ಯತಿ ಸ್ವಂತೀ -35
04-02-2018
ಗೀತ್‍ಮಾಲಾ ಕಿ ಛಾವ್ ಮೇ ಎನ್ನುವ ವಿಶಿಷ್ಟ ಸಿ.ಡಿ.ಗಳನ್ನು ಹೊರತಂದ ಸಾರೆಗಮ ಕಂಪೆನಿ ಕಾರವಾ(ನ್) ಎನ್ನುವ ವಿಶೇಷ ಹೆಸರಿನಡಿ 5000 ಮಧುರ ಹಿಂದೀ ಹಾಡುಗಳನ್ನು ಒಂದೆಡೆ ಕಲೆ ಹಾಕಿದ್ದಾರೆ.
ಯೂ ಟ್ಯೂಬ್‍ನಲ್ಲಿ ಹುಡುಕಿದರೆ ಸಿಕ್ಕಬಹುದು.
ಬೇರೆ ಬೇರೆ ಕಾಂಬಿನೇಷನ್‍ಗಳಿದ್ದಾವೆ.
ಉದಾಹರಣೆಗೆ ನನ್ನ ಫೇವರಿಟ್ ಹಾಡು ಜಿಂದಗೀ ಕೆ ಸಫರ್ ಮೆ ಗುಜರ್ ಜಾತೇ ಹೈ ಜೋ ಮಕಾಮ್ ... ಆಪ್ ಕೀ ಕಸಂ ಚಿತ್ರದ್ದು.
ಅದರಲ್ಲಿ ಬರೋ ಬೆಳಗ್ಗೆ ಬರುತ್ತದೆ, ರಾತ್ರಿ ಹೋಗುತ್ತದೆ, ಹೀಗೇ ಕಾಲವು ಸರಿಯುತ್ತಲೇ ಇರುತ್ತದೆ, ನಿಲ್ಲುವುದಿಲ್ಲ, ಒಂದೇ ಕ್ಷಣದಲ್ಲಿ ಇದು ಮುಂದೆ ಹೋಗಿಬಿಡುತ್ತದೆ. ಮನುಷ್ಯ ಸರಿಯಾಗಿ ನೋಡಲಾರ...
ಸೋ, ಈ ಹಾಡನ್ನು ನಾನು ಕೇಳುವ ಬಗೆ ನೋಡಿ.
ಕಾರವಾ(ನ್)ದಲ್ಲಿ ಆನಂದ್‍ಬಕ್ಷಿ ಹಾಡುಗಳ ಗೊಂಚಲು ಇದೆ. ಅದರಲ್ಲಿ ಬರುತ್ತದೆ ಈ ಹಾಡು. ಆರ್ ಡಿ ಬರ್ಮನ್ ಬೆಸ್ಟ್ ಇದೆ. ಅದರಲ್ಲಿ ಬರುತ್ತದೆ. ಕಿಶೋರ್ ಕುಮಾರ್ ಬೆಸ್ಟ್‍ಗಳಲ್ಲೂ ಇದು ಇದೆ. ರಾಜೇಶ್‍ಖನ್ನ ಬೆಸ್ಟ್, ಮುಮ್ತಾಜ್ ಬೆಸ್ಟ್, ರಾಜೇಶ್-ಮುಮ್ತಾಜ್ ಜೋಡಿ ಬೆಸ್ಟ್... ನಿರ್ದೇಶಕ ಜೆ. ಓಂಪ್ರಕಾಶ್ ಬೆಸ್ಟ್‍ನಲ್ಲಿ ಬಂದರೂ ಮತ್ತೆ ಮತ್ತೆ ಕೇಳಬಹುದು.
ಇದೊಂದು ಉದಾಹರಣೆ ಅಷ್ಟೇ.
ಕಿಶೋರ್ ಕುಮಾರ್ ಡಬ್ಬಲ್ ವಾಯ್ಸ್‍ನಲ್ಲಿ ಹಾಡಿರೋ ಆಂಖ್ ಸೀದೀ ಲಗೀ ಹಾಡು ಕೇಳಿರುವಿರಾ? ಹಾಫ್ ಟಿಕೆಟ್ ಚಿತ್ರದ್ದು. ಲತಾ ಮಂಗೇಶ್‍ಕರ್ ಕಾರಣಾಂತರಗಳಿಂದ ಬರಲಾಗಲಿಲ್ಲವಂತೆ. ಸ್ವತಃ ಕಿಶೋರ್ ಗಂಡು, ಹೆಣ್ಣು ದನಿಗಳಲ್ಲಿ ಹಾಡಿದ್ದಾರೆ. ಗಂಡು ದನಿ ಚಿತ್ರದ ವಿಲನ್ ಪ್ರಾಣ್‍ಗೆ. ಹೆಣ್ಣು ದನಿ ಹೆಣ್ಣು ವೇಷ ಧರಿಸಿದ ಕಿಶೋರ್ ಅವರಿಗೆ.
ಸುಲಭದ ಕೆಲಸ ಅಲ್ಲ ಅದು. ಏಕೆಂದರೆ ಹೆಣ್ಣಿನ ದನಿಯ ಪಿಚ್ ಎತ್ತರವಿರುತ್ತದೆ. ಗಂಡಿನ ದನಿಯಲ್ಲಿ ಬೇಸ್ ಆಳವಿರುತ್ತದೆ.
ಇತ್ತೀಚೆಗೆ ವಾಟ್ಸ್ಯಾಪ್‍ನಲ್ಲಿ ಎರಡು ವಿಶಿಷ್ಟ ವೀಡಿಯೋಗಳು ಹರಿದಾಡುತ್ತಿದ್ದವು.
ಉತ್ತರ ಭಾರತದ ಯುವಕನೊಬ್ಬ ರಫಿ, ಲತಾ ಇಬ್ಬರ ಧ್ವನಿಯ ಹಾಡೊಂದನ್ನು ಬಹಳ ಅದ್ಭುತವಾಗಿ ಹಾಡಿದ್ದಾನೆ. ಹಾಗೆಯೇ ಕೇರಳದ ಹೆಣ್ಣೊಬ್ಬಳು ಪುರುಷ ಧ್ವನಿಯಲ್ಲೂ ತಾನೇ ಒಂದು ಡ್ಯೂಯೆಟ್ ಹಾಡಿದ್ದಾಳೆ.
ಈ ಪ್ರಪಂಚದಲ್ಲಿ ಪ್ರತಿಭೆಗಳಿಗೆ ಕೊನೆಯಿಲ್ಲ. ಇಂಡಿಯಾ ಹ್ಯಾಸ್ ಟ್ಯಾಲೆಂಟ್ ಅನ್ನೋ ಟಿವಿ ಶೋ ಆಗಾಗ ನೋಡುತ್ತಿದ್ದೆ. ಅಂದರೆ ನನ್ನ ಮಗಳು ನೋಡುವಾಗ ಕಣ್ಣು ಹಾಯಿಸುತ್ತಿದ್ದೆ.
ಕೇವಲ ಐದಾರು ವರ್ಷದ ಹುಡುಗಿಯೊಂದು ಭೂಲ್‍ಭೂಲೈಯ್ಯಾ ಚಿತ್ರದ (ಹಿಂದಿಯ ಆಪ್ತಮಿತ್ರ) ನಾಗವಲ್ಲಿಯ ಹಾಡಿಗೆ ಅದೆಷ್ಟು ಚೆನ್ನಾಗಿ ನರ್ತಿಸಿರುವಳೆಂದರೆ ನೋಡಲು ಅಮೋಘ.
ಆದರೆ ನನಗೆ ತಿಳಿದ ಮಟ್ಟಿಗೆ ನರ್ತನವನ್ನು ಆರಂಭಿಸಲು ಏಳು ವರ್ಷಗಳಾಗಿದ್ದರೆ ಒಳ್ಳೆಯದಂತೆ. ಮೊಣಕಾಲಿನಿಂದ ಪಾದದ ವರೆಗಿನ ಭಾಗವು ಏಳು ವರ್ಷಗಳ ವೇಳೆಗೆ ಗಟ್ಟಿಯಾಗುವುದಂತೆ. ಅದಕ್ಕೆ ಮುಂಚೆ ಕಲಿತರೆ ಮಕ್ಕಳ ಕಾಲುಗಳು ನಾಟ್ಯದ ರಿಗರಸ್ ಅಭ್ಯಾಸದಿಂದ ತೊಂದರೆಗೊಳಗಾಗಬಹುದಂತೆ.
ಅಂದ ಹಾಗೆ ಬಹಾರೋಂಕೆ ಸಪ್ನೆ ಚಿತ್ರದಲ್ಲಿ ಲತಾ, ಮನ್ನಾಡೇ ಹಾಡಿರುವ ಚುನರೀ ಸಂಭಾಲ್ ಗೋರಿ ಕೇಳಿ. ಲತಾ ಹಾಡನ್ನು ಕೇಳಿದರೆ ಅರರರರರಾ ಅಹ್ಹಾ ಅನ್ನೋಣ ಅನ್ನಿಸುತ್ತದೆ!
Comments
Post a Comment