ಯತಿ ಸ್ವಂತೀ -43
12-02-2018
ಮೈಸೂರು ರೈಲ್ವೇ ಕ್ವಾರ್ಟರ್ಸಿನ ಒಂದೇ ಮನೆಯಲ್ಲಿ ನಾವು ಹೆಚ್ಚು ಕಡಿಮೆ 17 ವರ್ಷಗಳ ಕಾಲ ಇದ್ದೆವು. ಅದಕ್ಕೇ ಆ ಮನೆ ಎಂದರೆ ಒಂದು ರೀತಿ ಅಂಟು.
ನಮ್ಮ ಬಾಲ್ಯ, ಕಿಶೋರಾವಸ್ಥೆ, ಯೌವನದ ಮೊದಲ ವರ್ಷಗಳು ಅಲ್ಲಿಯೇ ಕಳೆದವು.
ಮನೆಯಲ್ಲಿ ಅಮ್ಮ ಅಪ್ಪ ನಮಗೆ ಯಾವುದೇ ರೀತಿಯ ರಿಸ್ಟ್ರಿಕ್ಷನ್ ಮಾಡಿರಲಿಲ್ಲ. ಚೆನ್ನಾಗಿ ಓದಿ. ಯಾರಿಗೂ ಕೆಟ್ಟದ್ದು ಮಾಡಬೇಡಿ. ಬಹುಶಃ ಇವೆರಡೇ ಅನ್ನಿಸುತ್ತದೆ ನಮಗೆ ಅವರು ನೀಡಿದ ಸಲಹೆಗಳು.
ನನಗೆ ಚೆನ್ನಾಗಿ ನೆನಪಿದೆ. ಹತ್ತನೇ ತರಗತಿ ಓದುವಾಗ ನಮ್ಮ ಅಮ್ಮ, ‘ರಾಜು, ನನಗೆ ತಿಳಿದ ಮಟ್ಟಿಗೆ ನೀನು ಹೆಚ್ಚು ಓದಲಾರೆ. ಸದಾ ಆಟ ಆಡಿಕೊಂಡೇ ಕಾಲ ಕಳೀತೀ. ಅದಕ್ಕೇ ಟೈಪಿಂಗ್ ಸೇರಿಕೋ. ಹತ್ತನೇ ಕ್ಲಾಸ್ ಆದ ಮೇಲೆ ಎಲ್ಲಾದರೂ ಟೈಪಿಸ್ಟ್ ಕೆಲಸ ಸಿಗಬಹುದು’ ಎಂದಿದ್ದರು.
ಅವರ ಮಾತಿಗೆ ಖುಷಿಯಿಂದ ಟೈಪಿಂಗ್ ಇನ್ಸ್‍ಟಿಟ್ಯೂಟ್ ಸೇರಿಕೊಂಡೆ. ಈಗೆಲ್ಲಾ ಇಲ್ಲ ಅನ್ನಿಸುತ್ತೆ. ಮನೆಯಿಂದ ಹೊರಗೆ ಬಂದು ರೈಲ್ವೇ ಸ್ಟೇಷನ್ ದಾಟಿ, ಗಾಯತ್ರಿ ಭವನ್ ಇರೋ ಧನ್ವಂತರಿ ರಸ್ತೆಯಲ್ಲಿ ನಡೆದು, ಚಾಮುಂಡೇಶ್ವರಿ ಟಾಕೀಸ್ ಮುಂದೆ ಹೋಗಿ, ಎಡಕ್ಕೆ ತಿರುಗಿದರೆ ಅಲ್ಲಿತ್ತು ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಕಾಮರ್ಸ್. ನನ್ನ ಹೈಸ್ಕೂಲ್ ಸಹಪಾಠಿ ದಿವಾಕರನ ತಂದೆಯವರದು ಎಂದು ನೆನಪು.
ಅಲ್ಲಿ ಇಂಗ್ಲೀಷ್ ಟೈಪಿಂಗ್ ಕಲಿತು ಜ್ಯೂನಿಯರ್ ಪಾಸ್ ಮಾಡಿದೆ ಸೆಕೆಂಡ್ ಕ್ಲಾಸ್‍ನಲ್ಲಿ. ಆಮೇಲೆ ಸೀನಿಯರ್ ಟೈಪಿಂಗ್ ಸೇರಿಕೊಂಡೆ. ಯಾಕೋ ಅದು ಬೋರ್ ಆಯಿತು. ಕನ್ನಡ ಟೈಪಿಂಗ್ ಕಲಿತೆ. ಅ ಸ ಡ ... ಗ ಹ ಜ ಕ ಲ.. ಹೀಗೆ ಮಜಾ ಬಂತು ಕನ್ನಡ ಕಲೀಲಿಕ್ಕೆ.
ಆಮೇಲೆ ಪಿಯುಸಿ ಓದಲು ಬೆಂಗಳೂರಿಗೆ ಬಂದುಬಿಟ್ಟೆ. ಎರಡು ವರ್ಷಗಳ ಪಿಯುಸಿ 67% ಮತ್ತು 78%ನಲ್ಲಿ ಉತ್ತೀರ್ಣನಾದೆ. ಎರಡನೇ ವರ್ಷ ಅತ್ಯಂತ ಹೆಚ್ಚಿನ ಟೋಟಲ್ ನನ್ನದು. ಆಗ ಇದ್ದ ಪ್ರಿನ್ಸಿಪಾಲ್ ಶ್ರೀ ಆರ್ ಎ ಫಣಿಶಾಯಿ (ಶ್ರೀ ರಾಳ್ಳಪಳ್ಳಿ ಅನಂತಕೃಷ್ಣ ಶರ್ಮ ಅವರ ಪುತ್ರ ಇವರು ಎಂದು ನಂತರ ತಿಳಿದುಬಂದಿತು) ಅವರಿಂದ ಸಹಿ ಹಾಕಲ್ಪಟ್ಟ ಕೆಲವು ಪುಸ್ತಕಗಳನ್ನು ನನಗೆ ಬಹುಮಾನವಾಗಿ ನೀಡಿದರು.
ಇಂಜಿನಿಯರಿಂಗ್ ಓದಿದೆ. ಸೇಲ್ಸ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡೆ. ನಂತರ ಡಿಸೈನ್ ಡಿಪಾರ್ಟ್‍ಮೆಂಟ್‍ಗೆ ವರ್ಗವಾದಾಗ ಇದ್ದಕ್ಕಿದ್ದಂತೆ ನನಗೆ ಸಮಯ ಸಿಗಲಾರಂಭಿಸಿ, ಬರೆದೆ. ಬರೆಯುತ್ತಲೇ ಹೋದೆ.
ನನ್ನ ಮಗ ಆಗ ಬಲು ಚಿಕ್ಕವನು. ನಾನು ಬರೆಯಲು ಕುಳಿತರೆ ಪೇಪರ್, ಪೆನ್ನು ಎಲ್ಲವನ್ನೂ ಎಳೆದು ಬಿಸಾಡುತ್ತಿದ್ದ! ಆದರೂ ಬರೆಯುತ್ತಿದ್ದೆ.
ಒಮ್ಮೆ ಮಯೂರ ಆಫೀಸಿನಲ್ಲಿ ಕನ್ನಡ ಅಕ್ಷರಗಳನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಿ ರೋಮಾಂಚಗೊಂಡೆ. ನಾನೂ ಪಿ.ಸಿ. ತಗೊಂಡೆ. ಲಿಸ್ಪ್ ಎನ್ನೋ ಎಂಟು ಭಾಷೆಯ ಸಾಫ್ಟ್‍ವೇರ್ ಕೊಂಡುಕೊಂಡು ಬರೆಯಲಾರಂಭಿಸಿದೆ.
ನನ್ನ ಟೈಪಿಂಗ್ ಕೌಶಲ ಈಗ ಸಹಾಯಕ್ಕೆ ಬಂದಿತ್ತು. ಬಹಳ ಬೇಗ ನಾನು ಇಂಗ್ಲೀಷ್ ಆಗಲೀ, ಕನ್ನಡ ಆಗಲೀ ಟೈಪ್ ಮಾಡಬಲ್ಲೆ. ನುಡಿ ಸಾಫ್ಟ್‍ವೇರ್ ನಾನು ಕಲಿತ ಕನ್ನಡ ಟೈಪ್‍ರೈಟರ್ ಕೀಗಳ ರೀತಿಯಲ್ಲಿಯೇ ಇದೆ. ಅಮ್ಮನ ಆಗಿನ ಸಲಹೆ, ಈಗ ನನಗೆ ಬಹಳ ಸಹಾಯ ಮಾಡುತ್ತಿದೆ!
Comments
Post a Comment