ಯತಿ ಸ್ವಂತೀ -36
05-02-2018
ಇತ್ತೀಚೆಗೆ ಫೇಸ್‍ಬುಕ್ ಗೆಳೆಯ ಸ್ಕಂದ ಆಗುಂಬೆಯ ಗಾಂಧಿ ಬಗ್ಗೆಗಿನ ಲೇಖನ ಓದಿದಾಗ ನನ್ನ ಮಿಡ್ಲ್ ಸ್ಕೂಲ್ ನೆನಪಾಯಿತು.
ನಾನು ಐದನೇ ತರಗತಿಗೆ ಒಂಟಿಕೊಪ್ಪಲ್‍ನಲ್ಲಿನ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆ ಸೇರಿದೆ. (ಇದು ಬಾಲಕರ ಸರ್ಕಾರಿ ಮಾಧ್ಯಮಿಕ ಶಾಲೆ ಅಂತಾಗಬೇಕಲ್ವಾ? ಹಸುವಿನ ಶುದ್ಧ ಹಾಲು ಅನ್ನುವ ಬದಲು ಶುದ್ಧ ಹಸುವಿನ ಹಾಲು ಅಂತ ಜಾಹೀರಾತು ನೋಡಿದ್ದೇನೆ! ಇದೂ ಅದೇ ತರಹದ್ದು... ಅಲ್ವೇ?) ಕನ್ನಡದಲ್ಲಿ ಒಂದಿಷ್ಟು ಹೆಚ್ಚು ತಿಳಿದಿದೆ ಎಂಬ ಹೆಮ್ಮೆ!
ಏಕೆಂದರೆ ಸುಧಾ ಪತ್ರಿಕೆ 1965ರಲ್ಲಿ ಬಂದಾಗಿನಿಂದ ಓದಲಾರಂಭಿಸಿದೆ. ಬಾಲವಿಹಾರ ಅರ್ಥ ಆಗುತ್ತಿತ್ತು. ಆದರೆ ಅರ್ಥವಾಗಲೀ ಬಿಡಲೀ, ಬಿ. ಪುಟ್ಟಸ್ವಾಮಯ್ಯನವರ ದ್ವಾ ಸುಪರ್ಣಾ ಧಾರಾವಾಹಿ ಓದುತ್ತಿದ್ದೆ.
ಹ್ಞಾಂ ವಿಷಯಕ್ಕೆ ಬರುತ್ತೇನೆ.
ನಮಗೆ ಇದ್ದ ಮೇಷ್ಟರು ಮೇಡಂಗಳು ಕೆಲವರ ಹೆಸರು ನೆನಪಿದೆ. ಶ್ರೀನಿವಾಸ ಅಯ್ಯಂಗಾರ್ (ಇವರ ಮಗ ವಾಸು ನಮ್ಮ ಸಹಪಾಠಿ; ಇವರ ಇನ್ನೊಬ್ಬ ಮಗ ನನ್ನ ಗೆಳೆಯನ ಭಾವ), ಶೆಲ್ವಪಿಳ್ಳೈ ಅಯ್ಯಂಗಾರ್, ಕುಮುದವಲ್ಲಿ (ಇವರು ಅವರ ಮಗಳು), ನಾಗಲಕ್ಷ್ಮಮ್ಮ (ಇವರು ನನಗೆ ಪ್ರೈಮರಿಯಲ್ಲಿ ಟೀಚರ್. ನನ್ನ ಜೊತೆಗೇ ಅವರೂ ಮಿಡ್ಲ್ ಸ್ಕೂಲಿಗೆ ಬಂದರು) ಮತ್ತು ಗಂಗಣ್ಣ ಮೇಷ್ಟರು.
ನನ್ನ ದುರಭ್ಯಾಸ ಒಂದಿತ್ತು. ಬೋರ್ಡಿನ ಮೇಲೆ ಮೇಷ್ಟರು ಮೇಡಂ ಏನಾದರೂ ಬರೆದರೆ ಅದರಲ್ಲಿ ಏನಾದರೂ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ತಕ್ಷಣವೇ ಎದ್ದು, ಡಸ್ಟರ್‍ನಲ್ಲಿ ಅಳಿಸಿ, ಚಾಕ್‍ಪೀಸ್ ತಗೊಂಡು ಸರಿಪಡಿಸುತ್ತಿದ್ದೆ!
ಶೆಲ್ವಪಿಳ್ಳೈ ಅಯ್ಯಂಗಾರರು, ಶ್ರೀನಿವಾಸ ಅಯ್ಯಂಗಾರರು ಎಲ್ಲರೂ ಸುಮ್ಮನೆ ನಕ್ಕುಬಿಡುತ್ತಿದ್ದರು. ನನಗೆ ಅದು ಇನ್ನಷ್ಟು ಕುಮ್ಮಕ್ಕು ನೀಡಿತ್ತು.
ಗಂಗಣ್ಣ ಹೊಸದಾಗಿ ಬಂದಾಗ ಪಾಠ ಮಾಡುತ್ತಾ ಬೋರ್ಡಿನ ಮೇಲೆ ಬರೆದರು. ಅರೆ! ಸ್ಪೆಲ್ಲಿಂಗ್ ತಪ್ಪಿದೆ ಎಂದು ಎದ್ದು ನಿಂತೆ. ನೇರ ಹೋಗಿ ಅಳಿಸಿ, ತಿದ್ದಿ ಬರೆದೆ!
ಅಷ್ಟೇ!
ಛಟೀರ್, ಛಟೀರ್, ಛಟೀರ್ ಎಂದು ಮೂರು ಏಟುಗಳು. ಕೆನ್ನೆಯ ಮೇಲೊಂದು, ಅರೆತೋಳಿನ ಷರ್ಟು ಹಾಕಿದ್ದ ಕೈ ಮೇಲೊಂದು, ನಿಕ್ಕರ್ ಹಾಕಿದ್ದರಿಂದ ಅದರಿಂದ ಸ್ವಲ್ಪ ಕೆಳಗೆ ತೊಡೆಯ ಮೇಲೊಂದು ಬಾರಿಸಿದ್ದರು ಗಂಗಣ್ಣ. ಏನೋ ನೀನು.. ಚೋಟುದ್ದ ಇದ್ದೀಯ. ಇಷ್ಟು ದೊಡ್ಡ ತಲೆಹರಟೆ ಎಂದು ಗೊತ್ತಿರಲಿಲ್ಲ ಎಂದುಬಿಟ್ಟರು.
ನಾನು ಅಳುಮುಖ ಮಾಡಿದೆ.
ನನ್ನ ಮೈಮೇಲೆ ಆಗಿನ ಕಾಲದಲ್ಲಿ ಗಂಧೆ ಮೂಡುತ್ತಿತ್ತು. ಏನಾದರೂ ಗೀರು ಗಾಯವಾದರೆ ಆ ಗೀರಿನಂತೆಯೇ ಚರ್ಮ ಊದುತ್ತಿತ್ತು. ನನ್ನ ಸೋದರಮಾವ ಒಮ್ಮೆ ಒಂದು ತೂತು ತೂತಿನ ಸೌಟು ನನ್ನ ತೊಡೆಯ ಮೇಲಿಟ್ಟು ಪೆನ್ನಿನಿಂದ ಪ್ರತಿಯೊಂದು ತೂತಿನೊಳಗೂ ಚುಚ್ಚುತ್ತಾ ಹೋಗಿ, ಚಂದ್ರಮುಖದ ಶೇಪಿನಲ್ಲಿ ಚರ್ಮ ಊದಿಕೊಂಡಿತ್ತು.
ನನ್ನ ಗಂಧೆಯ ವಿಷಯ ಸಹಪಾಠಿಗಳಿಗೆ ಗೊತ್ತಿತ್ತು. ಗಂಗಣ್ಣ ಅವರ ಕೈ ಬೆರಳಿನ ಗುರುತುಗಳನ್ನು ನನ್ನ ದೇಹದ ಮೂರು ಭಾಗದಲ್ಲಿ ನೋಡಿ ಗಾಬರಿಯಾದರು. ಇನ್ನು ಮೇಲೆ ಹೊಡೆಯೋದಿಲ್ಲ ಎಂದು ವಚನ ನೀಡಿದರು!
ಅಂದ ಹಾಗೆ ಆ ತಿದ್ದಾವಣೆಯ ಕೆಲಸ ಇಂದು ನನಗೆ ಒಂದು ವೃತ್ತಿಯಾಗಿದೆ. ನನ್ನ ಪ್ರಕಾಶನದ ಪುಸ್ತಕಗಳ, ನಾನು ಬರೆದ ಪುಸ್ತಕಗಳ ಪ್ರೂಫ್ ರೀಡಿಂಗ್ ಮಾಡಿ ಅಭ್ಯಾಸವಾಗಿದ್ದ ನನಗೆ ಈಗ ವೃತ್ತಿಪರ ಪ್ರೂಫ್ ರೀಡರ್ ಪಟ್ಟ ಸಿಕ್ಕಿದೆ! ಒಂದಿಷ್ಟು ಹಣವನ್ನೂ ಅದು ನೀಡುತ್ತಿದೆ.
ಬಹಳ ಸುಲಭದ ಕೆಲಸ ತಪ್ಪು ಕಂಡುಹಿಡಿಯುವುದು. ಬಹಳ ಹೆಡ್ಡತನದ ಕೆಲಸ ತಪ್ಪು ಕಂಡುಹಿಡಿಯುವುದು, ಬಹಳ ಅಗ್ಗದ ಕೆಲಸ ತಪ್ಪು ಕಂಡುಹಿಡಿಯುವುದು!
Comments
Post a Comment