ಯತಿ ಸ್ವಂತೀ -102


12-04-2018
ಹುಚ್ಚು ಮಳೆ  ಮಾರ್ಚ್ 30ರಂದು ಬಂದಿತ್ತು.  ಆಗ ನನಗೆ ಮಳೆಯಲ್ಲಿ ನೆನೆದ ಎರಡು ಮೂರು ಘಟನೆಗಳು ನೆನಪಾದವು. ಒಮ್ಮೆ ವೊಕ್ಹಾರ್ಡ್ ಆಸ್ಪತ್ರೆಯಲ್ಲಿ (ಈಗಿನ ಫೋರ್ಟಿಸ್ ಆಸ್ಪತ್ರೆ ಕನ್ನಿಂಗ್‍ಹ್ಯಾಂ ರಸ್ತೆ) ನನ್ನ ಗೆಳೆಯನ ತಂದೆಗೆ ಹೃದಯದ ಆಪರೇಷನ್ ಆಗಿದ್ದಾಗ ನೋಡಲು ನಾನು, ನನ್ನ ಪತ್ನಿ ಹೋದೆವು. ಕೈನೆಟಿಕ್ ಹೊಂಡಾ ಸ್ಕೂಟರ್. ಆಸ್ಪತ್ರೆಯಿಂದ ಹೊರಟೆವು. ಹುಚ್ಚು ಮಳೆ. ನಿಲ್ಲಲು ಎಲ್ಲಿಯೂ ಜಾಗ ಸಿಗಲಿಲ್ಲ. ಊರ್ವಶಿ ಥಿಯೇಟರ್ ಮುಂದೆ ನೀರು ಚಿಮ್ಮಿಸಿದಾಗ ಬಸ್ ಸ್ಟಾಂಡ್‍ನಲ್ಲಿ ಇದ್ದವರೆಲ್ಲಾ ಏಯ್ ಎಂದು ಕೂಗಿಕೊಂಡಿದ್ದು ನೆನಪಿದೆ. ಎಲ್ಲಿಯೂ ನಿಲ್ಲಲಿಲ್ಲ. ಎಡಿಯೂರು ಕೆರೆಯ ಪಕ್ಕದ ರಸ್ತೆಯಲ್ಲಿದ್ದ ಮನೆಯನ್ನು ತಲುಪುವ ವರೆಗೆ ಸ್ಕೂಟರನ್ನು ನಿಲ್ಲಿಸಿರಲಿಲ್ಲ. ಸೋಕ್ಡ್ ಟು ದ ಸ್ಕಿನ್ ಅಂತಾರಲ್ಲ...
ಮತ್ತೊಮ್ಮೆ ನಾನು, ನನ್ನ ಪತ್ನಿ ಮಲ್ಲೇಶ್ವರಂ ಹನ್ನೊಂದನೇ ಅಡ್ಡರಸ್ತೆಯಲ್ಲಿದ್ದ ಶ್ರೀಕೃಷ್ಣನ ದೇವಸ್ಥಾನದಲ್ಲಿ ಸುಧಾ ರಘುನಾಥನ್ ಅವರ ಕಛೇರಿಗೆ ಹೋದೆವು. ಸುಧಾ ನನ್ನ ಪತ್ನಿಯ ಅಚ್ಚುಮೆಚ್ಚಿನ ಗಾಯಕಿ. ಹಾಡು ಕೇಳುತ್ತಿರುವಾಗಲೇ ಚಿಟಿಚಿಟಿ ಮಳೆ ಶುರುವಾಯಿತು. ಮಳೆಹುಳುಗಳು ನಮ್ಮ ಸುತ್ತಲೂ ಓಡಾಡುತ್ತಿದ್ದವು. ನನಗೆ ಆಗ ಒಂದು ಕಥೆ ಹೊಳೆದಿತ್ತು. ಮನೋಧರ್ಮ ಎನ್ನುವ ಆ ಕಥೆಯು ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಕಛೇರಿ ಮುಗಿಯಿತು. ಅದೇ ಕೈನೆಟಿಕ್ ಹೊಂಡಾ. ವಿಜಯನಗರದವರೆಗೂ ಸ್ವಲ್ಪ ಕಡಿಮೆ ಮಳೆ ಇತ್ತು. ಆಮೇಲೆ ಶುರುವಾಯಿತು ಕುಂಭದ್ರೋಣದ ಮಳೆ. ಗಾಡಿ ನಿಂತರೆ ಸ್ಟಾರ್ಟ್ ಆಗುವುದೆಂಬ ಭರವಸೆ ಇರಲಿಲ್ಲ. ಒಮ್ಮೆ ಎಲ್ಲಾದರೂ ನಿಂತರೆ ಮತ್ತೆ ಗಾಡಿ ಓಡಿಸುವ ಸ್ಥಿತಿಯಲ್ಲಿ ನನ್ನ ಕೈಗಳಿರಲಿಲ್ಲ. ಸಂಪೂರ್ಣ ನಂಬ್ ಆಗಿದ್ದವು. ಓಡಿಸುತ್ತಾ ಹೋದೆ. ನಮ್ಮ ಮುಂದೆ ಹಿಂದೆ ಫಳೀರ್ ಫಡಾರ್ ಎಂದು ಸಿಡಿಲುಗಳು ಅಬ್ಬರಿಸುತ್ತಿದ್ದವು. ಗಡಗಡ ನಡುಗುತ್ತಾ (ಮಳೆಯಿಂದ, ಭಯದಿಂದಲ್ಲ!) ರಾಜರಾಜೇಶ್ವರಿನಗರದ ನಮ್ಮ ಮನೆ ಸೇರಿಕೊಂಡೆವು. ಸೋಕ್ಡ್ ಟು ದ ಸ್ಕಿನ್ ಅಂತಾರಲ್ಲ...
ಇನ್ನೊಮ್ಮೆ ನಾನು ಮಳೆ ಬಂದಾಗ ನನ್ನ ವಾಚ್, ಮೊಬೈಲ್, ಪರ್ಸ್ ಎಲ್ಲವನ್ನೂ ಸ್ಕೂಟರ್‍ನ ಡಬ್ಬಾದೊಳಗೆ ಹಾಕಿ ಹಾಯಾಗಿ ಖುಷಿಯಾಗಿ ಆ ಮಳೆಗಾಲದ ಸಂಜೆಯನ್ನು ಆಹ್ಲಾದದಿಂದ ಆಸ್ವಾದಿಸಿದೆ. ಬಹಳ ಸುಂದರ ಅನುಭವ ಅದು.
ಮಗದೊಮ್ಮೆ ನನ್ನ ಮಗಳನ್ನು ಜಯನಗರದಿಂದ ಸಂಜೆ ಕರೆದು ತರುತ್ತಿದ್ದೆ. ಅಬ್ಬಾ... ಎಂತಹ ಮಳೆ! ರಿಂಗ್‍ರೋಡಿನ ಒಂದು ಪೆಟ್ರೋಲ್ ಬಂಕ್ ಮುಂದೆ ಗಂಟೆಗಟ್ಟಲೆ ನಿಂತ ನೆನಪಿದೆ.
ಇನ್ನೂ ಒಮ್ಮೆ ನನ್ನ ಮಗನ ಮುಂಜಿಗೆ ನಮ್ಮ ನೆಂಟರಿಗೆ ಆಹ್ವಾನ ನೀಡಲು ನಾನು, ನನ್ನ ಕಸಿನ್ ಹೊರಟೆವು. ರಾಜಾಜಿನಗರ ವಿದ್ಯಾವರ್ಧಕ ಶಾಲೆಯ ಬಳಿ ಮರದ ಕೆಳಗೆ ನಿಂತೆವು. ಆಗ ಹೊಡೆದ ಸಿಡಿಲುಗಳ ಆರ್ಭಟ ನೆನೆದರೆ ಇಂದಿಗೂ ಒಮ್ಮೆ ಮೈ ಶತಕಂಪಿನಿ!
ನನ್ನ ಮೈಸೂರು ರಸ್ತೆಯ ಕಂಪೆನಿಯಲ್ಲಿ ಕೆಲಸ ಮಾಡುವಾಗ ಒಮ್ಮೆ ಮರದ ಕೆಳಗೆ ನಿಂತೆ. ಹುಚ್ಚು ಮಳೆ ಬಂದು ನಿಂತಿತ್ತು. ನನ್ನ ಗೆಳೆಯ ಮರವನ್ನು ಜೋರಾಗಿ ಅಲುಗಾಡಿಸಿದ. ಮೈಯೆಲ್ಲಾ ತೊಪ್ಪೆಯಾಗುವಷ್ಟು ಒದ್ದೆಯಾದೆ. ನನ್ನ ಕಾದಂಬರಿಯ ಟೈಟಲ್ ಆಗ ನನಗೆ ಸಿಕ್ಕಿತ್ತು. ಮರದಡಿ ಮಳೆ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104