ಯತಿ ಸ್ವಂತೀ -42


11-02-2018
ದೇವೇನ್ ಒಬ್ಬ ಜನಪ್ರಿಯ ಕಾದಂಬರಿಕಾರ. ಅವನ ಕಾದಂಬರಿಗಳಲ್ಲಿ ಕೆಲವು ಕವನಗಳನ್ನೂ ಅವನು ಅಳವಡಿಸುತ್ತಿರುತ್ತಾನೆ. ಆ ರಾತ್ರಿ ಅವನಿಗೆ ಸನ್ಮಾನ ಮಾಡಿದಾಗ ‘ನೀವೇಕೆ ಹೆಣ್ಣುಗಳನ್ನು ಮೋಸಗಾರರೆಂದು ಚಿತ್ರಿಸುತ್ತೀರಿ?’ ಎಂದು ಪತ್ರಕರ್ತನೊಬ್ಬ ಕೇಳಿದಾಗ, ‘ಅವರಿಗೆ ಹೆಣ್ಣೊಬ್ಬಳು ಮದುವೆ ಮಂಟಪದವರೆಗೂ ಬಂದು ಕೈಕೊಟ್ಟಳು’ ಎನ್ನುತ್ತಾನೆ ಮತ್ತೊಬ್ಬ.
ದೇವೇನ್, ಅವನ ಅಣ್ಣನ ಮಗಳು, ಅವನ ಚಿಕ್ಕಪ್ಪ ಮತ್ತು ಸೆಕ್ರೆಟರಿ ಹನುಮಾನ್ ಕಾರಿನಲ್ಲಿ ಮನೆಗೆ ಮರಳುತ್ತಿರುವಾಗ ಒಂದು ದೇಹವು ಮುಂದೆ ಹೋಗುತ್ತಿದ್ದ ಕಾರಿನಿಂದ ತೂರಿ ಹೊರಬೀಳುತ್ತದೆ. ಅದನ್ನು ಮತ್ತೆ ಎತ್ತಿಕೊಳ್ಳಲು ಕಾರಿನಿಂದಿಳಿದ ಇಬ್ಬರು ದೇವೇನ್ ಅವರ ಕಾರು ನಿಂತಿದ್ದು ಕಂಡು ಪರಾರಿಯಾಗುತ್ತಾರೆ.
ಅದೊಂದು ಹೆಣ್ಣಿನ ದೇಹ. ಅವಳು ಬದುಕಿರುವಳೆಂದು ಅರಿತು ಮನೆಗೆ ಕರೆತರುತ್ತಾರೆ. ಮರುದಿನ ಬೆಳಗ್ಗೆ ಆ ಹೆಣ್ಣು ದೇವೇನ್‍ನನ್ನು ತನ್ನ ಪತಿಯೆಂದು ಹೇಳತೊಡಗುತ್ತಾಳೆ. ತನಗೆ ಏನೂ ನೆನಪಿಲ್ಲವೆನ್ನುತ್ತಾಳೆ. ಇದೊಂದು ರೀತಿ ಫಜೀತಿಯನ್ನು ತರುತ್ತದೆ ದೇವೇನ್‍ಗೆ. ಅವನ ಮನೆಗೆ ದೆಹಲಿಯಿಂದ ಪ್ರಕಾಶಕನೊಬ್ಬ ಬರುತ್ತಾನೆ. ಅವನಿಗೆ ಚಹಾ ತಂದುಕೊಡುತ್ತಾಳೆ ಈ ಹುಡುಗಿ. ಅವನು ಇವಳನ್ನು ಗುರುತಿಸಿದರೂ ಇವಳು ಅವನನ್ನು ಗುರುತಿಸುವುದಿಲ್ಲ. ಅಂದು ರಾತ್ರಿ ಅವಳನ್ನು ಎತ್ತಿಕೊಂಡು ಹೋಗಲು ಇಬ್ಬರು ರೌಡಿಗಳನ್ನು ಕಳಿಸುತ್ತಾನೆ. ಅವಳನ್ನು ಕಾಪಾಡುತ್ತಾನೆ ದೇವೇನ್.
ಇಬ್ಬರೂ ಶಿಮ್ಲಾಗೆ ಹೋಗುತ್ತಾರೆ. ದೇವೇನ್ ಈಗ ಅವಳ ಬಗ್ಗೆ ಪ್ರೇಮ ತೋರಿಸಲಾರಂಭಿಸಿರುತ್ತಾನೆ. ಶಿಮ್ಲಾದ ಫೋಟೋ ಸ್ಟುಡಿಯೋದಲ್ಲಿ ಇವಳ ಆಧುನಿಕ ಉಡುಪಿನ ಫೋಟೋ ನೋಡುತ್ತಾನೆ. ಅವಳು ಅವಳ ಪತಿಯೊಂದಿಗೆ ಬಂದು ಜಗಳ ಆಡಿಕೊಂಡು ಹೋದಳೆನ್ನುತ್ತಾಳೆ ಅವರು ತಂಗಿದ್ದ ಹೊಟೇಲ್ ರಿಸೆಪ್ಷನಿಸ್ಟ್.
ಆ ‘ಪತಿ’ಯನ್ನು ಭೇಟಿಯಾಗುತ್ತಾನೆ ದೇವೇನ್. ಅವನೊಬ್ಬ ದಳ್ಳಾಳಿ. ಅವಳು ಅವನ ಪತ್ನಿ ಅಲ್ಲವೇ ಅಲ್ಲ. ಅವನಿಂದ ತಪ್ಪಿಸಿಕೊಂಡು ಅವಳು ಹೋಗಿರುತ್ತಾಳೆ. ಅವಳ ಬಗ್ಗೆ ಬೇಕಾದರೆ ಕ್ಯಾಬರೇ ಡಾನ್ಸರ್ ರೂಬಿಯನ್ನು ಭೇಟಿಯಾಗೆನ್ನುತ್ತಾನೆ ಆ ದಳ್ಳಾಳಿ. ರೂಬಿಯ ನೃತ್ಯ ನೋಡುತ್ತಾರೆ ಇಬ್ಬರೂ. ಈಗಲೂ ಅವಳು ರೂಬಿಯನ್ನು ಗುರುತಿಸುವುದಿಲ್ಲ.
ರೂಬಿಯ ಪ್ರಕಾರ ಅವಳೊಬ್ಬ ವೇಶ್ಯೆ. ಪೊಲೀಸ್ ರೆಯ್ಡ್‍ನಲ್ಲಿ ಸಿಕ್ಕಿ ಬಿದ್ದಿರುತ್ತಾಳೆ.
ಇವನಿಗೆ ರೋಸಿ ಹೋಗಿ ಅವಳನ್ನು ಮನೆಯಿಂದ ಹೊರದಬ್ಬುತ್ತಾನೆ. ನಂತರ ಅವಳನ್ನು ಯಾರೋ ಎತ್ತಿಕೊಂಡು ಹೋಗಿಬಿಡುತ್ತಾರೆ.
ಮತ್ತೆ ಅವನು ದೆಹಲಿಗೆ ಹೋದಾಗ ಇವನ ಪುಸ್ತಕಗಳ ಪ್ರಕಾಶಕನ ವಿಧವೆ ಅವಳೆಂದು ಅವನಿಗೆ ತಿಳಿದು ಹೈರಾಣಾಗುತ್ತಾನೆ.
ಅವಳನ್ನು ಮುಖಾಮುಖಿ ಮಾಡಿದಾಗ ಒಂದೊಂದೇ ಸತ್ಯ ಹೊರಬೀಳುತ್ತದೆ. ಕೊನೆಯಲ್ಲೊಂದು ಫೈಟ್, ಶುಭಂ.
ಇದು ಸಂಜೀವ್ ಕುಮಾರ್, ಜಯಾಭಾದುರಿ ಅಭಿನಯದ ಅನಾಮಿಕಾ ಚಿತ್ರದ ಕಥೆ. ಸುಂದರ ಹಾಡುಗಳಿವೆ. ಆಜ್ ಕೀ ರಾತ್, ಬಾಹೋಮೆ ಚಲೇ ಆವೋ, ಲೋಗೋ ನ ಮಾರೋ ಇಸೆ, ಮೇರಿ ಭೀಗಿ ಭೀಗಿ ಸಿ.... ಆರ್ ಡಿ ಬರ್ಮನ್ ಸಂಗೀತ.
ಕಥೆಯನ್ನು ನೋಡುತ್ತಿದ್ದರೆ ಎಲ್ಲವೂ ನಿಜ ಎನ್ನಿಸುತ್ತದೆ. ಆ ನಂತರ ನಾಯಕಿಯ ದೃಷ್ಟಿಕೋನದಿಂದ ನೋಡಿದಾಗ ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು ಎನಿಸುತ್ತದೆ.
ಚಿತ್ರಕಥೆ ಎಂದರೆ ಹೀಗಿದ್ದರೆ ಕುತೂಹಲ ಕೊನೆಯವರೆಗೂ ಇರುತ್ತದೆ ಎನಿಸದಿರದು ಅನಾಮಿಕ ಚಿತ್ರ ನೋಡಿದಾಗ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102