ಯತಿ ಸ್ವಂತೀ -47


16-02-2018
ಇಂದು ನನ್ನ ಗೆಳೆಯನೊಬ್ಬನ ಮದುವೆಯ ವಾರ್ಷಿಕೋತ್ಸವ.
ಅವನ ‘ಎಂಗೇಜ್‍ಮೆಂಟ್’ಗೆ ಹೋಗಿದ್ದ ನೆನಪು ಮೂಡುತ್ತಿದೆ.
ಈ ಗೆಳೆಯ ನನ್ನ ಜೊತೆ ಕೆಲಸ ಮಾಡುತ್ತಿದ್ದ. ನಾನು 1957ರ ಮಾಡೆಲ್ ಆದರೆ ಅವನು 1972ರ ಮಾಡೆಲ್! ಅಂದರೆ ಹದಿನೈದು ವರ್ಷ ಚಿಕ್ಕವನು. ಆದರೂ ನನಗೂ ಅವನಿಗೂ ಬಹಳವೇ ಒಳ್ಳೆಯ ಗೆಳೆತನವಿತ್ತು. ನನ್ನ ಜಾಯಮಾನವೇ ಅದು. ನನ್ನ ವಯಸ್ಸು ಅಭಿನಯ ಶಾರದೆಯದು ಹದಿನಾರಕ್ಕೆ ಸ್ಟಕ್ ಆದಂತೆ ನನ್ನದೂ ಮೂವತ್ತೈದಕ್ಕೆ ಸ್ಟಕ್ ಆಗಿದ್ದಿರಬಹುದು!!
ನನಗೆ ನನ್ನ ವಯಸ್ಸಿನ ಗೆಳೆಯರು ಒಂದು ಎರಡು... ಕಾಲೇಜಲ್ಲಿ. ಒಂದು... ಎರಡು... ಏನೂ ಸಂಬಂಧ ಇಲ್ಲದೇ ಗೆಳೆಯರಾದವರು. ಇತ್ತೀಚೆಗೆ ಬಾಲ್ಯದ ಗೆಳೆಯರು ಇಬ್ಬರು. ಈ ಆರು ಜನರನ್ನು ಬಿಟ್ಟರೆ ಉಳಿದೆಲ್ಲ ಜನ ಬಹಳವೇ ಚಿಕ್ಕವರು. ನನ್ನಲ್ಲಿ ಅದೇನು ಕಾಣುವರೋ ತಿಳಿಯದು, ಅಂಕಲ್ ಎನ್ನುತ್ತಾರೆ, ಯಂಗ್ ಬಾಯ್ ಅಲ್ಲ ಇವರು, ಎಂಗೆಂಗೋ ಬಾಯ್ ಎನ್ನುವುದೂ ಉಂಟು!
ಈ ಗೆಳೆಯನ ಬಗ್ಗೆ ಹೇಳುತ್ತಿದ್ದ. ಅವನಿಗೆ ಎರಡು ಪ್ರಪೋಜಲ್‍ಗಳು ಬಂದವು. ಅ ಮತ್ತು ಶಿ ಎನ್ನುವುದು ಅವರಿಬ್ಬರ ಹೆಸರು ಎಂದಿಟ್ಟುಕೊಳ್ಳೋಣ. ನಾನಾಗ ಬಹಳವೇ ಹುಷಾರಿಲ್ಲದೇ ಮಲಗಿದ್ದೆ. ಮನೆಗೆ ಬಂದಿದ್ದ ಇವ. ನನಗೆ ಈ ಇಬ್ಬರು ಹುಡುಗಿಯರಲ್ಲಿ ಯಾರನ್ನು ಮದುವೆ ಆಗಬೇಕೋ ತಿಳಿಯದಾಗಿದೆ ಎಂದ. ನನ್ನ ಜ್ವರ ಹೆಚ್ಚಿತ್ತೋ ಇಲ್ಲವೇ ನನ್ನ ಫನ್ ಬುದ್ಧಿಯಿಂದಲೋ ಒಂದು ನಾಣ್ಯ ತೆಗೆದು ಚಿಮ್ಮಿಸಿ ಬೆಸ್ಟ್ ಆಫ್ ದ ಥ್ರೀ ಎಂದೆ. ಮೂರು ಸಲವು ಶಿ ಎನ್ನುವ ಹೆಸರು ಬಂತು. ನಾನು ‘ಅ’ಳನ್ನು ಮದುವೆ ಆಗು ಎಂದು ತಮಾಷೆಯಾಗಿ.
ನಂತರ ಆ ಘಟನೆ ನನಗೆ ಮರೆತುಹೋಯಿತು. ಅವನಿಗೆ ನೆನಪಿತ್ತು!
ಪರರಾಜ್ಯವೊಂದರ ರಾಜಧಾನಿಯಲ್ಲಿ ಅವನ ಎಂಗೇಜ್‍ಮೆಂಟ್ ಇತ್ತು ‘ಶಿ’ ಜೊತೆಗೆ. ನಾನೂ ಹೋಗಿದ್ದೆ. ನನಗೆ ಆಗ ಚೆನ್ನೈಐ. ಐ ಮೀನ್ ಮದ್ರಾಸ್ ಐ ಆಗಿಬಿಟ್ಟಿತ್ತು. ಕಣ್ಣು ಬಿಡಲಿಕ್ಕಾಗದೇ ಅವರ ಮನೆಯ ರೂಮಿನಲ್ಲಿ ಪವಡಿಸಿ ನಿದ್ರಿಸಿಬಿಟ್ಟೆ.
ಸಂಜೆ ಆದಾಗ ಗೆಳೆಯ ಬಂದು ಎಬ್ಬಿಸಿದ. ಬೋಂಡಾ, ಕಾಫಿ ಸೇವನೆ ಆಯಿತು. ಎಂಗೇಜ್‍ಮೆಂಟ್? ಎಂದೆ. ಕ್ಯಾನ್ಸಲ್ ಎಂದ.
ಎಂತಹ ವಿಚಿತ್ರ! ಈಗ ಅದು ಕಾಮನ್ನು. ಎಂಗೇಜ್‍ಮೆಂಟ್ ಇರಲಿ, ಮದುವೆಯೂ ಮುರಿಯುತ್ತದೆ ಆದಷ್ಟೇ ವೇಗವಾಗಿ.
ಆಗಿನ ಕಾಲಕ್ಕೆ ಇದೊಂಥರ ವಿಶೇಷ. ಕಾರಣ ಅವನು ಹೇಳಲಿಲ್ಲ, ನಾನು ಕೇಳಲಿಲ್ಲ. ಶಿ ಮನೆಯವರು ಬರಲೇ ಇಲ್ಲ ಎಂಗೇಜ್‍ಮೆಂಟ್‍ಗೆ.
ಇದಾಗಿ ಕೆಲವು ತಿಂಗಳುಗಳ ನಂತರ ಇದೇ 16ನೇ ಫೆಬ್ರವರಿಯಂದು ಅ ಜೊತೆಗೆ ಅವನ ಮದುವೆ ಆಯಿತು.
ಈಗ ಸಂತೋಷವಾಗಿ ಇದ್ದಾನೆ ಪ್ರಪಂಚದ ಮತ್ತೊಂದು ಮೂಲೆಯಲ್ಲಿ.
ಇನ್ಯಾವಾಗಲೋ ಸಿಕ್ಕಾಗ ಅವನೇ ಹೇಳಿದ್ದ. ಯತ್ರಾಜ್, ನೀನು ಹೇಳಿದ್ದೆ ಅ ನ ಮದುವೆ ಆಗು ಅಂತ. ನನ್ನ ಎಂಗೇಜ್‍ಮೆಂಟ್ ಶಿ ಜೊತೆ ಆಗದೇ ಬ್ರೇಕ್ ಆಗಿ ಅ ಜೊತೆಗೇ ಮದುವೆ ಆಯಿತು. ನೀನು ನನಗೆ ಹೇಳಿದ್ದರ ನೆನಪಿದೆಯಾ? ಎಂದಿದ್ದ.
ನನಗೆ ನೆನಪಿರಲಿಲ್ಲ.
ಹ್ಯಾಪಿ ವೆಡ್ಡಿಂಗ್ ಆನಿವರ್ಸರಿ ಗೆಳೆಯಾ ಮತ್ತು ಅ!


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102