ಯತಿ ಸ್ವಂತೀ -50


19-2-2018
ಜ್ಯಾಕ್ ಮತ್ತು ಅವನ ಹೆಂಡತಿ ಟೆರಿ ಕುಸಿಯುತ್ತಿದ್ದ ಅವರ ಮದುವೆಯನ್ನು ಉಳಿಸಿಕೊಳ್ಳಲು ಒಂದು ಕೊನೆಯ ಪ್ರಯತ್ನ ಆರಂಭಿಸುತ್ತಾರೆ. ಅವರ ಏಕೈಕ ಸಂತಾನವಾದ ಕಿಮ್‍ಗೆ ಅವಳ ತಂದೆ, ತಾಯಿ ಎಂದರೆ ಅಷ್ಟಕ್ಕಷ್ಟೇ.
ಜ್ಯಾಕ್‍ಗೆ ಅವನ ಆಫೀಸ್ ಕೌಂಟರ್ ಟೆರರಿಸ್ಟ್ ಯೂನಿಟ್‍ನಿಂದ ತುರ್ತು ಕರೆ ಬರುತ್ತದೆ. ಆಗ ರಾತ್ರಿ ಹನ್ನೆರಡು ಗಂಟೆ. ಕಿಮ್ ತಾಯ್ತಂದೆಯರಿಗೆ ಹೇಳದೇ ಮನೆಯಿಂದ ಹೊರಗೆ ಓಡಿಬಿಡುತ್ತಾಳೆ.
ತಾಯಿ ಅವಳನ್ನು ಹುಡುಕಿಕೊಂಡು ಹೊರಡುತ್ತಾಳೆ. ಅವಳನ್ನೂ, ಅವಳ ಮಗಳು ಕಿಮ್‍ಳನ್ನೂ ಒಂದೇ ದುಷ್ಟಕೂಟದ ಜನರು ಅಪಹರಿಸುತ್ತಾರೆ.
ಜ್ಯಾಕ್ ಅವರನ್ನು ಬಿಡಿಸಿಕೊಳ್ಳಬೇಕೆಂದರೆ ಅಂದು ಲಾಸ್ ಏಂಜೆಲಿಸ್‍ಗೆ ಬಂದ ಅಮೆರಿಕಾದ ಮೊಟ್ಟ ಮೊದಲ ಕಪ್ಪು ಅಭ್ಯರ್ಥಿಯನ್ನು ಕೊಲ್ಲಬೇಕು. ಆ ಅಭ್ಯರ್ಥಿ ಅಮೆರಿಕದ ಅಧ್ಯಕ್ಷ ಪಟ್ಟಕ್ಕೆ ಸ್ಪರ್ಧಿಸಿರುತ್ತಾನೆ.
ಇಷ್ಟು ಸಾಕು ನಮ್ಮ ರಕ್ತದ ಅಡ್ರಿನಾಲಿನ್ ವೇಗವಾಗಿ ಓಡಲಾರಂಭಿಸಲು.
ಈ ಸೀರೀಸ್ ಹೆಸರು 24. ವಿಶೇಷವೆಂದರೆ ಪ್ರತಿಯೊಂದು ಸೀಸನ್ 24 ಎಪಿಸೋಡುಗಳನ್ನು ಹೊಂದಿರುತ್ತದೆ. ಪ್ರತಿ ಎಪಿಸೋಡು ಕೂಡ ಒಂದು ಗಂಟೆ ಕಾಲದ್ದು. ಪ್ರತಿ ಎಪಿಸೋಡ್ ಕೂಡ ಒಂದು ಗಂಟೆ ಕಾಲದಲ್ಲಿ ನಡೆಯುತ್ತದೆ. ಘಟನೆಗಳು ನಿಜವಾದ ಸಮಯದಲ್ಲಿ ನಡೆಯುತ್ತವೆ. ಅಂದರೆ ರಾತ್ರಿ ಒಂದು ಗಂಟೆಯ ಘಟನೆಗಳನ್ನು ನಿಜಕ್ಕೂ ರಾತ್ರಿ ಒಂದು ಗಂಟೆಗೆ ಚಿತ್ರಿಸಿದ್ದಾರೆ.
ದೇಶಪ್ರೇಮ ವರ್ಸಸ್ ದೇಶದ್ರೋಹ, ಗುಮ್ಮನಗುಸಗಿಗಳು, ಚಿಕ್ಕಪುಟ್ಟ ಪ್ರೇಮ ಪ್ರಕರಣಗಳು, ದ್ವೇಷ ಪರಸಂಗಗಳು, ರಹಸ್ಯ ಕಾರ್ಯಾಚರಣೆಗಳು... ಓಹ್...
ಇದುವರೆಗೆ 204 + 12 ಸಂಚಿಕೆಗಳು ಕಿರುಪರದೆಯ ಮೇಲೆ ಮೂಡಿವೆ.
8 ಸೀಸನ್‍ಗಳು 24 ಎಪಿಸೋಡುಗಳನ್ನು ಹೊಂದಿದ್ದು, 9ನೇ ಸೀಸನ್ 12 ಎಪಿಸೋಡುಗಳನ್ನು ಹೊಂದಿತ್ತು. ಅದಲ್ಲದೇ ಮುಖ್ಯ ಪಾತ್ರಧಾರಿ ಜ್ಯಾಕ್ ಇಲ್ಲದ ಮತ್ತೊಂದು 24 ಲೆಗೆಸಿ ಎನ್ನುವ ಧಾರಾವಾಹಿಯ 12 ಸಂಚಿಕೆಗಳು ಪ್ರಸಾರವಾಗಿದ್ದವು.
ಎಲ್ಲೋ ಒಂದು ಅಣು ಬಾಂಬ್, ಇಲ್ಲವೇ ಒಂದು ಸಾಂಕ್ರಾಮಿಕ ರೋಗದ ಸೀಸೆ ಇಲ್ಲವೇ ಪರದೇಶದ ಅಧ್ಯಕ್ಷನ ಕೊಲೆಯ ಸಂಚು... ಹೀಗೆ ಮುಖ್ಯ ಎಳೆ. ಅದರ ಸುತ್ತಲೂ ನಾನಾ ಪಾತ್ರಗಳು. ಮೊದಲಿನಿಂದ ನೋಡಿದರೆ ಕೆಲವು ಪಾತ್ರಗಳು ಮತ್ತೆ ಮತ್ತೆ ಬರುತ್ತವೆ ಎಂಬ ಅರಿವು ಮೂಡುತ್ತದೆ.
ಈ ಜ್ಯಾಕ್ ಎನ್ನುವವನು ಮಹಾನ್ ದೇಶಪ್ರೇಮಿ. ಈ ಸೀರೀಸ್‍ನಲ್ಲಿ ಅವನ ಮೇಲೆ ನಡೆದ ಮಾರಣಾಂತಿಕ ಹಲ್ಲೆಗಳೆಷ್ಟೋ. ಎಲ್ಲದರಿಂದಲೂ ಅವನು ಬಚಾವಾಗಿದ್ದಾನೆ. ಒಂದು ಪಾತ್ರ ಹೇಳುತ್ತದೆ .. ಈ ಮನುಷ್ಯನಿಗೆ ಬೆಕ್ಕಿಗಿಂತ ಹೆಚ್ಚು ಜೀವಗಳಿವೆ ಎಂದು. ಆಂಗ್ಲದಲ್ಲಿ ಗಾದೆಯಿದೆ ಬೆಕ್ಕಿಗೆ ಒಂಬತ್ತು ಪ್ರಾಣಗಳು ಎಂದು.
ದೇಶಕ್ಕಾಗಿ ಏನು ಬೇಕಾದರೂ ಎದುರಿಸುತ್ತಾನೆ. ಕೊನೆಗೆ ಅಮೆರಿಕದ ಅಧ್ಯಕ್ಷನೇ ದುಷ್ಟನಾದಾಗ ಅವನನ್ನೇ ಎದುರಿಸುವಂತಹ ಧೀರ. ಯಾರನ್ನಾದರೂ ಏನನ್ನಾದರೂ ಬೇಡಬಲ್ಲ. ಅವನ ಬಳಿ ಸಿಕ್ಕಿಕೊಂಡರೆ ವೈರಿಗಳನ್ನು ಅವರಿಂದ ವಿಷಯವನ್ನು ಕಕ್ಕಿಸಲು ಟಾರ್ಚರ್ ಮಾಡಬಲ್ಲ.
ಒಂದು ರೀತಿ ವಿಶಿಷ್ಟ ಪಾತ್ರವಾದ ಜ್ಯಾಕ್ ಬಾವರ್‍ನ ಪಾತ್ರವನ್ನು ಕೀಫರ್ ಸದರ್‍ಲ್ಯಾಂಡ್ ನಿರ್ವಹಿಸಿದ್ದಾನೆ. ಎಂಟನೇ ಸೀಸನ್ನಿನಲ್ಲಿ ಮುಖ್ಯ ಪಾತ್ರ ವಹಿಸಿದ ಅನಿಲ್ ಕಪೂರ್, ಹಿಂದಿಯಲ್ಲಿ ಈ ಧಾರಾವಾಹಿಯನ್ನು ಭಾರತೀಯ ಹಿನ್ನೆಲೆಗೆ ಅಳವಡಿಸಿಕೊಂಡು, ಜ್ಯಾಕ್‍ನ ಪಾತ್ರವನ್ನು ತಾನು ವಹಿಸಿದ್ದಾನೆ. ಎರಡು ಸೀಸನ್‍ಗಳು ಹೊರಬಂದಿವೆ.
ನಾನಂತೂ ಈ ಸೀರೀಸ್‍ನ್ನು ಈಗಾಗಲೇ ನಾಲ್ಕು ಸಲ ನೋಡಿದ್ದೇನೆ. (204 ಎಪಿಸೋಡುಗಳು!). ನನ್ನ ಮಗ ರೇಗಿಸುತ್ತಾನೆ. ಅದೇನು ನಿನಗೆ ಅದರ ಮೇಲೆ ಅಷ್ಟೊಂದು ಮೋಹ ಎಂದು. ಒಂದು ರೀತಿ ಥ್ರಿಲ್ ಇದೆ ಈ ಸೀರೀಸ್‍ನಲ್ಲಿ.
ಈಗ ಜ್ಯಾಕ್ ಪಾತ್ರ ವಹಿಸುತ್ತಿದ್ದ ಕೀಫರ್ ಮತ್ತೊಂದು ಧಾರಾವಾಹಿಯಲ್ಲಿ (ಡೆಸಿಗ್ನೇಟೆಡ್ ಸರ್ವೈವರ್) ತಾನೇ ಅಮೆರಿಕದ ಅಧ್ಯಕ್ಷನ ಪಾತ್ರವನ್ನು ವಹಿಸಿದ್ದಾನೆ!
ಅಮೆರಿಕದ ಅಧ್ಯಕ್ಷನ ವ್ಹೈಟ್‍ಹೌಸ್ ಮತ್ತು ಆತನ ಏರೋಪ್ಲೇನ್ ಏರ್‍ಫೋರ್ಸ್ ಒನ್ ಎರಡರ ಸೆಟ್‍ಗಳು ಈಗ ಶಾಶ್ವತ. ಯಾವುದಾದರೊಂದು ಧಾರಾವಾಹಿ ಇವೆರಡರ ಸುತ್ತಲೇ ನಡೆಯುತ್ತಾ ಇರುತ್ತದೆ. ವಿಶೇಷವಾಗಿ ಉಗ್ರಗಾಮಿಗಳು ವರ್ಸಸ್ ಅಮೆರಿಕ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102