ಯತಿ ಸ್ವಂತೀ -112


22-04-2018
ಮಸ್ಕತ್‍ನಲ್ಲಿ ನನ್ನ ಮುಂದಿನ ತಿಂಡಿ ಬ್ರೆಡ್ ಆಯಿತು.
ಟೋಸ್ಟರ್ ಕೊಂಡು ತಂದೆ. ಅದರಲ್ಲಿ ಬ್ರೆಡ್ ‘ಸುಟ್ಟು’ಕೊಳ್ಳುವುದು. ಹಿಂದಿನ ದಿನ ಹುಳಿ ಮಾಡಿದ್ದರೆ ಬೇಯಿಸಿದ್ದ ತರಕಾರಿಗಳನ್ನು ಎತ್ತಿಟ್ಟಿರುತ್ತಿದ್ದೆ. ಅದನ್ನು ಎರಡು ಬ್ರೆಡ್ ಟೋಸ್ಟ್‍ಗಳ ನಡುವೆ ಇಟ್ಟುಕೊಂಡು ತಿನ್ನುವುದು. ಒಂದಿಷ್ಟು ಉಪ್ಪು, ಕಾಳುಮೆಣಸಿನ ಪುಡಿಯನ್ನು ಉದುರಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಪಲ್ಯವನ್ನು ಮಾಡಿದ್ದರೆ ಅದನ್ನೇ ಎರಡು ಬ್ರೆಡ್‍ಟೋಸ್ಟ್‍ಗಳ ನಡುವೆ ಇಟ್ಟು ತಿನ್ನುವುದು ಮಾಡುತ್ತಿದ್ದೆ.
ಇದು ಸುಮಾರು ದಿನಗಳ ಕಾಲ ನಡೆಯಿತು.
ನಾನು ಯಾವ ಹುಳಿ ಮಾಡಿದರೂ ಒಂದು ಹಿಡಿ ಕಡಲೇಕಾಯಿ ಬೀಜಗಳನ್ನು ಅದಕ್ಕೆ ಹಾಕುತ್ತಿದ್ದೆ. ಅಲ್ಲಿ ನನಗೆ ಗುಜರಾತಿನ ಕಡಲೇಕಾಯಿ ಸಿಗುತ್ತಿತ್ತು. ಕೆಲವೊಮ್ಮೆ ಒಂದೊಂದು ಕಾಯಿಯಲ್ಲಿ ಐದು ಕಾಳುಗಳಿರುತ್ತಿದ್ದವು. ಕನಿಷ್ಠ ನಾಲ್ಕಂತೂ ಇರುತ್ತಿದ್ದವು.
ಒಮ್ಮೆಯಂತೂ ಅದನ್ನು ಕುಕ್ಕರ್‍ನಲ್ಲಿ ಬೇಯಿಸಿದೆ. ಬೆಂದಿರಲಿಲ್ಲ. ನಂತರ ಪ್ರತಿಯೊಂದು ಕಾಯಿಯ ‘ಮೂಗು’ ಸೀಳಿ ಬೇಯಿಸಿದೆ. ಬೇಯಲಿಲ್ಲ. ನಂತರ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಬೇಯಿಸಿ ತಿಂದೆ.
ನನ್ನ ಅಡುಗೆಯ ಬಗ್ಗೆ ಅನೇಕರು ‘ಇವತ್ತೇನು ಅಡುಗೆ?’ ಎಂದು ವಿಚಾರಿಸುತ್ತಿದ್ದರು. ಯಾವ ತರಕಾರಿಯೂ ಇಲ್ಲದಿದ್ದ ಒಂದು ದಿನ ಕಡಲೇಕಾಯಿ ಬೀಜಗಳ ಹುಳಿ ಮಾಡಿದೆ. ಅದಂತೂ ಉಳಿದವರಿಗೆ ಆಶ್ಚರ್ಯ! ಈಗಲೂ ನಾನು ಯಾವತ್ತಾದರೂ ನನ್ನ ಶ್ರೀಮತಿಗೆ ಈ ಬೇಡಿಕೆ ಮುಂದಿಡುತ್ತೇನೆ. ಕಡಲೇಕಾಯಿ ಕಾಳುಗಳ ಹುಳಿ. ಅದರ ರುಚಿಯೇ ವಿಶಿಷ್ಟ.
ಒಂದು ಸಲ ಯಾವುದೋ ಇಂಗ್ಲೀಷ್ ಬೀನ್ಸ್‍ನ ಕಡಲೇಕಾಯಿ ಬೀಜ ಎಂದು ಸೂಪರ್ ಬಜಾರ್‍ನಿಂದ ತಂದುಬಿಟ್ಟೆ. ಪುಳಿಯೋಗರೆ ಗೊಜ್ಜು ಬೆಂಗಳೂರಿನಿಂದ ತಂದಿದ್ದೆ. ಅದರಲ್ಲಿ ಈ ಇಂಗ್ಲೀಷ್ ಬೀನ್ಸ್ ಅನ್ನು ಬೇಯಿಸಿ ಹಾಕಿದೆ. ನನಗೆ ತಿಳಿಯದು ಅದನ್ನು ಹೆಚ್ಚು ಸಮಯ ಬೇಯಿಸಬೇಕೆಂದು. ಪುಳಿಯೋಗರೆ ಕಲಸಿ ಬಾಯಿಗೆ ಹಾಕಿಕೊಂಡೆ. ಖಠುಂ ಎಂದಿದ್ದವು ನನ್ನ ಹಲ್ಲುಗಳು! ಅಷ್ಟು ಗಟ್ಟಿ ಇದ್ದವು ಆ ಇಂಗ್ಲೀಷ್ ಬೀನ್ಸ್ ಬೀಜಗಳು.
ನಮ್ಮ ಫ್ಲ್ಯಾಟ್ ಹೇಗಿತ್ತೆಂದರೆ ಎಂಟರ್ ಆದ ಒಡನೆ ಎಡಗಡೆಗೆ ಒಂದು ಬಾತ್‍ಟಬ್, ವೆಸ್ಟರ್ನ್ ಕಮೋಡ್ ಇದ್ದ ಬಾತ್‍ರೂಮ್. ಅದರ ಪಕ್ಕದ ಬಾಗಿಲು ತೆರೆದರೆ ದೊಡ್ಡ ರೂಮು. ಇಬ್ಬರು ಇರುವಂತಹದ್ದು. ವಿಥ್ ಬಾತ್‍ರೂಮ್. ಮೆಯ್ನ್ ಡೋರ್ ಎದುರಿಗೆ ಕಿಚೆನ್. ಸ್ವಲ್ಪ ಪಕ್ಕದಲ್ಲಿ ನನ್ನ ರೂಮ್. ಬಲಗಡೆಗೆ ನಮ್ಮ ಪಿಆರ್‍ಓ ರೂಮ್. ಇವನ್ನು ಕನೆಕ್ಟ್ ಮಾಡುವ ಒಂದು ಹಾಲ್.
ಆ ಕಿಚೆನ್ ಸಿಂಕ್‍ನಲ್ಲಿ ಈ ಉಳಿದ ರೂಮ್‍ಮೇಟ್‍ಗಳು ಬಂದು ವ್ಯಾಕ್ ಎಂದು ಕ್ಯಾಕರಿಸಿ ಉಗಿಯುತ್ತಿದ್ದರು. ನಾನು ಮುಖ ಸಿಂಡರಿಸಿಕೊಂಡು ಆ ಶಬ್ದ ಕೇಳಿಸಿಕೊಂಡು ಅವರು ಹೋದ ಮೇಲೆ ಇನ್ನಷ್ಟು ನೀರು ಹಾಕಿ ಶುಚಿ ಮಾಡುತ್ತಿದ್ದೆ. ಅಂದ ಹಾಗೆ ವಾಟರ್ ಟ್ಯಾಂಕ್‍ಗೆ ತುಂಬಿಕೊಳ್ಳುತ್ತಿದ್ದ ನೀರು, ಸಮುದ್ರದ ನೀರು, ಉಪ್ಪು ತೆಗೆದದ್ದು.
ಒಂದು ಸಲ ಬಹಳ ಹಸಿವೆ ಆಗಿತ್ತು. ಆಗೆಲ್ಲಾ ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಅಕ್ಕಿ ಹಾಕಿ ಅನ್ನ ಮಾಡುತ್ತಿದ್ದೆ. ಅನ್ನ ಆಗಿತ್ತೆಂದು ಆ ಪಾತ್ರೆ ಹಿಡಿದು ನೀರನ್ನು ಸಿಂಕ್‍ನಲ್ಲಿ ಬಸಿಯಲು ಹೋದಾಗ ಇಡೀ ಅನ್ನ ಸಿಂಕ್ ಪಾಲಾಯಿತು. ಅದರಲ್ಲಿ ಇವರೆಲ್ಲ ಉಗಿಯುತ್ತಿದ್ದುದರಿಂದ ಅದನ್ನು ಎತ್ತಿ ತಿನ್ನಲು ಮನಸ್ಸಾಗದೇ ಮತ್ತೆ ಅನ್ನಕ್ಕಿಟ್ಟು ಅನ್ನ ಮಾಡಿ ತಿಂದೆ.
ಭಯಾನಕ ಹಸಿವೆಯಲ್ಲಿ ಸೈರಣೆ ಎಂದರೆ ಏನೆಂದು ಆವತ್ತು ತಿಳಿಯಿತು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102