ಯತಿ ಸ್ವಂತೀ -59


28-2-2018
ಹುಟ್ಟು ಹಬ್ಬದ ಆಚರಣೆ ನಮ್ಮ ಮನೆಯಲ್ಲಿ ಹಬ್ಬಗಳಿಗಿಂತ ಒಂದು ಕೈ ಜಾಸ್ತಿ. ವಿಶೇಷವಾಗಿ ಮಕ್ಕಳಿಗೆ ರಾತ್ರಿ 12 ಗಂಟೆಗೆ ಕೇಕ್ ಮತ್ತು ಅಚ್ಚರಿಯ ಉಡುಗೊರೆ ಬಲು ಖುಷಿ.
1982 - 83ರ ಸಮಯದಲ್ಲಿ ನನ್ನ ಸಹೋದ್ಯೋಗಿ ಉದಯ್ ನನ್ನನ್ನು ರೋಟರಾಕ್ಟ್ ಕ್ಲಬ್ ಸದಸ್ಯನನ್ನಾಗಿ ಮಾಡಿದ. ರೋಟರಿಯ ಮರಿ ಇದು.
ಹೆಣ್ಮಕ್ಕಳು... ಗಂಡ್ಮಕ್ಕಳು ಎಲ್ಲರೂ ಒಂದೇ ಎನ್ನುವ ರೀತಿಯಲ್ಲಿ ಹರಟೆ. ನಂದಿ ಬೆಟ್ಟಕ್ಕೆ ಪಿಕ್ನಿಕ್ ಹೋಗಿದ್ದೆವು. ಬಹಳವೇ ಜಾಲಿ ಗ್ರೂಪ್ ಆಗಿತ್ತದು.
ಮದನ್ ಎನ್ನುವ ಹುಡುಗನ ಮನೆಯಲ್ಲಿ ಪುಟ್ಟ ವರಾಂಡಾದಲ್ಲಿ ಹಾಸಿದ್ದ ದಪ್ಪನೆಯ ಹಾಸಿಗೆಯ ಮೇಲೆ ಕುಳಿತು ಚರ್ಚೆ. ನಮ್ಮಲ್ಲಿ ಒಬ್ಬ ಹುಡುಗ ಇದ್ದ. ಬಹಳವೇ ಸಾಧು ಹುಡುಗ. ಅವನ ತಂಗಿ ಬಹಳ ಸೋಷಿಯಲ್. ಆಗಿನ ಕಾಲದ ಸೋಷಿಯಲ್ ಎಂದರೆ ಬಂದೊಡನೆ ಅವಳು ನಮ್ಮೆಲ್ಲರ ಕೈ ಕುಲುಕುತ್ತಿದ್ದಳು. ಅದು ಆಗಿನ್ನೂ ಹೊಸತು. ಬೇರೆ ಯಾವ ಹುಡುಗಿಯೂ ನಮಗೆ ಹಾಗೆ ’ಕೈ’ ಕೊಟ್ಟಿದ್ದಿಲ್ಲ! ಅವಳಿಗೆ ಎಚ್ ಕ್ಯೂ ಅಂತ ಹೆಸರಿಟ್ಟ ನೆನಪು. ಅಂದ್ರೆ ಹ್ಯಾಂಡಲ್ ಕ್ವೀನ್! ಎಂತಹ ದುಷ್ಟ ಹುಡುಗರು ಅಲ್ವಾ ನಾವು!
ಡೆಡಿಕೇಶನ್ ಎನ್ನುವ ಎರಡು ಪುಟಗಳ ನಮ್ಮ ಜಯನಗರ ರೋಟರಾಕ್ಟ್ ಕ್ಲಬ್ನ ಆಂಗ್ಲ ಮಾಸಪತ್ರಿಕೆಗೆ ಎರಡು ವರ್ಷಗಳ ಕಾಲ ಸಂಪಾದಕನಾಗಿದ್ದೆ. ಅದಕ್ಕೆ ಲೇಖನಗಳನ್ನು ಬರೆದೆ. ಉಳಿದವರು ಬರೆದಿದ್ದನ್ನು ತಿದ್ದುಪಡಿ ಮಾಡಿ ಪ್ರಕಟಿಸುತ್ತಿದ್ದೆ.
ಅದಲ್ಲದೇ ಅನೇಕ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿದೆವು. ಜೊತೆಗೆ ಸ್ವಲ್ಪ ಸೀರಿಯಸ್ ಕೆಲಸ ಕೂಡ ಮಾಡಿದೆವು.
ಅನೇಕ ಶ್ರೀಮಂತರ ಮನೆಗಳಿಂದ ಸ್ವಲ್ಪ ಹಳೆಯ, ಆದರೆ ಗಟ್ಟಿಮುಟ್ಟಾದ ಉಡುಪುಗಳನ್ನು ಶೇಖರಿಸಿ ನಿಮ್ಹಾನ್ಸ್ಗೆ ಹೋದೆವು. ಅಲ್ಲಿ ಸ್ಪಾಸ್ಟಿಕ್ (ಮೆದುಳು ಉಳಿದ ಅಂಗಗಳಿಗೆ ಸರಿಯಾಗಿ ಸೂಚನೆ ನೀಡದಿದ್ದರೆ ಎಂತಹ ದುಃಸ್ಥಿತಿ ಎಂಬ ಅರಿವು ನಮಗೆ ಮೂಡುತ್ತದೆ ಆ ಮಕ್ಕಳನ್ನು ಕಂಡಾಗ. ನಮ್ಮ ಎಲ್ಲ ಅಂಗಗಳೂ ಸರಿಯಾಗಿರುವುದಕ್ಕೆ ಆ ದೇವರಿಗೆ ನಮನ ಸಲ್ಲಿಸಬೇಕು ನಾವು) ಮಕ್ಕಳ ಬಳಿ ಹೋಗಿ ಅವರಿಗೆ ಬಟ್ಟೆ ಮತ್ತು ಸಿಹಿ ಹಂಚಿದೆವು.
ಅವರನ್ನು ಕಂಡರೆ ಕರುಳು ಕಿತ್ತುಕೊಂಡು ಬರುತ್ತಿತ್ತು. ಯಾಕೆ ದೇವರು...? ಉತ್ತರ ಇಲ್ಲದ ಪ್ರಶ್ನೆ.
ಅಲ್ಲಿಂದ ಮತ್ತೊಂದು ರೀತಿಯ ಮಕ್ಕಳ ಬಳಿ ಹೋದೆವು. ಆ ಮಕ್ಕಳ ತಾಯ್ತಂದೆಯರು ಇತರರೊಂದಿಗೆ ಕದನ ಮಾಡುವಾಗ ತಾಯ್ತಂದೆಯರಿಗೆ ಸಹಾಯ ಮಾಡಿದ ’ಜಾಣ’ ಮಕ್ಕಳಂತೆ ಇವರು. ಎದುರಾಳಿ ಮೇಲೆ ಕಾರದ ಪುಡಿ ಎರಚುವ ಕೆಲಸ ಮಾಡಿವೆ.
ಪಕ್ಕದಲ್ಲಿ ವೇಶ್ಯಾವೃತ್ತಿಯಿಂದ ರಕ್ಷಿಸಲ್ಪಟ್ಟ ಮಹಿಳೆಯರು ಮತ್ತು ಅವರ ಮಕ್ಕಳು.
ಖಾಲಿ ರೂಮುಗಳಲ್ಲಿ ಛಾವಣಿ ದಿಟ್ಟಿಸುತ್ತಾ ಇರುವ ಜನ. ಕೂದಲು ಇದ್ದರೆ ಜುಟ್ಟಾಜುಟ್ಟಿ ಆಡುವರೆಂದು ಬೋಳಿಸಲ್ಪಟ್ಟ ತಲೆಗಳು.
ನನ್ನ ಹುಟ್ಟು ಹಬ್ಬ ಬಂತು. ಶಾಂತಿನಗರದ ವಾತ್ಸಲ್ಯ ಎನ್ನುವ ಪುಟ್ಟ ಹೆಣ್ಣು ಮಕ್ಕಳ ಅನಾಥಾಶ್ರಮಕ್ಕೆ ಹೋದೆವು.
ಎಲ್ಲರಿಗೂ ಸಿಹಿ ಹಂಚಿದೆವು. ನಂತರ 'ಮರೆಯದಿರೂ ಸ್ನೇಹ ಬಗೆಯದಿರೂ ದ್ರೋಹ... ಜಯತು ಜಯ ವಿಠಲಾ' ಹಾಡುಗಳನ್ನು ಹೇಳಿದೆ.
ಆ ಮಕ್ಕಳು ಅಣ್ಣಾ ಎಂದಾಗ ಒಂದು ಅನಿರ್ವಚನೀಯ ಆನಂದ...
-೦-೦-೦-

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102