ಯತಿ ಸ್ವಂತೀ -48
17-02-2018
ಸಿನಿಮಾ ನೋಡುವ ಹುಚ್ಚು ಶುರುವಾಗಿದ್ದು ಬಹಳ ಹಿಂದೆ. ಕಾಲೇಜಿನಲ್ಲಿ ಚಕ್ಕರ್ ಹೊಡೆದು, ತರಗತಿ ಮುಗಿದ ಮೇಲೆ ಹೋಗುತ್ತಿದ್ದುದೂ ಉಂಟು.
ಬೆಂಗಳೂರು ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪಿಯೂಸಿ ಓದುವಾಗ ನಂದಾ, ಶಾಂತಿ ನಮ್ಮ ಫೇವರಿಟ್ ಥಿಯೇಟರುಗಳು. ಸೀತಾ ಔರ್ ಗೀತಾ, ರಾಮ್‍ಪೂರ್ ಕಾ ಲಕ್ಷ್ಮಣ್, ವಿಷ್ಣು ಅವರ ನಾಗರಹಾವು ಎಲ್ಲವೂ ನಂದಾ ಟಾಕೀಸಿನಲ್ಲಿ ನೋಡಿದ ಸಿನಿಮಾಗಳು. ಆಗೆಲ್ಲಾ ನನ್ನ ಸಹಪಾಠಿ ಅರುಣ್ ನನಗೆ ಸಿನಿಮಾಗೆ ಸಾಥ್ ನೀಡುತ್ತಿದ್ದ.
ನಂತರ ಮೈಸೂರಿಗೆ ಇಂಜಿನಿಯರಿಂಗ್ ಓದಲು ಹೋದೆ. ಅಲ್ಲಿ ಗಣೇಶ, ಶಾಂತಲಾ, ಲಕ್ಷ್ಮಿ, ಗಾಯತ್ರಿ ಚಿತ್ರಮಂದಿರಗಳಿಗೆ ರೆಗ್ಯುಲರ್ ವಿಜ್ಹಿಟ್ ಆದರೂ ಇಂಗ್ಲೀಷ್ ಸಿನಿಮಾಗಳಿಗೆ ಶಾಲಿಮಾರ್, ಶ್ಯಾಂಸುಂದರ್, ಗಣೇಶ, ಸ್ಟರ್ಲಿಂಗ್ ಟಾಕೀಸುಗಳು.
ಶಾಲಿಮಾರ್ ಥಿಯೇಟರ್ ಬನ್ನಿ ಮಂಟಪದ ಬಳಿ ಇತ್ತು. ಅನತಿ ದೂರದಲ್ಲಿ ರೇಷ್ಮೆಗೂಡುಗಳನ್ನು ಬೇಯಿಸುತ್ತಿದ್ದರು. ಅಬ್ಬಾ... ಆ ರೇಷ್ಮೆಹುಳುಗಳ ಬೇಯುವಿಕೆಯ ದುರ್ವಾಸನೆಯಂತೂ ಸಹಿಸಲಸಾಧ್ಯ. ಆದರೂ ಇಂಗ್ಲೀಷ್ ಸಿನಿಮಾಗೆ ಹೋಗಬೇಕು. ಅದಕ್ಕೆ ಕ್ಯೂನಲ್ಲಿ ನಿಲ್ಲಬೇಕು. ಅಲ್ಲಿ ಈ ದುರ್ವಾಸನೆ ಕುಡಿಯಬೇಕು.
ಜೇಮ್ಸ್‍ಬಾಂಡ್ ಸಿನಿಮಾಗಳು ನನಗೆ ಬಹಳ ಪ್ರಿಯ. ಬಾಂಡ್‍ನನ್ನು ಕಟ್ಟಿ ಹಾಕಿದ್ದರೂ ಅವನ ವಾಚ್‍ನಲ್ಲಿನ ಒಂದು ಚಿಕ್ಕ ಗರಗಸದಿಂದ ಹಗ್ಗವನ್ನು ಕತ್ತರಿಸಿಕೊಳ್ಳುತ್ತಿದ್ದ. ಬಾಂಡ್‍ಗಾಗಿ ಅನೇಕ ಆವಿಷ್ಕಾರಗಳಿರುತ್ತಿದ್ದವು. ಇಂದು ನೋಡಿದರೆ ಅವೆಲ್ಲವೂ ಸತ್ಯವಾದ ಪರಿಶೋಧಗಳಾಗಿವೆ!
ಮೈಸೂರಿನ ಯಾವ ಥಿಯೇಟರನ್ನು ಕೂಡ ನಾನು ಬಿಟ್ಟಿಲ್ಲ. ಆಗೆಲ್ಲಾ ನೋಡದ ಥಿಯೇಟರ್ ಯಾವುದೂ ಇರಕೂಡದೆಂದು ನಮ್ಮ ಶಪಥ. ಶ್ರೀ ಟಾಕೀಸಿಗೆ ಒಮ್ಮೆ ಹೋದಾಗ ಇಂಟರ್‍ವಲ್‍ನಲ್ಲಿ ಇಡೀ ನೆಲದ ಮೇಲೆ ಮಲ್ಲಿಗೆ ಹೂ ಹಾಸಿದಂತೆ ಬಿಳಿಯ ಬಣ್ಣ! ತೀರಾ ವಿಚಾರಿಸಿದರೆ ಕರಬೂಜ ಹಣ್ಣಿನ ಒಣಗಿನ ಬೀಜವನ್ನು ತಿನ್ನುತ್ತಾ, ಅದರ ಸಿಪ್ಪೆಯನ್ನು ನೆಲಕ್ಕೆ ಉದುರಿಸುತ್ತಾ ಚಿತ್ರ ನೋಡಿದ ಪ್ರೇಕ್ಷಕರ ಪರಿಯದು!
ಮತ್ತೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದೆ. ವಾರಕ್ಕೊಂದು ಸಿನಿಮಾಗೆ ಹೋಗಲೇಬೇಕು. ನನಗೆ ಶಾಶ್ವತ ಜೊತೆ ಉದಯ್. ಅದೆಷ್ಟು ಸಿನಿಮಾಗಳನ್ನು ನೋಡಿದೆವೋ! ಆಗ ಸ್ವಾಗತ್, ಪೂನಂ (ಪುಟ್ಟಣ್ಣ ಆಗಿ ಈಗ ಅಲ್ಲಿ ಹೊಸ ಕಟ್ಟಡ ಏಳುತ್ತಿದೆ). ಸ್ವಾಗತ್ ಗರುಡ ಆಗಿತ್ತು. ನಂದಾ, ಶಾಂತಿ ಇಲ್ಲವಾಗಿವೆ.
ಕೆಲಸಕ್ಕೆ ಸೇರಿ ಕೆಲವೇ ತಿಂಗಳುಗಳಲ್ಲಿ ಕಾರ್ಖಾನೆಯನ್ನು ‘ಸಸ್ಪೆನ್ಷನ್ ಆಫ್ ಆಪರೇಷನ್’ ಎಂದು ಆರು ವಾರ ಮುಚ್ಚಿಬಿಟ್ಟರು. ಬೇರೆ ಕೆಲಸಕ್ಕೆ ಹೋಗುವುದಾ, ಇಲ್ಲವೇ ಕಾಯುವುದಾ ತಿಳಿಯದ ಸಮಯವದು.
ಒಂದಿಷ್ಟು ಸಿನಿಮಾಗಳನ್ನು ನೋಡಿದೆವು. ಎಷ್ಟು ಎಂದು ಅವನ್ನು ನೋಡಲು ಸಾಧ್ಯ? ಹಣ ಬೇಡವಾ?
ಕೊನೆಗೆ ಒಮ್ಮೆ ಬ್ಯಾಂಕಿಗೆ ಹೋದೆ. ಅಕೌಂಟಿನಲ್ಲಿ 42 ರೂಪಾಯಿ ಇದ್ದವು. ಮೂವತ್ತೈದು ರೂಪಾಯಿಗಳಿಗೆ ವಿತ್‍ಡ್ರಾವಲ್ ಸ್ಲಿಪ್ ಕೊಟ್ಟೆ. ಕೊಡಲ್ಲ ಅಂದ.
ಮ್ಯಾನೇಜರ್ ಬಳಿ ಹೋಗಿ ಗಲಾಟೆ ಮಾಡಿದೆ. (ಇದು ನನ್ನ ಸಾಮಾನ್ಯ ನಡೆವಳಿಕೆ. ನನಗೆ ಸರಿಹೋಗದಿದ್ದಲ್ಲಿ ಜೋರು ದನಿಯಲ್ಲಿ ಎಲ್ಲರಿಗೂ ಕೇಳುವಂತೆ ಕೂಗಾಡುವುದು!) ‘ನಮ್ಮ ಕಂಪೆನಿ ಮುಚ್ಚಿದೆ. ಸಂಬಳ ಇಲ್ಲ. ನೀವು ಸಾಕ್ತೀರಾ ನಮ್ಮನ್ನ?’ ಅಂದೆ.
ಪಾಪ, ಕೊಟ್ಟ.
ಅದನ್ನು ಪಡೆದ ತಕ್ಷಣ ಸ್ವಾಗತ್ ಟಾಕೀಸಿಗೆ ಸಿನಿಮಾಗೆ ಹೋದೆ!!
Comments
Post a Comment