ಯತಿ ಸ್ವಂತೀ -54


23-02-2018
ನನ್ನ ಬಗ್ಗೆ ನಾನು ಹೇಳಿಕೊಳ್ಳುವುದಿಲ್ಲ ಎಂದೇ ಹೇಳಬೇಕೇನೋ... ಏಕೆಂದರೆ ಸುಮಾರು 45 ಪುಸ್ತಕಗಳನ್ನು ಬರೆದಿದ್ದರೂ ಸುಮಾರು ಜನಕ್ಕೆ ನನ್ನ ಹೆಸರು ತಿಳಿಯದು!
ಇದಕ್ಕೆ ಕಾರಣಗಳು ಎರಡು.
ಒಂದು ಕನ್ನಡ ಪುಸ್ತಕಗಳ ಮಾರುಕಟ್ಟೆಯ ಸ್ಥಿತಿ. ಎರಡನೆಯ ಕಾರಣ ಸ್ವಯಂಕೃತ.
ನನ್ನ ಪುಸ್ತಕಗಳನ್ನು ನಾನೇ ಮೊದಲು ಪ್ರಕಾಶಿಸಿದೆ. ಆಗೆಲ್ಲಾ ಸರ್ಕಾರಿ ಲೈಬ್ರರಿಗೆ ಪುಸ್ತಕಗಳನ್ನು ಕೊಡುವುದೆಂದರೆ ಸಂಭ್ರಮ. ಅವರು ಎಂತಹ ಲೇಖಕರೋ ತಿಳಿಯದು ಆದರೆ ಅವರದು ಕವಿಹೃದಯ. ಬಡ ಪ್ರಕಾಶಕರು ಕೇವಲ ಲೈಬ್ರರಿಗೆ ಪುಸ್ತಕಗಳನ್ನು ಕೊಟ್ಟರೆ ಮಾತ್ರ ಬದುಕಿಕೊಳ್ಳುವರೆಂದು ಅವರಿಗೆ ತಿಳಿದಿತ್ತು. ಅವರು ಮುಖ್ಯಮಂತ್ರಿ ಆಗಿದ್ದಾಗ ಪುಸ್ತಕಗಳು ಸಲೀಸಾಗಿ ಲೈಬ್ರರಿಯಲ್ಲಿ ಕೊಳ್ಳಲ್ಪಡುತ್ತಿದ್ದವು. ನಾನೇನೂ ಕಳಪೆ ಪುಸ್ತಕಗಳನ್ನು ಮಾಡುತ್ತಿರಲಿಲ್ಲ. ಯಂಡಮೂರಿ, ಮಲ್ಲಾದಿ, ಚಲ್ಲಾ ಸುಬ್ರಹ್ಮಣ್ಯಂ ಮುಂತಾದ ತೆಲುಗು ಲೇಖಕರ ಅನುವಾದಗಳು, ಆರ್ಯಾಂಬ ಪಟ್ಟಾಭಿ, ಬೇಲೂರು ರಾಮಮೂರ್ತಿಯವರಂತಹ ಒಳ್ಳೆಯ ಲೇಖಕರ ಪುಸ್ತಕಗಳನ್ನು ಪ್ರಕಾಶನ ಮಾಡುತ್ತಿದ್ದೆ.
ಪುಸ್ತಕದ ಅಂಗಡಿಗಳಲ್ಲಿ ಕೆಲವು ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿರಲಿಲ್ಲ. ಕೆಲವು ಚೆನ್ನಾಗಿ ಹೋಗುತ್ತಿದ್ದವು. ಉದಾಹರಣೆಗೆ ಯಂಡಮೂರಿ ಅವರ ಧ್ಯೇಯ. ಅದು ಎಲ್ಲಿಯೂ ಧಾರಾವಾಹಿ ಆಗದಿದ್ದ ಕಾದಂಬರಿ. ಬಹಳ ಜನ ಅದನ್ನು ಓದಿದರು. ಅನೇಕ ಮುದ್ರಣಗಳನ್ನು ಕಂಡ ಕಾದಂಬರಿ ಅದು. ಮೊದಲ ಸಲ ಅದನ್ನು ಪ್ರಕಾಶನ ಮಾಡಿದ್ದು ನಾನೇ ಎಂಬ ಹೆಗ್ಗಳಿಕೆ ನನ್ನದು.
ಜೊತೆ ಜೊತೆಗೆ ನನ್ನ ಕಾದಂಬರಿಗಳನ್ನು ಕೂಡ ಪ್ರಕಾಶನ ಮಾಡಿದೆ. ನನ್ನ ಮೊದಲ ಕಾದಂಬರಿ ಕನ್ನಡಪ್ರಭದಲ್ಲಿ ದೈನಿಕ ಧಾರಾವಾಹಿ ಆಗಿತ್ತು. ಹೇಗೋ ನನ್ನ ಕಾದಂಬರಿಗಳೂ ಮಾರುಕಟ್ಟೆಯಲ್ಲಿ ಇರುತ್ತಿದ್ದವು. ಆದರೆ ಲೈಬ್ರರಿಗೆ ಹೋಗಿದ್ದವು ನನ್ನ ಎಲ್ಲ ಪುಸ್ತಕಗಳೂ.
ಆಗೆಲ್ಲಾ ಈ ಟಿವಿ ದೈನಿಕ ಧಾರಾವಾಹಿಗಳ ಹಾವಳಿ, ದಾಂಧಲೆ ಇರಲಿಲ್ಲ. ಬಹಳ ಜನ ಹೆಂಗಸರು ಓದುತ್ತಿದ್ದರು, ಬಹಳ ಜನ ಮಹಿಳಾ ಲೇಖಕಿಯರು ಬರೆಯುತ್ತಿದ್ದರು. ಈಗ ಬಹಳ ಜನ ಇಲ್ಲ ಕೂಡ. ಕೇವಲ ಸಾಯಿಸುತೆ ಮೇಡಂ ಬರೆಯುತ್ತಿರುತ್ತಾರೆ. ಉಷಾ ನವರತ್ನರಾಂ, ಎಚ್‍ಜಿ ರಾಧಾದೇವಿ, ಅಶ್ವಿನಿ ಆಗೆಲ್ಲಾ ಬಹಳ ಜನಪ್ರಿಯ ಲೇಖಕಿಯರು. ಈಗ ಇವರು ಯಾರೂ ಇಲ್ಲ.
ಹ್ಞಾಂ...ನನ್ನ ಹೆಸರು ಲೈಬ್ರರಿ ಓದುಗಪ್ರಿಯ ಎಂದು ತಿಳಿದು ಬಂದಿದ್ದು ನಾನು ನವೆಂಬರ್‍ನಲ್ಲಿ ಮೈಸೂರು ಸಾಹಿತ್ಯ ಸಮ್ಮೇಳನಕ್ಕೆ ಹೋದಾಗ. ನಾವು ಚಿಕ್ಕಂದಿನಿಂದ ನಿಮ್ಮ ಪುಸ್ತಕ ಓದಿ ಬೆಳೆದವರು ಎಂದು ಸುಮಾರು ನಲವತ್ತರ ಮಹಿಳೆಯರೂ ಹೇಳಿದಾಗ ನನಗೆ ಅಚ್ಚರಿ!
ನಾನೊಂದು ರೀತಿ ವನಸುಮ. ಡಾ. ಡಿವಿಜಿಯವರು ಹೇಳಿದಂತೆ ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ ವಿಪರೀತ.... ಎನ್ನುವಂತೆ ನನ್ನ ಹೆಸರು ಹೇಳಿಕೊಳ್ಳಲು ಸಂಕೋಚ ನನಗೆ. ಈಗಂತೂ 60 ದಾಟಿರುವುದರಿಂದ ಒಣಸುಮ ಕೂಡ!
ನನ್ನ ಕಾದಂಬರಿ ಚಿರಸ್ಮಿತವನ್ನು ಸಮಾರಂಭದಲ್ಲಿ ನಮ್ಮ ಪ್ರಕಾಶಕ ಶ್ರೀ ವಿದ್ಯಾರಣ್ಯ ಬಿಡುಗಡೆ ಮಾಡಲು ನಿರ್ಧರಿಸಿ, ಖ್ಯಾತ ಲೇಖಕ ಜೋಗಿ ಅವರನ್ನು ಕರೆಸಿದರು. ಜೋಗಿಯವರು, ‘ಇವರ ಚಿರಸ್ಮಿತ ಚೆನ್ನಾಗಿದೆ. ಇವರದು ಮೂವತ್ತು ಪುಸ್ತಕಗಳಿವೆ ಎಂದಾಗ ಆಶ್ಚರ್ಯ ಆಯಿತು. ಒಂದು ಪುಸ್ತಕ ಬರೆದವರೇ ಸಮಾರಂಭ ಮಾಡಿಕೊಂಡ ಸಂದರ್ಭಗಳಿವೆ’ ಎಂದರು.
ನಾನು ಒಣಸುಮ. ನನ್ನನ್ನು ಒಂದಿಷ್ಟು ಜನರು ಗುರುತಿಸುವಂತೆ ಆಗಿದ್ದು ಫೇಸ್‍ಬುಕ್‍ನಿಂದಾಗಿ ಎಂದರೆ ಅಚ್ಚರಿಯಿಲ್ಲ.


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102