ಯತಿ ಸ್ವಂತೀ -58



27-2-2018

ನಮ್ಮ ಬಡಾವಣೆಯಲ್ಲಿ ವಿದ್ಯುತ್ ದೀಪಗಳ ಅಂಗಡಿಯನ್ನು ನೋಡಿದೊಡನೆ ಜೇಡ ಕಟ್ಟಿದ ಮೂಲೆಯನ್ನು ನಿಮಗೆ ತೋರಿಸೋಣವೆನಿಸಿತು.
ವರ್ಷ 2002. ಸರಿಸುಮಾರು ಒಂದು ವರ್ಷದ ಕಾಲ ನಿರುದ್ಯೋಗಿಯಾಗಿದ್ದವನಿಗೆ ಮಸ್ಕತ್ನಲ್ಲಿ ಕೆಲಸ ಸಿಕ್ಕಿತ್ತು.
ಕೆಲಸದ ಬಗ್ಗೆ ಏನೂ ತಿಳಿದಿರಲಿಲ್ಲ. ಎಲೆಕ್ಟ್ರಿಕಲ್ ಇಂಜಿನಿಯರ್ ಬೇಕು ಎಂದಿದ್ದರು. ಅದೊಂದು ಟ್ರೇಡಿಂಗ್ ಕಂಪೆನಿ.
ರಾತ್ರಿ ಎಂಟೂವರೆ. ಜೂನ್ 20ರಂದು 45ಲಿಸೆಲ್ಸಿಯಸ್ 'ತಾಪ'ಮಾನದಲ್ಲಿ ಒಮಾನ್ ದೇಶದ ಸೀಬ್ ವಿಮಾನ ನಿಲ್ದಾಣದಲ್ಲಿ ಇಳಿದೆ.
ಮನದಲ್ಲಿ ಒಂದೇ ಪ್ರಶ್ನೆ... ಇದೆಲ್ಲಿ ಬಂದು ಸಿಕ್ಕಿಕೊಂಡೆ ಎಂದು.
ನನ್ನ ಸಹೋದ್ಯೋಗಿಗಳಿಬ್ಬರು ನನ್ನ ಫೋಟೋ ಗುರುತು ಹಿಡಿದು ಕಾರಿನಲ್ಲಿ ಕರೆದೊಯ್ದರು. ಏನೋ ತಿಳಿಯದ ಕಳವಳ.
ಗೂಗಲಾಚಾರ್ಯನ ಪರಿಚಯ ಇಲ್ಲದ ಸಮಯ. ನನಗಾಗಿ ಒಂದು ರೂಂ ಸಿದ್ಧವಿತ್ತು. ನಿದ್ರಾದೇವಿ ಆಲಿಂಗಿಸಿ ಆಲಿಂಗಿಸದಂತೆ ಇದ್ದಳು.
ಬೆಳಗ್ಗೆ ರೂಮಿನ ಕೆಳಗಿನ ಮಹಡಿಯ ಆಫೀಸ್ ತಲುಪಿದೆ. ಇತರರ ಪರಿಚಯ ಆಯಿತು. ದೊಡ್ಡ ಬಾಸ್ ಇರಲಿಲ್ಲ. ಸೋ ಡ್ರೈವಿಂಗ್ ಕಲಿಕೆ ಮುಂದೂಡಲ್ಪಟ್ಟಿತು. ಕನ್ನಡ ಬಲ್ಲ ಕೊಂಕಣಿ ಮತ್ತು ತುಳು ಮಾತೃಭಾಷೆಯ ಸಹೋದ್ಯೋಗಿಗಳು ನನಗೆ ಒಳ್ಳೆಯ ಸ್ವಾಗತ ನೀಡಿದರು.
ಗುರು ಶಾನ್ಭಾಗ್ ಜೊತೆಗೆ ಊರು ನೋಡಿದೆ. ರಣ ಬಿಸಿಲು. ಕಾರು ಆಫೀಸ್ ಮನೆ ಎ. ಸಿ. ಆಫೀಸ್ನಿಂದ ಕಾರು ತಲುಪುವಷ್ಟರಲ್ಲಿ ಬೆವರು ಕಿತ್ತುಕೊಂಡು ಬರುತ್ತಿತ್ತು.
ಕಾರು ಓಡಿಸುವ ಲೈಸೆನ್ಸ್ ಬೆಂಗಳೂರಿನಲ್ಲಿ ಪಡೆದಿದ್ದರೂ ಚೆನ್ನಾಗಿ ಓಡಿಸಲು ಬರುತ್ತಿರಲಿಲ್ಲ. ಮಸ್ಕತ್ ತಲುಪುವ ಮುನ್ನ ಮಾರುತಿ ಆಮ್ನಿ ಓಡಿಸಲು ನಾನು ಮಾಡಿದ ಪ್ರಯತ್ನ ಡಿಸಾಸ್ಟರ್ ಆಗಿ ಕೊನೆಗೊಂಡಿತ್ತು.
ಕಾರಿನ ಬಾಗಿಲಿಗೆ ಬೀಗ ಹಾಕುವ ರೀತಿ ನನಗೆ ಮೈ ಹತ್ತಲು ಸಮಯ ಹಿಡಿದಿತ್ತು. ಕಾರಿನ ಬಾಗಿಲ ಪಿಡಿಯನ್ನು ಸ್ವಲ್ಪ ಮೇಲೆತ್ತಿ ಬಾಗಿಲು ಮುಚ್ಚಿದರೆ ಕಾರಿನ ಬಾಗಿಲು ಲಾಕ್ ಆಗಿಬಿಡುತ್ತಿತ್ತು. ಅದನ್ನು ಕಲಿಯಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೆ.
ನನ್ನನ್ನು ಸುಮಾರು ನಾಲ್ಕು ಕಿಮೀ ದೂರದ ಕಂಪೆನಿಯ ಲೈಟಿಂಗ್ ಶೋ ರೂಂಗೆ ಕೆಲಸಕ್ಕೆ ಹಾಕಿದರು.
ಅಲ್ಲಿ ಸರ್ದಾರ್ಜೀ ಒಬ್ಬರು ನನಗೆ ಬಾಸ್. ಮಹಾನ್ ಶಾಸ್ತ್ರೀಯ ಸಂಗೀತಗಾರ ಚೆಂಬೈ ವೈದ್ಯನಾಥ ಭಾಗವತರ ಮೊಮ್ಮಗ ನಾರಾಯಣ್ ನನ್ನ ಸೀನಿಯರ್. ಕುಮಟಾದ ಒಬ್ಬ ಯುವಕ ನಾಗರಾಜ , ಹೊನ್ನಾವರದ ಕೃಷ್ಣ ಮತ್ತು ಒಮಾನಿ ಹುಡುಗಿ ಒಬ್ಬಳು ನನ್ನ ಸಹೋದ್ಯೋಗಿಗಳು.
ನೆಲ ಮತ್ತು ಮೊದಲ ಮಹಡಿ ಇದ್ದ ಆ ಕಟ್ಟಡ ರಾಯಲ್ ಒಮಾನ್ ಪೊಲೀಸ್ ಇಲಾಖೆಗೆ ಸೇರಿದ್ದು. ದಾಸರ ಕಂಚುಗಾರರ ಅಂಗಡಿಯಂದದಿ ತರಹ, ತರಹೇವಾರಿ ದೀಪಗಳ ಸಾಲು. ಅದ್ಭುತ ಶಾಂಡ್ಲಿಯರುಗಳು... ಅಲ್ಲಿನ ಶ್ರೀಮಂತ ಒಮಾನಿಗಳ ವಿಲ್ಲಾದ ಛಾವಣಿಯನ್ನು ಅಲಂಕರಿಸುತ್ತಿದ್ದವು. ಸ್ವರೋಸ್ಕಿ ಕ್ರಿಸ್ಟಲ್ ದೀಪಗಳು ದುಬಾರಿ ಆಗಿದ್ದರೂ ಜನಪ್ರಿಯ.
ಅನೇಕ ಶಾಂಡ್ಲಿಯರುಗಳನ್ನು ಡ್ರಾಯಿಂಗ್ ನೋಡಿ ಜೋಡಿಸಿದ್ದೇವೆ ಎಲ್ಲ ಸೇರಿ. ಆ ಚೂರುಗಳನ್ನು ಸೇರಿಸಲು ನೀಡಲ್ಪಟ್ಟ ಹಿತ್ತಾಳೆ ಪಿನ್ಗಳು ಬೆರಳುಗಳನ್ನು ಸಾಕಷ್ಟು ಚುಚ್ಚಿವೆ.
ಆದರೆ ಆ ಎರಡಡಿ ಅಥವಾ ಇನ್ನೂ ಉದ್ದದ ಶಾಂಡ್ಲಿಯರುಗಳನ್ನು ಎಲ್ಲರಿಗೂ ಕಾಣುವಂತೆ ಜೋತಾಡಿಸಿದಾಗ ಸಿಗುತ್ತಿದ್ದ ತೃಪ್ತಿಯಿಂದಾಗಿ ಬೆರಳುಗಳ ಉರಿ ಮರೆತುಹೋಗುತ್ತಿತ್ತು.
                 -0-0-0-0-0-0

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102