ಯತಿ ಸ್ವಂತೀ -53
22-02-2018
ಹೇಳುವುದಕ್ಕೆ ಬಹಳ ವಿಷಯಗಳಿವೆ. ಆತ್ಮವೃತ್ತಾಂತವಾಗಲೀ, ಆತ್ಮಕಥೆಯಾಗಲೀ ಅಲ್ಲ ಇದು. ನನ್ನ ಜೀವನದಲ್ಲಿ ನನಗೆ ನೆನಪಿರುವ, ಹೇಳಬಹುದಾದ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ ಅಷ್ಟೇ.
ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯಲ್ಲಿ ಪದವೀಧರ ಅಭಯಂತರ ತರಬೇತಿ ಪಡೆದೆ. ಗ್ರೇ ಬಣ್ಣದ ಶರ್ಟು. ನನ್ನ ಜೀವನದಲ್ಲಿಯೇ ಶರ್ಟನ್ನು ಇನ್ಸರ್ಟ್ ಮಾಡಿರಲಿಲ್ಲ. ಈಗ ವಿಧಿಯಿಲ್ಲದೇ ಮಾಡಬೇಕಿತ್ತು. ಇದು 1982ರ ಸಂಗತಿ.
ಹೊಸ ಹೊಸ ಗೆಳೆಯರು. ಒಂದು ರೀತಿಯ ಥ್ರಿಲ್ಲು. ಈಗಾಗಲೇ ನನಗೆ ಒಂದು ಕಂಪೆನಿಯಲ್ಲಿ ಕೆಲಸ ಸುಮಾರು ಏಳೆಂಟು ತಿಂಗಳು ಕೆಲಸ ಮಾಡಿದ ಅನುಭವವಿತ್ತು. ಆಗ ತಿರುವನಂತಪುರ, ಸುಳ್ಳೂರ್ ಪೇಟ, ಕೆಜಿಎಫ್‍ಗಳಿಗೆ ಹೋಗಿದ್ದೆ. ಹೊಸ ಜನರೊಂದಿಗೆ ಹೇಗೆ ವರ್ತಿಸಬೇಕೆಂಬ ಅಭ್ಯಾಸ ಒಂದಿಷ್ಟು ಆಗಿತ್ತು.
ನಂತರ ಮತ್ತೆ ಈಗ ಟ್ರೈನಿಂಗ್ ಮ್ಯಾನೇಜರ್. ನೀಟಾಗಿ ಹೇರ್‍ಕಟ್, ಶೇವ್ ಮಾಡಿರಬೇಕು. ಉಡುಪುಗಳು ನೀಟಾಗಿ ಇರಬೇಕು. ಪ್ರತಿದಿನ ಒಂದಿಷ್ಟು ಲೆಕ್ಚರ್ ಕೊಡುತ್ತಿದ್ದರು ನಮ್ಮ ಟ್ರೈನಿಂಗ್ ಮ್ಯಾನೇಜರ್. ಅವರು ಬಂದಿದ್ದು ಮಿಲಿಟ್ರಿಯಿಂದ!
ಟ್ರೈನಿಂಗ್ ಸೆಂಟರ್‍ನಲ್ಲೇ ಸ್ಮಿತಿ, ಕಾಪೆಂಟರಿ ಮುಗಿಸಿದ ನಂತರ ಬೇರೆ ಬೇರೆ ಡಿಪಾರ್ಟ್‍ಮೆಂಟುಗಳಿಗೆ ತರಬೇತಿಗೆ ಕಳಿಸುತ್ತಿದ್ದರು. ಕೆಲವು ಕಡೆ ಒಂದಿಷ್ಟು ಕೆಲಸ ಹೇಳಿಕೊಟ್ಟರು. ಇನ್ನು ಕೆಲವು ಕಡೆ ಡ್ರಾಯಿಂಗ್‍ಗಳ ಒರಿಜಿನಲ್ ಕೊಟ್ಟು ಬ್ಲೇಡ್‍ನಲ್ಲಿ ಕೆರೆದು ಇಂಡಿಯನ್ ಇಂಕ್ ಪೆನ್ನಿನಲ್ಲಿ ತಿದ್ದಲು ಹೇಳುತ್ತಿದ್ದರು.
ಕೆಲವು ದಿನಗಳ ನಂತರ ನಮಗೊಂದು ಪ್ರಾಜೆಕ್ಟ್ ಕೊಟ್ಟರು. ನಾನು ಮತ್ತು ಒಬ್ಬ ಡಿಪ್ಲೋಮ ಓದಿದ್ದ ಹುಡುಗ. ಜಯರಾಜ್ ಇರಬಹುದೇನೋ ಅವನ ಹೆಸರು. ಅರವತ್ತಾಯಿತು ನೋಡಿ, ಹೆಸರುಗಳು ಮರೆಯುತ್ತಿವೆ!
ಈ ಪ್ರಾಜೆಕ್ಟ್ ಆರ್ ಆಂಡ್ ಡಿಯಲ್ಲಿನದು. ಟ್ರಾನ್ಸ್‍ಫಾರ್ಮರ್‍ಗಳು ಸಾಮಾನ್ಯವಾಗಿ ಎಣ್ಣೆಯಲ್ಲಿ ಮುಳುಗಿದ ಕಾಯಿಲ್‍ಗಳದ್ದು ಇರುತ್ತಿತ್ತು. 1982ರಲ್ಲಿ ಡ್ರೈ ಟೈಪ್ ಟ್ರಾನ್ಸ್‍ಫಾರ್ಮರ್ ಮಾಡುವ ಕೆಲಸವನ್ನು ನನಗೂ, ಆ ಜಯರಾಜ (ದೇವ?)ನಿಗೂ ಕೊಟ್ಟರು.
ನಮಗೀಗ ಸಮಯದ ಅಭಾವವಿತ್ತು. ಡ್ರಾಯಿಂಗ್ ಕೆರೆಯುತ್ತಾ ಎಂಟು ಗಂಟೆಗಳ ಕಾಲ ಕಳೆಯಲು ಮನಸ್ಸು ಬರಲಿಲ್ಲ. ಆದರೆ ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ. ಬೆಕ್ಕಿಗೆ ಗಂಟೆ ಕಟ್ಟಬೇಕು!
ಅಂದರೆ ನಮ್ಮ ವಿಂಗ್ ಕಮ್ಯಾಂಡರ್ ಸಾಹೇಬರನ್ನು ವಿನಂತಿಸಿಕೊಳ್ಳಬೇಕು. ನಾವು ಹುಡುಗರು ಅವರ ಬಗ್ಗೆ ಹೇಗಿದ್ದೆವೆಂದರೆ ಅವರಿಂದ ಎಷ್ಟು ದೂರ ಇರಲು ಸಾಧ್ಯವೋ ಅಷ್ಟು ದೂರ ಇರುತ್ತಿದ್ದೆವು. ಒಂದು ವೇಳೆ ಇವರು ನಮ್ಮ ಬಗ್ಗೆ ಒಂದು ಕೆಟ್ಟ ರಿಮಾರ್ಕ್ ಬರೆದರೆ, ನಮಗೆ ಇಲ್ಲಿ ಕೆಲಸ ಸಿಗದಿದ್ದರೆ! ಎಂತಹ ಕಷ್ಟದ ಪರಿಸ್ಥಿತಿ ಅಲ್ವಾ?
ಆದರೆ ನನಗೆ ವಿಧಿಯಿರಲಿಲ್ಲ. ನನಗೆ ಪ್ರಾಜೆಕ್ಟ್ ಮಾಡಲು ಇದ್ದ ಇಷ್ಟಕ್ಕಿಂತ ಡ್ರಾಯಿಂಗ್ ಕೆರೆಯುವುದರ ಬಗ್ಗೆ ಅಯಿಷ್ಟ (ಅನಿಷ್ಟ?) ಹೆಚ್ಚು ಇತ್ತು.
ನೇರವಾಗಿ ನಮ್ಮ ಮ್ಯಾನೇಜರ್ ಬಳಿ ಹೋದೆ. ವಿವರಿಸಿದೆ. ‘ಓ, ನಿನಗೆ ಲೋಫ್ ಮಾಡೋಕ್ಕೆ ಇಷ್ಟ ಇಲ್ಲ, ಕೆಲಸ ಮಾಡೋಕ್ಕೆ ಇಷ್ಟ ಅನ್ನು?’ ಎಂದರು. ಲೋಫ್ ಎಂದರೆ ಲೋಫರ್‍ಗಳು ಮಾಡುವ ಕೆಲಸ ಅಂತ ಆಗ ನನಗೆ ತಿಳಿದುಬಂದಿತ್ತು!
‘ಹೌದು ಸರ್’ ಎಂದು ಹೇಳಿ ಕಾಯುತ್ತಾ ಇದ್ದೆ. ಅವರಿಗೆ ಯಾವುದೋ ಫೋನ್ ಕರೆ ಬಂತು. ಅವರು ಯಾವಾಗ ನನಗೆ ಉತ್ತರ ನೀಡುವರೋ ಎಂದು ಅವರು ರಿಸೀವರ್ ಇಡುವುದನ್ನೇ ಕಾಯುತ್ತಿದ್ದೆ.
ಕೊನೆಗೆ ಅಸ್ತು ಎಂದರು. ನನಗಂತೂ ಗಗನವು ಎಲ್ಲೋ ಭೂಮಿಯು ಎಲ್ಲೋ.. ಎನ್ನುವಂತಾಗಿತ್ತು!
Comments
Post a Comment