ಯತಿ ಸ್ವಂತೀ -51
20-02-2018
ಒಮ್ಮೆ ನಿಮಗೆ ಹೇಳಿದ್ದೆ ನನ್ನ ಬಾಸ್ ನನ್ನ ಪುಣೆ ಟ್ರಿಪ್ ಬಗ್ಗೆ ಸಿಟ್ಟು ಮಾಡಿಕೊಂಡು ಬಿಲ್ ಎಸೆದಿದ್ದರು, ನಾನೂ ಸಿಟ್ಟು ಮಾಡಿಕೊಂಡು ಅದನ್ನು ನನ್ನ ಪೇಪರು ರಾಶಿಗಳ ಅಡಿಗೆ ಸೇರಿಸಿದ್ದೆ ಅಂತ.
ಅದರ ಮುಂದಿನ ಕಥೆ!
ಆಗೆಲ್ಲಾ ಇಂಟರ್‍ನೆಟ್ ನಮ್ಮಲ್ಲಿ ಇರಲಿಲ್ಲ. ನಾನು ಹೇಳ್ತಿರೋದು 1989ರ ಕಥೆ. ಟೈಪಿಂಗ್‍ಗೆ ನಿಧಾನವಾಗಿ ಹಾಲ್ಡಾ ಟೈಪ್‍ರೈಟರ್‍ನಿಂದ ಎಲೆಕ್ಟ್ರಿಕ್ ಟೈಪ್‍ರೈಟರ್... ಅದರಿಂದ ಕಂಪ್ಯೂಟರ್ ...
ನಮ್ಮ ಡಿಪಾರ್ಟ್‍ಮೆಂಟ್ ಆಫೀಸ್‍ಬಾಯ್ ನಾಗರಾಜ ಇಡೀ ಕಾರ್ಖಾನೆ ಸುತ್ತುತ್ತಿದ್ದ. ನಾವು ಪರ್ಛೇಜ್ ಎಂದು ಮಾರ್ಕ್ ಮಾಡಿದ್ದ ಕಾಗದಗಳನ್ನು ಅಲ್ಲಿಗೆ, ಫೈನಾನ್ಸ್ ಎಂದು ಮಾರ್ಕ್ ಮಾಡಿದ್ದರೆ ದೂರದ (ಅದೇ ಕಾಂಪೌಂಡ್ ಒಳಗಿದ್ದ) ಫೈನಾನ್ಸ್ ಡಿಪಾರ್ಟ್‍ಮೆಂಟಿಗೆ ಕೊಟ್ಟು ಬರುತ್ತಿದ್ದ. ಹಾಗೆಯೇ ಅಲ್ಲಿಂದ ನಮಗೆ ಸೇರಬೇಕಾದ ಪೇಪರುಗಳನ್ನು ತರುತ್ತಿದ್ದ. ಈಗಿನ ಹುಡುಗರಿಗೆ ಇದು ತಿಳಿದಿರುವುದೇ ಇಲ್ಲ. ಏಕೆಂದರೆ ಎಲ್ಲವೂ ವಿದ್ಯುನ್ಯಾನ ಅಂಚೆ ತಾನೇ!
ಸರಿ, ಒಂದು ದಿನ ಫೈನಾನ್ಸ್ ಡಿಪಾರ್ಟ್‍ಮೆಂಟ್‍ನಿಂದ ಬಂದ ನಾಗರಾಜ, ‘ಯತೀ, ನಿನ್ನ ಬಿಲ್ ನೀನು ಸಬ್‍ಮಿಟ್ ಮಾಡಿಲ್ವಂತೆ. ರಾವ್ ಕೇಳ್ತಿದ್ದಾರೆ’ ಎಂದ.
ನಾನು ನಿರ್ಲಕ್ಷಿಸಿದೆ. ಏಕೆಂದರೆ ಅದಕ್ಕೆ ಸೈನ್ ಮಾಡಬೇಕಾಗಿದ್ದುದು ನನ್ನ ಬಾಸ್. ಅವರು ಮಾಡಲ್ಲ ಎಂದರೆ ಬೇರಾರೂ ಮಾಡುವ ಹಾಗಿಲ್ಲ.
ಮೂರು ಸಲ ಹೇಳಿದ. ನಾನು ಹೋಗಿದ್ದು ಯುಗಾದಿಯ ದಿನ ಏಪ್ರಿಲ್‍ನಲ್ಲಿ. ಈಗ ಜೂನ್ ಹತ್ತಿರ ಬರುತ್ತಿತ್ತು. ಆಗ ಅರ್ಧ ವರ್ಷದ್ದೋ, ಪೂರ್ಣ ವರ್ಷದ್ದೋ ಅಕೌಂಟ್ ಕ್ಲೋಸಿಂಗ್ ಇತ್ತು. ವಿಶೇಷವಾಗಿ ನಾವು ಹಣ ಮರಳಿಸಬೇಕಾಗಿದ್ದಲ್ಲಿ (ಅಡ್ವಾನ್ಸ್ ತೆಗೆದುಕೊಂಡಿರುತ್ತೇವಲ್ಲ!) ಬಿಲ್ ಬೇಗನೆ ಕೇಳುತ್ತಿದ್ದರು ಫೈನಾನ್ಸ್‍ನಲ್ಲಿ.
ನಾಲ್ಕನೇ ಸಲ ನಾಗರಾಜ ಹೇಳಿದಾಗ ನನ್ನ ತಲೆಯಲ್ಲಿ ಪ್ರಳಯಾಂತಕ ಐಡಿಯಾ ಹೊಳೆದಿತ್ತು. ‘ನಾಗರಾಜ’ ಎಂದು ಅವನನ್ನು ಕರೆದು, ‘ರಾವ್‍ಗೆ ಹೇಳು, ಬಾಸ್‍ಗೆ ಕಂಪ್ಲೇನ್ ಮಾಡು ಅಂತ. ಯಾಕೋ ಯತಿರಾಜ್ ಹೇಳಿದ ಮಾತು ಕೇಳ್ತಿಲ್ಲ ಅಂತ’ ಅಂದೆ.
ಅವನು ಹಾಗೇ ಮಾಡಿದ. ನಮ್ಮ ಬಾಸ್ ಕಿಟಕಿಯಿಂದ ನನ್ನನ್ನು ನೋಡುತ್ತಾ ಕರೆಗಂಟೆ ಒತ್ತಿ ನಾನು ಅವರ ಕಡೆ ನೋಡಿದಾಗ ಬಾ ಎಂದರು.
ಹೋದೆ. ‘ಆ ಬಿಲ್ ತಗೊಂಬಾ. ಈಗಲೇ ಹೋಗಿ ಆ ಇನ್ನೊಬ್ಬರು ಎವಿಪಿ ಹತ್ತಿರ ಸೈನ್ ಮಾಡಿಸು’ ಎಂದರು. ನನಗೆ ಒಳಗೇ ನಗು. ತಗೊಂಡು ಹೋದೆ. ಬಾಸ್ ಸಹಿ ಮಾಡಿ ಹೂಂ ಹೋಗು ಈಗಲೇ ಎಂದರು.
ಇಲ್ಲಿ ಒಂದು ವಿಷಯ ಹೇಳಬೇಕು. ನಮ್ಮ ಎವಿಪಿಗೆ ವಿಷಯ ತಿಳಿದರೆ ಸುಮ್ಮನಿರರು. ಈವತ್ತು ಅವರು ಊರಲ್ಲಿಲ್ಲ. ಮತ್ತೊಬ್ಬ ಎವಿಪಿಗೂ ನಮಗೂ ಸಂಬಂಧ ಇಲ್ಲ. ಆದರೆ ಬಿಲ್ ಅಪ್ರೂವಲ್‍ಗೆ ಎವಿಪಿ ಸಹಿ ಬೇಕೇಬೇಕು.
ತಗೊಂಡು ಹೋದೆ. ಅವರು ಹಲೋ ಎಂದರು. ಬಿಲ್ ಮುಂದಿಟ್ಟೆ. ಸಹಿ ಮಾಡಿದರು. ಅಬ್ಬಾ ಬದುಕಿತು ಬಡಜೀವ ಎನ್ನುವ ಹೊತ್ತಿಗೆ ‘ಅರೆ, ಇದೇನು ಎಪ್ರಿಲ್ ಬಿಲ್ ಈಗ ತರುತ್ತಿದ್ದೀ’ ಎಂದುಬಿಟ್ಟರು. ನನಗೆ ಧರ್ಮಸಂಕಟ. ಇವರು ಸಹಿ ಮಾಡದಿದ್ದರೆ ಮತ್ತೆ ನಮ್ಮ ಎವಿಪಿ ಬಳಿ ಬೈಗುಳ ಗ್ಯಾರಂಟಿ ಎಂದುಕೊಂಡೆ.
ಆದರೆ ಸೇಲ್ಸ್‍ನಲ್ಲಿ ಇದ್ದಾಗ ಮಾತುಗಳು ಟಕ್ಕೆಂದು ಹೊರಬರುತ್ತಿದ್ದವು. ಗಿಫ್ಟ್ ಆಫ್ ಗ್ಯಾಬ್ ಮತ್ತು ಗ್ಲಿಬ್ ಟಂಗ್ ಎರಡೂ ಚೆನ್ನಾಗಿ ಸಿದ್ಧಿಸಿದ್ದವು! ಸಾರ್, ರೂಲ್ ಚೇಂಜ್ ಆಗಿದ್ದಕ್ಕೆ ವಾಪಸ್ಸು ಮಾಡಿದ್ದಾರೆ ಎಂದೆ. ರೂಲ್ ಚೇಂಜ್ ಆಗಿದ್ದು ನಿಜ. ಆದರೆ ನನ್ನ ಬಿಲ್ ಅದಕ್ಕಿಂತ ಹಳೆಯದು. ಆದರೆ ಸಮಯಕ್ಕೊಂದ್ಸುಳ್ಳು! ಆ ಸಲ ಬದುಕಿದೆ.
ಮುಂದಿನ ಸಲ ನನ್ನ ಗತಿ ಸ್ವಲ್ಪ ಡೋಲಾಯಮಾನ ಆಗಿತ್ತು. ಅದರ ಬಗ್ಗೆ ಇನ್ನೊಮ್ಮೆ!!
Comments
Post a Comment