ಯತಿ ಸ್ವಂತೀ -34
03-02-2018
ನನ್ನ ಹೈಸ್ಕೂಲ್ ದಿನಗಳು ಮೊದಮೊದಲು ಬಹಳ ಟಫ್. ಈಗ ಟಫ್ ಅನ್ನೋ ಪದ ಬಳಸಿದ್ದೀನಿ. ಆದರೆ ಆಗ... ಅಬ್ಬಾ... ಇದೇನು ಈ ಮೇಷ್ಟರುಗಳು, ಟೀಚರುಗಳು ಠಸ್ ಪುಸ್ ಅಂತ ಏನೋ ಹೇಳ್ತಿದ್ದಾರೆ ಎನ್ನಿಸುತ್ತಿತ್ತು.
ನನಗೆ ಪ್ರೈಮರಿ ಶಾಲೆಯಲ್ಲಿಯೇ ಒಂದಿಷ್ಟು ಇಂಗ್ಲೀಷ್ ಮತ್ತು ಅರ್ತ್‍ಮೆಟಿಕ್ ಪಾಠವನ್ನು ನಮ್ಮ ಮೈಸೂರು ರೈಲ್ವೇ ಲೋಕೋ ಕಾಲೋನಿಯ ಕ್ವಾರ್ಟರ್ಸ್ ಇಂಜಿನ್ ಡ್ರೈವರ್ ಇರ್ವಿನ್ ಅವರ ಪತ್ನಿ ನನಗೆ ಹೇಳಿಕೊಟ್ಟಿದ್ದರೂ, ಇಡೀ ತರಗತಿಗಳು ಇಂಗ್ಲೀಷ್‍ನಲ್ಲಿ ಇದ್ದಿದ್ದು (ಕನ್ನಡ, ಹಿಂದಿ ಬಿಟ್ಟು!) ಬಹಳ ಕಷ್ಟ ತಂದಿತ್ತು.
ನಾನು ಏಳನೇ ಕ್ಲಾಸಿನವರೆಗೂ ಕನ್ನಡ ಮೀಡಿಯಮ್ಮು. ನಮ್ಮ ಅಪ್ಪ ರಾತ್ರಿ ಒಂಬತ್ತು ಗಂಟೆಯ ಇಂಗ್ಲೀಷ್ ಸುದ್ದಿ ಕೇಳುತ್ತಿದ್ದರು ರೇಡಿಯೋದಲ್ಲಿ. ದಿಸ್ ಈಸ್ ಆಲ್ ಇಂಡಿಯಾ ರೇಡಿಯೋ. ದ ನ್ಯೂಸ್ ರೆಡ್ ಬೈ ಸುರುಜಿತ್ ಸೇನ್. ಅಷ್ಟೇ. ಮುಂದಕ್ಕೆಲ್ಲಾ ಠಸ್ ಪುಸ್.
ಈ ಸನ್ನಿವೇಶದಲ್ಲಿ ಎಂಟನೆಯ ತರಗತಿಯ ಕಷ್ಟ ಪ್ರತಿಯೊಬ್ಬ ಕನ್ನಡ ಟು ಇಂಗ್ಲೀಷ್ ಮೀಡಿಯಮ್ಮಿನ ವಿದ್ಯಾರ್ಥಿ/ನಿಗೂ ಗೊತ್ತಿರುತ್ತದೆ.
ಒಬ್ಬರು ಮೇಡಂ ಹೊಸದಾಗಿ ಬಂದರು. ಅವರ ಹೆಸರು ಬೇಡ. ಅವರು ರಸ್ತೆಯಲ್ಲಿ ನಡೆದು ಬರುವಾಗ ಅವರ ತಿಳಿಕಂದು ಕನ್ನಡಕದ ಫ್ರೇಮು, ಅವರ ಗಿಣಿ ಮೂಗು ನನಗೆ ನೆನಪಿದೆ. ಅವರು ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಬರುತ್ತಿದ್ದರೆ ಕೆಲವೊಮ್ಮೆ ಅವರ ಸೆರಗು ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟದ ನೆನಪು ತರುವಂತೆ ಗಗನವನ್ನು ಚುಂಬಿಸುವಂತೆ ಹಾರುತ್ತಿದ್ದುದು ಜ್ಞಾಪಕ ಇದೆ.
ಅವರು ನಮಗೆ ಸೋಷಿಯಲ್ ಸ್ಟಡೀಸ್ ಮತ್ತು ಇಂಗ್ಲೀಷ್ ತೆಗೆದುಕೊಳ್ಳುತ್ತಿದ್ದರು. ಅವರನ್ನು ಏನಾದರೂ ಪ್ರಶ್ನೆ ಕೇಳಿದರೆ ‘ಪಾಡನ್’ ಎಂದು ವಿಶಿಷ್ಟವಾಗಿ ಹೇಳುತ್ತಿದ್ದರು. ಬಹಳ ದಿನಗಳ ನಂತರ ಅದು ಪಾರ್ಡನ್ ಎಂದು ಅರ್ಥವಾಗಿತ್ತೆನಗೆ!
ನಮ್ಮ ಸಹಪಾಠಿ ರಮೇಶ ‘ಲೋ ಯತಿ, ಪ್ಲೀಸ್ ಏನಾದ್ರೂ ಪ್ರಶ್ನೆ ಕೇಳೋ, ಆದರೆ ಸ್ಪಷ್ಟವಾಗಿ ಕೇಳಬೇಡ’ ಎಂದು ನಿರ್ದಿಷ್ಟ ಸಲಹೆ ನೀಡಿದ ಮೇಲೆ ನಾನು ಪಾಲಿಸಲೇಬೇಕಿತ್ತು. ಅವನೋ ಅಷ್ಟೆತ್ತರ, ನಾನು ಕುಳ್ಳು, ಸ್ಥೂಲ! ಭಯ...
ತರಗತಿಯಲ್ಲಿ ನಿಂತು ‘ಮಿಸ್...ವಿಚ್ ಈಸ್ ದ ಕ್ಯಾಪಿಟಲ್ ದದದ ಬಬಬ ಲಲಲ ಮಿಸ್’É ಎಂದೊಡನೆ ಅವರು ಸ್ಟೈಲಾಗಿ ‘ಪಾಡನ್’ ಎನ್ನುತ್ತಿದ್ದರು. ಎಲ್ಲರೂ ಕಿಸಿಕಿಸಿ.
ನಂತರ ಮತ್ತೊಮ್ಮೆ ‘ವಿಚ್ ಇಸ್ ದ ಕ್ಯಾಪಿಟಲ್ ಆಫ್ ಈಜಿಪ್ಟ್ ಮಿಸ್’ ಎನ್ನುತ್ತಿದ್ದೆ. ಅದಕ್ಕೆ ಅವರು ಸರಿಯಾಗಿ ಉತ್ತರಿಸಿದಾಗ ಅದನ್ನು ಮತ್ತೊಂದು ರೀತಿ ಗಟ್ಟಿಯಾಗಿ ಉಚ್ಚರಿಸಿ ಇಡೀ ತರಗತಿಯ ಹುಡುಗರು ಕಿಸಿಕಿಸಿ ಎಂದೂ, ಹುಡುಗಿಯರು ಮುಸಿಮುಸಿ ಎಂದೂ ನಗುತ್ತಿದ್ದರು.
ಆ ಮೇಡಂಗೆ ಕನ್ನಡ ಬರುವುದೇ ಇಲ್ಲವೇನೋ ಎನ್ನಿಸಿ ಸುಸ್ತಾದ ವೇಳೆಯಲ್ಲಿ, ಒಂದು ಸುದಿನ ಒಬ್ಬ ಹುಡುಗ, ‘ಮಿಸ್ ಇವನು ಹೊಡೀತಾನೆ ನೋಡಿ ಮಿಸ್’ ಎಂದು ಗಟ್ಟಿಯಾಗಿ ಹೇಳಿದ.
‘ಯಾಕಪ್ಪಾ?’ ಅಂದುಬಿಡೋದೇ ಆ ಮೇಡಮ್ ಕನ್ನಡದಲ್ಲಿ.
ಆವತ್ತೇ ಕೊನೆ, ನನಗೆ ನೆನಪಿರುವ ಮಟ್ಟಿಗೆ, ಕೇವಲ ಪಾಠ ಮಾತ್ರ ಆಂಗ್ಲದಲ್ಲಿ. ಉಳಿದೆಲ್ಲ ಮಾತುಗಳೂ ಕನ್ನಡದಲ್ಲಿಯೇ ನಡೆದವು!
Comments
Post a Comment