ಯತಿ ಸ್ವಂತೀ -45


14-02-2018
ನಿನ್ನೆ ಶಿವರಾತ್ರಿ. ನನ್ನ ಇಪ್ಪತ್ತರ ವಯಸ್ಸಿನ ಸಂಗತಿಗಳು ನೆನಪಿಗೆ ಬರ್ತಿವೆ.
ನಾವು ಹದಿಮೂರು ಜನ ಗೆಳೆಯರು. ಯಾವಾಗ ಸಮಯ ಸಿಕ್ಕರೂ ಒಟ್ಟಿಗೇ ಓಡಾಟ. ಆಗ ನಾವೆಲ್ಲರೂ ಕಾಲೇಜಿನಲ್ಲಿ ಓದುತ್ತಿದ್ದ ಕಾಲ.
ಸಿನಿಮಾ ನೋಡುವುದು ನಮ್ಮ ಗೆಳೆತನದ ಒಂದು ಭಾಗ. ಶಿವರಾತ್ರಿಯಂದು ಖಚಿತವಾಗಿ ಒಂದು ಸಿನಿಮಾ ಇರುತ್ತಿತ್ತು. ನನಗೆ ನೆನಪಿರುವ ಮಟ್ಟಿಗೆ ಮೈಸೂರಿನ ಶಾಂತಲಾ ಟಾಕೀಸಿನಲ್ಲಿ ಶಿವರಾತ್ರಿಗೆ ಅಣ್ಣಾವ್ರ ’ತ್ರಿಮೂರ್ತಿ’ ನೋಡಿದ್ದೆವು. ಹುಚ್ಚು ರಷ್ಷು. ಆದರೂ ನುಗ್ಗಿ ನಿಂತು ಟಿಕೆಟ್ ಪಡೆದೆವು.
ಲೇ ಲೇ ಅಪ್ಪನ ಮಗಳೇ... ಏಕೋ ನಾ ಮನ ಸೋತೆನೋ... ಏನು ಮಾಡಲೀ ನಾನು ಏನು ಹೇಳಲಿ... ಹೀಗೆ ಹಾಡುಗಳನ್ನು ಕೇಳಿ ಕಿರಿಚಾಡುತ್ತಾ ಸಿನಿಮಾ ನೋಡಿದ ನೆನಪು. ಶಿವರಾತ್ರಿಯ ದಿನ ಲವ್ ಮತ್ತು ರಿವೆಂಜ್ ಸ್ಟೋರಿ. ಈಗೆಲ್ಲ ಗಣೇಶ ಪೆಂಡಾಲ್‌ನಲ್ಲಿ ಹಾಕುವರಲ್ಲ... ನನ್ನ ಕನಸು ಬ್ಲ್ಯಾಕ್ ಆಂಡ್ ವ್ಹೈಟು... ನಾನು ಪಡವಾರಳ್ಳಿ ಪಾಂಚಾಲಿ... ಅರ್ಧ ಲೀಟರ್ ಪೆಟ್ರೋಲ್ ಬೈಕಿನಲಿ... ಹಾಗೆ.
ಸಿನಿಮಾ ಮುಗಿದ ನಂತರ ಅರಮನೆ ಕಡೆಯಿಂದ ಒಂಟಿಕೊಪ್ಪಲ್‌ವರೆಗೆ ವಾಕಿಂಗ್. ರಾತ್ರಿ ಮೂರು ಗಂಟೇಲಿ ರಸ್ತೆ ಮಧ್ಯೆ ಮಲಗೋದು ಶ್ರೀಮನ್ನಾರಾಯಣನ ಪೋಜ್‌ನಲ್ಲಿ!
ಮನೆಗೆ ಬಂದು ಮಲಗ್ತಿರಲಿಲ್ಲ. ಇಸ್ಪೀಟ್ ಪ್ಯಾಕ್ ಹಿಡಿದು ’ಡಾಂಕಿ’ ಆಡೋದು. ಅಂತಾಕ್ಷರಿ ಹಾಡೋದು... ಹೀಗೆ ಬೆಳಗಾಗಿಸಿ ನಂತರ ಕಾಲೇಜು ಇತ್ಯಾದಿ.
ಆ ದಿನ ಸಂಜೆಯ ವೇಳೆಗೆ ಫುಲ್ ತೂಕಡಿಕೆ.
ಹದಿಮೂರು ಫೆಬ್ರವರಿ ನನ್ನ ಮಾರ್ಗದರ್ಶಿ ವಿಠ್ಠಲ್ ಪ್ರಭು ಹುಟ್ಟು ಹಬ್ಬ. ನನಗೆ ಬಹಳ ಆಪ್ತರಾಗಿದ್ದರು. ಬಹಳ ವರ್ಷಗಳ ನಂತರ ಅವರ ಫ್ಯಾಕ್ಟರಿಗೆ ಅಚ್ಚರಿಯ ಭೇಟಿ ನೀಡಿದಾಗ ತುಂಬಾ ಖುಷಿಯಾಗಿದ್ದರು.
ಕೆಲವು ವರ್ಷಗಳ ನಂತರ ಒಂದು ದಿನ ಅವರ ಫೋನಿನಿಂದ ಅವರ ಮಗಳು ಮಾತಾಡಿ ’ಅಪ್ಪ ಇನ್ನಿಲ್ಲ’ ಎಂದಾಗ ’ಈ ಜೀವನ ನಶ್ವರ’ ಎನ್ನಿಸಿಬಿಟ್ಟಿತು.
ಅವರೊಂದಿಗೆ ನಾಲ್ಕು ದಿನ ಪುಣೆಗೆ ಒಮ್ಮೆ ಹೋಗಿದ್ದೆ. ಇಬ್ಬರೂ ಕೆಲವು ಕಂಪೆನಿಗಳಲ್ಲಿ ಲೆಕ್ಚರ್ ಕೊಟ್ಟೆವು. ನಾನು ಸೇಲ್ಸ್ ಪಿಚ್. ಅವರು ತಾಂತ್ರಿಕ ವಿಷಯ.
ಅತ್ಯಂತ ಅವಿಸ್ಮರಣೀಯ ದಿನಗಳವು.
ನಾನು ಅಲ್ಲಿ ಇದ್ದಾಗಲೇ ನನ್ನ ಬಾಸ್ ಅಲ್ಲಿ ಬಂದರು. ನಾನು ಪ್ರಭು ಅವರೊಂದಿಗೆ ಲೆಕ್ಚರ್ ಕೊಟ್ಟೆನೆಂದು ತಿಳಿಯಿತು.
ಬೆಂಗಳೂರಿಗೆ ಮರಳಿದ ಮೇಲೆ ನನ್ನ ಟ್ರಾವೆಲ್ ಬಿಲ್ ಬಾಸ್ ಟೇಬಲ್ ಮೇಲಿಟ್ಟೆ. ನೀನು ಇನ್ನೂ ಅನೇಕ ಗ್ರಾಹಕರನ್ನು ಭೇಟಿ ಆಗಬೇಕಿತ್ತು. ಆ ಕೆಲಸ ನೀನು ಮಾಡಿಲ್ಲ. ನಾನು ನಿನ್ನ ಬಿಲ್ ಸೈನ್ ಮಾಡಲ್ಲ. ಯಾರ ಹತ್ತಿರ ಬೇಕೋ ಸೈನ್ ಹಾಕಿಸಿಕೋ ಎಂದು ಬಿಲ್‌ಗಳನ್ನು ಬಿಸಾಡಿದರು.
ನಾನೂ ಆಗೆಲ್ಲ ಶೀಘ್ರಕೋಪಿ. ಟಕ್ಕನೆ ನನ್ನ ಬಿಲ್ ಜೋಡಿಸಿಕೊಂಡು ಬಂದು ನನ್ನ ಟೇಬಲ್ ಮೇಲಿದ್ದ ಎಲ್ಲ ಪೇಪರುಗಳನ್ನು ಮೇಲೆತ್ತಿ ಅವುಗಳ ಅಡಿಯಲ್ಲಿ ಈ ಬಿಲ್ ಇಟ್ಟು ಮರೆತುಬಿಟ್ಟೆ.
ಇದರ ಮುಂದಿನ ಕಥೆ ಮತ್ತೊಮ್ಮೆ ಎಂದಾದರೂ.
ಇಂದು ವಿಠ್ಠಲ್ ಪ್ರಭು ಇಲ್ಲ. ನನ್ನ ಬಾಸ್ ಕೂಡ ಇಲ್ಲ.
ಯಾಕೋ ಇಬ್ಬರ ನೆನಪೂ ಒಟ್ಟಿಗೇ ಬಂದಿತು.


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102