ಯತಿ ಸ್ವಂತೀ -117
27-04-2018
ಲಕ್ನೋದಲ್ಲಿ ಮಧ್ಯಾಹ್ನ ಊಟ ಮಾಡಿ ತಣ್ಣಗಿನ ಲಸ್ಸಿ ಕುಡಿದೆವು. ನನಗೆ ಮೊಸರಿಗೆ ಸಕ್ಕರೆ ಎಂದರೆ ಆಗುತ್ತಿರಲಿಲ್ಲ. ವ್ಯಾ ಎನ್ನುತ್ತಿದ್ದೆ. 1979ರಲ್ಲಿ ಬಿರುಬಿಸಿಲಿನಲ್ಲಿ ಚೆನ್ನೈಗೆ ಆಲ್ ಇಂಡಿಯಾ ಟೂರ್‍ನಲ್ಲಿ ಬಂದಾಗ ಎಲ್ಲರೂ ಕುಡಿಯುತ್ತಿದ್ದ ಲಸ್ಸಿಯನ್ನು ನಾನೂ ಕಷ್ಟಪಟ್ಟು ಕುಡಿಯೋಣವೆಂದು ಕೇಳಿ ಪಡೆದೆ. ಆದರೆ ಇಷ್ಟಪಟ್ಟು ಕುಡಿದೆ. ಆಮೇಲೆ ಕಲ್ಕತ್ತಾ, ಡೆಲ್ಲಿ, ಬಾಂಬೆ ಎಲ್ಲ ಕಡೆ ಕುಡಿದ ನೆನಪು.
‘ಬ್ರಿಜ್, ನಾನು 1979ರಲ್ಲಿ ಇಲ್ಲಿಗೆ ಬಂದಿದ್ದಾಗ ಇಲ್ಲಿನ ಒಂದು ಅರಮನೆಗೆ ಹೋಗಿದ್ದೆ. ಭೂಲ್‍ಭುಲೈಯ್ಯಾ ಅಂತ. ಅದಕ್ಕೆ ಕರೆದೊಯ್ಯುವೆಯಾ?’ ಎಂದು ಕೇಳಿದೆ. ಇಬ್ಬರೂ ಅಲ್ಲಿಗೆ ಹೊರಟೆವು.
ಬಾಬಿ ಎನ್ನುವ ಜಬರ್ದಸ್ತ್ ಹಿಟ್ ಮೂವಿ ಬಂದಿತ್ತು. ಅದರಲ್ಲಿ ಡಿಂಪಲ್ ಕಪಾಡಿಯಾ ಲತಾಳ ದನಿಯಲ್ಲಿ, ‘ತೆರೆ ನೈನೋಂಕಿ ಭೂಲ್‍ಭುಲೈಯ್ಯಾಮೇ ಬಾಬಿ ಖೋ ಜಾಯೆ’ ಎಂದೆನ್ನುತ್ತಾಳೆ.
ಆ ಅರಮನೆಯ ವೈಶಿಷ್ಟ್ಯವೇ ಅದು. ಒಳಗೆ ಹೋಗಲು ಜೊತೆಗೆ ಮಾರ್ಗದರ್ಶಿ ಬೇಕು. ಇಲ್ಲದಿದ್ದರೆ ಕಳೆದುಹೋಗಿಬಿಡುತ್ತೇವೆ. ನಾವಿದ್ದೆವು ಎಂದು ಯಾರಿಗಾದರೂ ಮೆರೆತುಹೋಗುತ್ತದೆ.
ಮಾರ್ಗದರ್ಶಿ ಕರೆದೊಯ್ದ. ಅನೇಕ ಬಾಗಿಲುಗಳು, ಸುರಂಗಗಳು. ಶತ್ರುಗಳ ಆಗಮನವಾದರೆ ಮುಖ್ಯಗೇಟನ್ನು ಆ ಅರಮನೆಯ ನೆಲಮಾಳಿಗೆಯಿಂದ ನೋಡಬಹುದು! ನಿಜಕ್ಕೂ ಭೂಲ್‍ಭುಲೈಯ್ಯಾ ಎನ್ನುವ ಹೆಸರು ಸಾರ್ಥಕವಾಗುವಂತಹ ಕಟ್ಟಡ. 1979ರಲ್ಲಿ ಹೋಗಿದ್ದೆ. ಮತ್ತೆ 1987. ಮತ್ತೊಮ್ಮೆ 2011ರಲ್ಲಿ ಹೋಗಿದ್ದೆ. ಅಷ್ಟು ಆಕರ್ಷಣೆ ನನಗೆ ಆ ಕಟ್ಟಡ ಎಂದರೆ.
ಮರುದಿನ ಬೆಳಗ್ಗೆ 8 ಗಂಟೆಗೆ ನನ್ನ ರೈಲಿತ್ತು. ಅದು ವಾರಾಣಸಿಗೆ ಸಂಜೆ ಐದಕ್ಕೆ ತಲುಪಲಿತ್ತು. ಮರುದಿನ ಸಂಜೆ ನನಗೆ ವಾರಾಣಸಿಯಿಂದ ಬೆಂಗಳೂರಿಗೆ ರೈಲಿತ್ತು. ನನಗೆ ಮನೆಯ ಕಡೆ ಸೆಳೆತ. ಏನು ಮಾಡುವುದು? ಕರ್ತವ್ಯದ ಕರೆ.
ಲಕ್ನೋದಿಂದ ಹೊರಟೆ. ಆಗ ತಾನೇ ತೆಲುಗು ಕಲಿತ ಹೊಸತು. ನನ್ನ ಬ್ಯಾಗ್ ತುಂಬಾ ತೆಲುಗು ಪುಸ್ತಕಗಳು. ಯಂಡಮೂರಿ, ಮಲ್ಲಾದಿ, ಚಲ್ಲಾ, ಕೊಮ್ಮನಾಪಲ್ಲಿ, ಯರ್ರಂಶೆಟ್ಟಿ... ಹೀಗೆ. ಒಂದಾದ ಮೇಲೆ ಒಂದನ್ನು ಓದುತ್ತಾ ಹೋದೆ. ಅತ್ಯಂತ ಬೋರ್ ಹೊಡೆಸಿದ ಪ್ರಯಾಣವದು. ಒಂಬತ್ತು ಗಂಟೆಗಳ ಜರ್ನಿ.
ಅಮೇಠಿ, ರಾಯ್‍ಬರೇಲಿ ಊರುಗಳು ಆ ದಾರಿಯಲ್ಲಿಯೇ ಇವೆ. ಇವು ಯಾವ ವಿಷಯಕ್ಕೆ ಖ್ಯಾತಿ ಪಡೆದಿವೆಯೆಂದು ಹೇಳಬೇಕಿಲ್ಲ ಅಲ್ಲವೇ? ರಾಜಕೀಯವನ್ನು ಫಾಲೋ ಮಾಡುವವರಿಗೆ ಈ ಊರುಗಳ ಬಗ್ಗೆ ತಿಳಿದಿರುತ್ತದೆ.
ವಾರಾಣಸಿ ತಲುಪುವ ವೇಳೆಗೆ ನನಗೆ ಹುಚ್ಚು ಹಿಡಿದಂತಾಗಿತ್ತು.
ಹೊರಗೆ ಬಂದೆ. ರಿಕ್ಷಾವಾಲ ಒಬ್ಬ ಕಿಧರ್ ಚಲ್ನಾ ಸಾಬ್ ಎಂದ. ಮೈತೋ ಚಲಾ ಕಿಧರ್ ಚಲೇ ರಸ್ತಾ ಮುಝೆ ಕ್ಯಾ ಖಬರ್ ಹೈ ಕಹಾಂ ಮೇರಿ ಮಂಜಿಲ್ ಎಂದು ಗಟ್ಟಯಾಗಿ ಹಾಡಿದೆ.
ಪಾಗಲ್ ಆದ್ಮೀ ಎಂದು ಜೋರಾಗಿಯೇ ಬೈದ.
ನಾನು ನಗುತ್ತಾ ಹೊಟೇಲ್ ತಲುಪಿದೆ.
ಮರುದಿನ ಬೆಳಗ್ಗೆ ವಾರಾಣಸಿಯಿಂದ ಹೊರಟು ಕೊನೆಗೂ ನನ್ನ ಮನೆಗೆ, ನನ್ನ ಹೊಸ ಪತ್ನಿಯ ಬಳಿಗೆ ತಲುಪಿದೆ!
Comments
Post a Comment