ಯತಿ ಸ್ವಂತೀ -118


28-04-2018
ಹೇಗಪ್ಪಾ ನನ್ನ ಕಾರು ಹೊರಗೆ ತರುವುದು ಎಂದು ಚಿಂತಿಸುತ್ತಿದ್ದಂತೆ ದೇವತೆಗಳು ಪ್ರತ್ಯಕ್ಷವಾಗಿದ್ದರು! ಹೌದು, ಆ ವಿಲ್ಲಾದ ಒಳಗಿನಿಂದ ಸುಮಾರು ಐದಾರು ಜನ ಭಾರತೀಯರು ಹೊರಬರುತ್ತಿದ್ದರು. ಬನ್ನಿ ಎಂದು ಹಿಂದಿಯಲ್ಲಿ ಕೂಗಿದೆ. ಬಂದರು. ಅವರ ಮುಖಗಳ ಮೇಲೆ ಗಾಬರಿ. ಅವರು ಆ ವಿಲ್ಲಾ ಕಟ್ಟುತ್ತಿದ್ದ ಕಾರ್ಮಿಕರು. ನನ್ನ ಕಾರಿನ ಬಂಪರ್ ಅವರ ಅರ್‍ಬಾಬ್(ಮಾಲೀಕ) ವಿಲ್ಲಾದ ಕಾಂಪೌಂಡು ಗೋಡೆಗೆ ಮುತ್ತಿಕ್ಕಿದೆ!
ಹಿಂದೊಮ್ಮೆ ನಾನು ನಮ್ಮ ಮನೆಯಲ್ಲಿದ್ದ ಮಾರುತಿ ಆಮ್ನಿ ಕಾರು ಹಳ್ಳವೊಂದರಲ್ಲಿ ಸಿಕ್ಕಿಕೊಂಡಾಗ ಅದನ್ನು ಎತ್ತಿ ಪಕ್ಕಕ್ಕೆ ಇಟ್ಟಿದ್ದು ನೆನಪಾಯಿತು. ಕೇವಲ ಮೂರು ಜನ ಅದನ್ನು ಎತ್ತಿದ್ದೆವು. ಈಗ ಅವರನ್ನು ಕೇಳಿದೆ. ಇದನ್ನು ರಸ್ತೆಗೆ ತರಲು ನಿಮಗೆ ಸಾಧ್ಯವೇ?
ಆಗುತ್ತದೆ ಎಂದರು. ಆದರೆ ನಾನು ಹಣ ಕೊಡಲಾರೆ ಎಂದೆ. ಅವರಿಗೆ ನನ್ನ ಕಾರು ಅಲ್ಲಿಂದ ಹೋದರೆ ಸಾಕಿತ್ತು ಎನ್ನುವ ಭಾವನೆ ಇದ್ದಿದ್ದು ನನಗೆ ಕಾಣಿಸುತ್ತಲೇ ಇತ್ತು.
ಒಳಗೆ ಕೂರೆಂದರು. ರಿವರ್ಸ್‍ಗೇರ್ ಹಾಕೆಂದರು. ಹಾಕಿದೆ. ಆರು ಜನರೂ ಸೇರಿ ಕಾರನ್ನೆತ್ತಿ ರಸ್ತೆಯಲ್ಲಿ ಇಟ್ಟುಬಿಟ್ಟರು. ಥ್ಯಾಂಕ್ಸ್ ಹೇಳಿ ಅಲ್ಲಿಂದ ಹೊರಟುಬಿಟ್ಟೆ. ನಂತರ ಮತ್ತೆ ನಿಲ್ಲಿಸಿ ಪಿಆರ್‍ಓಗೆ ಕಾರನ್ನು ತೆಗೆದಾಯಿತೆಂದೆ.
ಅವನಿಗೆ ಏಕೋ ಸಿಟ್ಟು ಬಂದಿರಬೇಕು. ಅವನ ಸಹಾಯವಿಲ್ಲದೇ ಕಾರನ್ನು ತೆಗೆದೆನೆಂದಿರಬಹುದು. ಪ್ರತಿಯೊಬ್ಬರಿಗೂ ನನ್ನ ಆಫೀಸಿನ ಪ್ರತಿಯೊಬ್ಬರಿಗೂ ನನ್ನ ಆಕ್ಸಿಡೆಂಟಿನ ವಿಷಯ ತಿಳಿದುಬಿಟ್ಟಿತು.
ಬಂದೊಡನೆ ಎಲ್ಲರೂ ವಿಚಾರಿಸುವವರೇ.
ಅದಕ್ಕೆ ಮುಂಚೆ ಮತ್ತೊಂದು ಮಜಾ ಆಯಿತು. ನನ್ನ ಬಾಸ್ ಫೋನ್ ಮಾಡಿ 35 ಕಿಮೀ ದೂರದಲ್ಲಿದ್ದ ಘಾಲಾ ಎನ್ನುವ ಜಾಗದಲ್ಲಿದ್ದ ನಮ್ಮ ಸ್ಟೋರ್‍ನಿಂದ ಒಬ್ಬರು ಗ್ರಾಹಕರನ್ನು ಕರೆದು ತಾ ಎಂದರು.
ಅಲ್ಲಿಗೆ ಹೋದೆ. ಆತ ನನ್ನ ಕಾರನ್ನು ಹತ್ತುವಾಗ ಒಡೆದ ಬಲ್ಬು, ಸೀಳಿದ ಬಂಪರ್ ನೋಡಿ (ಬಹುಶಃ) ಹೆದರುತ್ತಲೇ ನನ್ನ ಕಾರಲ್ಲಿ ಕುಳಿತಿದ್ದಿರಬೇಕು!
ಕಾರು ಹಾಗೇ ಇರಲಿಕ್ಕೆ ಸಾಧ್ಯವಿರಲಿಲ್ಲ. ಇನ್ಷೂರೆನ್ಸ್ ಹಣ ಬಳಸಿ ಅದನ್ನು ರಿಪೇರಿ ಮಾಡಿಸಬೇಕಿತ್ತು.
ಎರಡೂ ಆಕ್ಸಿಡೆಂಟುಗಳು ಒಂದೇ ದಿನ ಆದಂತೆ ಬರೆಸಿದರೆಂದು ತೋರುತ್ತದೆ. ಅಂತೂ ಕಾರು ಗ್ಯಾರೇಜ್‍ಗೆ ಹೋಗಿ ರಿಪೇರಿ ಆಗಿ ಬಂದಿತು.
ಇನ್ನು ಅಮ್ಮನ ಆಗಮನದ ನಿರೀಕ್ಷೆ ಇತ್ತು.
ಏನೋ ಒಂದು ರೀತಿಯ ಖುಷಿ. ಅವರ ವೀಸಾಗೆ ಸ್ಪಾನ್ಸರ್ ಮಾಡಿದ ನಮ್ಮ ಭಾವನವರು ಈಗ ಮಸ್ಕತ್ ಬಿಟ್ಟು ಅಬೂ ಧಾಬಿಗೆ ಹೊರಟುಹೋಗಿದ್ದರು.
ನನ್ನ ತಂಗಿಗೆ ಅವಳು ಮಸ್ಕತ್‍ನಲ್ಲಿದ್ದಾಗ ಅಮ್ಮನನ್ನು ಕರೆಸಿಕೊಳ್ಳುವ ಆಸೆ ಇತ್ತು. ಆದರೆ ಈಗ ಅವಳು ಇಲ್ಲಿ ಇರಲಿಲ್ಲ.
ಏರ್‍ಪೋರ್ಟ್‍ಗೆ ಮಾಜ್ದಾ 323 ಒಯ್ದೆ. ಪ್ರವೀಣ, ಅಮ್ಮ ಬಂದರು.
ಪ್ರವೀಣ ಹೊರಗೆ ಬಂದೊಡನೆ ನೋಡಿದ್ದು ಅವನ ಕಾರಿನ ಮುಂಭಾಗವನ್ನು. ಆಗ ನನಗೆ ಅರ್ಥವಾಗಿತ್ತು ಅವನು ಭಾರತದಲ್ಲಿದ್ದಾಗ ಯಾರೋ ಮೆಯಿಲ್ ಮಾಡಿಯೋ, ಫೋನ್ ಮಾಡಿಯೋ ಕಾರು ಆಕಸ್ಮಿಕಕ್ಕೆ ಒಳಗಾದ ವಿಷಯ ಹೇಳಿದ್ದಿರಬೇಕು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102