ಯತಿ ಸ್ವಂತೀ -95


05-04-2018
ನರೇಂದ್ರ ಕಂಪೆನಿಯಲ್ಲಿ ಸೇರಿದ ದಿನವೇ ಬೇಗನೆ ಬಾ ಎಂದರು. ಎರಡು ವರ್ಷಗಳಿಂದ ಪ್ರಕಾಶನ ಸಂಸ್ಥೆಯನ್ನು ನಡೆಸಿ, ಕೆಲಸಕ್ಕೆ ಹೋಗುವುದನ್ನೇ ಮರೆತಿದ್ದೆ! ಪ್ರಕಾಶನ ಸಂಸ್ಥೆಗಳ ಪುಸ್ತಕಗಳು ಆ ವರ್ಷ ಸರ್ಕಾರದ ಲೈಬ್ರರಿಗೆ ಒಂದು ಕೂಡ ಆಯ್ಕೆಯಾಗದೇ ಕೈ ಸುಟ್ಟು ಹೋಯಿತು! ಒಳಗಿನ ಗಾಯ ಕಣ್ರೀ... ಕಾಣಿಸೋದಿಲ್ಲ ಹೊರಕ್ಕೆ!
ಇಂಟವ್ರ್ಯೂಗೆ ಹೋದೆ. ಆಯ್ಕೆಯಾದೆ. ಕಾಫಿ ಮತ್ತು ಟೀ ಎಸ್ಟೇಟುಗಳಿಗೆ ಆಧುನಿಕ ಯಂತ್ರಗಳ ಮಾರಾಟ. ಅಂದರೆ ಕಾಫಿ ಹಣ್ಣುಗಳ ಮೇಲಿನ ಸಿಪ್ಪೆಯನ್ನು ಬಿಡಿಸುವ ಒಂದು ಯಂತ್ರ ಸಮೂಹ. ಕಾಫಿ ಬೀಜವನ್ನು ಒಣಗಿಸುವ ಯಂತ್ರ ಸಮೂಹ. ಕಾಫಿ ಬೀಜಗಳನ್ನು ಬೇರೆ ಬೇರೆ ಮಾಡುವ ಯಂತ್ರ. ಕಾಫಿ ಹಣ್ಣುಗಳನ್ನು ಗಿಡದಿಂದ ಬಿಡಿಸುವ ಯಂತ್ರ. ಕಾಫಿ ಗಿಡಗಳನ್ನೂ, ಅದಕ್ಕೆ ನೆರಳು ಕೊಡುವ ಮರಗಳ ಕೊಂಬೆಗಳನ್ನು ಮಳೆಗಾಲದಲ್ಲಿ ಕತ್ತರಿಸುವ ಗಾಳಿಯಿಂದ ನಡೆಯುವ ಗರಗಸ, ಟೀ ಎಲೆಗಳನ್ನು ಒಂದು ಮೊಗ್ಗು ಎರಡು ಎಲೆ ಎಂದು ಕಿತ್ತುವ ಯಂತ್ರ, ಕಾಳು ಮೆಣಸನ್ನು ಅದರ ಕಡ್ಡಿಯಿಂದ ಬೇರೆ ಮಾಡುವ ಯಂತ್ರ.... ಯಂತ್ರ ಸಮೂಹವನ್ನು ಸ್ಥಾಪನೆ ಮಾಡಿ ಅದನ್ನು ನಡೆಯುವಂತೆ ಮಾಡಲು ಒಂದು ಟೀಂ. ಅದರಲ್ಲಿ ನಾನೊಬ್ಬ.
ಸರಿ, ಮೊದಲ ದಿನವೇ ಬೇಗನೆ ಎದ್ದು ಬಸ್ ಹಿಡಿದು ಮೈಸೂರು ರಸ್ತೆಯ ಗುಡ್ಡದಹಳ್ಳಿಯ ಬಳಿಯ ಆಫೀಸಿಗೆ ಬಂದೆ. ಆಗ ನನ್ನ ಬಳಿ ಇನ್ನೂ ಯಾವುದೇ ಸ್ವಂತ ವಾಹನವಿರಲಿಲ್ಲ.
ಆರೂವರೆಗೇ ಹೊರಡಬೇಕು ಎಂದಿದ್ದರು. ಏಳೂ ಮುಕ್ಕಾಲಾದರೂ ಒಬ್ಬರೂ ಬಂದಿರಲಿಲ್ಲ. ಯಾರನ್ನು ಕೇಳುವುದು? ಏನೆಂದು ಕೇಳುವುದು? ಯಾರಾದರೊಬ್ಬರ ಪರಿಚಯವಿದ್ದರೆ ತಾನೇ? ಇನ್ನೂ ಮೊಬೈಲ್ ಬರದಿದ್ದ ಕಾಲವದು. ಎಂತಹ ರೀತಿಯಲ್ಲಿ ಹೊಸ ಕೆಲಸವನ್ನು ಆರಂಭಿಸಿದ್ದೆ ನೋಡಿದಿರಾ?
ಸುಮಾರು ಎಂಟುಗಂಟೆಯ ಹೊತ್ತಿಗೆ ಕೆಲವರು ಬಂದರು. ನನ್ನ ಬಾಸ್, ಮುಂದೆ ನನ್ನ ಬಾಸ್ ಆಗಲಿದ್ದವರು ನನ್ನ ಜೊತೆಗೆ ಇದ್ದರು.
ಈಗ ನಾವು ಹೋಗುತ್ತಿದ್ದುದು ಕಾಫಿ ಹಣ್ಣಿನ ಪಲ್ಪಿಂಗ್ ಮೆಷಿನ್ ಸ್ಥಾಪಿಸಲು ಜಾಗದ ನಿರೀಕ್ಷಣೆಗೆ.
ಮಂಡ್ಯದ ಬಳಿ ಶಾರದಾ ರೆಸ್ಟೋರೆಂಟ್‍ನಲ್ಲಿ ತಿಂಡಿ ತಿಂದೆವು. ನನಗೋ ಭಯಾನಕ ಹಸಿವೆ. ಯಾರನ್ನು ಏನು ಕೇಳುವುದು? ತಿಳಿಯದು.
ಶಾರದಾದಲ್ಲಿ ಇಡ್ಲಿ ತಿಂದಾಗಲೇ ನನ್ನ ಕ್ಷುಧಾಗ್ನಿ ಉಪಶಮನ ಕಂಡಿತ್ತು.
ಶ್ರೀರಂಗಪಟ್ಟಣದಲ್ಲಿ ಒಂದು ಡೀವಿಯೇಷನ್ ತೆಗೆದುಕೊಂಡು ಕೊಡಗನ್ನು ಪ್ರವೇಶಿಸಿದೆವು. ಅಬ್ಬಾ, ಎಂತಹ ಸುಂದರ ಜಾಗವದು! ಅದೇ ವರ್ಷ ನನ್ನ ಮನೆಯವರೊಂದಿಗೆ ಜನವರಿಯಲ್ಲಿ ಕೊಡಗಿಗೆ ಹೋಗಿದ್ದೆ. ಈಗ ಮತ್ತೆ ನವೆಂಬರ್ 1995.
ವೀರಾಜಪೇಟೆ ದಾಟಿ ಪಾಲಿಬೆಟ್ಟಕ್ಕೆ ಹೋದೆವು. ಹ್ಞಾಂ! ಅಂದ ಹಾಗೆ ನಮ್ಮ ಆಫೀಸಿನಲ್ಲಿದ್ದುದು ಒಂದು ಜೀಪ್. ಅದರಲ್ಲಿ ನಮ್ಮ ಪ್ರಯಾಣ. ನೋಡಲು ಪೊಲೀಸ್ ಜೀಪ್ ಇದ್ದಂತಿತ್ತು. ಅದೇ ಬಿಳಿ, ಬೂದುಬಣ್ಣದ ಜೀಪ್.
ಪಾಲಿಬೆಟ್ಟದ ಗ್ರಾಹಕರ ಆಫೀಸಿಗೆ ಹೋಗಿ ನಂತರ ಸೈಟ್ ತಲುಪಿದೆವು. ಎಲ್ಲೆಲ್ಲಿ ಏನೇನು ಬರಬೇಕೆಂದು ಮೊದಲೇ ಹೇಳಿದಂತಿತ್ತು. ಹಣ್ಣುಗಳನ್ನು ಸುರಿಯಲು ಒಂದು ತೊಟ್ಟಿ. ಅದರಿಂದ ಹಣ್ಣುಗಳು ಯಂತ್ರದ ಕಡೆಗೆ ಬರಬೇಕು. ಈ ಸನ್ನಿವೇಶವನ್ನು ನನ್ನ ಎರಡನೆಯ ಕಾದಂಬರಿ ಪರಿಶೋಧದಲ್ಲಿ ಬಳಸಿದೆ.


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102