ಯತಿ ಸ್ವಂತೀ -44


13-02-2018
ನನ್ನ ಅದೃಷ್ಟವೋ ಏನೋ... ಬಹಳ ಜನ ನನ್ನ ಗೆಳೆತನ ಬಯಸುತ್ತಾರೆ! ನಾನು ಫೇಸ್‍ಬುಕ್‍ಗೆ ಹಾಕುವ ಪಟಗಳಲ್ಲಿ ಸಾಮಾನ್ಯ ನಗುತ್ತಿರುತ್ತೇನೆ. ನಿಮ್ಮ ನಗು ತುಂಬಿದ ಪಟಗಳು ನಮಗಿಷ್ಟ ಎನ್ನುವವರು ಅನೇಕರು. ಅಯ್ಯೋ, ಕ್ಯಾಮೆರಾ ನನ್ನ ಮೇಲೆ ಫೋಕಸ್ ಆದೊಡನೆ ಸ್ಮೈಲ್ ನನ್ನ ಮುಖದ ಮೇಲೆ ಆಟೋಮ್ಯಾಟಿಕ್ಕಾಗಿ ಪ್ರತ್ಯಕ್ಷ ಆಗುತ್ತದೆ ಎಂದರೆ ಬಹಳ ಜನ ನಂಬರು! ಏಕೆಂದರೆ ನನ್ನನ್ನು ಎದುರಿಗೆ ನೋಡಿರುವವರು ಅನೇಕರು. ಅವರೆಲ್ಲರನ್ನೂ ನಾನು ನಗೆಮೊಗದೊಂದಿಗೇ ಮಾತಾಡಿಸುತ್ತೇನೆ. ಹೌದೂ.. ನಗುತ್ತಾ ಇತರರೊಂದಿಗೆ ವರ್ತಿಸಿದರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಮನವು ಅಳುತಿರೆ... ನಗುತ ಹಾಡಲೇ? ಎನ್ನುವ ವಾಕ್ಯ ಕೇಳಿರುವಿರಾ?
ಉಯ್ಯಾಲೆ ಚಿತ್ರದ ಹಾಡಿನ ತುಣುಕದು. ನಗುವುದ ಕಲಿಯೋಣ, ನಾವು ನಗುತಾ ಬಾಳೋಣ ಎನ್ನುವ ವಿಷ್ಣುವರ್ಧನ್ ಗೀತೆ ಒಂದಿದೆ. ನಗು ಎನ್ನುವ ತುಟಿಗಳ ಮೇಲೆ ಅರಳುವ ವಕ್ರರೇಖೆ ಅನೇಕ ಜನರ ಮುಖದ ಮೇಲೆಯೂ ನಗೆಯನ್ನು ಉಂಟು ಮಾಡುತ್ತದೆ.
ಇತ್ತೀಚೆಗೆ ನಾನು ನನ್ನ ನಗು ಮುಖದ ಮೂರು ಚಿತ್ರಗಳನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದೆ. ಅದಕ್ಕೆ ಅದೆಷ್ಟು ಒಳ್ಳೆಯ ಪ್ರತಿಕ್ರಿಯೆಗಳು.
ಅಂದು ಉತ್ತರ ಕರ್ನಾಟಕದ ಉಪಾಧ್ಯಾಯರೊಬ್ಬರು (ಇವರು ಲೇಖಕ ಕೂಡ) ಬೆಳಗ್ಗೆಯೇ ದೂರವಾಣಿ ಕರೆ ನೀಡಿ, ನಿಮ್ಮ ನಗುವು ನಮಗೆ ಸ್ಫೂರ್ತಿದಾಯಕ ಎಂದರು.
ಅಂದರೆ ನನ್ನ ನಗುವು ಇನ್ನೊಬ್ಬರಿಗೆ ಒಂದಿಷ್ಟಾದರೂ ಖುಷಿ ಕೊಡುವುದಾದರೆ ಆ ನಗುವು ಸಾರ್ಥಕ್ಯ ಪಡೆಯಿತೆಂದು ತಾನೇ ಅರ್ಥ?
ಸಾಮಾನ್ಯವಾಗಿ ನಾನು ಹಿಂದಿನದರ ಬಗ್ಗೆ ವಿಷಾದ ಪಡುವುದು ಕಡಿಮೆ. ಮುಂದಾಗುವುದರ ಬಗ್ಗೆ ಆತಂಕವೂ ಬಹಳ ಕನಿಷ್ಠ. ಸಾಧ್ಯವಾದರೆ ಇಂದು ಬದುಕು, ಇಂದಿನ ಬದುಕು ಎನ್ನುವ ಸಿದ್ಧಾಂತವುಳ್ಳವನು.
ನನ್ನ ಪತ್ನಿ ರೇಗಿಸುತ್ತಿರುತ್ತಾಳೆ. ಅಲ್ರೀ, ಕೆಲಸಕ್ಕೆ ಇಷ್ಟು ವರ್ಷ ಹೋದಿರಿ. ಸಂಜೆಯಾದರೂ ಮನೆಯಲ್ಲಿರುತ್ತಿದ್ದಿರಿ. ಈಗ ನಿಮ್ಮ ಕಾರ್ಯಕ್ರಮ ನನಗೆ ಅರ್ಥವಾಗುವುದೇ ಇಲ್ಲ ಎನ್ನುತ್ತಾಳೆ.
ನನಗೆ ಅರ್ಥವಾಗಿದ್ದರೆ ತಾನೇ!!!
ನಿವೃತ್ತ ಜೀವನ ನನ್ನದು. ಆದರೂ ಯಾರು ಫೋನ್ ಮಾಡಿ ಏನಾದರೂ ಕಾರ್ಯಕ್ರಮಕ್ಕೆ ಕರೆದರೂ ‘ದಯವಿಟ್ಟು ಕನಿಷ್ಠಪಕ್ಷ 24 ಗಂಟೆಗಳ ಮೊದಲು ತಿಳಿಸಿ’ ಎನ್ನುತ್ತೇನೆ. ಹಾಗೆಂದು ನಾನು ಸದಾ ಬ್ಯುಸಿರ ಇರುವುದಿಲ್ಲ. ಆದರೂ ಇನ್ನೊಬ್ಬರಿಗೆ ನನ್ನಿಂದ ತೊಂದರೆ ಆಗಕೂಡದು.
ಇತ್ತೀಚೆಗೆ ಮುಂದಿನ ತಿಂಗಳಲ್ಲಿ ಎರಡು ಬೇರೆ ಬೇರೆ ದಿನಗಳಂದು ಕಾರ್ಯಕ್ರಮಗಳಿಗೆ ಒಪ್ಪಿಕೊಂಡಿದ್ದೇನೆ. ಇನ್ನು ಮೇಲೆ ಡೈರಿಯಲ್ಲಿ ಗುರುತು ಮಾಡಿಕೊಳ್ಳಿ ಎಂದು ರೇಗಿಸುತ್ತಾಳೆ ಪತ್ನಿ.
ನಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗಕೂಡದು ಎನ್ನುವುದು ನನ್ನ ಒಂದೇ ಒಂದು ಸಿದ್ಧಾಂತ. ನನ್ನ ಮಕ್ಕಳಿಗೆ ಕೂಡ ನನ್ನ ಸಲಹೆ ಅದೊಂದೇ. ಸಾಧ್ಯ ಆದರೆ ಇನ್ನೊಬ್ಬರಿಗೆ ಸಹಾಯ ಮಾಡು. ಆದರೆ ಎಂದಿಗೂ ಯಾರನ್ನೂ ನೋಯಿಸಬೇಡ, ಯಾವುದೇ ರೀತಿಯಲ್ಲಿ.
ಬೋರ್ ಅನ್ನಿಸಿತಾ? ನನ್ನ ನಗುವಿನ ಹಿಂದಿನ ಕೆಲವು ವಿಷಯಗಳನ್ನು ಹೇಳಬೇಕೆಂಬ ಸದಿಚ್ಛೆ ಇದು. ಅಷ್ಟೇ!


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102