ಯತಿ ಸ್ವಂತೀ -56
25-02-2018
ಫೇಸ್‍ಬುಕ್ ಬಗ್ಗೆ ನಮಗೆ ಎರಡೂ ರೀತಿಯ ಕಥೆಗಳು ಸಿಗುತ್ತವೆ. ಫೇಸ್‍ಬುಕ್ ಮಾತ್ರವೇಕೆ? ಯಾವುದೇ ವಿಷಯದಲ್ಲಿಯೂ ಒಳ್ಳೆಯದು ಕೆಟ್ಟದು ಎರಡೂ ಇರುತ್ತವೆ. ದುರ್ಯೋಧನನ ಬಗ್ಗೆ ನಮಗೆ ಎಂತಹ ದುರಭಿಪ್ರಾಯವಿದ್ದರೂ ಕರ್ಣನ ದೃಷ್ಟಿಯಲ್ಲಿ ಅವನೊಬ್ಬ ಹೀರೋ. ಹೌದಲ್ಲವೇ?
ಇತ್ತೀಚೆಗೆ ತಮಿಳು ಸಿನಿಮಾ ಒಂದನ್ನು ನೋಡಿದೆ. ಗಂಡ ಪೊಲೀಸ್ ಇಲಾಖೆಯಲ್ಲಿ ಎಲ್ಲರ ಟೆಲಿಫೋನ್ ಕರೆಗಳನ್ನು (ಕದ್ದು) ಕೇಳಿ, ಆ ಕರೆ ಮಾಡುವವರಲ್ಲಿ ದುಷ್ಟರಿದ್ದರೆ ಅವರ ಬಗ್ಗೆ ಅವನ ಬಾಸ್‍ಗೆ ವರದಿ ನೀಡುವ ಕೆಲಸ. ಅವನ ಬಾಸ್‍ಗೆ ಕೆಲವು ಅಸಿಸ್ಟೆಂಟುಗಳನ್ನು ಕಿತ್ತು ಹಾಕಬೇಕೆನ್ನುವ ದುಷ್ಟಬುದ್ಧಿ. ನಮ್ಮ ಹೀರೋ ಬಾಸ್‍ಗೆ ಅವರ ಬಗೆಗಿನ ರಹಸ್ಯ ಕರೆಗಳ ವರದಿಯನ್ನು ಮುಟ್ಟಿಸುತ್ತಾನೆ.
ಹೀರೋನ ಹೆಂಡತಿ ಸುಂದರಿ. ಬಹಳವೇ ಸೋಷಿಯಲ್ಲು. ಒಮ್ಮೆ ಹೀರೋ ಹೀಗೇ ಕದ್ದು ಸಂಭಾಷಣೆಗಳನ್ನು ಆಲಿಸುತ್ತಿರುವಾಗ ಅವನ ಹೆಂಡತಿಯ ಸ್ವರ ಕೇಳಿಸುತ್ತದೆ. ಅವಳು ಯಾರೋ ಅಪರಿಚಿತ ಪುರುಷನೊಂದಿಗೆ ಮಾತಾಡುತ್ತಿರುತ್ತಾಳೆ.
ಅವಳ ಮೇಲೆ ಫುಲ್ ಅನುಮಾನ ಬಂದು ಮನೆಯಲ್ಲೆಲ್ಲೋ ಕ್ಯಾಮೆರಾ, ಯಾಂತ್ರಿಕ ಕಿವಿಗಳನ್ನು ಅಳವಡಿಸುತ್ತಾನೆ. ಅವಳಿಗೆ ಒಬ್ಬ ಫೇಸ್‍ಬುಕ್ ಫ್ರೆಂಡ್ ಪ್ರಸನ್ನ ಅಂತ. ಅವನು ಇವಳನ್ನು ಹೊಗಳಿ ಅಟ್ಟಕ್ಕೇರಿಸುತ್ತಾನೆ. ಅವಳಿಗೆ ಹೊಸ ಹೊಸ ಅಡುಗೆಗಳನ್ನು ಚ್ಯಾಟ್‍ನಲ್ಲಿ ಹೇಳಿಕೊಡುತ್ತಾನೆ. ಅವನಿಂದ ಅವಳ ಅಭಿರುಚಿ ಬದಲಾಗುತ್ತದೆ. ಇದ್ದ ಸಣ್ಣ ಕ್ವಾರ್ಟರ್ಸ್ ಮನೆಯನ್ನೇ ಅಲಂಕರಿಸುತ್ತಾಳೆ. ಒಮ್ಮೆ ಅವನ ದೊಡ್ಡ ಮನೆಯನ್ನು ಅವಳಿಗೆ ದರ್ಶನ ಮಾಡಿಸುತ್ತಾನೆ ವೀಡಿಯೋ ಚ್ಯಾಟ್‍ನಲ್ಲಿ. ಇವಳೂ ತನ್ನ ಮನೆಯನ್ನು ತೋರಿಸುತ್ತಾಳೆ.
ಅವನು ಅವಳ ಮನೆಯ ಬಾತ್‍ರೂಮಿಗೆ ಯಾವುದೋ ಎಂದೂ ಖಾಲಿಯಾಗದಂತಹ ಸೆಂಟ್ ಬಾಟಲನ್ನು ಕೊರಿಯರ್ ಮಾಡುತ್ತಾನೆ. ಅದನ್ನವಳು ಬಾತ್‍ರೂಮಿನಲ್ಲಿಡುತ್ತಾಳೆ. ಅದರಲ್ಲಿ ಆ ದುಷ್ಟ ಪ್ರಸನ್ನ ಅಳವಡಿಸಿರುವ ಕ್ಯಾಮೆರಾದಿಂದ ಅವರ ಮನೆಯಲ್ಲಿನ ಬಾತ್‍ರೂಮ್ ನಗ್ನತೆಯನ್ನು ಪ್ರಸನ್ನ ಎಂಜಾಯ್ ಮಾಡುತ್ತಾನೆ.
ಒಮ್ಮೆ ಅವನಿಗೆ ಅವಳ ದೇಹಸಂಗದ ಬಯಕೆಯಾಗುತ್ತದೆ. ಅವಳನ್ನು ಬ್ಲ್ಯಾಕ್‍ಮೆಯಿಲ್ ಮಾಡುತ್ತಾನೆ. ಇತ್ತ ಗಂಡನಿಗೂ ಪ್ರಸನ್ನನ ಅಸ್ತಿತ್ವದ ಬಗ್ಗೆ ತಿಳಿದುಬಂದು ಅವನನ್ನು ಬಡಿಯುತ್ತಾನೆ. ಆದರೂ ಪ್ರಸನ್ನ ಜಗ್ಗದೇ ತನ್ನ ದುಷ್ಟ ಕಾರ್ಯಾಚರಣೆ ಮುಂದುವರಿಸುತ್ತಾನೆ. ಅವನನ್ನು ಮತ್ತೊಮ್ಮೆ ಅವನ ಮನೆಯಲ್ಲೇ ಸಾಯಬಡಿಯಲು ಹೋದಾಗ ಅವನು ಹೀರೋಗೆ ಅವನ ಹೆಂಡತಿಯ ಸ್ನಾನದ ವೀಡಿಯೋ ತೋರಿಸಿ, ತನಗೆ ಏನಾದರೂ ತೊಂದರೆಯಾದರೆ ಅವನು ರೆಕಾರ್ಡ್ ಮಾಡಿರುವ ಅಷ್ಟೂ ವೀಡಿಯೋಗಳು ಹೊರಬೀಳುತ್ತವೆ ಎಂದು ಹೆದರಿಸುತ್ತಾನೆ ಪ್ರಸನ್ನ.
ಜೊತೆಗೆ ನಾಯಕ ಒಂದು ರಹಸ್ಯ ಮನೆಯಲ್ಲಿ ಕದ್ದಾಲಿಕೆಗೆ ವ್ಯವಸ್ಥೆ ಮಾಡಿರುವ ಕಂಪ್ಯೂಟರ್‍ನ್ನು ಹ್ಯಾಕ್ ಮಾಡಿ ಕೆಲವು ರಹಸ್ಯ ಸಂಭಾಷಣೆಗಳನ್ನು ಬಹಿರಂಗ ಪಡಿಸಿ ಕೆಲವು ರಾಜೀನಾಮೆಗಳಾಗುತ್ತವೆ.
ಇದು ತುದಿ ಮುಟ್ಟುವುದು ಪತಿ ಪತ್ನಿ ವಿದೇಶಕ್ಕೆ ಹೋದಾಗ. ಪ್ರಸನ್ನನೂ ಅವರನ್ನು ಹಿಂಬಾಲಿಸುತ್ತಾನೆ. ಅವನಿಗೆ ಅವಳೆಂದರೆ ಗೀಳು ಹಿಡಿದಿರುತ್ತದೆ. ಅವಳು ಒಂಟಿಯಾಗಿರುವಾಗ ಇದ್ದಕ್ಕಿದ್ದಂತೆ ಅವಳ ಮೇಲೆರಗುತ್ತಾನೆ...
ನಿಜಕ್ಕೂ ಬಹಳವೇ ಆಸಕ್ತಿಕರ ಸಿನಿಮಾ. ಫೇಸ್‍ಬುಕ್‍ನಲ್ಲಿ ಕೆಲವರು ಅವರ ಪತಿ/ಪತ್ನಿಗೂ ತಿಳಿಯದ ರಹಸ್ಯಗಳನ್ನು ಹಂಚಿಕೊಂಡರೆ ಆಗುವ ಅನಾಹುತಗಳನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ.
ತಂತ್ರಜ್ಞಾನದ ದುರುಪಯೋಗದ ಬಗ್ಗೆ ಕೆಲವು ನಿಮಿಷಗಳ ಕಾಲ ಬೆಚ್ಚುವಂತೆ ಮಾಡುತ್ತದೆ ಈ ಚಿತ್ರ.
Comments
Post a Comment