ಯತಿ ಸ್ವಂತೀ -57


26-02-2018
ನನ್ನ ಜೀವನದಲ್ಲಿ ಮರೆಯಬಾರದ ವ್ಯಕ್ತಿಗಳು ಕೆಲವರಿದ್ದಾರೆ. ಮರೆಯಬೇಕೆಂಬ ವ್ಯಕ್ತಿಗಳೂ ಇದ್ದಾರೆ!
ಮರೆಯಬಾರದವರು ಕಣ್ಣಿಗೆ ಕಾಣದೇ ದೂರವಿದ್ದರೆ, ಮರೆಯಬೇಕೆಂಬ ವ್ಯಕ್ತಿಗಳು ಕಣ್ಮುಂದೆಯೇ ಇರುತ್ತಾರೆ. ಆದ್ದರಿಂದ ಯಾರನ್ನೂ ನೆನೆಯಲೂ ಬಾರದು, ಮರೆಯಲೂ ಬಾರದು ಎನ್ನುವ ಸಿದ್ಧಾಂತವನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದೇನೆ. ಹೌದೂ, ಯಾಕೆ ಕೆಲವರನ್ನು ನಾವು ಮರೆಯಬಾರದು?
ಪ್ರಾತಃಸ್ಮರಣೀಯರು ಎನ್ನುವ ಮಾತನ್ನು ಕೆಲವರ ಬಗ್ಗೆ ಬಳಸುತ್ತೇವೆ. ಏಕೆಂದರೆ ಬೆಳಗ್ಗೆ ಎದ್ದು ನಾರಾಯಣಾ (ಅಥವಾ ನಮ್ಮ ಇಷ್ಟದ ಯಾವುದೋ ಒಂದು ದೇವರ ನಾಮ) ಎನ್ನುವಾಗಲೇ ಆ ಪ್ರಾತಃಸ್ಮರಣೀಯರ (ಅಂದರೆ ಬೆಳಗ್ಗೆಯೇ ನೆನಪಿಗೆ ಬರಬೇಕಾದವರು?) ಹೆಸರು ಕೂಡಾ ನಮ್ಮ ನಾಲಗೆಯ ಮೇಲೆಯೋ ಅಥವಾ ಮನದ ಭಿತ್ತಿಯ ಮೇಲೋ ಬರಬೇಕು. ಏಕೆಂದರೆ ನಮ್ಮ ಇಂದಿನ ಅಸ್ತಿತ್ವಕ್ಕೆ ಅವರು ಕೂಡ ಕಾರಣ ಆಗಿರಬಹುದು.
ನಮಗೆ ಪಾಠ ಹೇಳಿಕೊಟ್ಟ ಗುರುಗಳು ಮತ್ತು ನಮಗೆ ಪಾಠ ಕಲಿಸಿದ ನಮ್ಮ ‘ಮಿತ್ರ ಮತ್ತು ಶತ್ರು’ಗಳನ್ನು ನಾವು ನೆನೆಯಬೇಕು. ಏಕೆಂದರೆ ನಮಗೆ ಪಾಠವೆನ್ನುವುದು ಅನೇಕ ರೀತಿಗಳಲ್ಲಿ ಲಭ್ಯವಾಗುತ್ತದೆ.
ಚೆನ್ನಾಗಿ ಬುದ್ಧಿ ಕಲಿಸಿದ ಅವನು ಅಥವಾ ಅವಳು ಎಂದು ನಾವು ಎಷ್ಟೋ ಸಲ ಬೇರೆಯವರಿಗೆ ಮೂರನೆಯವರು ಏನಾದರೂ ತೊಂದರೆ ಮಾಡಿದರೆ ಅಂದುಕೊಳ್ಳುತ್ತೇವೆ. ಆದರೆ ನಮಗೇ ಆ ಪಾಠವು ಕಲಿಸಲ್ಪಟ್ಟಾಗ ಅದನ್ನು ಜೋರಾಗಿ ಹೇಳಿಕೊಳ್ಳಲು  ನಮ್ಮ ಅಹಂ ಅಡ್ಡ ಬಂದರೂ ಮನದೊಳಗಣ ಮನದಲ್ಲಿ ‘ಸರಿಯಾದ ಪಾಠ ಕಲಿತೆ ನಾನು ಅವರಿಂದ’ ಎಂದುಕೊಳ್ಳದೇ ಇರಲಾಗದು.
ಒನ್ಸ್ ಬಿಟ್ಟನ್ ಟ್ವೈಸ್ ಶೈ ಎನ್ನುವ ಮಾತು ಇಂಗ್ಲೀಷ್‍ನಲ್ಲಿದೆ. ಒಮ್ಮೆ ಕಚ್ಚಿಸಿಕೊಂಡಾಗ ಮತ್ತೊಮ್ಮೆ ಎಚ್ಚರಿಕೆಯಿಂದ ಇದ್ದೇ ಇರುತ್ತೇವೆ.
ನನ್ನ ಜೀವನದಲ್ಲಿ ನಾನು ಕಲಿತ ಅನೇಕ ಒಳ್ಳೆಯ ಮತ್ತು ನಾಟ್ ಸೋ ಒಳ್ಳೆಯ ತಂತ್ರಗಳನ್ನು ಕಲಿಸಿದಾತ ಒಬ್ಬರೇ. ಅವರೀಗ ಇಲ್ಲ. ಆದರೆ ನನಗಂತೂ ಬಹಳವೇ ಕಲಿಸಿಕೊಟ್ಟಿದ್ದಾರೆ.
ನಾನು ಅಭಿಯಂತರ ಪದವೀಧರ ತರಬೇತಿ ಮುಗಿಸಿದಾಗ ನನಗೆ ಸೇಲ್ಸ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಸಿಕ್ಕಿತು. ಅಂದರೆ ಅದು ನನ್ನ ಎರಡನೆಯ ಕೆಲಸ. ಮೊದಲ ಕೆಲಸದಲ್ಲಿ ಒಂದಿಷ್ಟಿಷ್ಟು ಮಾತು ಕಲಿತಿದ್ದೆ. ಆದರೆ ಈ ಲೆವೆಲ್‍ನಲ್ಲಿ ಕಲಿತಿರಲಿಲ್ಲ.
ದಿನವೂ ಭಾರತದ ಮೂಲೆಮೂಲೆಯಲ್ಲಿರುವ ಗ್ರಾಹಕರೊಂದಿಗೆ ಟೆಲಿಫೋನ್ ಸಂಭಾಷಣೆ ನಡೆಸುವ ಕೆಲಸ. ಅವರು ನಮ್ಮ ಆಫೀಸಿಗೆ ಬಂದರೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಕೆಲಸ.
ಲುಕಿಂಗ್ ಇಂಟರೆಸ್ಟೆಡ್ ಈಸ್ ಟೈರಿಂಗ್ ಟು ದಿ ಐಬ್ರೋಸ್ ಎನ್ನುವ ಮಾತು ರೀಡರ್ಸ್ ಡೈಜೆಸ್ಟ್‍ನಲ್ಲಿ ಬಹಳ ಹಿಂದೆ ಓದಿದ್ದೆ. ಇಂದಿಗೂ ಅದು ಪ್ರಸ್ತುತ. ಯಾರೊಂದಿಗಾದರೂ ಸಂಭಾಷಣೆ ನಡೆಸುವಾಗ ಅವರ ಕಣ್ಣುಗಳೊಂದಿಗೆ ಕಣ್ಣು ಕೂಡಿಸುವುದು ಮುಖ್ಯ ಎನ್ನುತ್ತದೆ ಮ್ಯಾನೇಜ್‍ಮೆಂಟ್ ಟೆಕ್ನಿಕ್ ಒಂದು. ಅಂದರೆ ಆ ಸಮಯದಲ್ಲಿ ನಾವು ಅವರ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಬಹಳವೇ ಆಸಕ್ತಿ ಹೊಂದಿದ್ದೇವೆ ಎಂದು ತೋರಿಸಿಕೊಳ್ಳಬೇಕು. ಅದು ನಮ್ಮ ಹುಬ್ಬುಗಳಿಗೆ ನೋವು ನೀಡುವುದಿಲ್ಲವೇ!
ನನ್ನ ಜೀವನದಲ್ಲಿ ವಿಶೇಷವಾಗಿ ನನ್ನ ವೃತ್ತಿ ಜೀವನದ ಮೊದಲ ಕೆಲವು ವರ್ಷಗಳಲ್ಲಿ ಅನೇಕ ಬದಲಾವಣೆಗಳಾದವು. ಕೆಲವನ್ನು ನೆನೆದರೆ ನಾನು ಅದೃಷ್ಟಶಾಲಿ ಎನಿಸದಿರದು!


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102