ಯತಿ ಸ್ವಂತೀ -41


10-02-2018
ಜೀವನದಲ್ಲಿ ಆಸೆ ಇರಬಾರದು ಅನ್ನೋ ಸಿದ್ಧಾಂತ ಒಳ್ಳೆಯದು. ಹಾಗೆಯೇ ಇರಲು ಪ್ರಯತ್ನ ಕೂಡ ಮಾಡ್ತಿದ್ದರೂ ಕೆಲವೊಂದು ಚಿಕ್ಕ ಆಸೆಗಳು ಇದ್ದೇ ಇರುತ್ತವೆ.
ಚಿಕ್ಕ ಆಸೆ ಎಂದರೆ ನನ್ನ ಪತ್ನಿ ನಗುತ್ತಾಳೆ. ಏಕೆಂದರೆ ನನ್ನ ಆಸೆ ಸಾಯೋಕ್ಮುಂಚೆ ಒಮ್ಮೆ ನೋಡು ವೆನಿಸ್ ತೇಲು ಪಟ್ಟಣವನ್ನು ಅನ್ನೋದು!
ಇದೆಂತಾ ಚಿಕ್ಕ ಆಸೆ? ಪಾಸ್‍ಪೋರ್ಟ್, ವೀಸಾ, ಏರೋಪ್ಲೇನ್ ಟಿಕೆಟ್ ಮತ್ತು ಅಲ್ಲಿ ತಂಗಲು ಹಣ ಬೇಡವಾ? ಎನ್ನುತ್ತಾಳೆ.
ಸತ್ಯವಾದ ಮಾತು! ಆದರೆ ...
ಬಹಳ ಹಿಂದೆ ಅಂದರೆ 1972ರ ಸಮಯದಲ್ಲಿ ಜೇಮ್ಸ್ ಹ್ಯಾಡ್ಲಿ ಛೇಸ್‍ನ ‘ಮಿಷನ್ ಟು ವೆನಿಸ್’ ಕಾದಂಬರಿ ಓದಿದ್ದೆ. 1940ರ ವೆನಿಸ್‍ನ ವಿವಿಡ್ ವಿವರಣೆ ಇದರಲ್ಲಿದೆ. ಅದೊಂದು ಥ್ರಿಲ್ಲರ್. ಪುಸ್ತಕದ ಕವರ್ ಮೇಲೆ ಡೆತ್ ಲಕ್ರ್ಸ್ ಇನ್ ದ ಕೆನಾಲ್ಸ್ ಆಫ್ ವೆನಿಸ್... ಅಥವಾ ಈ ಅರ್ಥ ಬರುವ ವಾಕ್ಯವಿದೆ. ಒಬ್ಬ ಅತಿ ಶ್ರೀಮಂತ ಯುವಕ ಡಾನ್‍ಗೆ ಒಂದು ಪೋಸ್ಟ್ ಕಾರ್ಡ್ ತಲುಪಿಸುತ್ತಾಳೆ ಜಾನ್ ಎನ್ನುವವನ ಹೆಂಡತಿ. ಅದರಲ್ಲಿ ಅವನು ಎಸ್ ಓ ಎಸ್ ಎಂದರ್ಥ ಬರುವ ವಾಕ್ಯ ಬರೆದಿರುತ್ತಾನೆ. ಅವನನ್ನು ಹುಡುಕಲು ಡಾನ್ ಆರಂಭಿಸಿದಾಗ ಅವನಿಗೆ ಗೋಡೆಗಳು ಅಡ್ಡವಾಗುತ್ತವೆ. ಹಟಮಾರಿ ಡಾನ್ ಜಾನ್‍ನನ್ನು ಹುಡುಕಲು ಮುಂದಾದಾಗ ಅನೇಕ ಸಾಹಸಗಳನ್ನು ಮಾಡುತ್ತಾನೆ. ಇಡೀ ವೆನಿಸ್ ನಗರ ಕಾದಂಬರಿಯ ಪಾತ್ರವಾಗುತ್ತದೆ.
ಆಗ ಬಿದ್ದೆ ನಾನು ವೆನಿಸ್ ನಗರದೊಂದಿಗೆ ಪ್ರೇಮದಲ್ಲಿ. ಆಮೇಲೆ ದೋ ಲಬ್ಝೋಂಕಿ ಹೈ ದಿಲ್ ಕಿ ಕಹಾನಿ... ಹಾಡು ಕೇಳಿದಾಗ ದ ಗ್ರೇಟ್ ಗ್ಯಾಂಬ್ಲರ್ ಸಿನಿಮಾ ನೋಡಿದ ನೆನಪು ಮೂಡುತ್ತದೆ. ಅಮಿತಾಭ್, ಝೀನತ್, ನೀತು ಇರುವ ಈ ಚಿತ್ರವನ್ನು ವೆನಿಸ್‍ನಲ್ಲಿ ಚಿತ್ರಿಸಿದ್ದಾರೆ. ಜೇಮ್ಸ್ ಬಾಂಡ್‍ನ ಮೂನ್‍ರೇಕರ್ ಕೂಡ ಕೆಲಭಾಗ ವೆನಿಸ್ ಶೂಟಿಂಗ್ ಇದೆ.
ಯಾವುದೋ ಡಬ್ಬಾ ಸಿನಿಮಾ ಎಲಾನ್ ಇರಬೇಕು ಅದರ ಹೆಸರು, ಅದನ್ನು ಕೂಡ ವೆನಿಸ್ ನೋಡುವುದಕ್ಕಾಗಿ ವೀಕ್ಷಿಸಿದ್ದೆ. ನನ್ನ ಪ್ರಿಯ ನಟಿ ಏಂಜೆಲಿನಾ ಜೋಲಿಯ ಒಂದು ಚಿತ್ರವೂ ವೆನಿಸ್‍ನಲ್ಲಿ ಚಿತ್ರಿತವಾಗಿದೆ.
ನಮ್ಮಲ್ಲಿಯೇ ಮಾವಿನಕುರ್ವೆಯಂತಹ ದ್ವೀಪ-ಹಳ್ಳಿಗೆ ಹೋಗಲು ದೋಣಿ ಬಳಸಬೇಕಂತೆ. ಅದರ ವಿವರ ಕೇಳಿದ್ದೆ. ಆ ಬಲದ ಮೇಲೆ ‘ಜಲಗಂಡ’ ಎನ್ನುವ ಸೈಕಲಾಜಿಕಲ್ ಥ್ರಿಲ್ಲರ್ ಬರೆದಿದ್ದೆ.
ವೆನಿಸ್ ಮಿಲಿಮೀಟರ್ ಮಿಲಿಮೀಟರಾಗಿ ನೀರಲ್ಲಿ ಇಳಿಯುತ್ತಿದೆ ಎಂದು ಓದಿ, ಅಯ್ಯೋ ನಾನು ಬರೋವರೆಗೂ ಪೂರ್ತಿ ಮುಳುಗಬೇಡ ಎಂದು ವೆನಿಸ್‍ಗೆ ಹೇಳುತ್ತಿರುತ್ತೇನೆ.
ಆಮ್‍ಸ್ಟರ್‍ಡ್ಯಾಮ್ ಕೂಡ ಹೀಗೇ ಇದೆಯಂತೆ. ನೀರಿನಲ್ಲಿನ ದೋಣಿಗಳೇ ವಾಹನಗಳಂತೆ.
ಗೊಂಡೋಲ ಎನ್ನುವ ವೆನಿಸ್‍ನ ದೋಣಿಯಲ್ಲಿ ಝೀನತ್ ಹಾಡುತ್ತಾಳೆ. ಮತ್ತೊಂದು ಸಿನಿಮಾದಲ್ಲಿ ನಾಯಕ ಕುಣಿಯುತ್ತಾನೆ ಗೊಂಡೋಲದಲ್ಲಿ. ಬಹುಶಃ ತಮಿಳು ಚಿತ್ರದಲ್ಲಿ ವಿಶಾಲ್ ಇರಬೇಕು. ಖುಷ್ಬೂ ಒಂದು ಕ್ಷಣ ಅಲ್ಲಿ ಕಾಣಿಸಿಕೊಳ್ಳುತ್ತಾಳೆ.
ನಾನು ಇಷ್ಟ ಪಡುವ ಮತ್ತೊಂದು ಜಾಗ ಹವಾಯಿ ದ್ವೀಪಗಳು. ಅದೇಕೋ ಅಲ್ಲಿನ ಹಸಿರನ್ನು ಕಂಡು ಅವಕ್ಕೆ ಮನಸೋತಿದ್ದೇನೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102