ಯತಿ ಸ್ವಂತೀ -104


14-04-2018
ಮಹಮ್ಮದ್ ಬಳಿ ನನಗೆ ಕಾರು ಡ್ರೈವಿಂಗ್ ಪಾಠ ಮುಂದುವರಿದಿತ್ತು. ಒಮ್ಮೆ ‘ನಿನಗೆ ಡ್ರೈವಿಂಗ್ ಬರೋದಿಲ್ಲ’ ಎಂದು ಅಣಕಿಸಿದ. ಟಕ್ಕನೆ ಅವನ ಕಾರಿನ ಬಾಗಿಲು ತೆರೆದು ಹೊರಗೆ ಕಾಲಿಟ್ಟೆ. ಕಾರಿನ ಬಾಗಿಲ ಬೀಗ ಮುರಿದಿತ್ತು. ನಾನು ನಡೆದು ಹೋಗುತ್ತಿದ್ದರೆ, ಹಿಂದೆಯೇ ಕಾರಲ್ಲಿ ಬಂದು ‘ಹೇ ಬಾ’ ಎಂದು ಕೂಗತೊಡಗಿದ!
ಬೀಗವನ್ನು ಮತ್ತೆ ಹಾಕಿಸಲು ನನಗೆ ಮತ್ತೆ ಕೆಲವು ರಿಯಾಲ್ ಒಮಾನಿಗಳು ಖರ್ಚಾದವು. ಪ್ರತಿ ಸಲ ಟೆಸ್ಟ್‍ಗೆ 5 ರಿಯಾಲ್ ಒಮಾನಿಗಳು. ಅಂದರೆ ಸುಮಾರು ಐದು ದಿನಗಳ ಊಟ. ಒಮ್ಮೆ ನನ್ನನ್ನು ಟೆಸ್ಟ್ ಫೀಲ್ಡ್‍ನಲ್ಲಿ ನಿಲ್ಲಿಸಿ, ಈಗ ಬರುತ್ತೇನೆ ಎಂದು ಹೋದವನು ಬರಲಿಲ್ಲ. ನನ್ನ ಹೆಸರನ್ನು ಆ ಪರೀಕ್ಷಕರು ಕರೆದಿದ್ದರೂ ನನಗೆ ಅದು ಅರ್ಥವಾಗಿರಲಿಕ್ಕಿಲ್ಲ. ಕೊನೆಗೆ ಎಲ್ಲರೂ ಹೊರಟುಹೋದರು. ನನ್ನ ಕಾರು ಗುರು ಮಾತ್ರ ಬರಲಿಲ್ಲ. ನಾನೊಬ್ಬನೇ ನಿಂತಿದ್ದಾಗ ಬಂದವನು ‘ಎಲ್ಲಿ ಎಲ್ಲರೂ’ ಎಂದವನು ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದ. ಅಲ್ಲಿ ಹೋಗಿ ಅರಾಬಿಕ್ ಭಾಷೆಯಲ್ಲಿ ಕೂಗಾಡಿದ. ಒಬ್ಬ  ಎತ್ತರದ ಯುವ ಪೊಲೀಸ್ ಉರಿಯುವ ಸೂರ್ಯನಂತೆ ಕೆಂಪಾಗಿ ಬಂದು ನನ್ನ ಕಾರಿನಲ್ಲಿ ಕೂರಲು ಹೋದ. ಆಗ ಅವನ ತಲೆಯು ಕಾರಿನ ಮೇಲ್ಭಾಗಕ್ಕೆ ದಬ್ಬೆಂದು ಹೊಡೆಯಿತು. ಆಗಲೇ ಗೊತ್ತಾಯಿತು ನಾನು ಫೆಯ್ಲ್ ಎಂದು. ಮುಂದೆ ಹೋಗೆಂದ. ಅದೊಂದು ದೊಡ್ಡ ಬಯಲು. ಎಲ್ಲೆಡೆ ಸಿಮೆಂಟ್ ಹಾಕಲ್ಪಟ್ಟಿತ್ತು. ರಸ್ತೆಯೇ ಇರಲಿಲ್ಲ. ಆ ಕಡೆಯ ಪಕ್ಕದಲ್ಲಿ ಸ್ಲೋಪ್ ಟೆಸ್ಟ್ ಮುಗಿಸಿ ಬಂದ ಕಾರಿನಾತ ಹೋಗಲೆಂದು ನನ್ನ ಕಾರು ನಿಲ್ಲಿಸಿದೆ. ಅಷ್ಟೇ, ನಿನ್ನದು ಮೆಯಿನ್ ರಸ್ತೆ. ಅವನಿಗೆ ದಾರಿ ಕೊಟ್ಟೆ. ನೀನು ಫೆಯ್ಲ್ ಎಂದ!
ಮತ್ತೊಂದು ಸಲ ಇನ್ನೊಂದು ಕಡೆ ಟೆಸ್ಟ್ ಇತ್ತು. ಈ ಸಲ ನನ್ನ ಎಲಾಂಟ್ರಾ ಕಾರು ಇರಲಿಲ್ಲ. ಬೇರಾವುದೋ ಟೊಯೋಟಾ ಕಾರು. ಅದರ ಹ್ಯಾಂಡ್‍ಬ್ರೇಕ್ ತೆಗೆಯಲು ನನಗಾಗಲಿಲ್ಲ. ಕೊನೆಗೂ ಹೊರಟೆ. ಸ್ವಲ್ಪ ದೂರ ಹೋದ ನಂತರ ಎಲ್ಲೋ ತಿರುಗು ಎಂದ. ತಿರುಗಬಾರದು ಅಲ್ಲಿ ಎಂದೆ. ಅದು ನಮ್ಮ ಪಾಠ. ನೋ ಎಂಟ್ರಿಯಲ್ಲಿ ಹೋಗೆಂದು ಹೇಳಿದಾಗ ಆಗುವುದಿಲ್ಲ ಎನ್ನಬೇಕು ನಾನು. ಅದನ್ನೇ ಹೇಳಿದೆ. ಫೆಯ್ಲ್.
ಮಹಮ್ಮದ್ ತನಗೆ ಆಗುವುದಿಲ್ಲ ನನಗೆ ಕಲಿಸುವುದಕ್ಕೆ ಎಂದು ಹೊರಟುಹೋದ. ಆಗ ಇನ್ನೊಬ್ಬ ಬಂದ. ಅವನಿಗೆ ಹಿಂದಿಯೂ ಬರದು, ಇಂಗ್ಲೀಷ್ ಕೂಡ ಬರದು. ಟೆಸ್ಟ್‍ಗೆ ಮಾತ್ರ ಬಂದ.  ಸ್ವಲ್ಪ ದೂರ ಹೋದೆ. ಪಕ್ಕದಲ್ಲಿ ಇನ್ಸ್‍ಪೆಕ್ಟರ್ ಇದ್ದ. ಹಿಂದೆ ನನ್ನ ಕಾರು ಗುರು. ನನಗೆ ಆಗೆಲ್ಲಾ ಕ್ಲಚ್ ಹಿಡಿಯದೇ ಬ್ರೇಕ್ ಹಿಡಿಯಲು ಬರುತ್ತಿರಲಿಲ್ಲ. ಹಾಗೇ ಮಾಡಿದೆ. ಆ ಕಾರಿನಲ್ಲಿದ್ದ ಬಾಟಲಿಗಳೆರಡು ಠಳ್ ಎಂದು ಶಬ್ದಿಸಿದವು. ‘ನೀನು ನನ್ನನ್ನು ಕೊಲ್ಲಲು ನೋಡುತ್ತಿದ್ದೀಯಾ?’ ಎಂದು ಹೇಳಿದ ಆ ಇನ್ಸ್‍ಪೆಕ್ಟರ್ ನನ್ನನ್ನು ಇಳಿಸಿ ತಾನೇ ಓಡಿಸಿಕೊಂಡು ಹೊರಟುಹೋದ. ಆಮೇಲೆ ನನ್ನ ಗುರು ಬಂದು ನನ್ನನ್ನು ಕರೆದೊಯ್ದ.
ಇಷ್ಟು ಹೊತ್ತಿಗೆ ನನ್ನ ಡ್ರೈವಿಂಗ್ ಪರ್‍ಫೆಕ್ಟ್ ಆಗಿತ್ತು. ಏಕೆಂದರೆ ಅಷ್ಟು ಸಲ ತರಬೇತಿಗೆ ಹೋಗಿದ್ದೆನಲ್ಲ!



Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -102