ಯತಿ ಸ್ವಂತೀ -99
09-04-2018
ಮಿಡ್ಲ್ ಸ್ಕೂಲಿನಲ್ಲಿ ಓದುವಾಗ ಬರೀ ಹುಡುಗರ ಪಾಳ್ಯ. ಬಾಯ್ಸ್ ಮಿಡ್ಲ್ ಸ್ಕೂಲ್ ಅಲ್ಲವೇ? ಸಖತ್ ಆಗಿತ್ತು ಆ ಸಮಯ. ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ನಾನು ಅನ್ನುವಂತಿರಲಿಲ್ಲ. ಈ ಮೊದಲೇ ಹೇಳಿದಂತೆ ನನ್ನ ತಾಯಿ ನನ್ನನ್ನು ಪ್ರತಿ ತಿಂಗಳು ಜನವರಿಗೆ ಅವರ ತಂದೆಯ ಮನೆಗೆ ಕಳಿಸಿಬಿಡುತ್ತಿದ್ದರು. ನನ್ನ ಸೋದರಮಾವನ ಹೆದರಿಕೆಯಿಂದಲಾದರೂ ಓದಿ ಪಾಸಾಗಬಹುದೆಂಬ ದೂರದ ಆಸೆ ನಮ್ಮಮ್ಮನದು!
ಅಜ್ಜನ ಮನೆ ವಿವಿಪುರಂ ಐದನೇ ಮೆಯಿನ್‍ನಲ್ಲಿತ್ತು. ಹತ್ತಿರದ ಎಂಟನೇ ಕ್ರಾಸ್‍ನಲ್ಲಿ ಗಣೇಶೋತ್ಸವಕ್ಕೆ ಸಂಗೀತ, ಆರ್ಕೆಸ್ಟ್ರಾ ಏರ್ಪಡಿಸುತ್ತಿದ್ದರು.
ನಮ್ಮ ಅಜ್ಜನ ಮನೆಯಲ್ಲಿ ಅಜ್ಜ, ಅಜ್ಜಿ, ಮೂವರು ಸೋದರ ಮಾವಂದಿರು, ಮೊದಲ ಸೋದರ ಮಾವನ ಪತ್ನಿ ಇದ್ದರು. ಆ ನಂತರ ಮೊದಲ ಮಾವನ ಇಬ್ಬರು ಮಕ್ಕಳು ಕೂಡ.
ಅಜ್ಜಿಯ ಮನೆಯ ಎದುರು ಮನೆಯಲ್ಲಿ ಮೈಸೂರಿನ ಆಗಿನ ಮುನಿಸಿಪಲ್ ಕೌನ್ಸೆಲ್ಲರ್ ಇದ್ದರು. ಅವರ ಮಗಳೊಬ್ಬರು ಮದ್ರಾಸಿನಲ್ಲಿದ್ದರು (ಈಗಿನ ಚೆನ್ನೈ). ಅವರ ಮಗ ಶ್ರೀವತ್ಸ (ವಚ್ಚು) ನನ್ನ ಓರಗೆಯವನೇ. ಅವನು ಅಜ್ಜಿಯ ಮನೆಗೆ ರಜೆಗೆ ಬರುತ್ತಿದ್ದ. ಅದು ಹೇಗೋ ನನಗೂ ಅವನಿಗೂ ಗೆಳೆತನ ಬೆಳೆಯಿತು. ಬಹುಶಃ ಒಂದೇ ವಯಸ್ಸಿನವರೆಂದೂ ಇರಬಹುದು. ಇತ್ತೀಚೆಗೆ ನನಗೆ ಮಾತಿನ ಮಲ್ಲ ಎನ್ನುವ ಬಿರುದು ನೀಡಿದರು ಫೇಸ್‍ಬುಕ್ ಮಿತ್ರೆ. ಆದರೆ ಆಗಲೂ ಒಂದಿಷ್ಟು ಮಾತಾಡುತ್ತಿದ್ದೆ. ನಮ್ಮ ನೆಂಟರು ಸೇರಿದರೆ ನಾನು, ನನ್ನ ದೊಡ್ಡ ತಂಗಿ ಇಬ್ಬರೂ ಹಾಡುಗಳನ್ನು ಹೇಳುತ್ತಿದ್ದೆವು. ನಮ್ಮೂರ್‍ನಾಗ್ ನಾನೊಬ್ನೆ ಜಾಣ, ವಹರೆ ಮೇರ ಮುರುಗ ಇತ್ಯಾದಿ.
ಹ್ಞಾಂ... ವಚ್ಚುವಿನ ಸಂಪರ್ಕ ನನಗೆ ಹತ್ತನೇ ತರಗತಿಯ ನಂತರ ಕಡಿದುಹೋಯಿತು. ನಾನು ಬೆಂಗಳೂರಿಗೆ ಪಿಯುಸಿ ಓದಲು ಬಂದುಬಿಟ್ಟೆ.
ನಂತರ ನನ್ನ ಜೀವನವು ಚಿಕ್ಕ ಡಬ್ಬಾ ಒಂದರಲ್ಲಿ ಹಾಕಿ ಅಲುಗಾಡಿಸಲ್ಪಡುವ ಕಲ್ಲಿನಂತೆ ಉರುಳಾಡಿ, ಅದೂ ಇದೂ ಆಗಿ, ಕೊನೆಗೆ ನಾನೆಲ್ಲಿಗೆ ಹೋಗಬಾರದೆಂದುಕೊಂಡಿದ್ದೆನೋ ಅದೇ ಊರಿಗೆ ತೆಗೆದುಕೊಂಡು ಬಿಸಾಡಿತು. ಮಸ್ಕತ್ ಅಥವಾ ಸಲ್ತನತ್ ಆಫ್ ಒಮಾನ್.
ಊರು ತಲುಪಿ ಒಂದೇ ದಿನದಲ್ಲಿ ಒಬ್ಬನೇ ಹತ್ತಿರದ ರೂವಿ ಹೈ ಸ್ಟ್ರೀಟ್‍ಗೆ ಹೊರಟೆ. ಅದು ಅಲ್ಲಿನ ಎಂ.ಜಿ.ರೋಡ್ ತರಹ. ತರಹಾವರಿ ವಸ್ತುಗಳು ದೊರಕುತ್ತಿದ್ದವು. ಯಾವುದೋ ಅಂಗಡಿಯೊಳಗೆ ಹೋಗಿ ಹೊರಗೆ ಬಂದೊಡನೆ ನನ್ನೆದುರಿಗೆ ಬಂದ ವ್ಯಕ್ತಿಯನ್ನು ನೋಡಿ, ‘ಅರೆ ವಚ್ಚೂ!’ ಎಂದು ಉದ್ಗರಿಸಿದೆ.
ಅವನೇ ಶ್ರೀವತ್ಸ ಉರ್ಫ್ ವಚ್ಚು! ನನ್ನ ಭಾವ ಕೆಲವು ವರ್ಷಗಳ ಕಾಲ ಮಸ್ಕತ್‍ನಲ್ಲಿದ್ದಾಗ ಅವನ ಗುರುತು ಇತ್ತಂತೆ. ಮನೆಗೆ ಕರೆದ. ಇನ್ನೂ ಒಂಟಿತನದ ಬೇಗೆ ನನ್ನನ್ನು ಸುಟ್ಟು ಹಾಕುತ್ತಿತ್ತು.
ಕರೆದಿದ್ದೇ ಸಾಕೆಂದು ಅವರ ಮನೆಗೆ ನಡೆದು ಹೋದೆ. ವಿಧಿಯಿಲ್ಲ. ನನಗೆ ಕಾರು ಇರಲಿಲ್ಲ. ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಅವನ ಮನೆಯೂ ಹತ್ತಿರವಾಗಿಯೇ ಇತ್ತು. ಲುಲು ಸೂಪರ್ ಮಾರ್ಕೆಟ್ ಇತ್ತು ಒಂದು ಫರ್ಲಾಂಗ್ ದೂರದಲ್ಲಿ. ಅದರ ಪಕ್ಕದಲ್ಲಿ ಭಾರತೀಯ ದೂತಾವಾಸ.
ವಚ್ಚುವಿನ ಮನೆ ಇವೆರಡರ ನಡುವಿನ ಒಂದು ಅಪಾರ್ಟ್‍ಮೆಂಟ್.
Comments
Post a Comment