ಯತಿ ಸ್ವಂತೀ -105
15-04-2018
ನನ್ನ ಮದುವೆಯಾಯಿತು. ಫಿಜಿಕಲೀ ಪ್ರೆಸೆಂಟ್ ಎಂದು ನನಗೆ ಕೆಲವು ದಿನ ಕೇವಲ ಆಫೀಸ್ ಕೆಲಸ ನೀಡಿದರು. ಆದರೆ ಮೊದಲೇ ಹೇಳಿದ್ದರು. ಯತಿರಾಜ್, ನಿನ್ನ ಟ್ಯಾಲೆಂಟ್‍ನ ಕಸ್ಟಮರ್‍ಗಳಿಗೆ ಕೇವಲ ಜನರೇಟರ್ ಕೊಡುವುದಕ್ಕೆ ಮಾತ್ರ ಅಲ್ಲ, ನೆಗೋಸಿಯೇಷನ್‍ಗಳು, ಬಿಡ್‍ಗಳು, ಟೆಂಡರ್‍ಗಳು, ಜನರೇಟರ್ ಸ್ಟಡೀ ಎಲ್ಲವನ್ನೂ ನೀನು ಮಾಡಬೇಕೆಂಬುದು ನನ್ನ ಇಚ್ಛೆ ಎಂದು ಹೇಳಿದರು ಬಾಸ್. ಅವರ ಮಾತಿನಂತೆ ಏಪ್ರಿಲ್ ತಿಂಗಳಲ್ಲಿ ನನ್ನನ್ನು ಸಿಂಗ್ರೌಲಿ ಕೋಲ್ ಮೈನ್ಸ್‍ಗೆ ಕಳಿಸಿದರು. ಅಲ್ಲಿದ್ದ ಸಿಂಕ್ರೋನಸ್ ಮೋಟರ್ ಅನ್ನು ಸ್ಟಡೀ ಮಾಡಿಕೊಂಡು ಬಾ ಎಂದರು.
ಏನೋ ಒಂದು ರೀತಿ ತಳಮಳ. ನವ ವಿವಾಹಿತ. ಆದರೆ ಹೋಗಲೇಬೇಕಾದ ಅನಿವಾರ್ಯ. ಟ್ರೈನಿನಲ್ಲಿ ಸತ್ನಾ ಎನ್ನುವ ಊರಿಗೆ ಬಾ. ಅಲ್ಲಿಗೆ ನಾನು ಬಂದು ನಿನ್ನನ್ನು ಮುಂದಕ್ಕೆ ಕರೆದೊಯ್ಯುತ್ತೇನೆ ಎಂದ ಭೋಪಾಲ್ ಶಾಖೆಯ ಸಹೋದ್ಯೋಗಿ. ಅವನ ಹೆಸರು ರವಿ ಇಂಗ್ಳೆ. ನನಗಿಂತ ಚಿಕ್ಕವನು. ನನಗಾಗ ಹತ್ತಿರ ಹತ್ತಿರ ಮೂವತ್ತು ವರ್ಷಗಳು. ಅವನಿಗೆ ಇಪ್ಪತ್ತೈದಿದ್ದೀತು. ಆಗಿನ್ನೂ ಅವನನ್ನು ನೋಡಿರಲಿಲ್ಲ.
ಸತ್ನಾ ಎನ್ನುವ ಮಧ್ಯಪ್ರದೇಶದ ಊರಿನಲ್ಲಿ ನಡುರಾತ್ರಿ ಇಳಿದೆ. ಒಂದು ಕುದುರೆಗಾಡಿಯೋ, ಸೈಕಲ್ ರಿಕ್ಷಾವೋ ಮರೆತಿದ್ದೇನೆ. ಅದರಲ್ಲಿ ಹೊಟೇಲ್ ನಟರಾಜ್ ತಲುಪಿದೆ. ಇಂಗ್ಳೆ ಬಂದಿರಲಿಲ್ಲ. ಅಲ್ಲಿಯೇ ಉಳಿದುಕೊಂಡೆ. 1987, ಆಗೆಲ್ಲಾ ಕೇವಲ ಲ್ಯಾಂಡ್‍ಲೈನ್ ಕಾಲ್‍ಗಳು. ಒಂಥರಾ ಎರಡು ರೀತಿಯ ಸಂವಹನ ಕಾಲದಲ್ಲಿದ್ದ ವಿಶಿಷ್ಟ ಜನ ನನ್ನ ವಯಸ್ಸಿನೋರು!
ಆಗ ಬರೀ ಲ್ಯಾಂಡ್‍ಲೈನ್. ಈಗ ಮೊಬೈಲ್.
ಮರುದಿನವೂ ಅವನು ಬರಲಿಲ್ಲ. ಅವನಿಗೆ ಬೇರೇನೋ ತುರ್ತು ಕೆಲಸ ಅವನ ಬಾಸ್ ನೀಡಿದರಂತೆ. ಅಲ್ಲೇ ಇರು ಬರುತ್ತೇನೆ ಎಂದ.
ಕೆಲವರನ್ನು ಕಂಡರೆ ನನಗೆ ಆಗುತ್ತಿರಲಿಲ್ಲ. ಈಗ ನನ್ನನ್ನು ನೋಡಿದವರು ಎಷ್ಟು ಶಾಂತ ಸ್ವಭಾವದವನು ಎನ್ನುತ್ತಾರೆ. ಆದರೆ ನಾನು ಮಹಾ ಶೀಘ್ರಕೋಪಿ ಆಗಿದ್ದೆ. ಜೊತೆಗೆ ದುಡುಕು ಮಾತು. ಬೇರೆ ಯಾರೋ ಇಬ್ಬರು ಮಾತಾಡುವಾಗ ನನ್ನ ಮಾತುಗಳನ್ನು ಅವರ ನಡುವೆ (ಅದು ಅನಗತ್ಯವಾಗಿದ್ದರೂ) ಎಸೆಯುತ್ತಿದ್ದೆ. ಅಂತಹ ಘಮಂಡಿ ನಾನು ಆಗ. ಈಗ ನೋಡಿದವರು ನಂಬುವುದಿಲ್ಲ. ಆಗ ನೋಡಿದವರಿಗೆ ನನ್ನ ಬಗ್ಗೆ ತಿಳಿದಿರುತ್ತದೆ.
ಬೆಂಗಳೂರಿನ ಕೆಲವು ಸಹೋದ್ಯೋಗಿಗಳನ್ನು ಕಂಡರೆ ಏಕೋ ಇರುಸುಮುರಿಸು. ನಾನಾಗ ನಟರಾಜ್‍ನಲ್ಲಿ ಎರಡನೇ ದಿನದ ಸಂಜೆಗೆ ಬಂದಿದ್ದೆ. ಬೋರೆಂದರೆ ಬೋರು. ಆ ಸಮಯದಲ್ಲಿ ನೆಲಮಹಡಿಯ ರಿಸೆಪ್ಷನ್‍ನಲ್ಲಿ ‘ಎನಿ ಬಡಿ ಫ್ರಂ ಕಿರ್ಲೋಸ್ಕರ್?’ ಎನ್ನುವ ಧ್ವನಿ ಕೇಳಿಸಿತು. ನಾನು ಬೆಂಗಳೂರಿನಲ್ಲಿ ಹೇಟ್ ಮಾಡುತ್ತಿದ್ದ ಸ್ವರವದು.
ಇಲ್ಲಿ ನನಗೆ ಮಧುರವಾದ ಗೀತೆಯಂತೆ ಕೇಳಿಸಿತ್ತೆಂದರೆ ನನ್ನ ಬೋರ್‍ಡಮ್‍ನ ಹೈಟ್ ಅರಿವಾಗುತ್ತದಲ್ಲವೇ? ನಿಮಗೂ ಇಂತಹ ಅನುಭವ ಆಗಿದೆಯೇ?
ನಾನಾಗ ತೆಲುಗು ಭಾಷೆಯನ್ನು ಹೆಚ್ಚು ಕಡಿಮೆ ಸಂಪೂರ್ಣ ಕಲಿತಿದ್ದೆ. ನನ್ನ ಪೆಟ್ಟಿಗೆಯಲ್ಲಿ ಯಂಡಮೂರಿ, ಮಲ್ಲಾದಿ ಮುಂತಾದ ಅನೇಕ ಲೇಖಕರ ಅನೇಕಾನೇಕ ಪುಸ್ತಕಗಳನ್ನು ನನ್ನೊಂದಿಗೆ ಒಯ್ದಿದ್ದೆ.
ಈಗ ಆ ಮಧುರ ಧ್ವನಿಯವನ ಆಗಮನವನ್ನರಿತು ದಢದಢನೆ ಕೆಳಗೋಡಿ, ಹಲೋ... ಎಂದೆ ಮುಖದ ತುಂಬಾ ನಗೆ ತುಂಬಿಕೊಂಡು!
Comments
Post a Comment