ಯತಿ ಸ್ವಂತೀ -115


25-04-2018
ಕಾನ್‍ಪುರದಲ್ಲಿ ಒಂದು ವೈಶಿಷ್ಟ್ಯ ಕಂಡೆ. ಟ್ರಾಫಿಕ್ ಸಿಗ್ನಲ್‍ನಲ್ಲಿ ಬಹಳ ರಷ್ ಇದ್ದರೆ ಮೀಡಿಯನ್ ಬಳಿ ರಸ್ತೆಯ ಆ ಕಡೆಗೆ ಹೋಗಿಬಿಡುತ್ತಿದ್ದರು ವಾಹನ ಚಾಲಿಸುವವರು. ನಮ್ಮ ಊರಲ್ಲಿ ಈಗ ಫ್ಲೈ ಓವರ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಸರ್ವತೋಮುಖ ದಿಕ್ಕುಗಳಲ್ಲಿ ವಾಹನಗಳು ಚಲಿಸುವುದಿಲ್ಲವೇ ಹಾಗೆ!
‘ನಿಮ್ಮ ಟ್ರಾಫಿಕ್ ರೂಲ್‍ಗಳು ನನಗೆ ಇಷ್ಟ ಆದವು’ ಎಂದೆ ಬ್ರಿಜ್‍ಗೆ. ಅವನು ಸುಮಾರು ಇಪ್ಪತ್ತೈದರ ಯುವಕ. ಕಾನ್‍ಪುರದನನ್ನ ಹೊಟೇಲ್‍ಗೆ ಬಂದ. ಅವನ ಆಫೀಸ್ ಕಾನ್‍ಪುರದಲ್ಲೇ ಇತ್ತು.
‘ಇಲ್ಲಿ ರೂಲ್ಸೇ ಇಲ್ಲವಲ್ಲಾ’ ಎಂದ ಅಚ್ಚರಿಯಿಂದ. ‘ಅದೇ ನನಗೆ ಇಷ್ಟ ಆಗಿದ್ದು’ ಎಂದೆ.
ಮುಂಬೈನ ಟ್ರಾಫಿಕ್ ನೆನಪಾಯಿತು. ಎಷ್ಟು ಜನರಿದ್ದರೂ ಸಿಗ್ನಲ್‍ನಲ್ಲಿ ಮರ್ಯಾದೆಯಿಂದ ನಿಲ್ಲುತ್ತಿದ್ದರು. ಒಂದು ವೇಳೆ ಕೊನೆಯ ಗಳಿಗೆಯಲ್ಲಿ ಯಾರಾದರೂ ರಸ್ತೆ ದಾಟಲು ಬಂದರೆ ಕಾರು ನಿಲ್ಲಿಸಿ ಹೋಗು ಎನ್ನುತ್ತಿದ್ದರು.
ಕಾನ್‍ಪುರದ ಆಫೀಸಿಗೆ ಹೋದೆ. ಕೆಲವರೊಂದಿಗೆ ಹಿಂದೆ ಮಾತಾಡಿದ್ದೆ. ಮತ್ತೆ ಕೆಲವರ ಜೊತೆ ಆಫೀಸ್ ವಿಷಯವಾಗಿ ಪತ್ರ ವ್ಯವಹಾರ ಇತ್ತು.
ಮರುದಿನ ಬೆಳಗ್ಗೆ ಲಕ್ನೋಗೆ ಹೋಗಬೇಕಿತ್ತು.
ಆ ದಿನ ನನಗೆ ಕಾನ್‍ಪುರದ ದರ್ಶನ ಮಾಡಿಸಿದ ಬ್ರಿಜ್‍ಮೋಹನ್ ಮೆಹ್ರೋತ್ರಾ.
ಮ್ಯಾಟಡಾರ್ ವ್ಯಾನ್‍ಗಳು ನಮ್ಮೂರಿನ ಆಟೋಗಳಂತೆ ಕೆಲಸ ಮಾಡುತ್ತಿದ್ದವು. ಆದರೆ ಒಂದು ವಿಶೇಷ ಗಮನಿಸಿದೆ. ಒಂದು ಕಡೆ ನಿಂತು ಗೋಲ್‍ಛೋರಾ ಎಂದು ಚಾಲಕ ಕೂಗುತ್ತಿದ್ದ. ಅದರಲ್ಲಿ ಹತ್ತಿ ಒಂದಿಷ್ಟು ದೂರ ಹೋಗಿ ನಂತರ ಇಳಿದು ಮತ್ತೊಂದು ಮ್ಯಾಟಡಾರ್ ಹತ್ತುತ್ತಿದ್ದೆವು. ಹಾಗೆ ಇಬ್ಬರು ಚಾಲಕರಿಗೂ ಹಣ.
ಇಲ್ಲಿ ಮಲ್ಲೇಶ್ವರಂನಿಂದ ಚಾಮರಾಜಪೇಟೆಗೆ ಹೋಗಬೇಕಿದ್ದರೆ ಮೆಜೆಸ್ಟಿಕ್ ವರೆಗೆ ಒಂದು ಗಾಡಿ. ಅಲ್ಲಿಂದ ಚಾಮರಾಜಪೇಟೆಗೆ ಮತ್ತೊಂದು ಗಾಡಿ ತಗೊಂಡ ಹಾಗೆ.
ಅಲ್ಲಿನ ಶ್ರೀಕೃಷ್ಣನ ಗುಡಿ ಬಹಳ ಚೆನ್ನಾಗಿದೆ. ಇದನ್ನೇ ನನ್ನ ‘ಚಿರಸ್ಮಿತ’ ಕಾದಂಬರಿಯಲ್ಲಿ ಬಳಸಿದೆ ಕೂಡ. ಕಥೆಗೆ ಒಂದು ವಿಶಿಷ್ಟ ತಿರುವು ಬರುವ ದೃಶ್ಯವದು. ಸರಿಸುಮಾರು ನಾನು ಹೋದ 1987ರ ಸಮಯವನ್ನೇ ಕಾದಂಬರಿಯಲ್ಲಿಯೂ ಉಪಯೋಗಿಸಿದ್ದೇನೆ.
ಬ್ರಿಜ್ ಜೊತೆ ಮರುದಿನ ಬೆಳಗ್ಗೆ ಬಸ್‍ನಲ್ಲಿ ಲಕ್ನೋಗೆ ಹೋದೆ. ಸುಮಾರು ತೊಂಬತ್ತು ನಿಮಿಷಗಳ ಪ್ರಯಾಣ. ಅಲ್ಲಿನ ಎಚ್.ಎ.ಎಲ್‍ಗೆ ನಮ್ಮ ಜನರೇಟರುಗಳನ್ನು ನೀಡಲೋ, ಅಥವಾ ನೀಡಿದ್ದರಿಂದ ಹೇಗೆ ಕೆಲಸ ಮಾಡುತ್ತಿವೆಯೆಂದು ತಿಳಿಯಲೋ ಎಂದು ನೆನಪಿಲ್ಲ. ಕೆಲಸ ಮುಗಿಸಿ ಹೊರಟಾಗ ಮಧ್ಯಾಹ್ನ ಒಂದೂವರೆ.
ಸ್ವಲ್ಪ ದೂರ ಹೋದಾಗ ‘ಬ್ರಿಜ್, ನನಗೆ ಯಾಕೋ ಕಣ್ಣು ಕಾಣಿಸದಂತಾಗಿದೆ’ ಎಂದೆ. ಅವನು ಗಾಬರಿಯಿಂದ ಬೇಗನೆ ನನ್ನನ್ನು ಒಂದು ಹೊಟೇಲ್‍ಗೆ ಕರೆದೊಯ್ದು ನೀರು ಕುಡಿಯೆಂದ. ನೆರಳಲ್ಲಿ, ನೀರು ಕುಡಿದ ನಂತರ ಸ್ವಲ್ಪ ಸುಧಾರಿಸಿಕೊಂಡೆ. ಅದು ಸನ್‍ಸ್ಟ್ರೋಕ್. ಅಲ್ಲೆಲ್ಲಾ ಬಿಸಿಲಿನ ಶಾಖದ ಅಲೆಯೇ ಹೊಡೆಯುತ್ತದೆ. ಅಂತಹ ಅಲೆಯೊಂದರಿಂದ ನಾನು ಸ್ವಲ್ಪ ಸುಸ್ತಾಗಿದ್ದೆ.
ಅನೇಕ ಸಲ ಪೇಪರುಗಳಲ್ಲಿ ಬಿಸಿಲಿನ ಝಳಕ್ಕೆ ಸಾವು ಎನ್ನುವ ವಿಷಯವನ್ನು ಓದಿದ ನೆನಪು ಥಟ್ಟನೆ ನುಗ್ಗಿ ಬಂತು. ಥ್ಯಾಂಕ್ಸ್ ಟು ಬ್ರಿಜ್‍ಮೋಹನ್ ಮೆಹ್ರೋತ್ರಾ. ನಿಮ್ಮೊಂದಿಗೆ ಇಂದು ಇದನ್ನು ಹಂಚಿಕೊಳ್ಳುವಷ್ಟು ಕಾಲ ಬದುಕಿಯೇ ಇದ್ದೇನೆ!


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102