ಯತಿ ಸ್ವಂತೀ -116


26-04-2018
ಪ್ರವೀಣ ಊರಿಗೆ ಹೋದೊಡನೆ ನನಗೆ ಅವನ ಕಾರು ಕೊಟ್ಟಿದ್ದರಲ್ಲ! ಮೊದಲ ದಿನವೇ ಅದನ್ನು ಪಕ್ಕದ ಕಾರಿಗೆ ಮುತ್ತಿಕ್ಕಿಸಿದ್ದೆನಲ್ಲಾ! ಈಗ ನನ್ನ ಎಲ್ಲ ಕಸ್ಟಮರುಗಳ ಬಳಿಯೂ ಅದೇ ಕಾರಲ್ಲಿ ಓಡಾಡುತ್ತಿದ್ದೆ. ಶುಕ್ರವಾರ ಬೆಳಗ್ಗೆ ಐದೂವರೆಗೇ ಎದ್ದು ಬೆಂಗಳೂರಿನ ಮನೆಗೆ ಫೋನ್ ಮಾಡುತ್ತಿದ್ದೆ. ಅಲ್ಲಿ ಐದೂವರೆ ಎಂದರೆ ಬೆಂಗಳೂರಿನಲ್ಲಿ ಏಳು ಗಂಟೆ. ಮಕ್ಕಳು ಶಾಲೆಗೆ ಹೊರಡಲು ಸಿದ್ಧವಾಗಿ ತಿಂಡಿ ತಿನ್ನುವ ವೇಳೆ.
ಶುಕ್ರವಾರ ಎಂದರೆ ನಮ್ಮೂರಿನ ಭಾನುವಾರ. ಮಕ್ಕಳಿಗಾಗಿ ಬೇಗನೆ ಏಳುತ್ತಿದ್ದೆ. ನಂತರ ನಿದ್ರೆ ಬರುತ್ತಿರಲಿಲ್ಲ. ಏನು ಮಾಡುವುದೋ ತೋಚುತ್ತಿರಲಿಲ್ಲ ಎಂಟುಗಂಟೆಗೆಲ್ಲ ತಿಂಡಿ ತಿಂದು ಮೊದಲ ಮಹಡಿಯಲ್ಲಿದ್ದ ಆಫೀಸಿಗೆ ಬರುತ್ತಿದ್ದೆ.
ಒಂದು ದಿನ ಅಲ್‍ಖ್ವೈರ್ ಎನ್ನುವ ಜಾಗಕ್ಕೆ ಹೋದೆ. ಅಲ್ಲಿನ ಗ್ರಾಹಕ ಜಾನ್ ಒಂದು ರೀತಿ ಗೆಳೆಯನಂತಾಗಿಬಿಟ್ಟಿದ್ದ. ಬಹಳ ಹೊತ್ತು ಮಾತಾಡಿ ಅಲ್ಲಿಂದ ಹೊರಟೆ. ಅವತ್ತು ನನ್ನ ಎರಡನೆಯ ಆಕಸ್ಮಿಕ ಜರುಗಲಿತ್ತು ಎಂದು ಆ ಕ್ಷಣದಲ್ಲಿ ನನಗೆ ಹೊಳೆದಿರಲಿಲ್ಲ!
ಕಾರು ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿತ್ತು. ಸಿಂಗಲ್ ಟ್ರ್ಯಾಕ್ ಅದು. ಎದುರಿಗೆ ಒಂದು ಕಾರು ವೇಗವಾಗಿ ಬಂದಾಗ ತಬ್ಬಿಬ್ಬಾಗಿ (ಕಾರು ಡ್ರೈವಿಂಗ್ ಇನ್ನೂ ಹೊಸದೆಂದು ನೆನಪಿದೆ ಅಲ್ಲವೇ?) ಪಕ್ಕಕ್ಕೆ ತಿರುಗಿಸಿದೆ.
ಅಷ್ಟೇ! ಕಾರು ಫುಟ್‍ಪಾತ್ ಮೇಲಿದ್ದ ಅನೇಕ ದೊಡ್ಡ ದೊಡ್ಡ ಕಲ್ಲುಗಳ ಮೇಲೆ ಹಾರಿ ಅಲ್ಲಿಯೇ ಕಟ್ಟಲ್ಪಡುತ್ತಿದ್ದ ಹೊಸ ವಿಲ್ಲಾ ಒಂದರ ಕಾಂಪೌಂಡಿಗೆ ಗುದ್ದಿ ನಿಂತಿತು. ನನಗೆ ಹ್ಯಾಂಡ್ ಬ್ರೇಕ್ ಹಾಕುವುದು  ಕೂಡ ಮರೆತುಹೋಗಿತ್ತು. ಇದೇ ಕಾರಣಕ್ಕೇ ಅನೇಕ ನಿಪುಣ ಡ್ರೈವರ್‍ಗಳೂ ಆಕಸ್ಮಿಕಕ್ಕೆ ಒಳಗಾಗುವುದು. ಸಮಯಪ್ರಜ್ಞೆ ಎನ್ನುವುದು ಒಬ್ಬೊಬ್ಬರಲ್ಲಿ ಒಂದೊಂದು ಸ್ತರದಲ್ಲಿ ಇರುತ್ತದೆ. ನನ್ನ ಕಾರಿನ ಬಂಪರ್ ರಬ್ಬರ್‍ದಾಗಿತ್ತು. ಅದು ‘ಆ’ ಎಂದು ಶಿವನ ಮೂರನೆಯ ಕಣ್ಣಿನಂತೆ ಬಾಯಿ ಬಿಟ್ಟಿತು.
ಈಗ ಇದರ ರಿಪೇರಿ ಬಗ್ಗೆ ನನಗೆ ಚಿಂತೆ ಬರಲಿಲ್ಲ. ಅದಕ್ಕಿಂತ ದೊಡ್ಡ ಸಮಸ್ಯೆ ನನ್ನ ಮುಂದಿತ್ತು. ನನ್ನ ಆಕ್ಸಿಲರೇಟರ್ ಒತ್ತುವಿಕೆಯಿಂದ ಕಾರು ದೊಡ್ಡ ಕಲ್ಲುಗಳನ್ನು ಹಾರಿ ಕಾಂಪೌಂಡಿಗೆ ಗುದ್ದಿತ್ತಲ್ಲವೇ? ಈಗ ಅದನ್ನು ವಾಪಸ್ಸು ರಸ್ತೆಗೆ ತರುವ ರೀತಿಯೇ ತಿಳಿಯಲಿಲ್ಲ.
ಪಿಆರ್‍ಓಗೆ ಫೋನ್ ಮಾಡಿದೆ. ಅಲ್ಲೆಲ್ಲಾ ರಸ್ತೆಗಳಿಗೆ ಹೆಸರು ಎಲ್ಲಿದೆಯೋ ತಿಳಿಯದು. ನಮ್ಮ ದೇಶದಲ್ಲಿ ನಾವು ಯಾವ ಊರಿನ ಯಾವ ಭಾಗದ ಯಾವ ರಸ್ತೆಯಲ್ಲಿರುವೆವೆಂದು ಯಾವುದಾದರೂ ಅಂಗಡಿಯ ಮೇಲಿನ ಫಲಕ ನೋಡಿದರೆ ತಿಳಿಯುತ್ತದೆ. ಇಡೀ ವಿಳಾಸ ಅಲ್ಲಿರುತ್ತದೆ. ಇಲ್ಲಿ ಯಾವ ಅಂಗಡಿಯ ಮೇಲೆ ನೋಡಿದರೂ ಕೇವಲ ಪೋಸ್ಟ್‍ಬಾಕ್ಸ್ ನಂಬರ್ ಮಾತ್ರ, ಮತ್ತು ಮುಖ್ಯ ಏರಿಯಾದ ಹೆಸರು.
ಅವನಿಗೆ ನಾನಿರುವ ಜಾಗ ವಿವರಿಸಲು ಬಹಳ ಕಷ್ಟಪಡಬೇಕಾಯಿತು. ನಾನು ನಿಂತ ಜಾಗದಿಂದ ಒಮಾನ್‍ನಲ್ಲಿನ ಅತಿ ಮುಖ್ಯ ರಸ್ತೆ ಕಾಣಿಸುತ್ತಿತ್ತು. ಅಲ್ಲಿನ ಯಾವುದೋ ಒಂದು ಜಾಗ ಹೇಳಿ ಕ್ರೇನ್ ಕಳಿಸಲು ಏರ್ಪಾಡು ಮಾಡು ಎಂದೆ. ಅವನಿಗೆ ನನ್ನ ವಿವರ ಅರ್ಥವಾಗಿರಲಾರದು.
ಏನೂ ಉತ್ತರ ಬರಲಿಲ್ಲ? ಈಗೇನು ಮಾಡಲಿ?

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102