ಯತಿ ಸ್ವಂತೀ -55


24-02-2018
1950ರ ದಶಕದ ಸಿನಿಮಾ ಹಾಡುಗಳನ್ನು ಕೇಳುತ್ತಿದ್ದೇನೆ. ಮಾಧುರ್ಯ ಇದೆ. ಆದರೆ ಭಯಾನಕ ಮಿಕ್ಸ್ ಭಾರತೀಯ ಮತ್ತು ಪಾಶ್ಚಾತ್ಯ ಎರಡರದ್ದು.
ಆಗಿನ ಕಾಲದಲ್ಲಿ ರಾಕ್ ಆಂಡ್ ರೋಲ್ ಮ್ಯೂಸಿಕ್ ಬಹಳ ಜನಪ್ರಿಯವಾಗಿತ್ತು. ಆಶಾ ಚಿತ್ರದಲ್ಲಿ ಕಿಶೋರ್ ಮತ್ತು ಆಶಾ ಬೇರೆ ಬೇರೆಯಾಗಿ ಹಾಡಿರುವ ಈನ ಮೀನ ಡೀಕ ಡಾಯ್ ಡಮನಿಕ ಕೇಳಿದ್ದೀರಾ? ಅದೊಂದು ಅದ್ಭುತ ಉದಾಹರಣೆ ಈ ನೃತ್ಯ ಶೈಲಿಗೆ.  ಫುಟ್ ಟ್ಯಾಪಿಂಗ್ ಎನ್ನುತ್ತಾರೆ. ಈ ನಿರ್ದಿಷ್ಟ ಹಾಡಿಗೆ ನಾವು ತಾಳ ಹಾಕದೇ ಇರಲು ಸಾಧ್ಯವೇ ಇಲ್ಲ. ಹಾಗೆಂದು ಅನೇಕ ಸಂಗೀತಗಾರರು, ಗಾಯಕರು ರೇಡಿಯೋದಲ್ಲಿ ಹೇಳಿರುವುದುಂಟು.
ಅದೇ ಸಮಯದಲ್ಲಿ ಮೊಹೆ ಭೂಲ್ ಗಯೇ ಸಾವರಿಯಾ, ಮನ ತಡಪತ್ ಹರಿ ದರ್‍ಶನ್ ಕೋ ಆಜ್ ನಂತಹ ಅದ್ಭುತ ಶಾಸ್ತ್ರೀಯ ಹಾಡುಗಳೂ ಇವೆ.
ಒಬ್ಬ ವಿಶಿಷ್ಟ ಗಾಯಕ ಕೆ ಎಲ್ ಸೈಗಲ್. ನಮ್ಮ ಅಮ್ಮ ಇವನ ಹಾಡುಗಳನ್ನು ಸದಾ ಗುನುಗುತ್ತಿದ್ದರು. ಇಕ್ ಬಂಗಲ ಬನೇ ನ್ಯಾರಾ, ಬಾಬುಲ್ ಮೋರ... ಹೀಗೆ. ರೇಡಿಯೋ ಸಿಲೋನ್‍ನಲ್ಲಿ ಪ್ರತಿ ದಿನ ಬೆಳಗ್ಗೆ ಏಳೂ ಐವತ್ತೈದಕ್ಕೆ ಭೂಲೇ ಬಿಸರೇ ಗೀತ್‍ನ ಕೊನೆಯ ಹಾಡು ಸ್ವರ್ಗೀಯ ಕುಂದನ್ ಲಾಲ್ ಸೈಗಲ್ ಅವರದು.
ತಮಾಷೆ ಎಂದರೆ ಆ ನಂತರ ಬಂದ ಪ್ರತಿಯೊಬ್ಬ ಗಾಯಕನೂ ಸೈಗಲ್‍ನಂತೆಯೇ ಹಾಡುತ್ತಿದ್ದರು. ಕಿಶೋರ್ ಕುಮಾರ್ ಸ್ವತಃ ಹೇಳಿದ್ದಾನೆ ತಾನು ಸೈಗಲ್ ಬೀಸಣಿಗೆ ಎಂದು. ಮುಖೇಶ್‍ನ ದಿಲ್ ಜಲ್‍ತಾ ಹೈ ತೋ ಜಲ್‍ನೇ ದೊ ಕೇಳಿದರೆ ಸೈಗಲ್‍ನಂತೆಯೇ ಅನ್ನಿಸುತ್ತದೆ.
ವಿಶಿಷ್ಟ ಗಾಯಕಿ ಲತಾ ಮಂಗೇಷ್ಕರ್ ಆಗ ಸೈಗಲ್‍ನಂತೆಯೂ, ಜೊತೆಗೆ ಪಾಕಿಸ್ಥಾನಿ ಗಾಯಕಿ ಮಲ್ಲಿಕಾ ಎ ತರನ್ನುಮ್ ನೂರ್‍ಜಹಾನ್‍ಳಂತೆಯೂ ಹಾಡುತ್ತಿದ್ದಳು. ಅವಳ ಮೇಲೆ ಈ ಇಬ್ಬರ ಪ್ರಭಾವ ಹಾಗೆ ಇತ್ತು. ನೂರ್‍ಜಹಾನ್ ಎಂದರೆ ಆವಾಜ್ ದೇ ಕಹಾಂ ಹೈ ... ಅನ್ಮೋಲ್ ಘಡಿ ಹಾಡು ನೆನಪಿಗೆ ಬರಬಹುದು.
ನನಗೆ ಈ ಲತಾ ಅಷ್ಟೊಂದು ಹಿಡಿಸಲಿಲ್ಲ. ಈ ಕಿಶೋರ್ ಅಷ್ಟೊಂದು ಹಿಡಿಸಲಿಲ್ಲ. ಮುಖೇಶ್ ಬಲು ಬೇಗ ತನ್ನದೇ ಶೈಲಿ ಕಂಡುಕೊಂಡ. ರಫಿ ಮಾತ್ರವೇ ಮೊದಲಿನಿಂದ ಆತನದೇ ಶೈಲಿ.
1949ರ ಸುಹಾನೀ ರಾತ್ ಢಲ್ ಚುಕಿ ಇಂದ 1980ರ ದಶಕದ ಹಂ ತೊ ಚಲೇ ಪರದೇಸ್ ವರೆಗೆ ಎಲ್ಲವೂ ವಿಶಿಷ್ಟ, ವಿಶೇಷ.
ಕಿಶೋರ್ ರಫಿ ಇಬ್ಬರೂ ಹಾಡಿರುವ ಹಾಡು ಕೆಲವಿವೆ. ಸಲಾಮತ್ ರಹೇ ದೋಸ್‍ತಾನಾ ಹಮಾರ, ಸಾರೆಗಮ ಮಾಸರೆಗ ಗಸರೆಮ ಮಗರೆಸ. ಆದರೆ ಅವರಿಬ್ಬರೂ ಬೇರೆ ಬೇರೆಯಾಗಿ ಮಧುರವಾಗಿ ಒಂದು ಹಾಡು ಹಾಡಿದ್ದಾರೆ ನಿಮಗೆ ಗೊತ್ತಿದೆಯೇ?
ಪ್ಯಾರ್ ಕ ಮೌಸಂ ಚಿತ್ರದಲ್ಲಿ ತುಂ ಬಿನ್ ಜಾವೂಂ ಕಹಾಂ... ಇಬ್ಬರೂ ಅದ್ಭುತವಾಗಿ ಹಾಡಿದ್ದಾರೆ.
ನನಗೇ ಅಚ್ಚರಿಯಾಗುತ್ತದೆ, ಅದೆಷ್ಟು ಸಲ ಈ ಹಾಡುಗಳನ್ನು ಕೇಳುತ್ತಿದ್ದರೂ ಏಕೆ ನನಗೆ ಬೋರ್ ಆಗಿಲ್ಲ ಎಂದು. ಏಕೆಂದರೆ ಇವು ಸದಾ ಬಹಾರ್ ಗೀತೆಗಳು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102