ಯತಿ ಸ್ವಂತೀ -37
06-02-2018
ಮಹಾಜನ ಹೈಸ್ಕೂಲಿನಲ್ಲಿ ಓದುವಾಗ ಬಹಳವೇ ಚೆನ್ನಾದ ಘಟನೆಗಳಿವೆ.
ಒಂದೆರಡು ಹೇಳಬಲ್ ಘಟನೆಗಳನ್ನು ಹೇಳಲು ಆಸೆ
ಒಮ್ಮೆ ಹೀಗಾಯಿತು. ನಮ್ಮ ಮೇಡಂ ಒಬ್ಬರು ಚರಿತ್ರೆ ಪಾಠ ಮಾಡುತ್ತಿದ್ದರು. ಅವರು ಆಗ ಹೇಳಿದ್ದ ಫ್ರೆಂಚರ ಕ್ರಾಂತಿ ಮತ್ತು ರಿನೈಸಾನ್ಸ್ ನನಗೆ ಇಂದಿಗೂ ನೆನಪಿದೆ.
ಅವರೊಮ್ಮೆ ಪಾಠ ಮಾಡುತ್ತಿದ್ದಾಗ ನಮ್ಮ ಸಹಪಾಠಿಯೊಬ್ಬ ಅರುಣ್ (ಹೆಸರು ಬದಲಾಯಿಸಲಾಗಿದೆ) ಮೇಡಂ ಅವರಿಗೆ ‘ಮಿಸ್, ನಿಮ್ಮನ್ನ ನೆನ್ನೆ ಗಣೇಶ ಟಾಕೀಸ್‍ನಲ್ಲಿ ಕ್ಯೂನಲ್ಲಿ ನೋಡಿದೆ ಮಿಸ್’ ಎಂದ.
ಅವರು ಸೌಮ್ಯವಾಗಿ ನಗುತ್ತಾ, ‘ಹೌದಪ್ಪಾ, ನಾನು ಮೆಕೆನ್ನಾಸ್ ಗೋಲ್ಡ್ ಸಿನಿಮಾಗೆ ಹೋಗಿದ್ದೆ’ ಎಂದರು.
ಅರುಣ ಬಹಳ ತುಂಟ. ಸುಮ್ಮನಿರಬೇಕೋ, ಬೇಡವೋ... ‘ಅಂಡರ್‍ವಾಟರ್ ಸೀನ್ ಹೆಂಗಿತ್ತು ಮಿಸ್?’ ಅಂದುಬಿಡೋದೇ!
ಅವರೋ ಮದುವೆಯಾಗದಿದ್ದಾಕಿ. ಇವನೋ ಹದಿನಾಲ್ಕು ವರ್ಷದ ಚೋಟುದ್ದದ ಹುಡುಗ.
ಮೆಕೆನ್ನಾಸ್ ಗೋಲ್ಡ್‍ನಲ್ಲಿ ಕ್ಲಿಂಟ್ ಈಸ್ಟ್‍ವುಡ್ ನಾಯಕಿಯೊಂದಿಗೆ ನೀರಿನಲ್ಲಿ ಆಡುವ ಸರಸದ ದೃಶ್ಯ ಇತ್ತೆಂಬುದು ಅಸ್ಪಷ್ಟ ನೆನಪು. ನಾನೂ ಆ ಸಮಯದಲ್ಲಿಯೇ ಅದೇ ಗಣೇಶ ಟಾಕೀಸಿನಲ್ಲಿಯೇ ನೋಡಿದ್ದೆ.
ಮುಖ ಕೆಂಪು ಕೆಂಪಾಯಿತು ಮೇಡಂನದು. ನಾವೆಲ್ಲಾ ಬೇರೆ ಕಿಸಕ್ಕೆಂದು ನಕ್ಕಿದ್ದೆವು.
‘ಥೂ ಹೋಗಪ್ಪಾ, ನೀನು ತುಂಬ ಕೆಟ್ಟ ಹುಡುಗ. ಇರು ನಿಮ್ಮಕ್ಕ ವೀಣಾಗೆ (ಹೆಸರು ಬದಲಾಯಿಸಲಾಗಿದೆ) ಹೇಳ್ತೀನಿ’ ಎಂದರು. ವೀಣಾ ಅವನ ಅಕ್ಕ, ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು.
ಯಾಕೋ ಆ ಘಟನೆ ಇಂದು ನೆನಪಾಗಿ ನಗು ತಂದಿತು.
ಕಿಶೋರಾವಸ್ಥೆಯೆನ್ನುವುದು ಬಹಳ ಕಷ್ಟದ ವಯಸ್ಸು. ನಮ್ಮ ಭಾರತೀಯ ಸಂಸ್ಕøತಿಯಲ್ಲಂತೂ ಬಾಯ್‍ಫ್ರೆಂಡ್ ಗರ್ಲ್‍ಫ್ರೆಂಡ್ ಪದ್ಧತಿ ಕನಿಷ್ಠಪಕ್ಷ ಆಗಿರಲಿಲ್ಲ.
ಏನು ಅಭಿವ್ಯಕ್ತಿಗೊಳಿಸಬೇಕಿದ್ದರೂ ಅದಕ್ಕೆ ಏಕಾಂತವೇ ಬೇಕಿತ್ತು!!
ಕೆಲವು ಅಮೆರಿಕನ್ ಧಾರಾವಾಹಿಗಳಲ್ಲಿ ಬಾಯ್‍ಫ್ರೆಂಡ್ ಗರ್ಲ್‍ಫ್ರೆಂಡ್ ಬಗ್ಗೆ ನೋಡಿದ್ದೇನೆ. 9ನೇ ತರಗತಿಯಿಂದ 12ರವರೆಗೆ ಹೈಸ್ಕೂಲ್. ಅಷ್ಟರಲ್ಲಿ ಅನೇಕ ಹುಡುಗ ಹುಡುಗಿಯರು ಪ್ರೇಮದಲ್ಲಿ ಬಿದ್ದು ಮದುವೆ ಕೂಡ ಆಗುತ್ತಾರೆ. ಕೆಲವರು ದಂಪತಿಯಾಗಿ ಉಳಿದರೆ ಮತ್ತೆ ಹಲವರು ವಿಚ್ಛೇದನ ಮಾಡಿಕೊಳ್ಳುತ್ತಾರೆ. ಮಗು ಆಗಿಬಿಟ್ಟರೆ ಅದರ ಕಸ್ಟಡಿಗೆ ನ್ಯಾಯಾಲಕ್ಕೆ ಮೊರೆ ಹೋಗುತ್ತಾರೆ. ಆ ಮಗು ಸಿಂಗಲ್ ಪೇರೆಂಟ್ ಬಳಿ ಬೆಳೆಯುತ್ತಾ, ಅದರ ಜೈವಿಕ ತಂದೆ/ತಾಯಿಯನ್ನು ವಾರಕ್ಕೊಮ್ಮೆ ನೋಡುತ್ತಾ ಇರುತ್ತದೆ. ಇಲ್ಲವೇ ತಂದೆ/ತಾಯಿಯ ಎರಡನೆಯ ಜೀವನಸಂಗಾತಿಯೊಂದಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ.
ಇಲ್ಲವೇ ಮನೆ ಬಿಟ್ಟು ಹೋಗುತ್ತದೆ.
ಅಂದ ಹಾಗೆ ಹದಿನೇಳರ ವಯಸ್ಸಿನ ವೇಳೆಗೆ 12ನೇ ತರಗತಿ ಮುಗಿಸಿದ ಪ್ರತಿ ಪಾಶ್ಚಾತ್ಯ ದೇಶದ ಮಗುವೂ (ಅಲ್ಲಿಯೇ ನೆಲೆಗೊಂಡ ಭಾರತೀಯರ ಮಕ್ಕಳು ಕೂಡ) ಹೊರಗೆ ಓದಲು ಅಥವಾ ಕೆಲಸ ಮಾಡಲು ಹೊರಟುಹೋಗುತ್ತದೆ.
ಒಂದು ವೇಳೆ ಅಮ್ಮನ ಜೊತೆಗಿದ್ದರೆ, ‘ಅಯ್ಯೋ, ಇದೇನೋ ಅಮ್ಮನ ಜೊತೆಗಿದ್ದೀಯ?’ ಎಂದು ಗೇಲಿ ಮಾಡುತ್ತಾರೆ (ಅಂತೆ). ಅಮ್ಮ ಏನಿದ್ದರೂ ವರ್ಷಕ್ಕೊಮ್ಮೆ ಮೇ ತಿಂಗಳ ಭಾನುವಾರದಂದು ಭೇಟಿಯಾಗಿ ಹಲೋ ಮಮ್ಮಿ ಎನ್ನಬೇಕು.
‘ಮಗೂ ನಾನು ನಿನ್ನ ಅಪ್ಪ’ ಎಂದು ಅಪರಿಚಿತ ಬಂದು ಪರಿಚಯಿಸಿಕೊಂಡರೆ, ಅದು ಇನ್‍ಫರ್ಮೇಷನ್. ಅಮ್ಮ, ‘ಹೌದು ಮಗೂ, ಅವರೇ ನಿನ್ನ ಅಪ್ಪ’ ಎಂದರೆ ಅದು ಕನ್‍ಫರ್ಮೇಷನ್!
ಅವರ ಬದುಕೇ ಬೇರೆ ರೀತಿ...
Comments
Post a Comment