ಯತಿ ಸ್ವಂತೀ -38


07-02-2018
ನನ್ನ ಜೀವನದ ಅನೇಕ ಘಟನೆಗಳಿಗೆ ನಾನು ಕಾರಣ ಆದರೆ ಬಹಳ ಬಹಳ ಘಟನೆಗಳಿಗೆ ನಾನು ಕಾರಣನಲ್ಲ, ಬಹುಶಃ ನಾನು ಅವುಗಳ ಬಗ್ಗೆ ತೋರುವ ಪ್ರತಿಕ್ರಿಯೆಯಿಂದ ಕೂಡ ಇರಬಹುದು.
ಏಕೆಂದರೆ ಕೆಲವು ಘಟನೆಗಳು ನಮಗೆ ತಿಳಿಯದೇ ಅಯಾಚಿತವಾಗಿ ನಡೆಯುತ್ತವೆ. ಈ ಅಯಾಚಿತ ಪದವೇ ಚೆನ್ನ. ಯಾಚನೆ ಎಂದರೆ ಬೇಡುವುದು. ಯಾಚಿತ ಎನ್ನುವುದು ಅದರ ನಾಮಪದ ರೂಪ ಎಂದುಕೊಂಡರೆ ಅಯಾಚಿತ ಎಂದರೆ ನಾವು ಬೇಡದೇ ನಮಗೆದುರಾಗುವ ಘಟನೆಗಳು. ಅಪ್ರಯತ್ನ ಎನ್ನುವ ಮತ್ತೊಂದು ಪದವಿದೆ. ಪ್ರಯತ್ನವಿಲ್ಲದೇ ಎನ್ನುವುದನ್ನು ಅಪ್ರಯತ್ನ ಎನ್ನಬಹುದೇನೋ.
ಪದ ಎನ್ನುವ ಪದವನ್ನು ಕೆಲವರು ಶಬ್ದ ಎಂದೂ ಬಳಸುತ್ತಾರೆ.
ಎಷ್ಟು ವಿಶಿಷ್ಟ ಅಲ್ಲವೇ? ಮೊನ್ನೆ ಮೊನ್ನೆ ಜೆಲಸಿ, ಎನ್ವಿ – ಈ ಎರಡು ಪದ(ಶಬ್ದ!)ಗಳಿಗೆ ಕನ್ನಡ ಪದಗಳನ್ನು ಹುಡುಕುತ್ತಿದ್ದೆ. ಅಸೂಯೆ, ಮತ್ಸರ, ಹೊಟ್ಟೆಕಿಚ್ಚು, ಈಷ್ರ್ಯೆ... ಎಲ್ಲವೂ ಒಂದೇ ರೀತಿ ಇದ್ದರೂ ಒಂದಿಷ್ಟಿಷ್ಟು ಬೇರೆ ಬೇರೆ ಅರ್ಥ ಇರಬಹುದೇನೋ. ಕೆಲವರನ್ನು ಕಂಡರೆ ನಮಗೆ ಅಸೂಯೆ, ಕೆಲವನ್ನು ಕಂಡರೆ ಮನಗೆ ಈಷ್ರ್ಯೆ... ಉಹೂಂ.. ನಾವು ಆದಷ್ಟೂ ಒಂದೇ ಅರ್ಥದಲ್ಲಿ ನಾಲ್ಕೂ ಶಬ್ದಗಳನ್ನು ಬಳಸುತ್ತೇವೆ. ಬಳಸು ಎಂದರೆ ಒಂದರ್ಥ ಆಲಿಂಗಿಸಿಕೋ ಎಂದು. ಆದರೂ ಉಪಯೋಗಿಸುತ್ತೇವೆ ಎನ್ನುವುದಕ್ಕೆ ಬಳಸುತ್ತೇವೆ ಎಂದು ಬಳಸು... ಉಹೂಂ ಉಪಯೋಗಿಸುತ್ತೇವೆ!!
ಹ್ಞಾಂ... ಘಟನೆ... ಯಾವುದನ್ನು ಬರೆಯಲಿ? ಎಷ್ಟೊಂದು ಇದೆ ಬರೆದು ಹಂಚಿಕೊಳ್ಳಲು.
ಉದಾಹರಣೆಗೆ ನಮ್ಮ ಮಿಡ್ಲ್ ಸ್ಕೂಲ್ ಘಟನೆಯೊಂದು.
ಒಮ್ಮೆ ಒಬ್ಬ ಸಹಪಾಠಿ ಲವಂಗವನ್ನು ತಂದಿದ್ದ. ನೆಲದ ಮೇಲೆ ಕುಳಿತು ಪಾಠ ಕೇಳುತ್ತಿರುವಾಗ ಮೇಡಂ ಕಣ್ತಪ್ಪಿಸಿ ಎಲ್ಲರಿಗೂ ಒಂದೊಂದು ಕೊಟ್ಟಿದ್ದ. ಎಲ್ಲರೂ ಅದನ್ನು ತಿಂಡಿಯಂತೆ ಅಗಿದೆವು. ಆಮೇಲೆ ಆಯಿತು ಹಾಹಾ ಖಾರ!!
ಮೇಡಂ... ಬಾಯಾರಿಕೆ ಎಂದು ಎದ್ದು ನಿಂತೆ.
ನಾಗಲಕ್ಷ್ಮಮ್ಮ ಮಿಸ್ ಹೂಂ ಹೋಗಿ ನೀರು ಕುಡಿದು ಬಾ ಎಂದರು.
ವಾಪಸ್ ಬಂದು ಕುಳಿತಾಗ, ಹೇಗಿತ್ತು ಲವಂಗ ಅಂದರು!
ಅಷ್ಟರಲ್ಲಿ ಅವರು ವಿಷಯ ಸಂಗ್ರಹ ಮಾಡಿದ್ದರು.
ಎಲ್ಲಿ ಎಲ್ರೂ ಕೈ ತೋರಿಸಿ ಎಂದು ಹೇಳಿ ಎರಡೂ ಅಂಗೈ ಮೇಲೆ ಒಂದೊಂದು ಏಟು ತೆಳ್ಳಗಿನ ಬಿದಿರಿನ ಬೆತ್ತದಿಂದ.
ಯತಿರಾಜನ್ನ ಕೇಳಿ, ಪ್ರೈಮರಿ ಸ್ಕೂಲಲ್ಲಿ ಕೂಡ ನಾನು ಸ್ಟ್ರಿಕ್ಟ್ ಆಗಿದ್ದೆ ಎಂದರು. ಆ ಮೇಡಂ ನಾನು ಪ್ರೈಮರಿಯಲ್ಲಿದ್ದಾಗ ಆ ಶಾಲೆಯಲ್ಲಿದ್ದೋರು, ನಾನು ಮಿಡ್ಲ್ ಸ್ಕೂಲಿಗೆ ಬಂದಾಗ ಇಲ್ಲಿಗೂ ಬಂದರು.
ತರಲೆ ಮಾಡಿದರೆ ಮುಂಗೈ ಮೇಲೆ ಬೆರಳುಗಳ ಗಂಟುಗಳ ಮೇಲೆ ಬಾರಿಸುತ್ತೇನೆ ಎಂದಿದ್ದರು ಕೂಡ.
ಆದರೆ ಮೇಡಂ ಬಹಳ ಸ್ಪೋರ್ಟಿವ್. ನಾನು ಒಮ್ಮೆ ಭಗವದ್ಗೀತೆಯ ಹನ್ನೆರಡನೆಯ ಮತ್ತು ಹದಿನೈದನೆಯ ಅಧ್ಯಾಯವನ್ನು ತಪ್ಪಿಲ್ಲದೇ ಪಠಿಸಿದಾಗ ನನಗೆ ಭಗವದ್ಗೀತೆಯ ಒಂದು ಪುಟ್ಟ ಪುಸ್ತಕವನ್ನು ಕೊಟ್ಟಿದ್ದರು.
ಅದೇ ನನ್ನ ಬಳಿ ಬಂದ ಮೊದಲ ಗೀತೆ ಪುಸ್ತಕ. ಈಗ ನನ್ನ ಬಳಿ ಬಹಳ ಪುಸ್ತಕಗಳಿವೆ ಗೀತೆಯ ಬಗ್ಗೆ. ಅಫ್ ಕೋರ್ಸ್, ಅಂತರ್ಜಾಲದಿಂದ ಡೌನ್‍ಲೋಡ್ ಮಾಡಿದ ಅನೇಕ ಪ್ರತಿಗಳೂ ಇವೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102