ಯತಿ ಸ್ವಂತೀ -33


02-02-2018
ಮದುವೆಯ ಬಗ್ಗೆ ಜನರಿಗೆ ಕಲ್ಪನೆ ಇರುತ್ತಿತ್ತು. ಕೆಲವು ಪುಸ್ತಕಗಳಲ್ಲಿ ಇದ್ದ ಪತಿ ಪತ್ನಿಯರ ಸರಸ, ವಿರಸ, ಸಮರಸದ ಬಗ್ಗೆ ಓದಿ ಊಹಿಸಿಕೊಳ್ಳುತ್ತಿದ್ದರು. ತಮ್ಮ ಸುತ್ತಮುತ್ತಲಿನ ದಂಪತಿ, ಗುರುತಿನ ದಂಪತಿ, ಯಾರೋ ಹೇಳಿದ ಪತಿ ಪತ್ನಿ ಜಗಳ, ವಿಚ್ಛೇದನ ಇವುಗಳನ್ನು ಕೇಳಿ ತಮ್ಮ ಮದುವೆ ಹೇಗಿರಬೇಕೆಂದು ಕನಸು ಕಾಣುತ್ತಿದ್ದುದೂ ಉಂಟು.
ಯುಕ್ತ ವಯಸ್ಸು ಬಂದಿದೆ, ಹುಡುಗ ಸಂಪಾದಿಸುತ್ತಿದ್ದಾನೆ ಎಂಬ ವಿಷಯಗಳ ಆಧಾರದ ಮೇಲೆ ತಂದೆ ತಾಯಿಯರು ಆಗೆಲ್ಲಾ ಹುಡುಗಿಯನ್ನು ಹುಡುಕಲಾರಂಭಿಸುತ್ತಿದ್ದರು. ಮದುವೆಯಂತಹ ಸಂಭ್ರಮಗಳಲ್ಲಿ ನಡೆಯುತ್ತಿದ್ದ ಸಂಭಾಷಣೆಗಳಲ್ಲಿ ಸ್ವಾಭಾವಿಕವಾಗಿ ಯಾರ ಮಗ, ಮಗಳು ಮದುವೆಗೆ ‘ಬಂದಿದ್ದಾರೆ’ ಎಂಬ ವಿಷಯ ನುಸುಳುತ್ತಿತ್ತು!
ಈಗ ಮ್ಯಾಟ್ರಿಮೊನಿ ವೆಬ್‍ಸೈಟ್‍ಗಳಿವೆ. ಗಂಡು ಹೆಣ್ಣು ಪರಸ್ಪರ ಶಾಲೆ, ಕಾಲೇಜು, ಕೆಲಸ ಎಲ್ಲಿಯೋ ಒಂದು ಕಡೆ ಒಟ್ಟಿಗಿದ್ದವರು, ಇಷ್ಟಪಟ್ಟು ಬಾಳಸಂಗಾತಿಗಳಾಗುತ್ತಾರೆ. ಅದೇ ವೇಗದಲ್ಲಿ ಒಬ್ಬರನ್ನೊಬ್ಬರು ದೂರ ಮಾಡಿಕೊಳ್ಳುತ್ತಾರೆ. ಮತ್ತೆ ‘ಬೇಟೆ’ ಶುರು (ಪದದ ಬಳಕೆಗೆ ಕ್ಷಮೆಯಿರಲಿ). ಆದರೆ ಮೊದಲ ಮದುವೆ ವಿಫಲಗೊಂಡ ನಂತರ ಇಬ್ಬರಿಗೂ ಬೇಕಾಗಿರುವುದೊಂದು ‘ಮಿಕ’. ಹಾಗಲ್ಲದಿದ್ದಲ್ಲಿ ಎರಡನೆ ಮದುವೆ ವಿಜಯಿಯಾಗುವುದೆಂಬ ಖಾತ್ರಿ ಏನು?
ಮದುವೆ ಮನೆ. ಎಲ್ಲರೂ ಹರಟುತ್ತಿರುತ್ತಾರೆ. ಬಹಳ ವರ್ಷಗಳ ನಂತರ ಕೆಲವರ ಭೇಟಿ ಆಗುತ್ತದೆ. ಏನು ಸಮಾಚಾರ? ನಿಮ್ಮ ಮಗಳು... ನನ್ನ ಮಿಡ್ಲ್ ಸ್ಕೂಲ್ ವಿದ್ಯಾರ್ಥಿನಿ ಈಗ ಮದುವೆಗೆ ಬಂದಿದ್ದಾಳೆ! ಹುಡುಗನನ್ನು ನೋಡಿದ್ದೀರಾ? ಇಲ್ಲಮ್ಮಾ, ನಿಮಗೇ ಯಾರಾದರೂ ಗೊತ್ತಿದ್ದರೆ ಹೇಳಿ.
ಓ... ಏ ಬಾರೋ ಇಲ್ಲಿ... ಏನಮ್ಮಾ? ಈ ಹುಡುಗೀನ ಮದುವೆ ಆಗ್ತೀಯಾ?
ಆ ಹುಡುಗನಿಗೆ ‘ನಾಚಿಕೆ’, ಏಕೆಂದರೆ ಇದು ಅನಿರೀಕ್ಷಿತ ಪ್ರಶ್ನೆ. ಸುತ್ತಲಿನ ಗೆಳೆಯರಿರಲಿ, ಆ ಹುಡುಗಿಯೂ ನಕ್ಕುಬಿಟ್ಟಾಗ ಗಲಿಬಿಲಿ. ಸಂಜೆ ಆ ವುಡ್‍ಬಿಯ ಹೆಸರಲ್ಲಿ ಪಾರ್ಟಿ. ಅವಳು ವುಡ್‍ಬಿ ಅಲ್ಲವೋ, ಶೀ ಕುಡ್ ಬಿ ಮೈ  ವುಡ್‍ಬೀ ಎಂದರೆ ಕುಡ್‍ಬೀಗೇ ಪಾರ್ಟಿ.
ಮರುವಾರವೇ ಮನೆಗೆ ಒಂದು ಪತ್ರ ಹುಡುಗಿಯ ತಂದೆಯಿಂದ. ನಮ್ಮ ಹುಡುಗಿಯನ್ನು ನಿಮ್ಮ ಮನೆಗೆ ‘ಕೊಡಬೇಕೆಂದು’ ಆಸೆ. ಯಾವಾಗ ಭೇಟಿ ಆಗೋಣ?
ಆ ತಿಂಗಳ ಕೊನೆಗೆ ಹುಡುಗಿಯೂ, ಅವಳ ಮನೆಯವರೂ ಹುಡುಗನ ಮನೆಗೆ ಬರುತ್ತಾರೆ.
ಹುಡುಗಿಗೆ ನಾನು ಇಷ್ಟವಾದರೆ ನನಗೆ ಅವಳನ್ನು ಮದುವೆಯಾಗಲು ಅಭ್ಯಂತರವಿಲ್ಲ ಎಂದ ಹುಡುಗ.
ಮರುವಾರ ಮದುವೆಯ ತಾರೀಕು ನಿಶ್ಚಯವಾಯಿತು. ಇನ್ನು ಐದು ದಿನಗಳಲ್ಲಿ ಎಂಗೇಜ್‍ಮೆಂಟ್ ಆಯಿತು. ಮುಂದಿನ ಐವತ್ತು ದಿನಗಳಿಗೆ ಮದುವೆ ಆಯಿತು.
ಅಂದ ಹಾಗೆ ನಮ್ಮ ಮದುವೆಗೆ ಇಂದು 31 ವರ್ಷಗಳು ತುಂಬಿದವು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102