ಯತಿ ಸ್ವಂತೀ -49


18-02-2018
ಸಿನಿಮಾಗಳ ವಿಷಯ ಬಂದಾಗ ನನ್ನ ಪತ್ನಿಗೆ ನನ್ನ ಮೇಲೆ ಕೆಲವೊಮ್ಮೆ ಮುನಿಸು ಉಂಟಾಗುತ್ತದೆ. ಮದುವೆಗೆ ಮೊದಲು ವಾರಕ್ಕೆ ಎರಡು ಸಿನಿಮಾಗಳು, ಕೆಲವೊಮ್ಮೆ ಒಂದು ನೂನ್ ಶೋ, ಒಂದು ಮ್ಯಾಟಿನೀ ನೋಡಿ ಮನೆಗೆ ಹೋಗಿದ್ದ ದಿನಗಳೂ ಇದ್ದವು. ಮದುವೆ ಆದ ಒಡನೆ ವಿಷ್ಣುವರ್ಧನ್, ಜ್ಯೂಲಿ ಲಕ್ಷ್ಮೀ ‘ಸೌಭಾಗ್ಯ ಲಕ್ಷ್ಮಿ’ ಚಿತ್ರವನ್ನು ಮೈಸೂರಿನ ಸರಸ್ವತಿ ಚಿತ್ರಮಂದಿರದಲ್ಲಿ ನೋಡಿದ್ದೆವು. ನಂತರ ಬಹುಶಃ ಪ್ರೇಮಲೋಕ, ಹೂವುಹಣ್ಣು, ಹಂ ಆಪ್ ಕೇ ಹೈ ಕೌನ್... ಅಷ್ಟೇ ಅನ್ನಿಸುತ್ತೆ ನಾನು, ನನ್ನ ಪತ್ನಿ ಒಟ್ಟಿಗೆ ನೋಡಿದ್ದು. ಅದರಲ್ಲೂ ಹೂವು ಹಣ್ಣು ಮಾತ್ರವೇ ನಾವಿಬ್ಬರೇ ಹೋಗಿದ್ದುದು.
ಒಂದೆರಡು ಸಿನಿಮಾಗಳನ್ನು ಗೋಪಾಲನ್ ಆರ್ಚ್ ಮಾಲ್‍ನಲ್ಲಿ ನನ್ನ ಮಗ, ಮಗಳು, ಪತ್ನಿ ಮೂವರೊಂದಿಗೆ ಹೋಗಿ ನೋಡಿದ್ದೇನೆ. ಮಗ, ಮಗಳೊಂದಿಗೆ ಕೂಡ ಒಂದೆರಡು ಸಿನಿಮಾ.
ಆದರೆ ಮದುವೆಗೆ ಮುಂಚಿನ ಸಿನಿಮಾ ಹುಚ್ಚು ಎಲ್ಲಿಯೋ ಮಾಯವಾಗಿಬಿಟ್ಟಿದೆ!
ಸಿನಿಮಾ ನೋಡಲ್ಲವೆಂದಲ್ಲ, ನೋಡುತ್ತೇನೆ. ಯೂ ಟ್ಯೂಬ್‍ನಲ್ಲಿ ಹಳೆಯ ಸಿನಿಮಾಗಳು.
ಸುಮಾರು ಐದಾರು ವರ್ಷಗಳ ಹಿಂದೆ ಅಮೆರಿಕದ ಕೆಲವು ಥ್ರಿಲ್ಲರ್ ಧಾರಾವಾಹಿಗಳನ್ನು ನೋಡುವ ಅಭ್ಯಾಸ ಮಾಡಿಕೊಂಡೆ. ಕೆಲವು ಧಾರಾವಾಹಿಗಳನ್ನು ಅದೆಷ್ಟು ಬಾರಿ ನೋಡಿದೆನೋ!
ನನಗೆ ನೆನಪಿದೆ. ಕಶ್ಮೀರ್ ಕಿ ಕಲಿ, ಆನ್ ಇವನಿಂಗ್ ಇನ್ ಪ್ಯಾರಿಸ್ ಎಂಬ ಎರಡು ಶಕ್ತಿ ಸಾಮಂತ ನಿರ್ದೇಶನದ ಸಿನಿಮಾಗಳನ್ನು ಒಂದು ವಾರದಲ್ಲಿ ಮೂರು ಸಲ ನೋಡಿರುವುದುಂಟು. ನನ್ನ ಗೆಳೆಯನೊಬ್ಬ ಶರ್ಮಿಳಾಗೆ ನನಗಿಂತ ಕಟ್ಟಾಭಿಮಾನಿಯಾಗಿದ್ದ. ಅವನು ವಾರಕ್ಕೆ ಏಳು ಸಲ ನೋಡಿದ್ದ.
ಹಾಡುಗಳು, ಜಾಗಗಳು ಎಲ್ಲವೂ ಸುಂದರ, ಅತಿ ಸುಂದರ ಆ ಎರಡು ಸಿನಿಮಾಗಳಲ್ಲಿ. 1964 ಮತ್ತು 1968ರ ಸಿನಿಮಾಗಳು ಅವು. ಕಾಶ್ಮೀರ, ಪ್ಯಾರಿಸ್, ನಯಾಗರ ಜಲಪಾತ ಎಲ್ಲವೂ ಕಣ್ಮನಗಳಿಗೆ ಸುಂದರ.
ನನ್ನ ಪತ್ನಿಯೊಂದಿಗೆ ಲಗಾನ್ ಸಿನಿಮಾಗೆ ಹೋದ ನೆನಪಿದೆ. ಜಯನಗರದ ಸ್ವಾಗತ್ ಥಿಯೇಟರಿನಲ್ಲಿ (ಆಗಿನ್ನೂ ಗರುಡ ಆಗಿರಲಿಲ್ಲ) ಆ ಸಿನಿಮಾವನ್ನು ಗಾಂಧಿ ಕ್ಲಾಸಿನ ಮೊದಲ ಸಾಲಿನಲ್ಲಿ ಕೂತು ನೋಡಿದ ಜ್ಞಾಪಕ. ಪಾತ್ರಧಾರಿಗಳೆಲ್ಲರೂ ಅಗಾಧವಾಗಿ ಕಾಣಿಸುತ್ತಿದ್ದರು.
ಸಿನಿಮಾ ಶೂಟಿಂಗ್‍ಗಳನ್ನು ಕೂಡ ಬಹಳ ಚಿಕ್ಕಂದಿನಿಂದ ನೋಡಿದ್ದೇನೆ. ಮಾಧ್ಯಮಿಕ ಶಾಲೆಯಲ್ಲಿದ್ದಾಗ ಕಲ್ಪನಾ ಮೈಸೂರಿನ ಯಾದವಗಿರಿಯ ಮನೆಯೊಂದರ ತೋಟದಲ್ಲಿ ಹೂವೂ ಚೆಲುವೆಲ್ಲಾ ನಂದೆಂತಿತೂ ಎಂದು ಆ ಹಾಡಿನ ಮೂರು ಸಾಲನ್ನು ಸರಿಸುಮಾರು ನಾಲ್ಕುಗಂಟೆಗಳ ಕಾಲ ಹಾಡುತ್ತಲೇ ಇದ್ದಳು.
ದ್ವಾರಕೀಶ್ ಜಯಾ ಅಭಿನಯದ ರಾಮಶಾಸ್ತ್ರವ ಹೇಳುವೆ ಕೇಳು ನಮ್ಮ ಶಾಲೆಯ ಮುಂದಿನ ವೆಂಕಟರಮಣ ದೇವಾಲಯದ ಮುಂದೆ ಮಲಗಿದ್ದ ಗರುಡಗಂಬದ ಮೇಲೆ ಚಿತ್ರಿಸಿದ್ದು ನೆನಪಿದೆ.
ಸಿನಿಮಾ ಎನ್ನುವುದಕ್ಕೆ ಕರ್ನಾಟಕಕ್ಕಿಂತ ತಮಿಳು ಮತ್ತು ತೆಲುಗು ಜನರಲ್ಲಿ ಹೆಚ್ಚು ಅಭಿಮಾನದ ಮಹಾಪೂರ ಇದೆ. ತೆಲುಗು ಮದುವೆಗಳು ಸಾಮಾನ್ಯವಾಗಿ ರಾತ್ರಿ ಹೊತ್ತು ನಡೆದರೆ, ಮರುದಿನ ಬೆಳಗ್ಗೆ ಗಂಡು ಹೆಣ್ಣಿಗೆ ಏಕಾಂತ ಕಲ್ಪಿಸಲು ಅವರಿಬ್ಬರನ್ನೂ ಮಾರ್ನಿಂಗ್ ಶೋಗೆ ಕಳಿಸಲಾಗಿದ್ದನ್ನು ನಾನೇ ಕಣ್ಣಾರೆ ಕಂಡಿದ್ದೇನೆ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102