ಯತಿ ಸ್ವಂತೀ -100
10-04-2018
ಮಹಮ್ಮದ್ ಎಂಬ ಸುಮಾರು ಅರವತ್ತರ ವ್ಯಕ್ತಿ ನನಗೆ ಕಾರು ಡ್ರೈವಿಂಗ್ ಕಲಿಸಲು ಬಂದ. ನಮ್ಮ ಪಿಆರ್‍ಓಗೆ ತಿಳಿದಿದ್ದ ವ್ಯಕ್ತಿ. ಆತನನ್ನು ನೋಡಿದರೆ ಬೈಬಲ್‍ನಲ್ಲಿ ಬರುವ ಬಿಳಿ ದಾಡಿಯ ಮುಖ ಮುದುರಿದ್ದ ಪಾತ್ರದ ನೆನಪಾಗುತ್ತಿತ್ತು. ಅಥವಾ ಟೆನ್ ಕಮ್ಯಾಂಡ್‍ಮೆಂಟ್ಸ್‍ನ ಒಂದು ಪಾತ್ರ ಎನ್ನಬಹುದೇನೋ!
ಆತನಿಗೆ ಇಂಗ್ಲೀಷ್ ಬಿಟ್ಟರೆ ಬೇರೆ ಭಾಷೆ ತಿಳಿಯದು. ಎಲಾಂಟ್ರಾ ಕಾರು ಆತನದು. ಅದರಲ್ಲಿ ನನಗೆ ಡ್ರೈವಿಂಗ್ ಕಲಿಸಲಾರಂಭಿಸಿದ. ನಮ್ಮಲ್ಲಿ ಜಯನಗರ, ರಾಜಾಜಿನಗರ, ಯಶವಂತಪುರ, ರಾಜರಾಜೇಶ್ವರಿನಗರ, ಇಂದಿರಾನಗರ ಆರ್‍ಟೀಓಗಳಿದ್ದಂತೆ ಅಲ್ಲಿಯೂ ಬೇರೆ ಬೇರೆ ಜಾಗಗಳಿದ್ದವು. ಎಲ್ಲೆಡೆಯೂ ನನ್ನನ್ನು ಕರೆದೊಯ್ದ. ರಸ್ತೆಯ ಸಿಗ್ನಲ್‍ಗಳು, ಫಲಕಗಳನ್ನು ತೋರಿಸಿ ಮನನ ಮಾಡಿಸಿದ. ಮರೆತು ಎಡಗಡೆಗೆ ಹೋಗಿಬಿಟ್ಟಿದ್ದೆ ಒಂದು ಸಲ. ಮತ್ತೊಮ್ಮೆ ಮೆಯಿನ್ ರೋಡಿನಲ್ಲಿ ಹೋಗುತ್ತಿದ್ದಾಗ ಸೈಡ್ ರೋಡ್ ಬಂದಾಗ ಥಟ್ಟನೆ ಕಾರನ್ನು ಸ್ಲೋ ಮಾಡಿದೆ. ಆ ತಾತ ನನ್ನ ಕೈ ಮೇಲೆ ಫಟಾರನೆ ಹೊಡೆದೇ ಬಿಟ್ಟ. ಮುಖ್ಯರಸ್ತೆಯಲ್ಲಿರುವವರಿಗೆ ಮೊದಲ ಆದ್ಯತೆ. ಉಳಿದವರೆಲ್ಲ ಕಾಯಬೇಕು. ಒಂದು ವೇಳೆ ಯಾವನಾದರೂ ಪಕ್ಕದ ರಸ್ತೆಯಿಂದ ಬಂದು ನಿನಗೆ ಹೊಡೆದಿದ್ದರೆ ಏನು ಮಾಡುತ್ತಿದ್ದೆ? ಎಂದು ದಬಾಯಿಸಿದ.
ಬೆಳಗ್ಗೆ, ಮಧ್ಯಾಹ್ನ ಕಾರೋಡಿಸಿದ ನಂತರ ‘ರಾತ್ರಿ ಕೂಡ ಓಡಿಸೋದು ಕಲಿಯಬೇಕು’ ಎಂದೆ. ಕರೆದೊಯ್ದ. ಬೆಂಗಳೂರಿನ ಅನುಭವವನ್ನು ನೆನೆದು, ರಿವರ್ಸ್ ಗೇರ್ ಕಲಿಸಿಕೊಡೆಂದೆ. ಪಾರ್ಕಿಂಗ್ ಕಲಿಸೆಂದೆ. ಉದ್ದಕ್ಕೆ ನಿಂತ ಎರಡು ಕಾರುಗಳ ನಡುವೆ ಒಂದು ಕಾರು ನಿಲ್ಲಿಸುವಷ್ಟು ಜಾಗದಲ್ಲಿ ಕಾರ್ ಪಾರ್ಕಿಂಗ್ ಕಲಿತೆ.
ಮೊದಲ ಟೆಸ್ಟ್ ಬಂದಿತು. ಮೊದಲು ಡ್ರಂ ಟೆಸ್ಟ್, ನಂತರ ಸ್ಲೋಪ್ ಟೆಸ್ಟ್.
ಇಂಗ್ಲೀಷ್ ಎಲ್ ಅಕ್ಷರದ ಆಕಾರದಲ್ಲಿ ಎರಡೆರಡು ಡ್ರಮ್‍ಗಳು ಜೋಡಿಸಲ್ಪಟ್ಟಿರುತ್ತವೆ. ಒಂದು ಕಾರು ತೂರುವಷ್ಟು ಮಾತ್ರ ಜಾಗವಿರುತ್ತದೆ. ನನಗೆ ಕಲಿಸುವಾಗಲೇ ಡ್ರಂಗಳ ನಡುವೆ ರಿವರ್ಸ್ ಎರಡು ಕಡೆಯಿಂದ ಓಡಿಸಲು ಕಲಿಸಿದ್ದ. ಮೊದಲ ಟೆಸ್ಟ್‍ನಲ್ಲಿ ನನ್ನ ಕಾರಿನ ಕನ್ನಡಿ ಒಂದು ಚೂರು ತಾಕಿಬಿಟ್ಟಿತು. ಫೆಯ್ಲ್! ಎರಡನೇ ಟೆಸ್ಟ್‍ನಲ್ಲಿ ಡ್ರಂ ಟೆಸ್ಟ್ ಪಾಸಾದೆ. ಆದರೆ ಸ್ಲೋಪ್ ಟೆಸ್ಟ್‍ನಲ್ಲಿ ಫೆಯ್ಲ್. ಒಂದು ಇಳಿಜಾರಿನಲ್ಲಿ ಕಾರನ್ನು ಬ್ರೇಕ್ ಹಾಕಿ ನಿಲ್ಲಿಸಿಕೊಂಡು ಎಂಜಿನ್ ಓಡುತ್ತಿರಬೇಕು. ಅವರು ಕೆಂಪು ದೀಪವನ್ನು ಹಸಿರು ಮಾಡಿದೊಡನೆ ಮುಂದಕ್ಕೆ ಹೋಗಬೇಕು. ಆಗ ಕಾರು ಹಿಂದಕ್ಕೆ ಜಾರಕೂಡದು. ಮಸ್ಕತ್‍ನಲ್ಲಿ ಅನೇಕ ರಸ್ತೆಗಳಲ್ಲಿ ಇಳಿಜಾರು ಜಾಸ್ತಿ ಇದೆ. ಅದಕ್ಕೇ ಈ ಟೆಸ್ಟು. ಇದರಲ್ಲಿ ಫೆಯ್ಲ್ ಆದೆ. ಎರಡನೇ ಸಲ ಇದನ್ನು ಮುಗಿಸಿದೆ.
ಇದಕ್ಕೂ ಮೊದಲು ಲರ್ನರ್ಸ್ ಲೈಸೆನ್ಸ್ ತಗೊಳ್ಳುವಾಗ ರಾಯಲ್ ಒಮಾನಿ ಪೊಲೀಸ್ (ಆರ್ ಓ ಪಿ) ಆಫೀಸಿಗೆ ಹೋದೆ. ಎಲ್ಲರ ಹೆಸರೂ ಕರೆಯುತ್ತಿದ್ದರು. ನನ್ನ ಹೆಸರಿಗಾಗಿ ಕಾದೆ. ಅವನು ವೀರಾಂ ವೀರಾಂ ಎನ್ನುತ್ತಿದ್ದ. ಟ್ಯೂಬ್‍ಲೈಟ್ ಆಗಿದ್ದೆ. ಕೊನೆಗೂ ಅವನು ನನ್ನನ್ನು ವೀರಾಂ ಅಂದರೆ ವೀರಾಂಬುಧಿಯ ಅಪಭ್ರಂಶದಲ್ಲಿ ಕರೆಯುತ್ತಿದ್ದಾನೆ ಎಂದರಿವಾಗಿತ್ತು.
ಬಲಗಣ್ಣಿಗೆ ಕಪ್ಪು ಪಟ್ಟಿ ಇದ್ದ ಕನ್ನಡಕ ಹಾಕಿ ಎಡಗಣ್ಣಿನಲ್ಲಿ ಓದಿಸಿದ. ತಡವರಿಸುತ್ತಾ ಓದಿದೆ. ಇನ್ನೂ ನಾನು ಮುಗಿಸುವ ಮುಂಚೆಯೇ ಬಲಗಣ್ಣಿನಲ್ಲಿ ಓದಲು ಸನ್ನೆ ಮಾಡಿದ. ಏಕೆಂದರೆ ಭಾಷೆ ಬರುವುದಿಲ್ಲವಲ್ಲ! ಅಂತೂ ಹಾಗೆ ನನಗೆ ಡ್ರೈವಿಂಗ್ ಕಲಿಯಲು ಲೈಸೆನ್ಸ್ ಸಿಕ್ಕಿತ್ತು.
Comments
Post a Comment