ಅಮ್ಮ, ‘ರಾಜು, ನನಗೆ ತಿಳಿದ ಮಟ್ಟಿಗೆ ನೀನು ಹೆಚ್ಚು ಓದಲಾರೆ. ಸದಾ ಆಟ ಆಡಿಕೊಂಡೇ ಕಾಲ ಕಳೀತೀ. ಅದಕ್ಕೇ ಟೈಪಿಂಗ್ ಸೇರಿಕೋ. ಹತ್ತನೇ ಕ್ಲಾಸ್ ಆದ ಮೇಲೆ ಎಲ್ಲಾದರೂ ಟೈಪಿಸ್ಟ್ ಕೆಲಸ ಸಿಗಬಹುದು’ ಎಂದಿದ್ದರು. ಅವರ ಮಾತಿಗೆ ಖುಷಿಯಿಂದ ಟೈಪಿಂಗ್ ಇನ್ಸ್‍ಟಿಟ್ಯೂಟ್ ಸೇರಿಕೊಂಡೆ. ಈಗೆಲ್ಲಾ ಇಲ್ಲ ಅನ್ನಿಸುತ್ತೆ. ಮನೆಯಿಂದ ಹೊರಗೆ ಬಂದು ರೈಲ್ವೇ ಸ್ಟೇಷನ್ ದಾಟಿ, ಗಾಯತ್ರಿ ಭವನ್ ಇರೋ ಧನ್ವಂತರಿ ರಸ್ತೆಯಲ್ಲಿ ನಡೆದು, ಚಾಮುಂಡೇಶ್ವರಿ ಟಾಕೀಸ್ ಮುಂದೆ ಹೋಗಿ, ಎಡಕ್ಕೆ ತಿರುಗಿದರೆ ಅಲ್ಲಿತ್ತು ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಕಾಮರ್ಸ್. ನನ್ನ ಹೈಸ್ಕೂಲ್ ಸಹಪಾಠಿ ದಿವಾಕರನ ತಂದೆಯವರದು ಎಂದು ನೆನಪು. ಅಲ್ಲಿ ಇಂಗ್ಲೀಷ್ ಟೈಪಿಂಗ್ ಕಲಿತು ಜ್ಯೂನಿಯರ್ ಪಾಸ್ ಮಾಡಿದೆ ಸೆಕೆಂಡ್ ಕ್ಲಾಸ್‍ನಲ್ಲಿ. ಆಮೇಲೆ ಸೀನಿಯರ್ ಟೈಪಿಂಗ್ ಸೇರಿಕೊಂಡೆ. ಯಾಕೋ ಅದು ಬೋರ್ ಆಯಿ...

ಯತಿ ಸ್ವಂತೀ -42

11-02-2018 ದೇವೇನ್ ಒಬ್ಬ ಜನಪ್ರಿಯ ಕಾದಂಬರಿಕಾರ. ಅವನ ಕಾದಂಬರಿಗಳಲ್ಲಿ ಕೆಲವು ಕವನಗಳನ್ನೂ ಅವನು ಅಳವಡಿಸುತ್ತಿರುತ್ತಾನೆ. ಆ ರಾತ್ರಿ ಅವನಿಗೆ ಸನ್ಮಾನ ಮಾಡಿದಾಗ ‘ನೀವೇಕೆ ಹೆಣ್ಣುಗಳನ್ನು ಮೋಸಗಾರರೆಂದು ಚಿತ್ರಿಸುತ್ತೀರಿ?’ ಎಂದು ಪತ್ರಕರ್ತನೊಬ್ಬ ಕೇಳಿದಾಗ, ‘ಅವರಿಗೆ ಹೆಣ್ಣೊಬ್ಬಳು ಮದುವೆ ಮಂಟಪದವರೆಗೂ ಬಂದು ಕೈಕೊಟ್ಟಳು’ ಎನ್ನುತ್ತಾನೆ ಮತ್ತೊಬ್ಬ. ದೇವೇನ್, ಅವನ ಅಣ್ಣನ ಮಗಳು, ಅವನ ಚಿಕ್ಕಪ್ಪ ಮತ್ತು ಸೆಕ್ರೆಟರಿ ಹನುಮಾನ್ ಕಾರಿನಲ್ಲಿ ಮನೆಗೆ ಮರಳುತ್ತಿರುವಾಗ ಒಂದು ದೇಹವು ಮುಂದೆ ಹೋಗುತ್ತಿದ್ದ ಕಾರಿನಿಂದ ತೂರಿ ಹೊರಬೀಳುತ್ತದೆ. ಅದನ್ನು ಮತ್ತೆ ಎತ್ತಿಕೊಳ್ಳಲು ಕಾರಿನಿಂದಿಳಿದ ಇಬ್ಬರು ದೇವೇನ್ ಅವರ ಕಾರು ನಿಂತಿದ್ದು ಕಂಡು ಪರಾರಿಯಾಗುತ್ತಾರೆ. ಅದೊಂದು ಹೆಣ್ಣಿನ ದೇಹ. ಅವಳು ಬದುಕಿರುವಳೆಂದು ಅರಿತು ಮನೆಗೆ ಕರೆತರುತ್ತಾರೆ. ಮರುದಿನ ಬೆಳಗ್ಗೆ ಆ ಹೆಣ್ಣು ದೇವೇನ್‍ನನ್ನು ತನ್ನ ಪತಿಯೆಂದು ಹೇಳತೊಡಗುತ್ತಾಳೆ. ತನಗೆ ಏನೂ ನೆನಪಿಲ್ಲವೆನ್ನುತ್ತಾಳೆ. ಇದೊಂದು ರೀತಿ ಫಜೀತಿಯನ್ನು ತರುತ್ತದೆ ದೇವೇನ್‍ಗೆ. ಅವನ ಮನೆಗೆ ದೆಹಲಿಯಿಂದ ಪ್ರಕಾಶಕನೊಬ್ಬ ಬರುತ್ತಾನೆ. ಅವನಿಗೆ ಚಹಾ ತಂದುಕೊಡುತ್ತಾಳೆ ಈ ಹುಡುಗಿ. ಅವನು ಇವಳನ್ನು ಗುರುತಿಸಿದರೂ ಇವಳು ಅವನನ್ನು ಗುರುತಿಸುವುದಿಲ್ಲ. ಅಂದು ರಾತ್ರಿ ಅವಳನ್ನು ಎತ್ತಿಕೊಂಡು ಹೋಗಲು ಇಬ್ಬರು ರೌಡಿಗಳನ್ನು ಕಳಿಸುತ್ತಾನೆ. ಅವಳನ್ನು ಕಾಪಾಡುತ್ತಾನೆ ದೇವೇನ್. ಇಬ್ಬರೂ ಶಿಮ್ಲಾಗೆ ಹೋಗುತ್ತಾರೆ....

ಯತಿ ಸ್ವಂತೀ -41

10-02-2018 ಜೀವನದಲ್ಲಿ ಆಸೆ ಇರಬಾರದು ಅನ್ನೋ ಸಿದ್ಧಾಂತ ಒಳ್ಳೆಯದು. ಹಾಗೆಯೇ ಇರಲು ಪ್ರಯತ್ನ ಕೂಡ ಮಾಡ್ತಿದ್ದರೂ ಕೆಲವೊಂದು ಚಿಕ್ಕ ಆಸೆಗಳು ಇದ್ದೇ ಇರುತ್ತವೆ. ಚಿಕ್ಕ ಆಸೆ ಎಂದರೆ ನನ್ನ ಪತ್ನಿ ನಗುತ್ತಾಳೆ. ಏಕೆಂದರೆ ನನ್ನ ಆಸೆ ಸಾಯೋಕ್ಮುಂಚೆ ಒಮ್ಮೆ ನೋಡು ವೆನಿಸ್ ತೇಲು ಪಟ್ಟಣವನ್ನು ಅನ್ನೋದು! ಇದೆಂತಾ ಚಿಕ್ಕ ಆಸೆ? ಪಾಸ್‍ಪೋರ್ಟ್, ವೀಸಾ, ಏರೋಪ್ಲೇನ್ ಟಿಕೆಟ್ ಮತ್ತು ಅಲ್ಲಿ ತಂಗಲು ಹಣ ಬೇಡವಾ? ಎನ್ನುತ್ತಾಳೆ. ಸತ್ಯವಾದ ಮಾತು! ಆದರೆ ... ಬಹಳ ಹಿಂದೆ ಅಂದರೆ 1972ರ ಸಮಯದಲ್ಲಿ ಜೇಮ್ಸ್ ಹ್ಯಾಡ್ಲಿ ಛೇಸ್‍ನ ‘ಮಿಷನ್ ಟು ವೆನಿಸ್’ ಕಾದಂಬರಿ ಓದಿದ್ದೆ. 1940ರ ವೆನಿಸ್‍ನ ವಿವಿಡ್ ವಿವರಣೆ ಇದರಲ್ಲಿದೆ. ಅದೊಂದು ಥ್ರಿಲ್ಲರ್. ಪುಸ್ತಕದ ಕವರ್ ಮೇಲೆ ಡೆತ್ ಲಕ್ರ್ಸ್ ಇನ್ ದ ಕೆನಾಲ್ಸ್ ಆಫ್ ವೆನಿಸ್... ಅಥವಾ ಈ ಅರ್ಥ ಬರುವ ವಾಕ್ಯವಿದೆ. ಒಬ್ಬ ಅತಿ ಶ್ರೀಮಂತ ಯುವಕ ಡಾನ್‍ಗೆ ಒಂದು ಪೋಸ್ಟ್ ಕಾರ್ಡ್ ತಲುಪಿಸುತ್ತಾಳೆ ಜಾನ್ ಎನ್ನುವವನ ಹೆಂಡತಿ. ಅದರಲ್ಲಿ ಅವನು ಎಸ್ ಓ ಎಸ್ ಎಂದರ್ಥ ಬರುವ ವಾಕ್ಯ ಬರೆದಿರುತ್ತಾನೆ. ಅವನನ್ನು ಹುಡುಕಲು ಡಾನ್ ಆರಂಭಿಸಿದಾಗ ಅವನಿಗೆ ಗೋಡೆಗಳು ಅಡ್ಡವಾಗುತ್ತವೆ. ಹಟಮಾರಿ ಡಾನ್ ಜಾನ್‍ನನ್ನು ಹುಡುಕಲು ಮುಂದಾದಾಗ ಅನೇಕ ಸಾಹಸಗಳನ್ನು ಮಾಡುತ್ತಾನೆ. ಇಡೀ ವೆನಿಸ್ ನಗರ ಕಾದಂಬರಿಯ ಪಾತ್ರವಾಗುತ್ತದೆ. ಆಗ ಬಿದ್ದೆ ನಾನು ವೆನಿಸ್ ನಗರದೊಂದಿಗೆ ಪ್ರೇಮದಲ್ಲಿ. ಆಮೇಲೆ ದೋ ಲಬ್ಝೋಂಕಿ ಹೈ ದಿಲ್ ಕಿ ಕಹಾನಿ... ಹಾಡ...

ಯತಿ ಸ್ವಂತೀ -40

09-02-2018 ಮೈಸೂರಿನಲ್ಲಿ ಹತ್ತನೇ ತರಗತಿಯವರೆಗೆ ಓದಿ ಪಿ.ಯು.ಸಿ. ಓದಲು ಬೆಂಗಳೂರಿಗೆ ಬಂದೆ. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಆಗ ಆರು ಕೊಠಡಿಗಳು ಮಾತ್ರವಿದ್ದವು. ಹಿಂದಿನ ವರ್ಷ ಒಂದನೇ ಪಿ.ಯು.ಸಿ.ಯಲ್ಲಿ ಎರಡೇ ಸೆಕ್ಷನ್ ಇದ್ದಿದ್ದರಿಂದ, ಅವರೆಲ್ಲರೂ ಎರಡನೇ ಪಿ.ಯು.ಸಿಗೆ ಹೋಗಿದ್ದರಿಂದ ಈ ಸಲ ನಾಲ್ಕು ಸೆಕ್ಷನ್ ಮೊದಲ ಪಿಯುಸಿ ಇತ್ತು. ಅದಕ್ಕೇ ಏನೋ 49% ಪಡೆದು ಎಸ್ಸೆಸ್ಸೆಲ್ಸಿ ಪಾಸಾಗಿದ್ದ ನನಗೆ ಅಲ್ಲಿ ಪಿಸಿಎಂಬಿಗೆ ಸೀಟು ಸಿಕ್ಕಿತು! ಭಾರದ್ವಾಜ್ ಪ್ರಿನ್ಸಿಪಲ್ ಆಗಿದ್ದರೆಂದು ನೆನಪು. ಬೆಳಗ್ಗೆ ಎಂಟೂವರೆಯಿಂದ ಹತ್ತೂವರೆ, ಹದಿನೈದು ನಿಮಿಷ ಬ್ರೇಕ್, ಮತ್ತೆ ಹತ್ತೂ ಮುಕ್ಕಾಲಿನಿಂದ ಹನ್ನೆರಡೂ ಮುಕ್ಕಾಲು ತರಗತಿ. ಒಂದು ವೇಳೆ ಲ್ಯಾಬ್ ಇದ್ದರೆ ಅದು ಮಧ್ಯಾಹ್ನ ಮೂರೂವರೆಯಿಂದ ಐದೂವರೆ. ನನಗೆ ಮನೆ ವಾಕಬಲ್ ದೂರ. ಅದಕ್ಕೇ ನಾಲ್ಕು ವೇಳೆ (ಲ್ಯಾಬ್ ಇದ್ದರೆ) ಇಲ್ಲದಿದ್ದರೆ ಎರಡು ವೇಳೆ ನಡೆದು ಓಡಾಡುತ್ತಿದ್ದೆ. ಜಯನಗರ ಹದಿನಾರನೇ ಮೆಯಿನ್‍ನಲ್ಲಿ ಮನೆ. ಮೂವತ್ತೈದನೆಯ ಕ್ರಾಸ್‍ನಲ್ಲಿ ಬಂದು 11ನೇ ಮೆಯ್ನ್‍ನಲ್ಲಿ ಎಡಕ್ಕೆ ತಿರುಗಿ ತಕ್ಷಣವೇ 36ನೇ ಕ್ರಾಸಿನಲ್ಲಿ ಬಲಕ್ಕೆ ತಿರುಗಿದರೆ ಎರಡನೇ ಮೆಯ್ನ್ ಬಳಿ ಪಾರ್ಕ್. ಪಾರ್ಕಿನ ಹಿಂದೆ ಕಾಲೇಜು. ಯಂಶೈವಾ ಸಮುಪಾಸತೇ ಶಿವ ಇತಿ ... ಎಂದು ಬೆಳಗ್ಗೆ ಒಂದೊಂದು ತರಗತಿಯವರು ಒಬ್ಬರ ಹಿಂದೆ ಒಬ್ಬರು ನಿಂತು ಮೈದಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದೆವು. ಈಗ ಆ ಮೈದಾನವೇ ಎಚ್ ಎನ್ ಆಡಿಟೋರಿಯಂ ಆಗಿ...

ಯತಿ ಸ್ವಂತೀ -39

08-02-2018 1979ರಲ್ಲಿ ನಾವು ಆಲ್ ಇಂಡಿಯಾ ಟೂರ್ ಹೋದೆವು. ಹತ್ತನೇ ಸೆಮಿಸ್ಟರ್‍ಗೆ ಹೋಗಬೇಕಾಗಿದ್ದ ನಾವು ಎಂಟನೇ ಸೆಮಿಸ್ಟರ್‍ಗೆ ಹೋಗಬೇಕಾಗಿದ್ದ ನಾಲ್ಕನೇ ಬಿ.ಇ. ವಿದ್ಯಾರ್ಥಿಗಳ ಜೊತೆ ಹೊರಟೆವು. ಬೆಂಗಳೂರಿನಿಂದ ಹೊರಟ ಟೂರ್ ಅದು. ನಾನಾಗ ನನ್ನ ದೊಡ್ಡಮ್ಮನ ಮನೆಯಲ್ಲಿ ಮೈಸೂರಿನಲ್ಲಿ ಓದುತ್ತಿದ್ದೆ. ಹೊರಡುವ ಮೊದಲು ಬೆಂಗಳೂರಿನಲ್ಲಿದ್ದ ನನ್ನ ಸೋದರತ್ತೆಯ ಮನೆಗೆ ಬಂದು ಅಲ್ಲಿಂದ ಹೊರಟೆ. ರಾತ್ರಿ ಮದ್ರಾಸಿಗೆ ರೈಲು. (ಈಗ ಚೆನ್ನೈ) ಏನೋ ಉದ್ವೇಗ, ಏನೋ ರೋಮಾಂಚನ. ನಾವು ಹಿಂದೆ ಜೋಗಕ್ಕೆ ಟೂರ್ ಹೋಗಿದ್ದುಂಟು. ನಮ್ಮ ನಾಲ್ಕನೇ ಬಿ.ಇ. ಯಲ್ಲಿದ್ದಾಗ ಬಸ್‍ನಲ್ಲಿ ಹೋಗಿದ್ದೆವು. ಮಹಾತ್ಮಾಗಾಂಧಿ ಹೈಡ್ರೋ ಎಲೆಕ್ಟ್ರಿಕ್ ಸ್ಟೇಷನ್ ಜೊತೆಗೆ ಶರಾವತಿಯ ಆನೆಬೈಲ್ ಹೈಡ್ರೋ ಎಲೆಕ್ಟ್ರಿಕ್ ಸ್ಟೇಷನ್‍ಗೆ ಕೂಡ ಹೋಗಿದ್ದೆವು. ಇದು ಚಿಕ್ಕ ಒಂದು ರಾತ್ರಿ ಹೊರಗೆ ಸ್ಟೇ ಮಾಡಿದ್ದ ಟೂರ್. ಈ ಸಲ ಇಪ್ಪತ್ತನಾಲ್ಕು ದಿನಗಳದ್ದು. ಕೆಲವರೊಂದಿಗೆ ಕಂಬೈಂಡ್ ಸ್ಟಡೀ ಮಾಡಿ, ಅವರ ಮನೆಯಲ್ಲಿ ಊಟ ಮಾಡಿ ರೂಢಿ ಇತ್ತು. ಆದರೆ ಇಡೀ ನಲವತ್ತು ಜನರ ಜೊತೆ ಅಷ್ಟು ದೂರ! ಚೆನ್ನೈಯಲ್ಲಿ ಬೆಳಗ್ಗೆ ಬಿಸಿಲು ... ಉಹೂಂ ರಣ ಬಿಸಿಲು... ಅಲ್ಲಿ ನಾವು ದೂರದರ್ಶನಕ್ಕೆ ಹೋದಾಗ ಅದೆಷ್ಟು ಖುಷಿ ಅಂತೀರಿ. ಏಕೆಂದರೆ ಅದು ಏ.ಸಿ. ಕಟ್ಟಡ. ಮದ್ರಾಸಿನ ಓಪನ್ ಮೋರಿಗಳ ದುರ್ವಾಸನೆ ಕೂಡ ಹೊಡೆಯುತ್ತಿರಲಿಲ್ಲ. ಹೊರಗೆ ಬಂದಾಗ ಅಬ್ಬಾ ಮೈಯೆಲ್ಲಾ ಅಂಟಂಟು. ರಾತ್ರಿ ಸಿಗಪ್ಪು ರೋಜಾಕ್ಕಳ್ ಸಿ...

ಯತಿ ಸ್ವಂತೀ -38

07-02-2018 ನನ್ನ ಜೀವನದ ಅನೇಕ ಘಟನೆಗಳಿಗೆ ನಾನು ಕಾರಣ ಆದರೆ ಬಹಳ ಬಹಳ ಘಟನೆಗಳಿಗೆ ನಾನು ಕಾರಣನಲ್ಲ, ಬಹುಶಃ ನಾನು ಅವುಗಳ ಬಗ್ಗೆ ತೋರುವ ಪ್ರತಿಕ್ರಿಯೆಯಿಂದ ಕೂಡ ಇರಬಹುದು. ಏಕೆಂದರೆ ಕೆಲವು ಘಟನೆಗಳು ನಮಗೆ ತಿಳಿಯದೇ ಅಯಾಚಿತವಾಗಿ ನಡೆಯುತ್ತವೆ. ಈ ಅಯಾಚಿತ ಪದವೇ ಚೆನ್ನ. ಯಾಚನೆ ಎಂದರೆ ಬೇಡುವುದು. ಯಾಚಿತ ಎನ್ನುವುದು ಅದರ ನಾಮಪದ ರೂಪ ಎಂದುಕೊಂಡರೆ ಅಯಾಚಿತ ಎಂದರೆ ನಾವು ಬೇಡದೇ ನಮಗೆದುರಾಗುವ ಘಟನೆಗಳು. ಅಪ್ರಯತ್ನ ಎನ್ನುವ ಮತ್ತೊಂದು ಪದವಿದೆ. ಪ್ರಯತ್ನವಿಲ್ಲದೇ ಎನ್ನುವುದನ್ನು ಅಪ್ರಯತ್ನ ಎನ್ನಬಹುದೇನೋ. ಪದ ಎನ್ನುವ ಪದವನ್ನು ಕೆಲವರು ಶಬ್ದ ಎಂದೂ ಬಳಸುತ್ತಾರೆ. ಎಷ್ಟು ವಿಶಿಷ್ಟ ಅಲ್ಲವೇ? ಮೊನ್ನೆ ಮೊನ್ನೆ ಜೆಲಸಿ, ಎನ್ವಿ – ಈ ಎರಡು ಪದ(ಶಬ್ದ!)ಗಳಿಗೆ ಕನ್ನಡ ಪದಗಳನ್ನು ಹುಡುಕುತ್ತಿದ್ದೆ. ಅಸೂಯೆ, ಮತ್ಸರ, ಹೊಟ್ಟೆಕಿಚ್ಚು, ಈಷ್ರ್ಯೆ... ಎಲ್ಲವೂ ಒಂದೇ ರೀತಿ ಇದ್ದರೂ ಒಂದಿಷ್ಟಿಷ್ಟು ಬೇರೆ ಬೇರೆ ಅರ್ಥ ಇರಬಹುದೇನೋ. ಕೆಲವರನ್ನು ಕಂಡರೆ ನಮಗೆ ಅಸೂಯೆ, ಕೆಲವನ್ನು ಕಂಡರೆ ಮನಗೆ ಈಷ್ರ್ಯೆ... ಉಹೂಂ.. ನಾವು ಆದಷ್ಟೂ ಒಂದೇ ಅರ್ಥದಲ್ಲಿ ನಾಲ್ಕೂ ಶಬ್ದಗಳನ್ನು ಬಳಸುತ್ತೇವೆ. ಬಳಸು ಎಂದರೆ ಒಂದರ್ಥ ಆಲಿಂಗಿಸಿಕೋ ಎಂದು. ಆದರೂ ಉಪಯೋಗಿಸುತ್ತೇವೆ ಎನ್ನುವುದಕ್ಕೆ ಬಳಸುತ್ತೇವೆ ಎಂದು ಬಳಸು... ಉಹೂಂ ಉಪಯೋಗಿಸುತ್ತೇವೆ!! ಹ್ಞಾಂ... ಘಟನೆ... ಯಾವುದನ್ನು ಬರೆಯಲಿ? ಎಷ್ಟೊಂದು ಇದೆ ಬರೆದು ಹಂಚಿಕೊಳ್ಳಲು. ಉದಾಹರಣೆಗೆ ನಮ್ಮ ಮಿಡ್ಲ್ ...

ಯತಿ ಸ್ವಂತೀ -37

06-02-2018 ಮಹಾಜನ ಹೈಸ್ಕೂಲಿನಲ್ಲಿ  ಓದುವಾಗ ಬಹಳವೇ ಚೆನ್ನಾದ ಘಟನೆಗಳಿವೆ. ಒಂದೆರಡು ಹೇಳಬಲ್ ಘಟನೆಗಳನ್ನು ಹೇಳಲು ಆಸೆ  ಒಮ್ಮೆ ಹೀಗಾಯಿತು. ನಮ್ಮ ಮೇಡಂ ಒಬ್ಬರು ಚರಿತ್ರೆ ಪಾಠ ಮಾಡುತ್ತಿದ್ದರು. ಅವರು ಆಗ ಹೇಳಿದ್ದ ಫ್ರೆಂಚರ ಕ್ರಾಂತಿ ಮತ್ತು ರಿನೈಸಾನ್ಸ್ ನನಗೆ ಇಂದಿಗೂ ನೆನಪಿದೆ. ಅವರೊಮ್ಮೆ ಪಾಠ ಮಾಡುತ್ತಿದ್ದಾಗ ನಮ್ಮ ಸಹಪಾಠಿಯೊಬ್ಬ ಅರುಣ್ (ಹೆಸರು ಬದಲಾಯಿಸಲಾಗಿದೆ) ಮೇಡಂ ಅವರಿಗೆ ‘ಮಿಸ್, ನಿಮ್ಮನ್ನ ನೆನ್ನೆ ಗಣೇಶ ಟಾಕೀಸ್‍ನಲ್ಲಿ ಕ್ಯೂನಲ್ಲಿ ನೋಡಿದೆ ಮಿಸ್’ ಎಂದ. ಅವರು ಸೌಮ್ಯವಾಗಿ ನಗುತ್ತಾ, ‘ಹೌದಪ್ಪಾ, ನಾನು ಮೆಕೆನ್ನಾಸ್ ಗೋಲ್ಡ್ ಸಿನಿಮಾಗೆ ಹೋಗಿದ್ದೆ’ ಎಂದರು. ಅರುಣ ಬಹಳ ತುಂಟ. ಸುಮ್ಮನಿರಬೇಕೋ, ಬೇಡವೋ... ‘ಅಂಡರ್‍ವಾಟರ್ ಸೀನ್ ಹೆಂಗಿತ್ತು ಮಿಸ್?’ ಅಂದುಬಿಡೋದೇ! ಅವರೋ ಮದುವೆಯಾಗದಿದ್ದಾಕಿ. ಇವನೋ ಹದಿನಾಲ್ಕು ವರ್ಷದ ಚೋಟುದ್ದದ ಹುಡುಗ. ಮೆಕೆನ್ನಾಸ್ ಗೋಲ್ಡ್‍ನಲ್ಲಿ ಕ್ಲಿಂಟ್ ಈಸ್ಟ್‍ವುಡ್ ನಾಯಕಿಯೊಂದಿಗೆ ನೀರಿನಲ್ಲಿ ಆಡುವ ಸರಸದ ದೃಶ್ಯ ಇತ್ತೆಂಬುದು ಅಸ್ಪಷ್ಟ ನೆನಪು. ನಾನೂ ಆ ಸಮಯದಲ್ಲಿಯೇ ಅದೇ ಗಣೇಶ ಟಾಕೀಸಿನಲ್ಲಿಯೇ ನೋಡಿದ್ದೆ. ಮುಖ ಕೆಂಪು ಕೆಂಪಾಯಿತು ಮೇಡಂನದು. ನಾವೆಲ್ಲಾ ಬೇರೆ ಕಿಸಕ್ಕೆಂದು ನಕ್ಕಿದ್ದೆವು. ‘ಥೂ ಹೋಗಪ್ಪಾ, ನೀನು ತುಂಬ ಕೆಟ್ಟ ಹುಡುಗ. ಇರು ನಿಮ್ಮಕ್ಕ ವೀಣಾಗೆ (ಹೆಸರು ಬದಲಾಯಿಸಲಾಗಿದೆ) ಹೇಳ್ತೀನಿ’ ಎಂದರು. ವೀಣಾ ಅವನ ಅಕ್ಕ, ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಯಾ...

ಯತಿ ಸ್ವಂತೀ -36

05-02-2018 ಇತ್ತೀಚೆಗೆ ಫೇಸ್‍ಬುಕ್ ಗೆಳೆಯ ಸ್ಕಂದ ಆಗುಂಬೆಯ ಗಾಂಧಿ ಬಗ್ಗೆಗಿನ ಲೇಖನ ಓದಿದಾಗ ನನ್ನ ಮಿಡ್ಲ್ ಸ್ಕೂಲ್ ನೆನಪಾಯಿತು. ನಾನು ಐದನೇ ತರಗತಿಗೆ ಒಂಟಿಕೊಪ್ಪಲ್‍ನಲ್ಲಿನ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆ ಸೇರಿದೆ. (ಇದು ಬಾಲಕರ ಸರ್ಕಾರಿ ಮಾಧ್ಯಮಿಕ ಶಾಲೆ ಅಂತಾಗಬೇಕಲ್ವಾ? ಹಸುವಿನ ಶುದ್ಧ ಹಾಲು ಅನ್ನುವ ಬದಲು ಶುದ್ಧ ಹಸುವಿನ ಹಾಲು ಅಂತ ಜಾಹೀರಾತು ನೋಡಿದ್ದೇನೆ! ಇದೂ ಅದೇ ತರಹದ್ದು... ಅಲ್ವೇ?) ಕನ್ನಡದಲ್ಲಿ ಒಂದಿಷ್ಟು ಹೆಚ್ಚು ತಿಳಿದಿದೆ ಎಂಬ ಹೆಮ್ಮೆ! ಏಕೆಂದರೆ ಸುಧಾ ಪತ್ರಿಕೆ 1965ರಲ್ಲಿ ಬಂದಾಗಿನಿಂದ ಓದಲಾರಂಭಿಸಿದೆ. ಬಾಲವಿಹಾರ ಅರ್ಥ ಆಗುತ್ತಿತ್ತು. ಆದರೆ ಅರ್ಥವಾಗಲೀ ಬಿಡಲೀ, ಬಿ. ಪುಟ್ಟಸ್ವಾಮಯ್ಯನವರ ದ್ವಾ ಸುಪರ್ಣಾ ಧಾರಾವಾಹಿ ಓದುತ್ತಿದ್ದೆ. ಹ್ಞಾಂ ವಿಷಯಕ್ಕೆ ಬರುತ್ತೇನೆ. ನಮಗೆ ಇದ್ದ ಮೇಷ್ಟರು ಮೇಡಂಗಳು ಕೆಲವರ ಹೆಸರು ನೆನಪಿದೆ. ಶ್ರೀನಿವಾಸ ಅಯ್ಯಂಗಾರ್ (ಇವರ ಮಗ ವಾಸು ನಮ್ಮ ಸಹಪಾಠಿ; ಇವರ ಇನ್ನೊಬ್ಬ ಮಗ ನನ್ನ ಗೆಳೆಯನ ಭಾವ), ಶೆಲ್ವಪಿಳ್ಳೈ ಅಯ್ಯಂಗಾರ್, ಕುಮುದವಲ್ಲಿ (ಇವರು ಅವರ ಮಗಳು), ನಾಗಲಕ್ಷ್ಮಮ್ಮ (ಇವರು ನನಗೆ ಪ್ರೈಮರಿಯಲ್ಲಿ ಟೀಚರ್. ನನ್ನ ಜೊತೆಗೇ ಅವರೂ ಮಿಡ್ಲ್ ಸ್ಕೂಲಿಗೆ ಬಂದರು) ಮತ್ತು ಗಂಗಣ್ಣ ಮೇಷ್ಟರು. ನನ್ನ ದುರಭ್ಯಾಸ ಒಂದಿತ್ತು. ಬೋರ್ಡಿನ ಮೇಲೆ ಮೇಷ್ಟರು ಮೇಡಂ ಏನಾದರೂ ಬರೆದರೆ ಅದರಲ್ಲಿ ಏನಾದರೂ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ತಕ್ಷಣವೇ ಎದ್ದು, ಡಸ್ಟರ್‍ನಲ್ಲಿ ಅಳಿಸಿ, ಚಾಕ...

ಯತಿ ಸ್ವಂತೀ -35

04-02-2018 ಗೀತ್‍ಮಾಲಾ ಕಿ ಛಾವ್ ಮೇ ಎನ್ನುವ ವಿಶಿಷ್ಟ ಸಿ.ಡಿ.ಗಳನ್ನು ಹೊರತಂದ ಸಾರೆಗಮ ಕಂಪೆನಿ ಕಾರವಾ(ನ್) ಎನ್ನುವ ವಿಶೇಷ ಹೆಸರಿನಡಿ 5000 ಮಧುರ ಹಿಂದೀ ಹಾಡುಗಳನ್ನು ಒಂದೆಡೆ ಕಲೆ ಹಾಕಿದ್ದಾರೆ. ಯೂ ಟ್ಯೂಬ್‍ನಲ್ಲಿ ಹುಡುಕಿದರೆ ಸಿಕ್ಕಬಹುದು. ಬೇರೆ ಬೇರೆ ಕಾಂಬಿನೇಷನ್‍ಗಳಿದ್ದಾವೆ. ಉದಾಹರಣೆಗೆ ನನ್ನ ಫೇವರಿಟ್ ಹಾಡು ಜಿಂದಗೀ ಕೆ ಸಫರ್ ಮೆ ಗುಜರ್ ಜಾತೇ ಹೈ ಜೋ ಮಕಾಮ್ ... ಆಪ್ ಕೀ ಕಸಂ ಚಿತ್ರದ್ದು. ಅದರಲ್ಲಿ ಬರೋ ಬೆಳಗ್ಗೆ ಬರುತ್ತದೆ, ರಾತ್ರಿ ಹೋಗುತ್ತದೆ, ಹೀಗೇ ಕಾಲವು ಸರಿಯುತ್ತಲೇ ಇರುತ್ತದೆ, ನಿಲ್ಲುವುದಿಲ್ಲ, ಒಂದೇ ಕ್ಷಣದಲ್ಲಿ ಇದು ಮುಂದೆ ಹೋಗಿಬಿಡುತ್ತದೆ. ಮನುಷ್ಯ ಸರಿಯಾಗಿ ನೋಡಲಾರ... ಸೋ, ಈ ಹಾಡನ್ನು ನಾನು ಕೇಳುವ ಬಗೆ ನೋಡಿ. ಕಾರವಾ(ನ್)ದಲ್ಲಿ ಆನಂದ್‍ಬಕ್ಷಿ ಹಾಡುಗಳ ಗೊಂಚಲು ಇದೆ. ಅದರಲ್ಲಿ ಬರುತ್ತದೆ ಈ ಹಾಡು. ಆರ್ ಡಿ ಬರ್ಮನ್ ಬೆಸ್ಟ್ ಇದೆ. ಅದರಲ್ಲಿ ಬರುತ್ತದೆ. ಕಿಶೋರ್ ಕುಮಾರ್ ಬೆಸ್ಟ್‍ಗಳಲ್ಲೂ ಇದು ಇದೆ. ರಾಜೇಶ್‍ಖನ್ನ ಬೆಸ್ಟ್, ಮುಮ್ತಾಜ್ ಬೆಸ್ಟ್, ರಾಜೇಶ್-ಮುಮ್ತಾಜ್ ಜೋಡಿ ಬೆಸ್ಟ್... ನಿರ್ದೇಶಕ ಜೆ. ಓಂಪ್ರಕಾಶ್ ಬೆಸ್ಟ್‍ನಲ್ಲಿ ಬಂದರೂ ಮತ್ತೆ ಮತ್ತೆ ಕೇಳಬಹುದು. ಇದೊಂದು ಉದಾಹರಣೆ ಅಷ್ಟೇ. ಕಿಶೋರ್ ಕುಮಾರ್ ಡಬ್ಬಲ್ ವಾಯ್ಸ್‍ನಲ್ಲಿ ಹಾಡಿರೋ ಆಂಖ್ ಸೀದೀ ಲಗೀ ಹಾಡು ಕೇಳಿರುವಿರಾ? ಹಾಫ್ ಟಿಕೆಟ್ ಚಿತ್ರದ್ದು. ಲತಾ ಮಂಗೇಶ್‍ಕರ್ ಕಾರಣಾಂತರಗಳಿಂದ ಬರಲಾಗಲಿಲ್ಲವಂತೆ. ಸ್ವತಃ ಕಿಶೋರ್ ಗಂಡು, ಹ...

ಯತಿ ಸ್ವಂತೀ -34

03-02-2018 ನನ್ನ ಹೈಸ್ಕೂಲ್ ದಿನಗಳು ಮೊದಮೊದಲು ಬಹಳ ಟಫ್. ಈಗ ಟಫ್ ಅನ್ನೋ ಪದ ಬಳಸಿದ್ದೀನಿ. ಆದರೆ ಆಗ... ಅಬ್ಬಾ... ಇದೇನು ಈ ಮೇಷ್ಟರುಗಳು, ಟೀಚರುಗಳು ಠಸ್ ಪುಸ್ ಅಂತ ಏನೋ ಹೇಳ್ತಿದ್ದಾರೆ ಎನ್ನಿಸುತ್ತಿತ್ತು. ನನಗೆ ಪ್ರೈಮರಿ ಶಾಲೆಯಲ್ಲಿಯೇ ಒಂದಿಷ್ಟು ಇಂಗ್ಲೀಷ್ ಮತ್ತು ಅರ್ತ್‍ಮೆಟಿಕ್ ಪಾಠವನ್ನು ನಮ್ಮ ಮೈಸೂರು ರೈಲ್ವೇ ಲೋಕೋ ಕಾಲೋನಿಯ ಕ್ವಾರ್ಟರ್ಸ್ ಇಂಜಿನ್ ಡ್ರೈವರ್ ಇರ್ವಿನ್ ಅವರ ಪತ್ನಿ ನನಗೆ ಹೇಳಿಕೊಟ್ಟಿದ್ದರೂ, ಇಡೀ ತರಗತಿಗಳು ಇಂಗ್ಲೀಷ್‍ನಲ್ಲಿ ಇದ್ದಿದ್ದು (ಕನ್ನಡ, ಹಿಂದಿ ಬಿಟ್ಟು!) ಬಹಳ ಕಷ್ಟ ತಂದಿತ್ತು. ನಾನು ಏಳನೇ ಕ್ಲಾಸಿನವರೆಗೂ ಕನ್ನಡ ಮೀಡಿಯಮ್ಮು. ನಮ್ಮ ಅಪ್ಪ ರಾತ್ರಿ ಒಂಬತ್ತು ಗಂಟೆಯ ಇಂಗ್ಲೀಷ್ ಸುದ್ದಿ ಕೇಳುತ್ತಿದ್ದರು ರೇಡಿಯೋದಲ್ಲಿ. ದಿಸ್ ಈಸ್ ಆಲ್ ಇಂಡಿಯಾ ರೇಡಿಯೋ. ದ ನ್ಯೂಸ್ ರೆಡ್ ಬೈ ಸುರುಜಿತ್ ಸೇನ್. ಅಷ್ಟೇ. ಮುಂದಕ್ಕೆಲ್ಲಾ ಠಸ್ ಪುಸ್. ಈ ಸನ್ನಿವೇಶದಲ್ಲಿ ಎಂಟನೆಯ ತರಗತಿಯ ಕಷ್ಟ ಪ್ರತಿಯೊಬ್ಬ ಕನ್ನಡ ಟು ಇಂಗ್ಲೀಷ್ ಮೀಡಿಯಮ್ಮಿನ ವಿದ್ಯಾರ್ಥಿ/ನಿಗೂ ಗೊತ್ತಿರುತ್ತದೆ. ಒಬ್ಬರು ಮೇಡಂ ಹೊಸದಾಗಿ ಬಂದರು. ಅವರ ಹೆಸರು ಬೇಡ. ಅವರು ರಸ್ತೆಯಲ್ಲಿ ನಡೆದು ಬರುವಾಗ ಅವರ ತಿಳಿಕಂದು ಕನ್ನಡಕದ ಫ್ರೇಮು, ಅವರ ಗಿಣಿ ಮೂಗು ನನಗೆ ನೆನಪಿದೆ. ಅವರು ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಬರುತ್ತಿದ್ದರೆ ಕೆಲವೊಮ್ಮೆ ಅವರ ಸೆರಗು ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟದ ನೆನಪು ತರುವಂತೆ ಗಗನವನ್ನು ಚುಂಬ...

ಯತಿ ಸ್ವಂತೀ -33

02-02-2018 ಮದುವೆಯ ಬಗ್ಗೆ ಜನರಿಗೆ ಕಲ್ಪನೆ ಇರುತ್ತಿತ್ತು. ಕೆಲವು ಪುಸ್ತಕಗಳಲ್ಲಿ ಇದ್ದ ಪತಿ ಪತ್ನಿಯರ ಸರಸ, ವಿರಸ, ಸಮರಸದ ಬಗ್ಗೆ ಓದಿ ಊಹಿಸಿಕೊಳ್ಳುತ್ತಿದ್ದರು. ತಮ್ಮ ಸುತ್ತಮುತ್ತಲಿನ ದಂಪತಿ, ಗುರುತಿನ ದಂಪತಿ, ಯಾರೋ ಹೇಳಿದ ಪತಿ ಪತ್ನಿ ಜಗಳ, ವಿಚ್ಛೇದನ ಇವುಗಳನ್ನು ಕೇಳಿ ತಮ್ಮ ಮದುವೆ ಹೇಗಿರಬೇಕೆಂದು ಕನಸು ಕಾಣುತ್ತಿದ್ದುದೂ ಉಂಟು. ಯುಕ್ತ ವಯಸ್ಸು ಬಂದಿದೆ, ಹುಡುಗ ಸಂಪಾದಿಸುತ್ತಿದ್ದಾನೆ ಎಂಬ ವಿಷಯಗಳ ಆಧಾರದ ಮೇಲೆ ತಂದೆ ತಾಯಿಯರು ಆಗೆಲ್ಲಾ ಹುಡುಗಿಯನ್ನು ಹುಡುಕಲಾರಂಭಿಸುತ್ತಿದ್ದರು. ಮದುವೆಯಂತಹ ಸಂಭ್ರಮಗಳಲ್ಲಿ ನಡೆಯುತ್ತಿದ್ದ ಸಂಭಾಷಣೆಗಳಲ್ಲಿ ಸ್ವಾಭಾವಿಕವಾಗಿ ಯಾರ ಮಗ, ಮಗಳು ಮದುವೆಗೆ ‘ಬಂದಿದ್ದಾರೆ’ ಎಂಬ ವಿಷಯ ನುಸುಳುತ್ತಿತ್ತು! ಈಗ ಮ್ಯಾಟ್ರಿಮೊನಿ ವೆಬ್‍ಸೈಟ್‍ಗಳಿವೆ. ಗಂಡು ಹೆಣ್ಣು ಪರಸ್ಪರ ಶಾಲೆ, ಕಾಲೇಜು, ಕೆಲಸ ಎಲ್ಲಿಯೋ ಒಂದು ಕಡೆ ಒಟ್ಟಿಗಿದ್ದವರು, ಇಷ್ಟಪಟ್ಟು ಬಾಳಸಂಗಾತಿಗಳಾಗುತ್ತಾರೆ. ಅದೇ ವೇಗದಲ್ಲಿ ಒಬ್ಬರನ್ನೊಬ್ಬರು ದೂರ ಮಾಡಿಕೊಳ್ಳುತ್ತಾರೆ. ಮತ್ತೆ ‘ಬೇಟೆ’ ಶುರು (ಪದದ ಬಳಕೆಗೆ ಕ್ಷಮೆಯಿರಲಿ). ಆದರೆ ಮೊದಲ ಮದುವೆ ವಿಫಲಗೊಂಡ ನಂತರ ಇಬ್ಬರಿಗೂ ಬೇಕಾಗಿರುವುದೊಂದು ‘ಮಿಕ’. ಹಾಗಲ್ಲದಿದ್ದಲ್ಲಿ ಎರಡನೆ ಮದುವೆ ವಿಜಯಿಯಾಗುವುದೆಂಬ ಖಾತ್ರಿ ಏನು? ಮದುವೆ ಮನೆ. ಎಲ್ಲರೂ ಹರಟುತ್ತಿರುತ್ತಾರೆ. ಬಹಳ ವರ್ಷಗಳ ನಂತರ ಕೆಲವರ ಭೇಟಿ ಆಗುತ್ತದೆ. ಏನು ಸಮಾಚಾರ? ನಿಮ್ಮ ಮಗಳು... ನನ್ನ ಮಿಡ್ಲ್ ಸ್ಕೂಲ್ ವಿದ್ಯ...