ಯತಿ ಸ್ವಂತೀ -109


19-04-2014
ಈಗ ನನ್ನ ಮುಂದಿನ ಊರು ಲಕ್ನೋ. ಸಿಂಗ್ರೌಲಿ ಕೋಲ್ ಮೈನ್ಸ್‍ನಿಂದ ನಾನು ಹೇಗಾದರೂ ವಾರಾಣಸಿ ತಲುಪಿದರೆ ಅಲ್ಲಿಂದ ಲಕ್ನೋಗೆ ರೈಲುಗಾಡಿ ಇದೆ. ಹಾಗೇ ನಾನು ಕಾನ್‍ಪುರ್‍ಗೆ ಕೂಡ ಹೋಗಬೇಕಿತ್ತು.
ನನ್ನ ಆ ಸಹೋದ್ಯೋಗಿ ಮತ್ತು ಆತನ ಬಾಸ್ ಇಬ್ಬರೂ ಕಾರಿನಲ್ಲಿ ಹೋಗುತ್ತೇವೆ ಕಾಶಿಗೆ ಎಂದರು, ಜಾಗವಿದೆ ಬಾ ಎಂದರು.
ವೈದ್ಯನು ರೋಗಿ ಬಯಸಿದ್ದನ್ನೇ ಹೇಳಿದರೆ ಅದರ ಆನಂದವೇ ಬೇರೆ! ಸರಿ, ಅವರೊಂದಿಗೆ ಹೊರಟೆ. ಅದು 1987. ದೂರವಾಣಿ ಸಂಪರ್ಕ ವ್ಯವಸ್ಥೆ ಇವತ್ತಿನಷ್ಟು ಕೈಗೆಟಕುವಂತೆ ಇರಲಿಲ್ಲ.
ಒಂದು ವಿಧದಲ್ಲಿ ನಾನು ಫೋನ್ ಇಲ್ಲದೇ ಜೀವಿಸಿದ್ದ ಕಾಲದಿಂದ ಈಗಿನ ಸ್ಮಾರ್ಟ್ ಫೋನ್‍ಗಳ ವರೆಗೂ ಎಲ್ಲವನ್ನೂ ನೋಡಿರುವುದು ಒಂದು ಅದೃಷ್ಟವೇ ಸರಿ. ಲ್ಯಾಂಡ್‍ಲೈನ್, ಟೆಲೆಕ್ಸ್, ಟೆಲಿಪ್ರಿಂಟರ್, ಫ್ಯಾಕ್ಸ್, ಕಾರ್ಡ್‍ಲೆಸ್, ಮೊಬೈಲ್... ವಾಹ್! ಗ್ರಹಾಂಬೆಲ್‍ನ ಒಂದು ಆವಿಷ್ಕಾರ ಅದೆಷ್ಟು ರೂಪಗಳನ್ನು ಪಡೆದುಕೊಂಡಿದೆ!
ವಿಷಯಕ್ಕೆ ಮರಳೋಣ. ಅದು ಭಯಾನಕ ಬಿಸಿಲು ಬೇಸಗೆಯ ತಿಂಗಳು. ಕಪ್ಪು ಬಣ್ಣದ ಕಾರು. ಆಗಿನ ಕಾಲದಲ್ಲಿ ಎ.ಸಿ. ಇರದ ಕಾರಲ್ಲಿ ಕಪ್ಪು ಬಣ್ಣದ ಕಾರಿನಲ್ಲಿ ಮಧ್ಯಾಹ್ನ ಒಂದೂವರೆಗೆ ಆ ಬಿಸಿಲು ಪ್ರದೇಶದಲ್ಲಿ ಪ್ರಯಾಣ. ನಿಜಕ್ಕೂ ನಾನು ಸೀಟಿನ ಮೇಲೆ ಕೂರಲಿಕ್ಕೇ ಆಗಲಿಲ್ಲ. ಸೀಟು ಭಗಭಗ ಎಂದು ಸುಡುತ್ತಿತ್ತು.
ಎಗರಿ ಎಗರಿ ಕೂರುವುದೋ ಬಿಡುವುದೋ ಆಗದ ಡೋಲಾಯಮಾನ ಪರಿಸ್ಥಿತಿಂiÀiಲ್ಲಿ ವಾರಾಣಸಿಯ ಕಡೆಗೆ ಹೋದೆ. ಮಧ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಗಂಗಾ ಜಮುನಾ ಎಂಬ ಕಿತ್ತಳೆ ಮೋಸಂಬಿ ಜ್ಯೂಸ್ ಕುಡಿದೆ. ಅದಕ್ಕೆ ಕಪ್ಪು ಬಣ್ಣದ ಉಪ್ಪು ಹಾಕಿ ಕೊಟ್ಟಿದ್ದ ಅಂಗಡಿಯಾತ. ಗಂಧಕದ ವಾಸನೆ ತುಂಬಿತ್ತು ಅದರಲ್ಲಿ.
ವಾರಾಣಸಿಯಲ್ಲಿ ರೈಲ್ವೇ ಸ್ಟೇಷನ್ನಿನ ಎದುರಿನಲ್ಲಿಯೇ ಹೊಟೇಲ್‍ನಲ್ಲಿ ರೂಮ್ ಪಡೆದೆ. ಅಂದು ಸಂಜೆಯೇ ರೈಲ್ವೇ ಸ್ಟೇಷನ್ನಿಗೆ ನಡೆದು ಕೌಂಟರ್‍ನಲ್ಲಿ ಟಿಕೆಟ್ ಕೇಳಿದೆ. ರಿಸರ್ವೇಷನ್ ಇರಲಿಲ್ಲ. ಮರುದಿನ ರಾತ್ರಿ ರಾಜಧಾನಿ ಎಕ್ಸ್‍ಪ್ರೆಸ್‍ನಲ್ಲಿ ಕಾನ್ಪುರಕ್ಕೆ ಹೋಗಬಹುದು ಎಂದ ಕೌಂಟರಿನಲ್ಲಿದ್ದಾತ.
ಅಲ್ಲಿಯೇ ಒಬ್ಬ ಯುವಕ ನಿಂತಿದ್ದ. ಇನ್ನೊಂದು ಒರಟು ಯುವಕರ ಗುಂಪಿತ್ತು. ಅವರಲ್ಲಿ ದಾದಾನಂತಿದ್ದವನು ‘ಏನಾಯ್ತು?’ ಎಂದ. ಟಿಕೆಟ್ ಸಿಗಲಿಲ್ಲ ಎಂದೆ ನಾನು. ಆ ಇನ್ನೊಬ್ಬ ಯುವಕನೂ ಇಂದೋರ್‍ಗೆ ಹೋಗಲು ಟಿಕೆಟ್ ಸಿಗಲಿಲ್ಲ ಎಂದ. ಆ ದಾದಾ ನೀವಿಬ್ರೂ ಏಕೆ ಒಂದು ಒಳ್ಳೆಯ ಜಾಗಕ್ಕೆ ಹೋಗಕೂಡದು? ಎಂದ.
ಹಾಗೆ ನನಗೆ ಒಂದಿಷ್ಟೂ ಪರಿಚಯವಿಲ್ಲದ ಸುಭಾಷ್ ಕುಮಾರ್ ಶರ್ಮನೊಂದಿಗೆ ಹತ್ತಿರದ ಸಾಂಚಿಯಲ್ಲಿನ ಸ್ಥೂಪವನ್ನು ನೋಡಲು ಹೋದೆವು. ಚಂದದ ಕಟ್ಟಡ. ಇಬ್ಬರೂ ಒಬ್ಬರ ಪಟ ಒಬ್ಬರು ತೆಗೆದೆವು. ಮದುವೆಯಾಗಲು ಹುಡುಗಿಯನ್ನು ನೋಡಿದ್ದ ಸುಭಾಷ್. ಕೆಲವು ಕಾಲ ಇಬ್ಬರೂ ಪರಸ್ಪರ ಇನ್‍ಲ್ಯಾಂಡ್ ಪತ್ರವನ್ನು ಬರೆದುಕೊಳ್ಳುತ್ತಿದ್ದೆವು. ಆಮೇಲೆ ನಿಧಾನವಾಗಿ ಆ ಪತ್ರ ವ್ಯವಹಾರ ಮುಗಿದುಹೋಯಿತು.
ಈಗ ಎಲ್ಲಿರುವನೋ, ಹೇಗಿರುವನೋ?

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102