ಯತಿ ಸ್ವಂತೀ -92-
02-04-2018
ಅನೇಕ ತಿಂಗಳುಗಳು ನಾನು ಮನೆಯಿಂದ ಹೊರಗೆ ಇದ್ದರೂ ಮೂರು ವಾರಗಳಲ್ಲಿ ಒಮ್ಮೆ ಬಂದು ಹೋಗಿ ರೂಢಿ ಇತ್ತು. ಈಗ ಮಸ್ಕತ್ನಲ್ಲಿ ಒಂಟಿತನ ಭಯಾನಕವೆನಿಸಿತು. ಅಲ್ಲಿ ಒಂದು ಅಂಗಡಿಯಲ್ಲಿ ಭಾರತೀಯ ಪತ್ರಿಕೆಗಳು ಮಾರಲ್ಪಡುತ್ತಿದ್ದವು. ಕನ್ನಡ ಪತ್ರಿಕೆಗಳನ್ನು ಕಂಡು ನಿಧಿ ಕಂಡಂತಾಗಿತ್ತು. ನನ್ನ ಅನೇಕ ಕಥೆಗಳು ಅಲ್ಲಿದ್ದಾಗ ಪ್ರಕಟವಾದವು. ತುಷಾರ ತರಂಗ ಸುಧಾ. ಆ ಸಮಯದಲ್ಲಿ ಆರ್ ವಿ ಕಟ್ಟೀಮನಿ ತಡಕಲ್ ಅವರು ಅನುವಾದ ಮಾಡಿದ್ದ ಯಂಡಮೂರಿ ಅವರ ಮಳೆಗಾಲದ ಒಂದು ಸಂಜೆ ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿ ಆಗುತ್ತಿತ್ತು. ಮೂಲ ಓದಲು ಬೆಂಗಳೂರು ತಲುಪಬೇಕು. 2005ರಲ್ಲಿ ನಾನು ಅಲ್ಲಿನ ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದೆ. ನನ್ನ ಗೆಳೆಯನ ಪತ್ನಿಯ ಬಳಿ ఒక వర్షాకాలపు సాయంత్రం ಮತ್ತು రెండు గుండెల చప్పుడు ತರಿಸಿದೆ. ಎರಡನೇ ಪುಟದಲ್ಲಿಯೇ ಅವರ ಫೋನ್ ನಂಬರ್ ಇತ್ತು. ಆ ಕ್ಷಣದಲ್ಲಿಯೇ ಫೋನ್ ಮಾಡಿ 'ಯತಿರಾಜ್' ಅಂದೆ. 'ಲಾಂಗ್ ಟೈಮ್' ಎಂದರು. ನಾನು ಇಲ್ಲಿ ಕೆಲಸಕ್ಕೆ ಸೇರಿದ ಕೆಲವು ದಿನಗಳಲ್ಲಿ ಅವರಿಂದ ಫೋನ್ ಬಂತು. ಗ್ರೀನ್ ಹೌಸ್ಗೆ ಬಾ ಎಂದರು. ಏನೋ ಉದ್ವೇಗ. ಸುಮಾರು ವರ್ಷಗಳ ಮಾತಾಡಿದೆವು. ದ ಹಿಂದು ಪತ್ರಿಕೆಯ ವಿಶಾಖಪಟ್ಟಣಂ ಎಜುಕೇಷನ್ ಪ್ಲಸ್ ಪುರವಣಿಯಲ್ಲಿ ದ ರೈಟ್ ಟರ್ನ್ ಎನ್ನುವ ಲೇಖನ ಮಾಲೆ ಬರೆಯುತ್ತಿದ್ದರು. ಅದನ್ನು ಕನ್ನಡಕ್ಕೆ ತರುವೆನೆಂದೆ. ಒಪ್ಪಿಗೆ ನೀಡಿದರು. ಈ ವಿಷಯ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬಂದಿತ್ತು. ಲೇಖನದ ವಿಷಯ ಅಲ್ಲ... ನಾನು ಅವರನ್ನು ಭೇಟಿ ಮಾಡಿದೆ ಎಂದು! ನನ್ನ ಚಿರಸ್ಮಿತ ಕಾದಂಬರಿಯನ್ನು ಬಿಡುಗಡೆ ಮಾಡಲು ಬಂದಿದ್ದ ಜೋಗಿ ಅವರಿಗೆ ಆ ವಿಷಯವನ್ನು ವೇದಿಕೆಯ ಮೇಲಿದ್ದಾಗ ನೆನಪಿಸಿದೆ. ಮುಗುಳ್ನಕ್ಕರು. ಆ ಪತ್ರಿಕೆಯ ಸಿನಿಮಾ ಪುಟದಲ್ಲಿ ಅವರ ಕಾಂಟ್ರಿಬ್ಯೂಶನ್ ಇತ್ತು ಎಂದು ನನಗೆ ತಿಳಿದಿತ್ತು. ಹಾಗೆ ಮತ್ತೆ ಶುರುವಾಯಿತು ನನ್ನ ಅವರ ಸಾಹಿತ್ಯದ ಪಯಣ. ಕರ್ಮವೀರದಲ್ಲಿ ಸುಮಾರು 80 ವಾರಗಳು, ಉದಯವಾಣಿಯಲ್ಲಿ 65 ವಾರಗಳು ಮತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ 40 ವಾರಗಳ ಕಾಲ ಧಾರಾವಾಹಿ ಆಯಿತು. ಆದರೂ ಅವರ ತೆಲುಗು ಪುಸ್ತಕ ಅದರಲ್ಲೂ ಫಿಕ್ಷನ್ ಒಂದರ ಅನುವಾದ ಮಾಡಬೇಕು ಎನ್ನುವ ಅಭಿಲಾಷೆ ಅಪೂರ್ಣವಾಗಿಯೇ ಉಳಿದಿತ್ತು.
ಒಂದು ದಿನ ಅವರಿಂದ ಒಂದು ಎನ್ವಲಪ್ ಅಂಚೆಯಲ್ಲಿ ಬಂದಿತ್ತು. ಅದರಲ್ಲಿ ಅವರ ಒಂದು ಕಥೆ! ಅವರ ಕೈ ಬರಹದಲ್ಲಿ! ಬಹಳ ದಿನಗಳ ನಂತರ ಒಂದು ಕಥೆ ಬರೆದಿದ್ದೇನೆ. ಹೇಗಿದೆ ನೋಡು ಎಂದು ಬರೆದಿದ್ದರು... ವಾಹ್ ಅವರ ಕಥೆ... ಭಾವುಕ ನಿರೂಪಣೆಯ ಆ ಕಥೆಯನ್ನು ಅನುವಾದ ಮಾಡಿ ತರಂಗ ವಾರಪತ್ರಿಕೆಯ ಸಂಪಾದಕರಾದ ಶ್ರೀಮತಿ ಸಂಧ್ಯಾ ಪೈ ಅವರೊಂದಿಗೆ ಮಾತನಾಡಿ ತರಂಗಕ್ಕೆ ಕಳಿಸಿದೆ. ‘ಬಹಳ ದಿನಗಳ ನಂತರ ಯಂಡಮೂರಿ’ ಎಂಬ ಪ್ರತ್ಯೇಕ ಶೀರ್ಷಿಕೆ ಹಾಕಿ ಪ್ರಕಟಿಸಿದರು. ತೆಲುಗು ಮೂಲ: ಯಂಡಮೂರಿ ವೀರೇಂದ್ರನಾಥ್. ಕನ್ನಡಕ್ಕೆ : ಯತಿರಾಜ್ ವೀರಾಂಬುಧಿ ಎಂಬ ಜೋಡಿ ಹೆಸರುಗಳು ಏನೋ ಒಂದು ರೀತಿಯ ಥ್ರಿಲ್ ಉಂಟು ಮಾಡಿದವು.
-೦-೦-೦-
Comments
Post a Comment