ಯತಿ ಸ್ವಂತೀ -110


20-04-2018
ನಾನು ಬೆಂಗಳೂರಿನಿಂದ ಸತ್ನಾಗೆ ಹೋಗುವಾಗ ಯಥಾಪ್ರಕಾರ ರೈಲಿನಲ್ಲಿ ಕೆಲವರನ್ನು ಪರಿಚಯಿಸಿಕೊಂಡೆ. ಮಾತಿನ ನಡುವೆ ನನಗೆ ಮದುವೆ ಆಗಿ ಎರಡು ತಿಂಗಳುಗಳಾದವು ಎಂದು ಹೇಳಿದೆ. ‘ಹೇ, ಹಾಗಾದರೆ ನೀನು ವಾರಾಣಸಿಯಲ್ಲಿ ಗಂಗೆಯಲ್ಲಿ ಸ್ನಾನ ಮಾಡಕೂಡದು’ ಎಂದು ಎಚ್ಚರಿಸಿದರು. ಅದನ್ನು ಯಾಕೆ? ಹೇಗೆ? ಎಂದು ಪ್ರಶ್ನಿಸಲು ಹೋಗಲಿಲ್ಲ ನಾನು.
ವಾರಾಣಸಿ ತಲುಪಿದ ಮರುದಿನ ರಾತ್ರಿ ಕಾನ್‍ಪುರಕ್ಕೆ ಬರುವೆನೆಂದು ನನ್ನ ಕಾನ್‍ಪುರ ಶಾಖೆಯ ಸಹೋದ್ಯೋಗಿಗೆ ಹೇಳಿದ್ದೆ. ಅದಕ್ಕೇ ಸಾಂಚಿ ನೋಡಿದ ಮರುದಿನ ಬೆಳಗ್ಗೆ ಗಂಗಾದರ್ಶನಕ್ಕೆ ಹೊರಟೆ.
ಆಟೋ ಒಂದರಲ್ಲಿ ಚಾಲಕ ‘ಗಂಗಾ ಘಾಟ್, ಗಂಗಾ ಘಾಟ್’ ಎಂದು ಕೂಗುತ್ತಿದ್ದ. ಆ ಆಟೋ ಹತ್ತಿದೆ. ಅವನು ಇನ್ನೂ ಕೂಗಿ ಕೂಗಿ ಅನೇಕ ಪ್ರಯಾಣಿಕರನ್ನು ಒಟ್ಟುಗೂಡಿಸಿದ.
ಚಾಲಕನ ಆ ಕಡೆ ಈ ಕಡೆ ಇಬ್ಬರು. ಹಿಂದಿನ ಸೀಟಿನಲ್ಲಿ ನನ್ನನ್ನು ಸೇರಿಸಿ ಐದು ಜನ! ಅಂತೂ ಆಟೋ ಗಂಗಾ ತಟವನ್ನು ತಲುಪಿತು. ಆದರೆ ಜೇಮ್ಸ್‍ಬಾಂಡ್ ಸಿನಿಮಾ ಆಕ್ಟೋಪುಸಿಯಲ್ಲಿ ವಿಜಯ್ ಅಮೃತ್‍ರಾಜ್ ಆಟೋ ಡ್ರೈವರ್ ಆಗಿ ಜೈಪುರದಲ್ಲಿ ಓಡಿಸಿದ ಯಮ ವೇಗದಲ್ಲಲ್ಲ, ನಿಧಾನವಾಗಿ ತುಂಬು ಗರ್ಭಿಣಿಯಂತೆ!
ನದಿ ತೀರದಲ್ಲಿ ಇಳಿದೆ. ಪಂಡಾಗಳು ಸುತ್ತಿಕೊಂಡರು. ಎಲ್ಲರನ್ನೂ ನಿವಾರಿಸಿದೆ. ಒಬ್ಬ ಮಾತ್ರ ಛಲಬಿಡದ ತ್ರಿವಿಕ್ರಮನಂತೆ ನನ್ನ ಹಿಂದೆ ಬರುತ್ತಲೇ ಇದ್ದ. ಯಾರ ತಿಥಿ ಮಾಡಬೇಕು ಹೇಳಿ ಅಂತ ಪ್ರಾಣ ತಿನ್ನುತ್ತಿದ್ದ. ‘ನನ್ನದೇ ಮಾಡಯ್ಯಾ’ ಎಂದೆ ಹಿಂದಿಯಲ್ಲಿ. ಆಗ ನನ್ನಿಂದ ದೂರ ಹೋದ!
ಹಿಂದಿನ ಸಲ ಗಂಗೆಗೆ ಬಂದ ನೆನಪು ಮೂಡಿತು. ಅದು 1979 ಫೆಬ್ರವರಿ ತಿಂಗಳು. ಸಹಪಾಠಿಗಳೊಂದಿಗೆ ಬಂದಿದ್ದೆ. ನಾವು ಕೆಲವರು ಒಂದು ದೋಣಿ ಹತ್ತಿ ನದಿಯಲ್ಲಿ ಸ್ವಲ್ಪ ದೂರ ಹೋಗಿ ಅಲ್ಲಿ ನೀರಲ್ಲಿ ಮುಳುಗಿದೆವು. ಎಂದಿನಂತೆ ಕೆಲವು ತುಂಟ ಸಹಪಾಠಿಗಳು ನನ್ನಂತಹ ಅಮಾಯಕನನ್ನು ಮುಳುಗಿಸಿ ಮಜಾ ತಗೊಂಡರು.
ಆಗ ದಡದಲ್ಲಿ ಎಷ್ಟು ಕೊಳೆಯಿತ್ತೆಂದರೆ ಈಗ ಬಹಳವೇ ಶುದ್ಧ ಎನ್ನುತ್ತಾರೆ ನೋಡಿದೋರು. ತ್ರಿಚೂರು ಸೋದರರು ನಮಾಮಿ ಗಂಗೇ ಪ್ರಸೀದ ಪ್ರಸೀದ ಹಾಡು ಕೇಳಲು ಚಂದ. ಅದು ಕ್ಲೀನ್ ಗಂಗಾ ಪ್ರಾಜೆಕ್ಟ್‍ನ ಥೀಮ್ ಹಾಡಂತೆ.
1987ರಲ್ಲಿ ಈಗ ಅಲ್ಲಿಗೆ ಹೋದಾಗ ನದಿ ದಡದಲ್ಲಿಯೇ ನಿಂತು ಕೆಲವು ಹನಿಗಳನ್ನು ನನ್ನ ತಲೆಯ ಮೇಲೆ ಚುಮುಕಿಸಿಕೊಂಡೆ. ಹೊಸ ಪತ್ನಿಗೆ ಒಂದು ಸೀರೆ. ಇನ್ನೆರಡು ತಿಂಗಳಲ್ಲಿ ಮದುವೆಯಾಗಲಿದ್ದ ನನ್ನ ಚಿಕ್ಕ ತಂಗಿಗೊಂದು ಸೀರೆ ಕೊಂಡುಕೊಂಡೆ.
ಆ ರಾತ್ರಿ ಸ್ಟೇಷನ್‍ಗೆ ಬಂದು ಕೌಂಟರ್‍ನಲ್ಲಿ ಕಾನ್‍ಪುರ್ ಎಂದೆ. ಪೈಂತೀಸ್ ಎಂದ. ಮೂವತ್ತೈದು ಕೊಟ್ಟೆ. ಟಿಕೆಟ್ ಪಡೆದೆ.
ನನಗೆ ತಿಳಿಯದ ವಿಷಯವೆಂದರೆ ನಾನು ಪಡೆದಿದ್ದು ಅನ್‍ರಿಸರ್ವ್‍ಡ್ ಕಂಪಾರ್ಟ್‍ಮೆಂಟ್‍ನಲ್ಲಿ ಪ್ರಯಾಣ ಮಾಡಲು ಆ ಟಿಕೆಟ್ ಎಂದು.
ಟಿಟಿಇಗೆ ಹಣ ಕೊಟ್ಟು ಸೀಟು ಪಡೆಯಬಹುದೆಂದು ತಿಳಿಯದು. ನಮ್ಮಪ್ಪ ರೈಲ್ವೇಯಲ್ಲಿದ್ದರಲ್ಲ, ಪಾಸ್ ಇದ್ದರೆ ಬಿಟ್ಟಿ. ಪ್ರಿವಿಲೇಜ್ ಟಿಕೆಟ್ ಆರ್ಡರ್ (ಪಿ.ಟಿ.ಓ) ಸ್ವಲ್ಪ ಹಣ ಕೊಟ್ಟು ಹೋಗಿ ರೂಢಿ. ಅದೂ ಮೈಸೂರು ಮತ್ತು ಬೆಂಗಳೂರು ನಡುವೆ.
ಈಗ ರಾಜಧಾನಿ ಎಕ್ಸ್‍ಪ್ರೆಸ್ ಬರುತ್ತಿತ್ತು. ಹೇಗೆ ಹತ್ತುವುದು? ಯಾವ ಬೋಗಿ ಹತ್ತುವುದು?

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102