ಯತಿ ಸ್ವಂತೀ -52
21-02-2018
ನಾವು ಹದಿಮೂರು ಜನ ಗೆಳೆಯರ ವಿಷಯ ಹಿಂದೊಮ್ಮೆ ಹೇಳಿದ್ದೇನೆ. ಗೆಳೆಯ ನರಸಿಂಹನ ಮನೆ ಒಂಟಿಕೊಪ್ಪಲ್ ಹದಿನಾರನೇ ಕ್ರಾಸಿನಲ್ಲಿತ್ತು. ಅದರ ಹಿಂದೆ ಒಂದೆರಡು ಸಾಲು ಮನೆ. ಅದರಾಚೆ ಬರೀ ಗುಡ್ಡ. ಅದಕ್ಕೆ ನಾವು ಎಡಕಲ್ಲು ಗುಡ್ಡ ಎಂದು ಹೆಸರಿಟ್ಟಿದ್ದೆವು. ಜಯಂತಿಯ ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಬಂದಾಗ (ಪುಟ್ಟಣ್ಣ ಕಣಗಾಲ್ ಅವರ ಎಗುಮೇ ಎನ್ನಬೇಕಿತ್ತೇನೋ! ಆದರೆ ಹದಿಹರೆಯದ ಕಿಶೋರರಾದ ನಮಗೆ ಜಯಂತಿಯದೇ ನೆನಪು!) ಆ ಗುಡ್ಡಕ್ಕೆ ಆ ಹೆಸರು ಇಟ್ಟೆವು.
ಅನೇಕ ದಿನಗಳು ಅಲ್ಲಿಗೆ ನಡೆದುಹೋಗಿ ಅಲ್ಲಿ ಕುಳಿತು ಹರಟುತ್ತಿದ್ದೆವು. ಹರಟೆಗೆ ಕಾಲಿಲ್ಲ, ತಲೆಯಿಲ್ಲ.
ಬೀರಬಲ್ಲನ ಕಥೆಗಳನ್ನು ಹೇಳುತ್ತಿದ್ದೆವು. (ಅಥವಾ ಅವು ತೆನಾಲಿ ರಾಮನದಾ?) ಅವುಗಳಲ್ಲಿ ಯಾವುದಾದರೊಂದು ಪಣದ ಕಥೆ ಬರುತ್ತಿತ್ತು. ಆ ಪಣವನ್ನು ಮನೆಯಲ್ಲಿ ಪ್ರಯೋಗ ಮಾಡುತ್ತಿದ್ದೆವು ಎಂದರೆ ನಂಬಿ! ವಿವರ ಹೇಳಿದರೆ ನಗು ಬರದು, ಅದಕ್ಕೇ ಹೇಳಲಾರೆ!
ಕೆಲವೊಮ್ಮೆ ನಮ್ಮನ್ನು ನರಸಿಂಹನ ಮನೆಯ ಬಳಿಯ ಮೇಡಂ ಮನೆಗೆ ಕಾವಲಿಗೆ ಬಿಟ್ಟು ಹೋಗುತ್ತಿದ್ದರು. ಆಗೆಲ್ಲ ನಮ್ಮ ಕೆಲಸ ಏನು ಗೊತ್ತಾ? ಇರ್ವಿಂಗ್ ವ್ಯಾಲೇಸನ ಕಾದಂಬರಿಯೊಂದನ್ನು (ಹೆಸರೇಕೆ?) ನಾಲ್ಕೈದು ತುಂಡು ಮಾಡಿ ಎಲ್ಲರೂ ಒಂದಿಷ್ಟಿಷ್ಟು ಓದಿ ರೋಮಾಂಚನಗೊಳ್ಳುತ್ತಿದ್ದೆವು. ವೀಡಿಯೋ ಇರಲಿಲ್ಲ ನೋಡಿ ಆಗಿನ ಕಾಲದಲ್ಲಿ (1976!)
ಕೆಲವೊಮ್ಮೆ ನರಸಿಂಹನ ಮನೆಯ ರೂಮಿನಲ್ಲಿ ಕುಳಿತು ಇಸ್ಪೀಟ್ ಆಡುವುದು. ಪರೇಲಾ ಎನ್ನುವ ಮೂರೆಲೆ ಆಟವನ್ನು ಕದ್ದು ಆಡುತ್ತಿದ್ದೆವು. ಮೈಸೂರು ಬೆಂಗಳೂರು ರೈಲುಗಳಲ್ಲಿ ಈ ಮೂರೆಲೆ ಆಟವನ್ನು ದುಡ್ಡಿಟ್ಟು ಆಡುವವರನ್ನು ಪೊಲೀಸರು ಒದ್ದು ಎಳೆದೊಯ್ಯುತ್ತಿದ್ದುದನ್ನು ನೋಡಿದ್ದೆವು.
ಹ್ಞಾಂ... ರೈಲಿನಲ್ಲಿ ಗೆಳೆಯರು ಹೋದರೆ ಎಂದೂ ಸೀಟಿನಲ್ಲಿ ಕುಳಿತಿದ್ದು ನೆನಪಿಲ್ಲ. ಬಾಗಲನ್ನು ತೆರೆದು ಅಲ್ಲಿ ಕಾಲನ್ನು ಕೆಳಗೆ ಬಿಟ್ಟುಕೊಂಡು ಹರಟುತ್ತಾ ಸಾಗುತ್ತಿದ್ದೆವು.
ಇಸ್ಪೀಟ್‍ನಲ್ಲಿ ಇನ್ನೊಂದು ಆಟ ಡಾಂಕಿ. ಯಾರ ಬಳಿ ಹೆಚ್ಚು ಕಾರ್ಡುಗಳು ಉಳಿಯುವುದೋ ಅವರು ಡಾಂಕಿ. ಸೋ, ನನ್ನ ಕೈಯಲ್ಲಿ ಬಹಳ ಕಾರ್ಡ್‍ಗಳು ಬಂದಾಗ ಇದು ನೋಡ್ರೋ ರಾಜ್‍ಕಪೂರನ ಪಿಯಾನೋ ಅಕ್ಕಾರ್ಡಿಯನ್ ತರಹ ಅನ್ನುತ್ತಿದ್ದೆ. ನನಗೆ ಕೆಲವು ದಿನ ಪಿಯಾನೋ ಅಕಾರ್ಡಿಯನ್ ಎನ್ನೋ ಹೆಸರಿಟ್ಟರು. ನಂತರ ಅದು ಮುಂದುವರಿಯಲಿಲ್ಲ.
ಆದರೆ ಶ್ರೀಧರನ ವಿಷಯದಲ್ಲಿ ಹಾಗಾಗಲಿಲ್ಲ. ತನ್ನ ಕೈಯಲ್ಲಿ ಹೆಚ್ಚು ಕಾರ್ಡ್ ಇದ್ದಾಗ ಅಪೆಕ್ಸ್ ಬ್ಯಾಂಕ್‍ನಲ್ಲಿ ಬಹಳ ಹಣ ಇದ್ದ ಹಾಗೆ ನನ್ನ ಕೈಯಲ್ಲಿ ಕಾರ್ಡ್‍ಗಳಿವೆ ಎಂದ. ಅಷ್ಟೇ... ಅವನ ಹೆಸರು ಅಪೆಕ್ಸ್ ಬ್ಯಾಂಕ್ ಹೋಗಿ... ಕೇವಲ ಅಪೆಕ್ಸ ಆಗಿಬಿಟ್ಟಿತು.
ಈಗಲೂ ಯಾವುದಾದರೂ ಮದುವೆಗೆ ಬಂದರೆ ನಮ್ಮ 1978ರ ಗೆಳೆಯರ ಕುಟುಂಬದ ಸದಸ್ಯರು ಸಿಕ್ಕರೂ, ‘ಏನೋ ಅಪೆಕ್ಸೂ, ಹೇಗಿದ್ದೀಯೋ?’ ಎನ್ನುವುದುಂಟು.
ಎಲ್ಲಕ್ಕಿಂತ ಮಜಾ ಎಂದರೆ ನಮ್ಮಲ್ಲಿ ಇಬ್ಬರು ಗೆಳೆಯರು ಶ್ರೀಧರನ ಮನೆಯಿದ್ದ ದೇವಪಾರ್ಥಿವ ರಸ್ತೆಗೆ ಹೋಗಿದ್ದವರು, ‘ಇಲ್ಲೇ ಅಪೆಕ್ಸ್ ಮನೆ ಅಲ್ವಾ?’ ಎಂದು ಅವನ ಮನೆಯ ಮುಂದೆ ಹೋಗಿ ಬಾಗಿಲು ತಟ್ಟಿದ್ದಾರೆ. ಅವನ ತಂದೆ ಬಾಗಿಲು ತೆರೆದಾಗ, ಇಬ್ಬರೂ ಫುಲ್ ಬ್ಲ್ಯಾಂಕ್ ಆಗಿ ವಾಪಸ್ಸು ಬಂದಿದ್ದಾರೆ.
‘ಯಾಕ್ರೋ?’ ಅಂದರೆ ‘ನಮಗೆ ಅಪೆಕ್ಸ್ ನಿಜವಾದ ಹೆಸರೇ ಮರೆತುಹೋಗಿತ್ತು. ಅವರ ಅಪ್ಪನ ಬಳಿ ಅಪೆಕ್ಸ್ ಇದ್ದಾನಾ ಅಂತ ಹೇಗೆ ಕೇಳೋದು?’ ಅಂದರು!!
Comments
Post a Comment