ಯತಿ ಸ್ವಂತೀ -113


23-04-2018
ರಾಜಧಾನಿ ಎಕ್ಸ್‍ಪ್ರೆಸ್ ವೇಗವಾಗಿ ಬಂದು ವಾರಾಣಸಿ ಸ್ಟೇಷನ್‍ನಲ್ಲಿ ನಿಂತಿತು. ಅನ್‍ರಿಸರ್ವ್‍ಡ್ ಕಂಪಾರ್ಟ್‍ಮೆಂಟ್ ಬಳಿಗೆ ಹೋದೆ. ಕಷ್ಟ ಪಡದೇ ಒಳಗೆ ದೂಡಲ್ಪಟ್ಟಿದ್ದೆ!
ನನ್ನ ಬಳಿ ಒಂದು ಚಿಕ್ಕ ಸೂಟ್‍ಕೇಸ್, ಒಂದು ಏರ್‍ಬ್ಯಾಗ್ ಇದ್ದವು. ಎದುರೆದುರು ಇದ್ದ ಟಾಯ್ಲೆಟ್‍ಗಳ ನಡುವೆ ನಿಂತೆ. ಕಾಲ್ಗಳ ಬಳಿ ನನ್ನ ಲಗೇಜು. ರಾತ್ರಿ ಒಂಬತ್ತಕ್ಕೆ ನಾನು ರೈಲು ಹತ್ತಿದ್ದು. ಸ್ವಲ್ಪ ಹೊತ್ತು ಒಂದು ಕಾಲಿನ ಮೇಲೆ ನಿಂತೆ. ನಂತರ ಮತ್ತೊಂದು ಕಾಲಿನ ಮೇಲೆ. ಕೊನೆಗೆ ಸುಸ್ತು, ನಿದ್ರೆ ತಡೆಯಲಾಗಲಿಲ್ಲ. ಬೋಗಿಯ ಕೊನೆಯಲ್ಲಿದ್ದ ಆ ಟಾಯ್ಲೆಟ್‍ಗಳ ಬಾಗಿಲಲ್ಲಿ ಮಲಗಿದ್ದ ಒಬ್ಬ ಕುಡುಕ. ಅವನ ಪಕ್ಕದಲ್ಲಿ ಪವಡಿಸಿಬಿಟ್ಟೆ! ನನ್ನ ಸೂಟ್‍ಕೇಸ್ ಮೇಲೆ ಒಬ್ಬ ಕೂತಿದ್ದ. ಅವನು ನಾನು ಇಳಿದ ನಂತರ ಇಳಿಯುವನೆಂದು ಅರಿತು ಮಲಗಿಬಿಟ್ಟೆ. ಆದರೂ ಒಂದು ಯೋಚನೆ ಇತ್ತು. ಕಾನ್‍ಪುರ ಮಧ್ಯದ ಸ್ಟೇಷನ್. ರಾತ್ರಿ ಮೂರು ಗಂಟೆಗೆ ಈ ರೈಲು ಕಾನ್‍ಪುರ ಸೇರಲಿತ್ತು. ಸ್ವಲ್ಪ ದೂರದಲ್ಲಿ ಬಹಳವೇ ವಿದ್ಯುದ್ದೀಪಗಳು ಕಂಡಿದ್ದರಿಂದ ಅದೇ ಕಾನ್‍ಪುರ ಎಂದು ನಿರ್ಧರಿಸಿ ಎದ್ದೆ. ನನ್ನ ಲಗೇಜುಗಳನ್ನು ತೆಗೆದುಕೊಂಡು ಕೆಳಗಿಳಿದೆ.
ಹೊರಗೆ ಹೋಗಲು ಭಯ. ಅಪರಿಚಿತ ಊರು. ಕತ್ತಲಲ್ಲಿ ಯಾಕೆ ಹೋಗಿ ಪರದಾಡಬೇಕೆಂದುಕೊಂಡು ಅಲ್ಲಿಯೇ ಇದ್ದ ಬೆಂಚಿನ ಮೇಲೆ ನಿದ್ರಿಸಿದೆ. ಕಾಲುಗಳ ನಡುವೆ ಸೂಟ್‍ಕೇಸ್. ತಲೆಯನ್ನು ಮಡಿಲಲ್ಲಿಟ್ಟುಕೊಂಡ ಏರ್‍ಬ್ಯಾಗ್ ಮೇಲೆ ಇಟ್ಟೆ.
ಸ್ವಲ್ಪ ಬೆಳಕು ಕಂಡಿತು. ಬೇಸಗೆ ಅಲ್ಲವೇ? ಹೊರಗೆ ಬಂದೆ. ಸೈಕಲ್ ರಿಕ್ಷಾ ಒಂದರಲ್ಲಿ ಕೂತೆ. ಅದರ ಚಾಲಕ ಒಬ್ಬ ಮುದುಕ. ನನ್ನನ್ನು ಒಳ್ಳೆಯ ಹೊಟೇಲ್‍ಗೆ ಕರೆದೊಯ್ಯಿ ಎಂದೆ. ಸುತ್ತಿಸಿ ಸುತ್ತಿಸಿ ಒಂದು ಕಡೆ ನಿಲ್ಲಿಸಿದ. ರೂಮು ಪಡೆದು ಮಲಗಿಬಿಟ್ಟೆ.
ಎದ್ದಾಗ ಒಂಬತ್ತು ಗಂಟೆ. ಹೊರಗೆ ಬಂದೆ. ಭಯಾನಕ ಬಿಸಿಲು, ವಿಪರೀತವಾದ ಟ್ರಾಫಿಕ್ ಹೊಟೇಲ್ ಮುಂದೆ ಓಡಾಡುತ್ತಿತ್ತು.
ಬಿಸಿಲಿನಲ್ಲಿ ಕಣ್ಣು ಕಿರಿದುಗೊಳಿಸಿ ನೋಡಿದೆ. ಎದುರಿಗೇ ಇತ್ತು .... ಕಾನ್‍ಪುರ್ ರೈಲ್ವೇ ನಿಲ್ದಾಣ. ಭಲೇ ಘಾಟಿ ಮುದುಕ ಎಂದು ಮನದಲ್ಲಿ ಬೈದುಕೊಳ್ಳುತ್ತಾ ಶ್ಲಾಘಿಸಿದೆ. ಹೊಸಬರಿಗೆ ಟೋಪಿ ಎಂದರೆ ಇದೇ. ಮತ್ತೆ ನಾನು ಬಹಳ ವರ್ಷಗಳ ನಂತರ ಒಬ್ಬ ಪುಟ್ಟ ಹುಡುಗನಿಂದ ಚಿಕ್ಕಮಗಳೂರು ಸುತ್ತಿದ್ದೆ ಎನ್ನುವುದನ್ನು ಈಗಾಗಲೇ ಬರೆದ ನೆನಪು!
ಬೆಂಗಳೂರಿನಲ್ಲಿ ಒಬ್ಬ ರಾಮಕೃಷ್ಣ ಲಾಡ್ಜ್‍ನಲ್ಲಿ ಇಳಿದುಕೊಂಡಿದ್ದನಂತೆ. ಕಪಾಲಿ ಥಿಯೇಟರ್‍ನಲ್ಲಿ ಸಿನಿಮಾಗೆ ಹೋಗಲು ಆಟೋ ಹತ್ತಿದನಂತೆ. ಊರೆಲ್ಲಾ ಸುತ್ತಿ ಕೊನೆಗೆ ಕಪಾಲಿ ಮುಂದೆ ಇಳಿಸಿದನಂತೆ ಆಟೋ ಡ್ರೈವರ್. ಸಿನಿಮಾ ನೋಡಿ ಮತ್ತೊಂದು ಆಟೋಗೆ ಕೈ ತೋರಿಸಿ ರಾಮಕೃಷ್ಣ ಲಾಡ್ಜ್ ಎಂದನಂತೆ. ಆಟೋ ಡ್ರೈವರ್ ನಿಯತ್ತಿನವನೋ ಅಥವಾ ಬೇರೆ ಕೆಲಸವಿತ್ತೋ ತಿಳಿಯದು, ಈ ಥಿಯೇಟರ್‍ನಿಂದ ಮೂರನೆಯ ಬಿಲ್ಡಿಂಗ್ ರಾಮಕೃಷ್ಣ ಲಾಡ್ಜ್ ಎಂದನಂತೆ!
ಅಂತೂ ಕಾನ್‍ಪುರಕ್ಕೆ ಬಂದು ಲಕ್ನೋಗೆ ಫೋನ್ ಮಾಡಿದೆ. ನನ್ನ ಸಹೋದ್ಯೋಗಿ ಬ್ರಿಜ್‍ಮೋಹನ್ ಮೆಹ್ರೋತ್ರಾ ಅಲ್ಲಿಗೇ ಬರುವೆನೆಂದ.


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102