ಯತಿ ಸ್ವಂತೀ -98
08-04-2018
ನರೇಂದ್ರ ಕಂಪೆನಿಯಲ್ಲಿ ಸೇರಿದ ಮೇಲೆ ಪಾಲಿಬೆಟ್ಟದಲ್ಲಿ ಕಾಫಿ ಪಲ್ಪಿಂಗ್ ಪ್ಲ್ಯಾಂಟ್ ಸಿದ್ಧವಾಯಿತು. ಅನೇಕ ಸಲ ಅಲ್ಲಿಗೆ ಹೋದೆ. ಒಳ್ಳೆಯ ಕಂಪೆನಿ ಇರುತ್ತಿತ್ತು. ನಮ್ಮ ಬಾಸ್, ಇಬ್ಬರು ಮೂವರು ಹುಡುಗರು ಜೊತೆಗಿರುತ್ತಿದ್ದರು. ಒಂದು ದಿನ ಒಂದು ಕಡೆ ಹಣ್ಣು ಹಾಕಿ ಮತ್ತೊಂದು ಕಡೆ ಬೀಜವೂ, ಸಿಪ್ಪೆಯೂ ಬೇರೆ ಆಗುವುದನ್ನು ಕಂಡೆವು. ಆ ಸಿಪ್ಪೆ ಬಹಳ ಟಾಕ್ಸಿಕ್. ಯಾವ ಗಿಡಕ್ಕೂ ಗೊಬ್ಬರದಂತೆ ಬಳಸಕೂಡದಾಗಿತ್ತು. ಅದಕ್ಕೇ ಒಂದು ಮೋರಿ ಮಾಡಿ ಅದನ್ನು ಹರಿಯಬಿಡುತ್ತಿದ್ದರು. ಒಂದು ರೀತಿಯ ಕೊಳೆತ ಹಣ್ಣಿನ ದುರ್ವಾಸನೆ ಅಲ್ಲೆಲ್ಲಾ ಅಡರಿಕೊಳ್ಳುತ್ತಿತ್ತು.
ಚಿಕ್ಕಮಗಳೂರಿಗೆ ಹೋಗುವ ಅವಕಾಶ ಬಂದಿತು. ಕೇವಲ ಜಾಗದ ಸ್ಟಡೀ ಮಾಡುವ ಕೆಲಸ ಮೊದಲು. ಜೀಪ್‍ನಲ್ಲಿ ನಮ್ಮ ಬಾಸ್ ಜೊತೆ ಹೋಗುವಾಗ ಏನೋ ಥ್ರಿಲ್ಲು. ಓಪನ್ ಜೀಪ್. ಗಾಳಿ ಚೆನ್ನಾಗಿ ಬೀಸುತ್ತಿರುತ್ತಿತ್ತು. ಚಿಕ್ಕಮಗಳೂರಿನ ಪ್ಲ್ಯಾಂಟರ್ಸ್ ಕೋರ್ಟ್ ನಮ್ಮ ರೆಗ್ಯುಲರ್ ಅಡ್ಡಾ. ಅಲ್ಲಿಯೇ ಬೆಳಗಿನ ಉಪಾಹಾರ. ರಾತ್ರಿ ಊಟ. ಮಧ್ಯಾಹ್ನದ್ದು ನಮಗಿರಲಿ, ಆ ದೇವರಿಗೂ ತಿಳಿಯುತ್ತಿರಲಿಲ್ಲವೇನೋ! ಎಲ್ಲಿ ಹಸಿವಾದರೆ ಅಲ್ಲಿ ಯಾವ ಚಿಕ್ಕ ಹೊಟೇಲ್ ಕಂಡರೆ ಅಲ್ಲಿಯೇ ಊಟ, ತಿಂಡಿ ಇತ್ಯಾದಿ.
ಒಮ್ಮೆ ಚಿಕ್ಕಮಗಳೂರಿಗೆ ನನ್ನನ್ನು ಬರಹೇಳಿದರು ನಮ್ಮ ಬಾಸ್. ಯಾವುದೋ ಸಾಮಾನು ತೆಗೆದುಕೊಂಡು ಹೋಗಬೇಕಿತ್ತು.
ರಾತ್ರಿ ಬಸ್ ಹತ್ತಿದೆ. ಬೆಳಗಿನ ಝಾವ ನಾಲ್ಕೂವರೆಗೆ ಇಳಿದೆ. ಆಟೋ ಬೇಕಾ ಸಾರ್? ಎಂದ ಒಬ್ಬ ಹದಿನಾರರ ಪೋರ. ಹೂಂ ಎಂದೆ. ಪ್ಲ್ಯಾಂಟರ್ಸ್ ಕೋರ್ಟ್ ಎಂದೆ. ಓ ಕೌಂತೇಯ! ಎಂದ. ಅದು ಆ ಹೊಟೇಲ್‍ನ ಹಳೆಯ ಹೆಸರು.
ಸರಿ ಆಟೋ ಹತ್ತಿದೆ. ಸುತ್ತಿಸಿದ ಸುತ್ತಿಸಿದ ಸುತ್ತಿಸಿದ. ಕೊನೆಗೆ ಪ್ಲ್ಯಾಂಟರ್ಸ್ ಕೋರ್ಟ್ ತಲುಪಿಸಿ ಹದಿನಾರು ರೂಪಾಯಿ ಎಂದ. ಕೊಟ್ಟೆ.
ರೂಮು ರೆಡಿಯಾಗಿತ್ತು. ಮಲಗಿಬಿಟ್ಟೆ. ಮರುದಿನ ಬೆಳಗ್ಗೆ ಹೊಟೇಲ್ ಹೊರಗೆ ಬಂದು ನೋಡಿದರೆ ಅಲ್ಲಿಂದ ಒಂದು ಫರ್ಲಾಂಗ್ ದೂರದಲ್ಲಿತ್ತು ಬಸ್‍ಸ್ಟ್ಯಾಂಡ್. ಊರೆಲ್ಲ ಸುತ್ತಿಸಿದ್ದ ಆ ಹುಡುಗನನ್ನು ನೆನೆದು, ಎಲಾ ಭಡವಾ... ಎಂದು ಅಣ್ಣಾವ್ರ ಸ್ಟೈಲಲ್ಲಿ ಅಂದುಕೊಂಡೆ.
ಚಿಕ್ಕಮಗಳೂರಿನಲ್ಲಿ ಆಗ ಎಂಜಿ ರೋಡ್, ಐಜಿ ರೋಡ್. ಐಜಿ ಅಂದ್ರೆ ಇಂದಿರಾ ಗಾಂಧಿ ಕಣ್ರೀ. ಚುನಾವಣೆಗೆ ನಿಂತು ಗೆದ್ದಿದ್ದರಲ್ಲಾ ಆ ಮಹಿಳೆ, ಅದಕ್ಕೇ ಅವರ ಹೆಸರು ಅಲ್ಲಿ ಈಗ ಅಜರಾಮರ.
ಬಾಳೆಹೊನ್ನೂರಿಗೆ ಹೋದೆ. ಕೆಂಪಗಿನ ಭದ್ರಾ ನದಿಯ ಪಕ್ಕದ ಎಸ್ಟೇಟ್ ಒಂದಕ್ಕೆ ಹೋದೆವು. ಅಲ್ಲಿಂದ ಮುಂದೆ ಬಸರೀಕಟ್ಟೆ ಎನ್ನುವ ಜಾಗಕ್ಕೆ ಹೋದರೆ ಅಲ್ಲಿ ಒಂದು ಪಲ್ಪಿಂಗ್ ಪ್ಲ್ಯಾಂಟ್ ಸಿದ್ಧಗೊಳಿಸಬೇಕಿತ್ತು.
ನನ್ನ ಬಾಸ್ ಅಂದರು. ನಿನ್ನ ಪ್ರಾಜೆಕ್ಟ್ ಇದು. ನೀನೇ ಇನ್‍ಛಾರ್ಜ್ ಎಂದರು. ಚಿಕ್ಕ ಪ್ಲ್ಯಾಂಟ್.
ಬಸರೀಕಟ್ಟೆ ಬೆಟ್ಟವಿಳಿದರೆ ಹೊರನಾಡು. ಬಲು ಸುಂದರ ಜಾಗ ಬಸರೀಕಟ್ಟೆ.
ಆಗೆಲ್ಲಾ ಫೋನ್ ಇರಲಿಲ್ಲ. ಬೆಟ್ಟವಿಳಿದು ಬಸ್ ಹತ್ತಿ ಹತ್ತಿರದ ಜಯಪುರಕ್ಕೆ ಹೋಗಿ ಫೋನ್ ಮಾಡಬೇಕಿತ್ತು. ರಾಜಸ್ಥಾನ ಒಂದೇ ಅಲ್ಲ, ಶೃಂಗೇರಿಯ ಬಳಿ ಒಂದು ಜಯಪುರವಿದೆ.
Comments
Post a Comment