ಯತಿ ಸ್ವಂತೀ -40


09-02-2018
ಮೈಸೂರಿನಲ್ಲಿ ಹತ್ತನೇ ತರಗತಿಯವರೆಗೆ ಓದಿ ಪಿ.ಯು.ಸಿ. ಓದಲು ಬೆಂಗಳೂರಿಗೆ ಬಂದೆ. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಆಗ ಆರು ಕೊಠಡಿಗಳು ಮಾತ್ರವಿದ್ದವು. ಹಿಂದಿನ ವರ್ಷ ಒಂದನೇ ಪಿ.ಯು.ಸಿ.ಯಲ್ಲಿ ಎರಡೇ ಸೆಕ್ಷನ್ ಇದ್ದಿದ್ದರಿಂದ, ಅವರೆಲ್ಲರೂ ಎರಡನೇ ಪಿ.ಯು.ಸಿಗೆ ಹೋಗಿದ್ದರಿಂದ ಈ ಸಲ ನಾಲ್ಕು ಸೆಕ್ಷನ್ ಮೊದಲ ಪಿಯುಸಿ ಇತ್ತು. ಅದಕ್ಕೇ ಏನೋ 49% ಪಡೆದು ಎಸ್ಸೆಸ್ಸೆಲ್ಸಿ ಪಾಸಾಗಿದ್ದ ನನಗೆ ಅಲ್ಲಿ ಪಿಸಿಎಂಬಿಗೆ ಸೀಟು ಸಿಕ್ಕಿತು!
ಭಾರದ್ವಾಜ್ ಪ್ರಿನ್ಸಿಪಲ್ ಆಗಿದ್ದರೆಂದು ನೆನಪು.
ಬೆಳಗ್ಗೆ ಎಂಟೂವರೆಯಿಂದ ಹತ್ತೂವರೆ, ಹದಿನೈದು ನಿಮಿಷ ಬ್ರೇಕ್, ಮತ್ತೆ ಹತ್ತೂ ಮುಕ್ಕಾಲಿನಿಂದ ಹನ್ನೆರಡೂ ಮುಕ್ಕಾಲು ತರಗತಿ. ಒಂದು ವೇಳೆ ಲ್ಯಾಬ್ ಇದ್ದರೆ ಅದು ಮಧ್ಯಾಹ್ನ ಮೂರೂವರೆಯಿಂದ ಐದೂವರೆ. ನನಗೆ ಮನೆ ವಾಕಬಲ್ ದೂರ. ಅದಕ್ಕೇ ನಾಲ್ಕು ವೇಳೆ (ಲ್ಯಾಬ್ ಇದ್ದರೆ) ಇಲ್ಲದಿದ್ದರೆ ಎರಡು ವೇಳೆ ನಡೆದು ಓಡಾಡುತ್ತಿದ್ದೆ.
ಜಯನಗರ ಹದಿನಾರನೇ ಮೆಯಿನ್‍ನಲ್ಲಿ ಮನೆ. ಮೂವತ್ತೈದನೆಯ ಕ್ರಾಸ್‍ನಲ್ಲಿ ಬಂದು 11ನೇ ಮೆಯ್ನ್‍ನಲ್ಲಿ ಎಡಕ್ಕೆ ತಿರುಗಿ ತಕ್ಷಣವೇ 36ನೇ ಕ್ರಾಸಿನಲ್ಲಿ ಬಲಕ್ಕೆ ತಿರುಗಿದರೆ ಎರಡನೇ ಮೆಯ್ನ್ ಬಳಿ ಪಾರ್ಕ್. ಪಾರ್ಕಿನ ಹಿಂದೆ ಕಾಲೇಜು.
ಯಂಶೈವಾ ಸಮುಪಾಸತೇ ಶಿವ ಇತಿ ... ಎಂದು ಬೆಳಗ್ಗೆ ಒಂದೊಂದು ತರಗತಿಯವರು ಒಬ್ಬರ ಹಿಂದೆ ಒಬ್ಬರು ನಿಂತು ಮೈದಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದೆವು. ಈಗ ಆ ಮೈದಾನವೇ ಎಚ್ ಎನ್ ಆಡಿಟೋರಿಯಂ ಆಗಿಬಿಟ್ಟಿದೆ. ನನ್ನ ಮಾತು 1972-74ರದ್ದು.
ಕಪಿನಯ್ಯ ಅಂತ ಲ್ಯಾಬ್ ಅಸಿಸ್ಟೆಂಟ್ ಇದ್ದನೆಂದು ನೆನಪು. ಕನ್ನಡಕ್ಕೆ ಎಚ್ಚೆಸ್ಸಾರ್, ಕೆಎಲ್ಜಿ. ಕೆಮಿಸ್ಟ್ರಿಗೆ ಕೆವಿಜಿ (ಇವರು ತಬಲಾ ವಾದಕರು ಕೂಡ. ಬಹಳ ವರ್ಷಗಳ ನಂತರ ನನ್ನ ಮಗ ಜ್ಞಾನೋದಯ ಕಾಲೇಜಿನಲ್ಲಿ ಪಿಯುಸಿ ಓದುವಾಗ ಅವನಿಗೆ ವಿಜ್ಹಿಟಿಂಗ್ ಪ್ರೊಫೆಸರ್ ಆಗಿದ್ದರು). ಪಿಜಿಕ್ಸ್‍ಗೆ ವಿ ಎಸ್ ಮತ್ತು ಎಚ್ಚಾರ್ಕೆ. ಎಚ್ ಆರ್ ಕೆ ನಂತರ ಆಕಾಶವಾಣಿಗೆ ದೊಡ್ಡ ಅಧಿಕಾರಿಯಾದರೆಂದು ನೆನಪು. ಎಚ್ಚಾರ್ಕೆ ಕನ್ನಡ ಪತ್ರಿಕೆಗಳಿಗೆ ಬರೆಯುತ್ತಿದ್ದರು ಮತ್ತು ಕೊಳಲು ಬಹಳ ಚೆನ್ನಾಗಿ ನುಡಿಸುತ್ತಿದ್ದರು.
ಬಿ. ಶಿವಶಂಕರ್ ನಮ್ಮ ಬಯಾಲಜಿ ಮೇಷ್ಟ್ರು. ಬಹುಶಃ ಎಚ್ಚೆಸ್ಸಾರ್, ಕೆವಿಜಿ, ಬಿಎಸ್ ಎಲ್ಲರದೂ ಇದು ಮೊದಲ ಕೆಲಸ. ನಮಗೆಲ್ಲಾ ಹದಿನಾರು. ಅವರಿಗೆಲ್ಲ ಬಹುಶಃ ಇಪ್ಪತ್ತೈದು ವರ್ಷಗಳು.
ಬಿ.ಎಸ್. ನಮ್ಮನ್ನು ಲಾಲ್‍ಬಾಗಿಗೆ ಹೋಗಿ ಮರಗಳ ಮೇಲಿನ ಬಟಾನಿಕಲ್ ಹೆಸರುಗಳನ್ನು ಬರೆದುಕೊಂಡು ಬರಲು ಕಳಿಸಿದ್ದರು. ಮಾರೇನಹಳ್ಳಿ ಕೆರೆಯ ಅಂಗಳದಲ್ಲಿ (ಈಗ ಅದು ಪುಟ್ಟೇನಹಳ್ಳಿ ಬಡಾವಣೆ ಅಥವಾ ಜೆಪಿ ನಗರ ಮೊದಲ ಹಂತ, ಜಯನಗರ ಐದನೇ ಬ್ಲಾಕ್... ಸರಿಯಾಗಿ ನೆನಪಿಲ್ಲ) ಅನಾಮಧೇಯ ಗಿಡಗಳನ್ನು ತೋರಿಸಿ ಅವನ್ನು ಕಂಡು ಹಿಡಿಯಲು ಕರೆದೊಯ್ದಿದ್ದರು.
ಇಂಗ್ಲೀಷ್‍ಗೆ ಪ್ರೊ. ಎಸ್ ಆರ್ ಸ್ವಾಮಿ ಮತ್ತು ಅವರ ಪತ್ನಿ ಇಂದಿರಾ ಇದ್ದರು. ತರಗತಿಯ ಹೊರಗೇ ಇರುತ್ತಿದ್ದ ವಿದ್ಯಾರ್ಥಿಗಳನ್ನು ಔಟ್‍ಸ್ಟ್ಯಾಂಡಿಂಗ್ ಸ್ಟೂಡೆಂಟ್ಸ್ ಎಂದು ಹೇಳುತ್ತಿದ್ದರು ಸ್ವಾಮಿ. ಹಾಗೆಯೇ ತರಗತಿಗೆ ಎಂದೋ ಒಮ್ಮೊಮ್ಮೆ ಬರುತ್ತಿದ್ದವರನ್ನು ರೆಗ್ಯುಲರ್‍ಲೀ ಇರ್ರೆಗ್ಯುಲರ್ ಎನ್ನುತ್ತಿದ್ದರು!
ಪ್ರೊಫೆಸರ್ ಸ್ಪೆಲ್ಲಿಂಗ್ ಯಾವಾಗಲೂ ಕನ್‍ಫ್ಯೂಸ್ ಆಗುತ್ತಿತ್ತು. ಎರಡು ಎಸ್ ಬರಬೇಕಾ ಒಂದು ಎಫ್ ಬರಬೇಕಾ ಅಥವಾ ಉಲ್ಟಾನಾ ಅಂತ. ಸ್ವಾಮಿಯವರು ಪ್ರೊಫೆಸರ್ ಈಸ್ ಎ ಫೂಲ್ ವಿಥ್ ಒನ್ ಎಫ್ ಆಂಡ್ ಆನ್ ಆಸ್ ವಿಥ್ ಟೂ ಎಸ್ಸಸ್ ಎನ್ನುತ್ತಿದ್ದರು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102