ಯತಿ ಸ್ವಂತೀ -111


21-04-2018
ನನ್ನ ಡ್ರೈವಿಂಗ್ ಲೈಸೆನ್ಸ್‍ನ್ನು ಒಂದು ಶುಭದಿನ ನಮ್ಮ ಪಿ.ಆರ್.ಓ. ಫಹಾದ್ ಅಲ್ ಸುಭಿ ತಂದುಕೊಟ್ಟ. ಏನೋ ಒಂದು ರೀತಿ ಥ್ರಿಲ್. ಭಾರತದ ಲೈಸೆನ್ಸ್ ತಗೊಂಡಾಗ ಇಷ್ಟೊಂದು ಖುಷಿ ಇರಲಿಲ್ಲ. ಅದು ಎರಡನೇ ಪ್ರಯತ್ನದಲ್ಲೇ ಸಿಕ್ಕಿಬಿಟ್ಟಿತ್ತು. ಇದು ಕಷ್ಟದಿಂದ ಪಡೆದ ಲೈಸೆನ್ಸ್. 2013ರ ವರೆಗೆ ಅದು ಜಾರಿಯಲ್ಲಿತ್ತು. ಆದರೆ ನಾನು 2005ಕ್ಕೆ ಭಾರತಕ್ಕೆ ಮರಳಿ ಬಂದುಬಿಟ್ಟೆ. ಮತ್ತೆ ಇದುವರೆಗೂ ಯಾವ ಪರದೇಶವನ್ನೂ ಮೆಟ್ಟಿಲ್ಲ.
ಮೂರು ತಿಂಗಳು ಕಾರು ಓಡಿಸಬೇಡವೆಂದರು ಆಫೀಸಿನಲ್ಲಿ. ಮೂರು ತಿಂಗಳ ಒಳಗೆ ಏನಾದರೂ ಆಕ್ಸಿಡೆಂಟ್ ಮಾಡಿದರೆ ಲೈಸೆನ್ಸ್ ಮುಟ್ಟುಗೋಲು ಹಾಕುವ ಸಾಧ್ಯತೆ ಇದೆ ಎಂದರು.
ಸರಿ, ಮೂರು ತಿಂಗಳು ಕಾರೋಡಿಸುವ ವಿಷಯವನ್ನೇ ಮನದಲ್ಲಿ ಮಂಡಿಗೆಯಂತೆ ತಿನ್ನುತ್ತಾ ಕಾಲ ನೂಕಿದೆ. ಅಲ್ಲಿ ಇನ್ನೂ ಒಂದು ಪ್ರಶ್ನೆ ಇತ್ತು. ಯಾವ ಕಾರು ಕೂಡ ಇರಲಿಲ್ಲ. ಎಷ್ಟು ಜನ ಲೈಸೆನ್ಸ್ ಉಳ್ಳವರೋ ಅಷ್ಟೂ ಜನಕ್ಕೆ ಒಂದೊಂದು ಕಾರು ಈಗಾಗಲೇ ಇತ್ತು. ನನಗೆ ಅಲ್ಲಿ ಕೆಲಸ ಸಿಗಲು ಕಾರಣ ಈಗಾಗಲೇ ಕೆಲಸದಲ್ಲಿದ್ದಾತ ಬಿಟ್ಟುಹೋಗಿದ್ದು. ಬಹುಶಃ ಒಂದು ನಿಯಮಿತ ಸಂಖ್ಯೆಯ ವರ್ಕ್ ಪರ್ಮಿಟ್‍ಗಳನ್ನು ಪ್ರತಿಯೊಂದು ಕಂಪೆನಿಗೆ ಕೊಡುವರೇನೋ!
ಆತನ ಕಾರು ನನ್ನ ರೂಮ್ ಮೇಟ್ ಪ್ರವೀಣನಿಗೆ ಕೊಡಲ್ಪಟ್ಟಿತ್ತು. ಅವನೇ ನನ್ನನ್ನು ನಾನು ಮಸ್ಕತ್‍ನ ಸೀಬ್ ವಿಮಾನ ನಿಲ್ದಾಣದಲ್ಲಿದ್ದಾಗ ಪಿಕ್ ಅಪ್ ಮಾಡಿದ್ದು.
ಅವನು ಬೆಂಗಳೂರಿಗೆ ಹೊರಟ. ಅವನು ಹೊರಟೊಡನೆ ಅವನ ಕಾರು ಮಾಜ್ದಾ 323 ನನಗೆ ಕೊಡಲ್ಪಟ್ಟಿತು.
ಮೊದಲ ದಿನ ಬಹಳವೇ ಥ್ರಿಲ್‍ನಿಂದ ಕಾರನ್ನು ಪಾರ್ಕಿಂಗ್ ಲಾಟ್‍ನಿಂದ ರಿವರ್ಸ್ ಮಾಡಿದೆ. ಸ್ವಲ್ಪ ಬೇಗನೆ ಸ್ಟೀರಿಂಗ್ ತಿರುಗಿಸಿದ್ದರಿಂದ ಪಕ್ಕದ ದೊಡ್ಡ ಟೊಯೊಟಾ ಕಾರಿನ ಟೆಯಲ್ ಲೈಟ್ ಒಡೆದೆ! ನನ್ನ ಮುಂದಿನ ಸೈಡ್ ಲೈಟು ಒಡೆಯಿತು.
ಅಲ್ಲಿದ್ದ ಕಾವಲುಗಾರ ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿದ. ಪೊಲೀಸ್ ಬಂದರು. ನನ್ನ ಲೈಸೆನ್ಸ್ ಕಿತ್ತುಕೊಂಡು ಹೊರಟುಹೋದರು.
ನಮ್ಮ ಪಿಆರ್‍ಓನಿಂದ ನಾನು ಪೊಲೀಸ್ ಸ್ಟೇಷನ್‍ಗೆ ಹೋಗಬೇಕೆಂಬ ಸುದ್ದಿ ಸಿಕ್ಕಿತು. ಆ ರಸ್ತೆಯೋ ನಮ್ಮ ಚಿಕ್ಕಪೇಟೆಯ ರಸ್ತೆಯಂತಹದ್ದು! ಠಾಣೆಯ ಎದುರಿನಲ್ಲಿ ಕಷ್ಟಪಟ್ಟು ಫುಟ್‍ಪಾತ್ ಮೇಲೆ  ಪಾರ್ಕ್ ಮಾಡಿ, ಒಳಗೆ ನಡೆದೆ. ಹೇಳುವವರು ಕೇಳುವವರು ಯಾರೂ ಇರಲಿಲ್ಲ. ಎಲ್ಲರೂ ಅವರವರ ಕೆಲಸದಲ್ಲಿ ಮಗ್ನರಾಗಿದ್ದರು.
ಬೋರ್ ಹೊಡೆಸಿಕೊಳ್ಳುತ್ತಾ ಹೆಚ್ಚು ಕಡಿಮೆ ಅರ್ಧ ದಿನ ಕಳೆದ ನಂತರ ನಮ್ಮ ಪಿಆರ್‍ಓ ಬಂದ. ಒಳಗೆ ಹೋಗಿ ಅರಾಬಿಕ್ ಭಾಷೆಯಲ್ಲಿ ಮಾತಾಡಿ, ಹೊರಗೆ ಬಂದು ನನ್ನ ಲೈಸೆನ್ಸ್ ನನ್ನ ಕೈಗಿತ್ತು ನೀನು ಹೋಗಬಹುದು ಎಂದ.
ಇನ್ನೊಮ್ಮೆ ಅಪಘಾತಕ್ಕೆ ಸಿಲುಕಬಾರದು ಎನ್ನಿಸಿತು. ಈ ಬೋರ್ ನಿರೀಕ್ಷೆಯನ್ನು ತಪ್ಪಿಸಿಕೊಳ್ಳಬೇಕೆಂಬುದು ನನ್ನ ಆ ಆಸೆಯ ನೇಪಥ್ಯವಾಗಿತ್ತು.
ಕೊನೆಗೂ ಹೊರಗೆ ಬಂದು ನನ್ನ ಕೆಲಸಗಳಿಗೆ ಹೊರಟೆ. ನನಗೆಂದು ಕೆಲವು ಕೀ ಅಕೌಂಟುಗಳಿದ್ದವು. ಅಂದರೆ ನಾನು ಕೆಲವು ಗ್ರಾಹಕರಿಗೆ ಸಾಮಾಗ್ರಿ ಸರಬರಾಜು ಮಾಡಿ, ಅವರಿಂದ ಹಣ ವಸೂಲಿ ಮಾಡಬೇಕಿತ್ತು.
ನನ್ನ ಆಕಸ್ಮಿಕಗಳ ಪಟ್ಟಿ ಆಗ ತಾನೇ ಆರಂಭವಾಗಿತ್ತು!


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102