ಯತಿ ಸ್ವಂತೀ -108


18-04-2018
ಬೆಂಗಳೂರಿನಲ್ಲಿ ನನಗಿಷ್ಟವಿರದಿದ್ದ ಸಹೋದ್ಯೋಗಿ ಇಲ್ಲಿ ಇಷ್ಟವಾದ. ಅವನೊಂದಿಗೆ ಸತ್ನಾದ ಮಾರುಕಟ್ಟೆಗ ಹೋದೆ. ಬೇರೊಂದು ಹೊಟೇಲ್‍ನಲ್ಲಿ ಊಟ ಕೂಡ ಮಾಡಿದೆವು. ಆತ ಹೊರಟುಹೋದ.
ನನ್ನ ನಿರೀಕ್ಷೆ ಕೊನೆಗೂ ಮುಗಿದಿತ್ತು. ರವಿ ಇಂಗ್ಳೆ ಬಂದ!
ನನಗಿಂತ ಬಹಳವೇ ಚಿಕ್ಕವನು. ಇಪ್ಪತ್ತೈದಿದ್ದೀತು. ನನಗೆ ಮೂವತ್ತು.
ಟ್ಯಾಕ್ಸಿ ಒಂದನ್ನು ಬಾಡಿಗೆಗೆ ಪಡೆದು ಇಬ್ಬರೂ ಹೊರಟೆವು. ರಾತ್ರಿಯೆಲ್ಲಾ ಪ್ರಯಾಣ. ‘ಇದೋ ನೋಡು, ಥಾಕುರ್ ಅರ್ಜುನ್ ಸಿಂಗ್ ಅರಮನೆ’ ಎಂದು ತೋರಿಸಿದ. ಮಾನವ ಸಂಪನ್ಮೂಲ ಇಲಾಖೆಯ ಮಂತ್ರಿಯಾಗಿದ್ದರು ಕೇಂದ್ರ ಸರ್ಕಾರದಲ್ಲಿ ಆತ. ಥಾಕುರ್ ಎಂದರೆ ರಾಜ. ಥಾಕುರ್ ಎನ್ನುವುದನ್ನು ಶ್ರೀಕೃಷ್ಣನಿಗೂ ಬಳಸುತ್ತಾರೆ.
ಕೊನೆಗೂ ಸಿಂಗ್ರೌಲಿ ಕಲ್ಲಿದ್ದಲ ಗಣಿ ತಲುಪಿದೆವು. ಎಲ್ಲೆಲ್ಲಿಯೂ ಮಣ್ಣಿನ ಬೆಟ್ಟಗಳು. ಆಗಾಗ ಹೋಗುತ್ತಿದ್ದ ಗೂಡ್ಸ್ ರೈಲುಗಳು. ನಾವು ನೇರವಾಗಿ ಗೆಸ್ಟ್‍ಹೌಸ್‍ಗೆ ಹೋದೆವು.
ಬೆಳಗ್ಗೆ ಕಣ್ಣೆಳೆಯುತ್ತಿತ್ತು. ಇಡೀ ರಾತ್ರಿ ಪ್ರಯಾಣ. ಆದರೆ ಬಂದಿರುವ ಕೆಲಸ ಆರಂಭಿಸಬೇಕಲ್ಲ!
ಆ ಗೆಸ್ಟ್ ಹೌಸ್‍ನ ಕಿಚೆನ್‍ನಲ್ಲೇ ನಮಗೆ ತಿಂಡಿ ತಯಾರು ಮಾಡಿದ ಅಲ್ಲಿನ ಅಡುಗೆಯಾಳು. ಬ್ರೆಡ್, ಬೆಣ್ಣೆ, ಎರಡು ಮೂರು ರೀತಿಯ ಪಲ್ಯಗಳು (ಉತ್ತರ ಭಾರತೀಯ ಶೈಲಿಯದು) ಮೇಜಿನ ಮೇಲಿದ್ದವು. ಬಿಸಿ ಬಿಸಿ ರೋಟಿ ಮಾಡಿ ಮಾಡಿ ತಂದು ಕೊಡುತ್ತಿದ್ದ. ಸಾಸಿವೆ ಎಣ್ಣೆಯ ವಾಸನೆ ಮಾತ್ರ ಮಹಾ ಕಷ್ಟವಾಗುವಂತಿತ್ತು ನನಗೆ.
ಒಂದೇ ಸಮನೆ ರೋಟಿ ಕೊಡುತ್ತಿದ್ದ ಅಡುಗೆಯಾಳು ನಾವು ಬ್ರೆಡ್ ಕೈಗೆತ್ತಿಕೊಂಡೊಡನೆ ರೋಟಿ ಮಾಡುವುದನ್ನು ನಿಲ್ಲಿಸಿಬಿಟ್ಟ.
ನಾನು ನೀಟಾಗಿ ಇಸ್ತ್ರಿ ಮಾಡಿದ ಪ್ಯಾಂಟ್, ಷರ್ಟ್ ಧರಿಸಿ, ಕಂದುಬಣ್ಣದ ಶೂಗಳಿಗೆ ಫಳಫಳ ಎನ್ನುವಂತೆ ಪಾಲಿಶ್ ಮಾಡಿ ಹೊರಗೆ ಹೊರಟೆ. ಕಾಲುಗಳು ಧಸಕ್ಕೆಂದು ಮಣ್ಣಿನಲ್ಲಿ ಹೂತುಕೊಂಡಾಗ ಎದೆ ಕೂಡ ಧಸಕ್ಕೆಂದಿತು.
ಅಲ್ಲಿ ಕಲ್ಲಿದ್ದಲು ಬೆಟ್ಟದ ಕೆಳಗೆ ಇರುತ್ತಿತ್ತು. ದೊಡ್ಡ ದೊಡ್ಡ ಡ್ರ್ಯಾಗ್‍ಲೈನ್ ಎನ್ನುವ ಯಂತ್ರಗಳ ಸಹಾಯದಿಂದ ಬೆಟ್ಟವನ್ನು ನೆಲಸಮ ಮಾಡಿ ಅಡಿಯಲ್ಲಿದ್ದ ಕಲ್ಲಿದ್ದಲ್ಲನ್ನು ಸಂಗ್ರಹಿಸಿ ಆಗಾಗ ಬರುತ್ತಿದ್ದ ಗೂಡ್ಸ್ ರೈಲುಗಾಡಿಯಲ್ಲಿ ತುಂಬಿ ಹತ್ತಿರದ ಪವರ್ ಸ್ಟೇಷನ್‍ಗೆ ಕಳಿಸುತ್ತಿದ್ದರು. ಕರಗಿದ ಬೆಟ್ಟದ ಮಣ್ಣನ್ನು ಮತ್ತೊಂದೆಡೆ ಗುಡ್ಡೆ ಹಾಕುತ್ತಿದ್ದರು. ಅರ್ಥಾತ್ ದೇವರು ಮಾಡಿದ ಬೆಟ್ಟಗಳನ್ನು ಕಡಿದು, ನೆಲಸಮ ಮಾಡಿ, ಕಲ್ಲಿದ್ದಲನ್ನು ಸಂಗ್ರಹಿಸಿ, ಮಾನವ ನಿರ್ಮಿತ ಬೆಟ್ಟಗಳು ಸಿದ್ಧವಾಗುವಂತೆ ಮಾಡುತ್ತಿದ್ದರು.
ಅಬ್ಬಾ, ಎಂತಹ ಬಿಸಿಲು! ಬೆಂದು ಹೋದೆ. ಆದರೆ ಇನ್ನು ಹದಿನೈದು ವರ್ಷಗಳ ನಂತರ ಇನ್ನೂ ಹೆಚ್ಚಿನ ಬಿಸಿಲಿನ ಪ್ರದೇಶಕ್ಕೆ ಹೋಗುವೆನೆಂದು ಆ ಕ್ಷಣದಲ್ಲಿ ನನಗೆ ತಿಳಿದಿರಲಿಲ್ಲ!
ಡ್ರ್ಯಾಗ್‍ಲೈನ್‍ನಲ್ಲಿದ್ದ ಸಿಂಖ್ರೋನಸ್ ಮೋಟರ್ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದೆ. ಯಂತ್ರದ ಮೇಲಿದ್ದ ಪಟ್ಟಿಯಿಂದ, ಮತ್ತು ಅವರ ಆಫೀಸಿನಲ್ಲಿದ್ದ ಡ್ರಾಯಿಂಗ್‍ಗಳನ್ನು ಓದಿ, ಸ್ಟಡಿ ಮಾಡಿ ವಿವರಗಳನ್ನು ಸಂಗ್ರಹಿಸಿದೆ.
ಈ ರೀತಿ ನಾಲ್ಕೈದು ದಿನ ನಡೆಯಿತು. ಇಂಗ್ಳೆ ಎರಡನೇ ದಿನಕ್ಕೇ ಅಲ್ಲಿಂದ ಹೊರಟುಹೋದ. ಅವನಿಗೆ ಇಂದೋರ್‍ನಲ್ಲಿ ಕೆಲಸವಿದ್ದಿತಂತೆ.
ನನ್ನ ಕೆಲಸ ಮುಗಿಯುವ ವೇಳೆಗೆ ಅಲ್ಲಿಗೆ ನನ್ನೊಂದಿಗೆ ಸತ್ನಾದಲ್ಲಿ ಕಾಲ ಕಳೆದ ಸಹೋದ್ಯೋಗಿ ಮತ್ತು ಅವನ ಬಾಸ್ ಬಂದರು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102