ಯತಿ ಸ್ವಂತೀ -114


24-04-2018
ಏನೋ ಒಂದು ಉದ್ವೇಗ ನನ್ನಲ್ಲಿ ಮನೆ ಮಾಡಿಕೊಂಡಿತ್ತು. ಜನವರಿಯಲ್ಲಿ ನನ್ನ ಸಹೋದ್ಯೋಗಿ ಪ್ರವೀಣ ಭಾರತಕ್ಕೆ ಹೋದ.  ನನ್ನ ಮನೆಗೆ ಹೋಗಲು ಹೇಳಿದ್ದೆ.
ಹಿಂದಿನ ಸಲ ಹೋಗಿ ನನ್ನ ಮನೆಯವರೆಲ್ಲರ ಫೋಟೋ ತೆಗೆದುಕೊಂಡು ಬಂದಿದ್ದ. ಮೊಬೈಲ್ ಕೇವಲ ಮಾತಾಡಲು ಬಳಸುತ್ತಿದ್ದ ಕಾಲವದು. ಮನೆಯವರೆಲ್ಲರೂ ನನಗೆ ಪತ್ರ ಬರೆಯುತ್ತಿದ್ದರು. ನಾನು ನಮ್ಮ ಆಫೀಸ್ ಬಾಯ್‍ನಿಂದ ಎರಡು ಫರ್ಲಾಂಗ್ ದೂರದಲ್ಲಿದ್ದ ಅಂಚೆ ಕಛೇರಿಯ ನಮ್ಮ ಆಫೀಸಿನ ಪೋಸ್ಟ್ ಬಾಕ್ಸ್ ಬೀಗದಕೈ ತೆಗೆದುಕೊಂಡಿದ್ದೆ. ನಾನೇ ಎಲ್ಲರ ಕಾಗದಗಳನ್ನೂ ಹೊತ್ತು ತರುತ್ತಿದ್ದೆ. ಒಂಟಿತನ ಭಯಾನಕವಾಗಿ ಕಾಡುತ್ತಿದ್ದ ಕಾಲವದು.
ರಾತ್ರಿ ಅರುಣಾ ಸಾಯಿರಾಮ್ ಅವರ ಮಾ ಸ್ತುತಿ ಕೇಳಿ ಮಲಗುತ್ತಿದ್ದೆ. ಅಥವಾ ಕಿಶೋರ್, ರಫಿ ಮುಂತಾದವರ ಹಿಂದೀ ಹಾಡುಗಳು, ರಾಜ್, ಎಸ್ಪಿ, ಪಿಬಿಎಸ್ ಅವರ ಕನ್ನಡ ಹಾಡುಗಳು.
ಒಮ್ಮೆ ಕಿಶೋರ್ ಕುಮಾರ್ ‘ದುಃಖಿ ಮನ್ ಮೇರೆ ಸುನ್ ಮೇರ ಕೆಹನಾ ಜಹಾಂ ನಹೀ ಚೈನಾ ವಹಾಂ ನಹೀ ರೆಹನಾ’ ಎಂದು ಹಾಡಿದಾಗ ನನ್ನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿದು ದಿಂಬನ್ನು ತೋಯಿಸಿತ್ತು. ಎಲ್ಲಿ ನೆಮ್ಮದಿ ಇಲ್ಲವೋ ಅಲ್ಲಿರಬೇಡ ಎಂದು ಅವನು ಸುಲಭವಾಗಿ ಹೇಳಿಬಿಟ್ಟ. ನಾನಿಲ್ಲಿ ಹಣ ಸಂಪಾದನೆ ಮಾಡಿ ಕುಟುಂಬವನ್ನು ನಡೆಸಲು ಬಂದಿದ್ದವನು. ನಡುವೆ ಹೋಗಲು ಕೂಡ ಆಗದು. ಅಬ್ಬಾ ನರಕ ಯಾತನೆ ಅದು!
ಆಗಾಗ ರೂಮ್‍ಮೇಟ್‍ಗಳೊಂದಿಗೆ, ಬಹಳ ಸಲ ಒಬ್ಬನೇ ಸಿನಿಮಾಗೆ ಹೋಗುತ್ತಿದ್ದೆ. ವಚ್ಚುವಿನ ಮನೆಗೆ ಮೂರು ವಾರಗಳಿಗೆ ಒಮ್ಮೆಯಾದರೂ ಹೋಗುತ್ತಿದ್ದೆ.
ಕಾರು ಸಿಗುವ ಮೊದಲು ನಾನು ಕ್ಯಾಬ್‍ನಲ್ಲಿ ಹೋಗಿ ಕೆಲವೊಮ್ಮೆ ಬಹಳ ದೂರ ಬಿಸಿಲಿನಲ್ಲಿ ನಡೆದು ಹೋಗಬೇಕಿತ್ತು. ಆಗೆಲ್ಲ ನನ್ನ ಗ್ರಾಹಕರು ನನಗೆ ಕರುಣೆ ತೋರಿಸಿ ಆರ್ಡರ್ ಕೊಡುತ್ತಿದ್ದಿರಬಹುದು!
ಇತ್ತೀಚೆಗೆ ಒಂದು ಕಂಪೆನಿಯವರು ಕರೆದರೆಂದು ಅವರ ಆಫೀಸಿಗೆ ಹೋದೆ. ಅಲ್ಲಿ ಇಬ್ಬರ ಭೇಟಿ ಆಯಿತು. ನನ್ನ ನೆನಪಿನ ಕಣಜದಿಂದ ಕೆಲವು ವಿಶಿಷ್ಟ ವಿಷಯಗಳನ್ನು ಜ್ಞಾಪಿಸಿಕೊಂಡು ಅವರಿಗೆ ಹೇಳಿದೆ. ಫುಲ್ ಇಂಪ್ರೆಸ್ ಆಗಿಬಿಟ್ಟರು.
ಸಾರ್, ನಿಮ್ಮ ಪರಿಚಯ ಆಗಿದ್ದು ನಮ್ಮ ಅದೃಷ್ಟ ಎಂದೆಲ್ಲಾ ಹೊಗಳಿದರು. ನನಗೆ ನಗು ಬಂದು, ‘ಸಾರ್, ಯಾರನ್ನಾದರೂ ಇಂಪ್ರೆಸ್ ಮಾಡಲು ನಾನು ನಿರ್ಧಾರ ಮಾಡಿದರೆ, ಅವರನ್ನು ಇಂಪ್ರೆಸ್ ಮಾಡಿಯೇ ಮಾಡುತ್ತೇನೆ. ಮೂವತ್ತೈದು ವರ್ಷಗಳ ಕಾಲ ಸೇಲ್ಸ್‍ನಲ್ಲಿದ್ದವನು ನಾನು’ ಎಂದೆ ನಗುತ್ತಲೇ.
ಏನು ಮಾಡಲಿ? ಅದು ನನ್ನ ಸ್ವಭಾವ. ಇಂಪ್ರೆಸ್ ಮಾಡಬೇಕೆಂದು ಮಾತಾಡುವುದಿಲ್ಲ. ಮಾತಾಡಲು ಕಲಿತಿದ್ದೇನೆ.
ಕಿರ್ಲೋಸ್ಕರ್‍ನಲ್ಲಿದ್ದಾಗ ಅಶೋಕ್ ಮತ್ತು ನಾರಾಯಣ್ ಎಂದು ಇಬ್ಬರು ಸಹೋದ್ಯೋಗಿಗಳಿದ್ದರು. ಅವರಿಬ್ಬರೂ ಒಂದೊಂದು ಶನಿವಾರ ದ್ವಿಚಕ್ರ ವಾಹನಗಳನ್ನು ತರುತ್ತಿದ್ದರು. ನಮ್ಮ ಮನೆಗೆ ಬಂದು ನನ್ನನ್ನು ಕರೆದೊಯ್ಯುತ್ತಿದ್ದರು. ಅಶೋಕನ ಪರ್ಲಿಯಾಮಾ ಮೊಪೆಡ್, ನಾರಾಯಣನ (ಬಹುಶಃ) ಲ್ಯಾಂಬ್ರೆಟ್ಟಾ. ಏಕೆ ನನ್ನನ್ನು ಕರೆದೊಯ್ಯುವಿರಿ ಎಂದು ಕೇಳಿದಾಗ ‘ನೀನು ವಟವಟ ಅಂತ ಚೆನ್ನಾಗಿ ಮಾತಾಡ್ತೀ. ಅದಕ್ಕೇ’ ಎಂದಿದ್ದರು. ಹೊಗಳಿಕೆ ಎಂದು ಸಂತಸ ಪಡಬೇಕೋ, ಅಣಗಿಸುತ್ತಿರುವರೆಂದು ಬೈದುಕೊಳ್ಳಬೇಕೋ ತಿಳಿಯುತ್ತಿರಲಿಲ್ಲ.
ಹ್ಞಾಂ! ನನ್ನಲ್ಲಿ ಉದ್ವೇಗ ಏಕೆಂದರೆ ಪ್ರವೀಣ ಈ ಸಲ ನನ್ನ ಅಮ್ಮನನ್ನು ಮಸ್ಕತ್‍ಗೆ ಕರೆತರುವವನಿದ್ದ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102