ಯತಿ ಸ್ವಂತೀ -39
08-02-2018
1979ರಲ್ಲಿ ನಾವು ಆಲ್ ಇಂಡಿಯಾ ಟೂರ್ ಹೋದೆವು. ಹತ್ತನೇ ಸೆಮಿಸ್ಟರ್‍ಗೆ ಹೋಗಬೇಕಾಗಿದ್ದ ನಾವು ಎಂಟನೇ ಸೆಮಿಸ್ಟರ್‍ಗೆ ಹೋಗಬೇಕಾಗಿದ್ದ ನಾಲ್ಕನೇ ಬಿ.ಇ. ವಿದ್ಯಾರ್ಥಿಗಳ ಜೊತೆ ಹೊರಟೆವು. ಬೆಂಗಳೂರಿನಿಂದ ಹೊರಟ ಟೂರ್ ಅದು. ನಾನಾಗ ನನ್ನ ದೊಡ್ಡಮ್ಮನ ಮನೆಯಲ್ಲಿ ಮೈಸೂರಿನಲ್ಲಿ ಓದುತ್ತಿದ್ದೆ. ಹೊರಡುವ ಮೊದಲು ಬೆಂಗಳೂರಿನಲ್ಲಿದ್ದ ನನ್ನ ಸೋದರತ್ತೆಯ ಮನೆಗೆ ಬಂದು ಅಲ್ಲಿಂದ ಹೊರಟೆ. ರಾತ್ರಿ ಮದ್ರಾಸಿಗೆ ರೈಲು. (ಈಗ ಚೆನ್ನೈ) ಏನೋ ಉದ್ವೇಗ, ಏನೋ ರೋಮಾಂಚನ.
ನಾವು ಹಿಂದೆ ಜೋಗಕ್ಕೆ ಟೂರ್ ಹೋಗಿದ್ದುಂಟು. ನಮ್ಮ ನಾಲ್ಕನೇ ಬಿ.ಇ. ಯಲ್ಲಿದ್ದಾಗ ಬಸ್‍ನಲ್ಲಿ ಹೋಗಿದ್ದೆವು. ಮಹಾತ್ಮಾಗಾಂಧಿ ಹೈಡ್ರೋ ಎಲೆಕ್ಟ್ರಿಕ್ ಸ್ಟೇಷನ್ ಜೊತೆಗೆ ಶರಾವತಿಯ ಆನೆಬೈಲ್ ಹೈಡ್ರೋ ಎಲೆಕ್ಟ್ರಿಕ್ ಸ್ಟೇಷನ್‍ಗೆ ಕೂಡ ಹೋಗಿದ್ದೆವು. ಇದು ಚಿಕ್ಕ ಒಂದು ರಾತ್ರಿ ಹೊರಗೆ ಸ್ಟೇ ಮಾಡಿದ್ದ ಟೂರ್.
ಈ ಸಲ ಇಪ್ಪತ್ತನಾಲ್ಕು ದಿನಗಳದ್ದು. ಕೆಲವರೊಂದಿಗೆ ಕಂಬೈಂಡ್ ಸ್ಟಡೀ ಮಾಡಿ, ಅವರ ಮನೆಯಲ್ಲಿ ಊಟ ಮಾಡಿ ರೂಢಿ ಇತ್ತು. ಆದರೆ ಇಡೀ ನಲವತ್ತು ಜನರ ಜೊತೆ ಅಷ್ಟು ದೂರ!
ಚೆನ್ನೈಯಲ್ಲಿ ಬೆಳಗ್ಗೆ ಬಿಸಿಲು ... ಉಹೂಂ ರಣ ಬಿಸಿಲು... ಅಲ್ಲಿ ನಾವು ದೂರದರ್ಶನಕ್ಕೆ ಹೋದಾಗ ಅದೆಷ್ಟು ಖುಷಿ ಅಂತೀರಿ. ಏಕೆಂದರೆ ಅದು ಏ.ಸಿ. ಕಟ್ಟಡ. ಮದ್ರಾಸಿನ ಓಪನ್ ಮೋರಿಗಳ ದುರ್ವಾಸನೆ ಕೂಡ ಹೊಡೆಯುತ್ತಿರಲಿಲ್ಲ.
ಹೊರಗೆ ಬಂದಾಗ ಅಬ್ಬಾ ಮೈಯೆಲ್ಲಾ ಅಂಟಂಟು.
ರಾತ್ರಿ ಸಿಗಪ್ಪು ರೋಜಾಕ್ಕಳ್ ಸಿನಿಮಾಗೆ ಹೋಗಿದ್ದೆವು. ಕಮಲಹಾಸನ್, ಶ್ರೀದೇವಿ. ಭಾರತಿರಾಜ ಅವರ ನಿರ್ದೇಶನದಲ್ಲಿ ಕಮಲ್, ಶ್ರೀದೇವಿ (ಪ್ಲಸ್ ರಜನಿಕಾಂತ್) ನಟಿಸಿದ್ದ ಪದಿನಾರು ವಯದಿನಿಲೆ ಚಿತ್ರದ ನಂತರ ಇದು ಅವರ ಸಸ್ಪೆನ್ಸ್ ಚಿತ್ರ. ಕಮಲ್ ಹಾಡಿದ ಹಾಡೊಂದು ಬಹಳ ಇಷ್ಟವಾಗಿತ್ತು. ನಿನೈವೋ ಒರು ಪರವೈ...
ತಮಿಳು ಒಂದಕ್ಷರವೂ ಅರ್ಥವಾಗದಿದ್ದ ನನ್ನ ಗೆಳೆಯನಿಗೆ ಹೇಗಿದೆಯೋ ಸಿನಿಮಾ ಎಂದೆ. ಅರ್ಥ ಆಗಲಿಲ್ಲ ಎಂದ. ಹೋಗಲಿ ಶ್ರೀದೇವಿ ಸಕತ್ತಲ್ವಾ ಎಂದೆ.
ಏ ಅವಳ ಮೂಗೇ ಚೆನ್ನಾಗಿಲ್ಲ ಎಂದುಬಿಟ್ಟ! ಹಾಗಾದರೆ ನಾವ್ಯಾರೂ ಅವಳ ಮೂಗನ್ನೇ ನೋಡಿರಲಿಲ್ಲವೇ?
ಯಾಕೋ ಅವನ ಮಾತನ್ನು ನಂಬಲಾಗಲಿಲ್ಲ. ಆದರೆ ಬಹಳ ವರ್ಷಗಳ ನಂತರ ಶ್ರೀದೇವಿ ಹಿಂದೀ ಸಿನಿಮಾರಂಗಕ್ಕೆ ಲಗ್ಗೆ ಹಾಕಿದಾಗ ಶ್ರೀದೇವಿ ಹ್ಯಾಸ್ ಗಾಟ್ ಡನ್ ನೋಸ್ ಜಾಬ್ (ಶ್ರೀದೇವಿ ತನ್ನ ಮೂಗನ್ನು ಪ್ಲಾಸ್ಟಿಕ್ ಸರ್ಜರಿಗೆ ಒಳಪಡಿಸಿದ್ದಾಳೆ) ಎಂದು ಓದಿದಾಗ ಅರೆರೆ, ನಮ್ಮ ಬಾಲು ಇದನ್ನ 1979ರಲ್ಲೇ ಹೇಳಿದನಲ್ಲ..! ಅಂದರೆ ಶ್ರೀದೇವಿ ಅದನ್ನು ರಿಯಲೈಜ್ ಮಾಡಿಕೊಳ್ಳಲು ಇಷ್ಟು ವರ್ಷಗಳಾದವೇ? ಅಥವಾ ಅದನ್ನು ಮಾಡಿಸಿಕೊಳ್ಳಲು ಇಷ್ಟು ವರ್ಷ ಕಾದಿದ್ದಳೇ? ಅಥವಾ ಇದೊಂದು ಹಠಾತ್ ನಿರ್ಧಾರವೇ? ಎಂದು ನಮಗೆ ನಿರ್ಧರಿಸಲಾಗಲಿಲ್ಲ.
ಹಿಂದೀ ಸಿನಿಮಾ ಒಂದನ್ನು ನೋಡಿದಾಗ ಅವಳ ದೊಣ್ಣೆ ಮೆಣಸಿನಕಾಯಿಯಂತಿದ್ದ ಮೂಗು ಬದಲಾಗಿದೆ ಎಂದು ನಮಗೆ ಅರಿವಾಗಿತ್ತು!
Comments
Post a Comment